- ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ; ಜಾಮೀನಿನ ಮೇಲೆ ಬಿಡುಗಡೆ
- ಪೊಲೀಸರಿಗೆ ದೂರು ನೀಡಿದ್ದ ಕೆಪಿಸಿಸಿ ಘಟಕದ ಸದಸ್ಯ ಶತಬೀಶ್ ಶಿವಣ್ಣ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದ ಜಾಲ ಪತ್ತೆ ಮಾಡಿರುವ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.
ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಕಾಂಗ್ರೆಸ್ ನಾಯಕರ ವಿರುದ್ಧವೇ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಸನದಲ್ಲಿ ನೋಂದಣಿಯಾಗಿದ್ದ ವೆಬ್‌ಸೈಟ್ ಬೆಂಗಳೂರಿನಲ್ಲಿ ಬ್ರಾಂಚ್ ಹೊಂದಿತ್ತು ಎಂದು ತಿಳಿದುಬಂದಿದೆ.
ಸದ್ಯ ಬಂಧಿತರಿಂದ ಮೂರು ಮೊಬೈಲ್, ಒಂದು ಲ್ಯಾಪ್‌ಟಾಪ್, ಕ್ರೆಡಿಟ್ ಕಾರ್ಡ್ ಸೇರಿ ಹಲವು ದಾಖಲೆಗಳ ವಶಕ್ಕೆ ಪಡೆದಿದ್ದು, ಬಂಧಿತರನ್ನು ವೆಂಕಟೇಶ್, ಧರಣೇಶ್ ಮತ್ತು ಸಿದ್ದಾರ್ಥ್ ಎಂದು ಗುರುತಿಸಲಾಗಿದೆ.
ಕಳೆದ ಫೆಬ್ರವರಿ 3ರಂದು ಕೆಪಿಸಿಸಿ ಘಟಕದ ಸದಸ್ಯ ಶತಬೀಶ್ ಶಿವಣ್ಣ ನೀಡಿದ್ದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಸೈಬರ್ ಪೊಲೀಸರು, ಹಾಸನ ಹಾಗೂ ಬೆಂಗಳೂರಲ್ಲಿ ಸ್ಥಾಪನೆಯಾಗಿದ್ದ ನಕಲಿ ವೆಬ್‌ಸೈಟ್ ಜಾಲವನ್ನು ಕೊನೆಗೂ ಪತ್ತೆ ಮಾಡಿದ್ದರು.
ಇದನ್ನು ಓದಿದ್ದೀರಾ? ನಟ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದರೆ 10 ಲಕ್ಷ ಬಹುಮಾನ ಘೋಷಿಸಿದ ಬಲಪಂಥೀಯ ಮುಖಂಡ
ಈ ನಕಲಿ ವೆಬ್‌ಸೈಟ್ ಮೂಲಕ ಕಾಂಗ್ರೆಸ್ ವಿರುದ್ಧವೇ ಅವಹೇಳನಕಾರಿ ಬರಹಗಳ ಪೋಸ್ಟ್ ಮಾಡಲಾಗಿತ್ತು. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಅವಹೇಳನ ಮಾಡಿ ಪೋಸ್ಟ್ಗಳನ್ನು ಹಾಕಲಾಗಿತ್ತು. ಬಳಿಕ ಕೆಪಿಸಿಸಿ ಕಾನೂನು ಘಟಕದಿಂದ ಸೈಬರ್ ಠಾಣೆಗೆ ದೂರು ನೀಡಲಾಗಿತ್ತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ, ‘ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಅದರ ಮೂಲಕ ಪಕ್ಷದ ನಾಯಕರಿಗೆ ಅಗೌರವ ತರುವಂತಹ ಹೇಳಿಕೆಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಕಳೆದ ಫೆಬ್ರವರಿಯಲ್ಲಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಬಂದಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಐಟಿ ಕಾಯಿದೆ ಹಾಗೂ ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು’ ಎಂದು ತಿಳಿಸಿದ್ದಾರೆ.
‘ವಶಕ್ಕೆ ಪಡೆದಿದ್ದ ನಾಲ್ವರಲ್ಲಿ ಮೂವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ನೀಡಬಹುದಾದ ಅಪರಾಧವಾಗಿ ಪ್ರಕರಣ ದಾಖಲಾಗಿದ್ದರಿಂದ ಸದ್ಯ ಠಾಣಾ ಜಾಮೀನಿನ ಆಧಾರದಲ್ಲಿ ನೋಟಿಸ್ ನೀಡಿ ಕಳುಹಿಸಲಾಗಿದೆ’ ಎಂದು ಶರಣಪ್ಪ ತಿಳಿಸಿದ್ದಾರೆ.