ಧರ್ಮಸ್ಥಳ ಪ್ರಕರಣ ಸಂಬಂಧ ವಿಪಕ್ಷಗಳ ಆರೋಪ ಸಂಬಂಧ ಸೋಮವಾರ ಸದನದಲ್ಲಿ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ. ಜಿ ಪರಮೇಶ್ವರ್, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಇದುವರೆಗೆ ಒಂದು ಅಸ್ಥಿಪಂಜರ, ಮತ್ತೊಂದು ಕಡೆ ಮೂಳೆಗಳು ಸಿಕ್ಕಿವೆ. ಇದರ ಎಫ್‌ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ವರದಿ ಲಭ್ಯವಾಗುವವರೆಗೆ ಉತ್ಖನನ ಕಾರ್ಯ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದರು.
ಇಷ್ಟರವರೆಗೆ ನಡೆದಿದ್ದು ಕೇವಲ ಉತ್ಖನನ ಕಾರ್ಯ ಮಾತ್ರ, ಇನ್ನೂ ತನಿಖೆ ಆರಂಭವಾಗಿಲ್ಲ. ದೂರುದಾರ ಮೊದಲು ತಂದ ತಲೆಬುರುಡೆಯನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಮುಂದಿನ ತನಿಖೆ ನಡೆಯಲಿದೆ. ಮಾದರಿ ಅನಾಲಿಸಿಸ್, ಡಿಎನ್‌ಎ ಸೇರಿ ಹಲವು ವಿಶ್ಲೇಷಣೆ ಆಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸದ್ಯ ತನಿಖೆಯೂ ತುಂಬಾ ಗಂಭೀರವಾಗಿ ನಡೆಯುತ್ತಿದೆ. ದೂರುದಾರ ಹೇಳಿದ ಸ್ಥಳಗಳಲ್ಲಿ ಅಗೆಯಲಾಗಿದೆ. ಮುಂದೆ ಅಗೆಯುವ ಕೆಲಸ ಸರ್ಕಾರ ಮಾಡಲ್ಲ. ಏಕೆಂದರೆ ಅದನ್ನು ಎಸ್ಐಟಿ ನಿರ್ಧಾರ ಮಾಡುತ್ತದೆ. ಸಿಕ್ಕಿರುವ ಅಸ್ಥಿಪಂಜರಗಳ ಕೆಮಿಕಲ್, ಡಿಎನ್‌ಎ ಅನಾಲಿಸಿಸ್ ಮಾಡಬೇಕು. ಎಫ್‌ಎಸ್ಎಲ್ ಯಿಂದ ವರದಿ ಬರುವವರೆಗೂ ತಾತ್ಕಾಲಿಕವಾಗಿ ಎಸ್ಐಟಿಯಿಂದಲೇ ತನಿಖೆ ಸ್ಥಗಿತ ಮಾಡಲಾಗುತ್ತದೆ. ಎಫ್ಎಸ್ಎಲ್ನಿಂದ ವರದಿ ಬಂದ ಬಳಿಕ ತನಿಖೆ ಮತ್ತೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಸತ್ಯ ಹೊರಗಡೆ ತರುತ್ತೇವೆ
ಮುಂದೆ ಅಗೆಯಬೇಕೋ? ಬೇಡವೋ? ಎಂದು ಎಸ್‌ಐಟಿ ತೀರ್ಮಾನ ಮಾಡುತ್ತೆ, ನಾವು ಹೇಳೊದಿಲ್ಲ. ಏನು ಮಾಡಬೇಕು ಎಂದು ಎಸ್‌ಐಟಿ ತನಿಖೆ ಮಾಡುತ್ತದೆ. ಬಿಜೆಪಿಯವರ ಉದ್ದೇಶ ಏನು ಅಂತಾ ಅರ್ಥ ಆಗುತ್ತಿಲ್ಲ, ಆಗಿದೆ ಅಂತಾನೂ ಹೇಳೋಕೆ ಆಗಲ್ಲ. ಆಗಿಲ್ಲ ಅಂತಾನೂ ಹೇಳೋಕೂ ಆಗಲ್ಲ. ಅಲ್ಲಿ ಏನು ಆಗಿಲ್ಲ ಅಂದರೆ ಧರ್ಮಸ್ಥಳ ಪಾವಿತ್ರ್ಯತೆ ಇನ್ನೂ ಹೆಚ್ಚಾಗೋದಿಲ್ಲವಾ? ಆಗಿದೆ ಅಂತಾದ್ರೆ ಸತ್ಯಾಂಶ ಹೊರಗಡೆ ಬರೋದಿಲ್ಲವಾ? ಆ ಕುಟುಂಬಗಳಿಗೂ ನ್ಯಾಯ ಸಿಗೋದಿಲ್ಲವಾ? ಸತ್ಯ ಹೊರಗಡೆ ಬರಲಿ, ಅಲ್ಲಿವರೆಗೂ ಕಾಯೋಣ. ಆ ಸತ್ಯ ಹೊರಗಡೆ ಬಂದರೆ ಎಲ್ಲರು ಒಪ್ಪಿಕೊಳ್ಳಲೇಬೇಕಲ್ಲವಾ? ತನಿಖೆ ನಡೆಯುವಂತಹ ಸಂದರ್ಭದಲ್ಲಿ ನಾನು ಏನು ಹೇಳೋಕೆ ಆಗಲ್ಲ. ಮಧ್ಯಂತರ ವರದಿ ಕೂಡ ಇನ್ನೂ ಬಂದಿಲ್ಲ. ಆದಷ್ಟು ಬೇಗ ತನಿಖೆ ಮಾಡಿ ಎಂದು ಹೇಳಬಹುದೇ ವಿನಃ ಹೀಗೆ ಮಾಡಿ ಹಾಗೇ ಮಾಡಿ ಎಂದು ಹೇಳೋಕೆ ಆಗಲ್ಲ ಎಂದು ಗೃಹ ಸಚಿವರು ಹೇಳಿದರು.
