ಜಿಲ್ಲೆಯಲ್ಲಿ ನಿರಂತರ ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೂರ್ಯಕಾಂತಿ ಬೆಳೆಗಾರರ ರೈತರ ಜೀವನದಲ್ಲಿ ದೊಡ್ಡ ಸಂಕಷ್ಟವನ್ನು ತಂದಿದೆ. ಜಿಟಿಜಿಟಿ ಮಳೆ ಮತ್ತು ಕೆಲವೊಮ್ಮೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸೂರ್ಯಕಾಂತಿ ಕೀಟ ಬಾಧೆಗೆ ರೈತನ ಗೋಳಾಗಿದೆ.
ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪೋತ್ನಾಳ ವ್ಯಾಪ್ತಿಯ ಖರಾಬದಿನ್ನಿ, ತಡಕಲ್, ಜೀನೂರು, ಮದ್ದಮಗುಡ್ಡಿ, ದೇವಿಪುರ ಹಾಗೂ ಇನ್ನಿತರ ಗ್ರಾಮಗಳಲ್ಲಿ ನೂರಾರು ರೈತರು ಮುಂಗಾರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬೆಳೆಗೆ ಆದ್ಯತೆ ನೀಡಿದ್ದಾರೆ.
ಈ ವರ್ಷ ಮಾನ್ವಿ ತಾಲ್ಲೂಕಿನಲ್ಲಿ ಒಟ್ಟು ಸುಮಾರು 1,200 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗುತ್ತಿದೆ. ಈ ಮಳೆಯಿಂದಾಗಿ ಬಿತ್ತನೆ ಮಾಡಿರುವ ಸೂರ್ಯಕಾಂತಿ ಬೆಳೆ ಸಂಪೂರ್ಣ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಗೆ ಸಿಗುವ ಬೆಳೆ ಕಟಾವು ಮಾಡುವ ಮುನ್ನವೇ ಹಾಳಾಗುತ್ತಿರುವುದರಿಂದ ರೈತರ ಬಾಳಿನಲ್ಲಿ ನಿರಾಶೆ ಆವರಿಸಿದೆ ಎನ್ನಲಾಗಿದೆ.

ಬೆಳೆದಿದ್ದ ಸೂರ್ಯಕಾಂತಿ ಕಟಾವು ಮಾಡಲಾಗದ ಸ್ಥಿತಿಗೆ ತಲುಪಿದೆ. ಹೆಚ್ಚು ತೇವಾಂಶದಿಂದಾಗಿ ಹತ್ತಿಯಲ್ಲಿ ಜಂಗು ರೋಗ ವ್ಯಾಪಕವಾಗಿ ಹರಡಿದೆ. ಆದರೆ ಕೆಲ ದಿನಗಳಿಂದ ಸೂರ್ಯಕಾಂತಿ ಬೆಳೆಗೆ ತೆನೆಗಳನ್ನು ತಿನ್ನುವ ಕೀಟದ ಹಾವಳಿ ಕಂಡು ಬಂದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ಕೀಟಗಳು ಕಾಳು ಕಟ್ಟುವ ಹಂತದಲ್ಲಿನ ಸೂರ್ಯಕಾಂತಿ ಹೂವುಗಳನ್ನು ತಿನ್ನುವ ಮೂಲಕ ಹೆಚ್ಚಿನ ನಷ್ಟವನ್ನು ಉಂಟುಮಾಡುತ್ತಿವೆ.
ಈ ಬಗ್ಗೆ ಸೂರ್ಯಕಾಂತಿ ಬೆಳೆಗಾರ ದುರಗಪ್ಪ ತಡಕಲ್ ಮಾತನಾಡಿ, ನಿರಂತರ ಮಳೆ ಸುರಿಯುವುದರಿಂದ ಸೂರ್ಯಪಾನ ಹಾಳಾಗುತ್ತಿದೆ. ಒಳಗಡೆ ಕಾಳುಗಳು ಗಟ್ಟಿಯಾಗಿ ಬರುತ್ತಿಲ್ಲ. ಸುಮಾರು 40 ದಿನಗಳಿಂದ ಸರಿಯಾಗಿ ಬಿಸಿಲು ಬೀಳದೆ ಕಾರಣಕ್ಕೆ ಸೂರ್ಯಕಾಂತಿ ಬೆಳೆಯಲ್ಲಿ ಕೀಟಬಾಧೆ ಕಂಡುಬಂದಿದೆ ಎಂದು ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅತ್ಯಾಚಾರ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಸೂರ್ಯಕಾಂತಿ ಬೆಳೆಗೆ ಕೀಟಗಳ ಹಾವಳಿ ತಡೆಯಲು ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕೀಟನಾಶಕಗಳನ್ನು ಬಗ್ಗೆ ರೈತರಿಗೆ ತಿಳಿಸಬೇಕು ಹಾಗೂ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
