ಆಪರೇಷನ್ ಸಿಂಧೂರ ಕುರಿತು ಲೇಖನಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರಲ್ಲಿ ಗುವಾಹಟಿಯ ಕ್ರೈಂ ಬ್ರ್ಯಾಂಚ್ ಪೊಲೀಸರು ಸುದ್ದಿ ಜಾಲತಾಣ ‘The Wire’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಅಸ್ಸಾಂ ಪೊಲೀಸರು ದಾಖಲಿಸಿರುವ ಇನ್ನೊಂದು ಎಫ್‌ಐಆರ್‌ನಲ್ಲಿ ವರದರಾಜನ್ ಮತ್ತು ಸುದ್ದಿ ಜಾಲತಾಣವನ್ನು ನಡೆಸುತ್ತಿರುವ ಪ್ರತಿಷ್ಠಾನದ ಸದಸ್ಯರಿಗೆ ಬಂಧನದಿಂದ ರಕ್ಷಣೆ ನೀಡಿದ್ದರೂ ಆ.12ರಂದು ಈ ಸಮನ್ಸ್ ನೀಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶವು ‘ಬೇರೆ ಯಾವುದೋ ಜಿಲ್ಲೆಯಲ್ಲಿ’ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿರುವುದರಿಂದ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಗುವಾಹಟಿಯ ಜಂಟಿ ಪೊಲೀಸ್ ಆಯುಕ್ತ ಅಂಕುರ ಜೈನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆ.22ರಂದು ಬೆಳಿಗ್ಗೆ 11.30 ಗಂಟೆಗೆ ಪಾನ್‌ಬಜಾರ್‌ನಲ್ಲಿಯ ಕ್ರೈಂ ಬ್ರ್ಯಾಂಚ್ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ವರದರಾಜನ್ ಅವರಿಗೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.
ವರದರಾಜನ್ ವಿರುದ್ಧ ಮೊದಲಿನ ಪ್ರಕರಣವು ಜು.11ರಂದು ಮೋರಿಗಾಂವ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 152ರಡಿ ದಾಖಲಾಗಿದ್ದು, ಇದು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೌಜನ್ಯ ಕೇಸ್‌ನಲ್ಲಿ ಮತ್ತೆಮತ್ತೆ ಸಂತೋಷ್ ರಾವ್‌ನನ್ನು ಎಳೆತಂದು ಯಾರನ್ನು ರಕ್ಷಿಸಲಾಗುತ್ತಿದೆ?
ಆಪರೇಷನ್ ಸಿಂಧೂರ ಕುರಿತು ‘ರಾಜಕೀಯ ನಾಯಕತ್ವದ ನಿರ್ಬಂಧಗಳಿಂದಾಗಿ ಐಎಎಫ್ ಪಾಕ್ ದಾಳಿಯಲ್ಲಿ ತನ್ನ ಯುದ್ಧವಿಮಾನಗಳನ್ನು ಕಳೆದುಕೊಂಡಿತು: ರಕ್ಷಣಾ ಅಧಿಕಾರಿ’ ಶೀರ್ಷಿಕೆಯ ಲೇಖನ ಪ್ರಕಟಗೊಂಡ ಬಳಿಕ ಈ ಪ್ರಕರಣ ದಾಖಲಾಗಿತ್ತು.
ವರದರಾಜನ್ ಅವರಿಗೆ ನೀಡಲಾಗಿರುವ ಹೊಸ ಸಮನ್ಸ್‌ನಲ್ಲಿ ಅದೇ ಆರೋಪಗಳನ್ನು ಉಲ್ಲೇಖಿಸಲಾಗಿದೆ, ಜೊತೆಗೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ, ಸುಳ್ಳು ಅಥವಾ ದಾರಿ ತಪ್ಪಿಸುವ ಮಾಹಿತಿಗಳ ಪ್ರಕಟಣೆ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಬಿಎನ್‌ಎಸ್ ಕಲಂಗಳಡಿಯೂ ಆರೋಪಗಳನ್ನು ಹೊರಿಸಲಾಗಿದೆ.
ಆ.12ರಂದು ಕಲಂ 152ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ‘The Wire’ ನ ಒಡೆತನ ಹೊಂದಿರುವ ಫೌಂಡೇಷನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಮತ್ತು ವರದರಾಜನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಸುಪ್ರಿಂ ಕೋರ್ಟ್ ಪೀಠವು ವರದರಾಜನ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿತ್ತು.