ಯಾರದ್ದೋ ಒತ್ತಡಕ್ಕೂ ನಾವು ಮಣಿಯುವುದಿಲ್ಲ, ಎಸ್ಐಟಿ ಅಲ್ಲಿನ ಪರಿಸ್ಥಿತಿ ನೋಡಿ ತೀರ್ಮಾನ ಮಾಡಿದ್ದು, ಅಲ್ಲಿನ ಪೊಲೀಸರಿಂದ ಆಗಲ್ಲ, ಎಲ್ಲದನ್ನು ಅವಲೋಕಿಸಿ ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆ. ಅದು ಕೊಲೆಯಾ? ಸಹಜ ಸಾವಾ ಎಲ್ಲದರ ಬಗ್ಗೆ ತಿಳಿಯಬೇಕು. ಯಾವುದೇ ಕಾರಣಕ್ಕೂ ಇದರಲ್ಲಿ ಯಾವುದೇ ರಾಜೀ ಇಲ್ಲ. ಸತ್ಯ ಹೊರಗಡೆ ತರುತ್ತೇವೆ ಎಂದು ಜಿ. ಪರಮೆಶ್ವರ್ ತಿಳಿಸಿದರು
ಪ್ರಕರಣದಲ್ಲಿ ನಾವು ಏನನ್ನೂ ಮುಚ್ಚಿಡುವುದಿಲ್ಲ, ಮುಚ್ಚಿಡುವ ಅವಶ್ಯಕತೆಯೂ ನಮಗಿಲ್ಲ. ಇದರಿಂದ ಬೇರೆ ಉದ್ದೇಶಗಳು ನಮಗಿಲ್ಲ. ಧರ್ಮಸ್ಥಳ ಪ್ರಕರಣ ತುಂಬಾ ಸೂಕ್ಷ್ಮವಾದ ವಿಚಾರ. ಧರ್ಮಸ್ಥಳದಲ್ಲಿ ತನಿಖೆ ಆರಂಭಿಸುವಾಗ ಬಿಜೆಪಿಯವರು ಮೊದಲು ಏನೂ ಹೇಳಿರಲಿಲ್ಲ. 15 ದಿನಗಳಿಂದ ನೀವು ಮಾತನಾಡ್ತಿದ್ದೀರಾ? ನಿಮಗೆ ತನಿಖೆ ಸರಿಯಾಗಿ ಮಾಡಬೇಕಾ, ಸತ್ಯ ಹೊರಗೆ ಬರಬೇಕಾ? ಅದಕ್ಕೆ ಸಮಯ ಬೇಕು ಅಲ್ವಾ? ಅಲ್ಲಿ ಏನೂ ಆಗಿಯೇ ಇಲ್ಲ ಅಂತ ಹೇಳೋಕೆ ಆಗಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೌಜನ್ಯ ಕೇಸ್‌ನಲ್ಲಿ ಮತ್ತೆಮತ್ತೆ ಸಂತೋಷ್ ರಾವ್‌ನನ್ನು ಎಳೆತಂದು ಯಾರನ್ನು ರಕ್ಷಿಸಲಾಗುತ್ತಿದೆ?
ದೂರುದಾರ ಧರ್ಮಸ್ಥಳದ ಎಲ್ಲ ಕಡೆ ತೋರಿಸಿದರೆ ಅಗೆಯಲು ಸಾಧ್ಯವಿಲ್ಲ. ಮುಂದೆ ಅಗೆಯಬೇಕೊ ಬೇಡವೋ ಎಂದು ಎಸ್‌ಐಟಿ ತಿರ್ಮಾನ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ದೂರುದಾರನನ್ನು ಏಕೆ ಬಂಧಿಸಿಲ್ಲ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದರು. ಕೇಂದ್ರ ಸರ್ಕಾರ ರಚಿಸಿರುವ ವಿಟ್ನೆಸ್ ಪ್ರೊಟೆಕ್ಷನ್ ಕಾಯ್ದೆ ಇದೆ. ದೂರುದಾರರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊರೆ ಹೋಗಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಕಮಿಟಿ ದೂರುದಾರ ಮತ್ತು ಆತನ ಕುಟುಂಬಕ್ಕೆ ಭದ್ರತೆ ನೀಡುವಂತೆ ಆದೇಶ ನೀಡಿತ್ತು. ಹೀಗಾಗಿ ಬಂಧಿಸಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.