ಬಹುತೇಕ ರೈತ ವರ್ಗವೇ ಬಳಸುವ ಸಿ.ಎಸ್.ಪುರ ಕೇಶಿಪ್ ರಸ್ತೆಗೆ ದಿಢೀರ್ ಟೋಲ್ ನಿರ್ಮಾಣ ಮಾಡಿ ಬಡ ರೈತರಿಂದ ತೆರಿಗೆ ಸಂಗ್ರಹಕ್ಕೆ ಮುಂದಾಗಿರುವುದು ಖಂಡನೀಯ ಎಂದು ರೈತ ಸಂಘ ತಾಲ್ಲೂಕು ಘಟಕ ಸೋಮವಾರ ಟೋಲ್ ತೆರವು ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಬಳಿಯ ಟೋಲ್ ನಿರ್ಮಾಣ ಸ್ಥಳಕ್ಕೆ ಬೆಳಿಗ್ಗೆ ಮುತ್ತಿಗೆ ಹಾಕಿದ ರೈತಸಂಘದ ಕಾರ್ಯಕರ್ತರು ಸ್ಥಳಕ್ಕೆ ಅಧಿಕಾರಿಗಳು ಬರಬೇಕು. ಟೋಲ್ ಕಾಮಗಾರಿ ಕೂಡಲೇ ಸ್ಥಗಿತ ಗೊಳಿಸಿಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಶೇಕಡಾ 90 ರಷ್ಟು ಮಂದಿ ರೈತರೇ ಬಳಸುವ ಈ ಗ್ರಾಮೀಣ ರಸ್ತೆಗೆ ಏಕಾಏಕಿ ಟೋಲ್ ನಿರ್ಮಿಸಿರುವುದು ಖಂಡನೀಯ. ಎಲ್ಲಾ ರಸ್ತೆಗಳಿಗೂ ಈಗಾಗಲೇ ತೆರಿಗೆ ಹಾಕಿದ್ದೀರಿ. ಈಗ ಹಳ್ಳಿ ರಸ್ತೆಗೆ ತೆರಿಗೆ ಹಾಕುತ್ತಿರುವುದು ಸರಿಯಲ್ಲ. ರೈತರ ಟ್ರ್ಯಾಕ್ಟರ್, ಬೈಕ್, ಗೂಡ್ಸ್ ಗಾಡಿ ಅಷ್ಟೇ ಓಡಾಡುವ ರಸ್ತೆಗೆ ತೆರಿಗೆ ಹಾಕಲು ಮುಂದಾಗಿರುವ ಉದ್ದೇಶ ತಿಳಿದಿಲ್ಲ. ವಾಹನ ಖರೀದಿ ಮಾಡುವ ಸಮಯದಲ್ಲೇ ಗ್ರಾಹಕ ರಸ್ತೆ ತೆರಿಗೆ ಕಟ್ಟಿರುತ್ತಾನೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಬಂಡವಾಳಶಾಹಿಗಳಿಗೆ ರಸ್ತೆ ನೀಡಿ ಬಡವರು ಓಡಾಡಲು ಟ್ಯಾಕ್ಸ್ ಕಟ್ಟಬೇಕಿದೆ. ಈ ಕೇಶಿಪ್ ರಸ್ತೆ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಕೂಡಲೇ ಟೋಲ್ ತೆರವು ಮಾಡಬೇಕು. ವಿಳಂಬವಾದರೆ ರೈತರೇ ಕಿತ್ತು ಹಾಕುತ್ತಾರೆ ಎಂದು ತಿಳಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ನೂರಾರು ಹಳ್ಳಿ ಜನರ ವಿರೋಧದ ಮಧ್ಯೆ ಏಕಾಏಕಿ ಟೋಲ್ ನಿರ್ಮಾಣ ಮಾಡಲಾಗುತ್ತಿದೆ. ಮಧ್ಯರಾತ್ರಿ ಬಂದು ಕಾಮಗಾರಿ ಮಾಡಿದ್ದಾರೆ. ಅವೈಜ್ಞಾನಿಕ ರಸ್ತೆ ಇದಾಗಿದೆ. ಮುಖ್ಯರಸ್ತೆ ಅಲ್ಲದ ಇಲ್ಲಿ ಬಹುತೇಕ ರೈತರಷ್ಟೇ ಬಳಸುತ್ತಾರೆ. ರೈತರಿಗೆ ಬರೆ ಎಳೆಯುತ್ತಿರುವುದು ಖಂಡನೀಯ. ಶಾಸಕರು ಸಂಸದರು ಸ್ಥಳಕ್ಕೆ ಬಂದು ಟೋಲ್ ತೆರೆವು ಮಾಡಿಸಬೇಕು. ಯಾವುದೇ ವ್ಯವಸ್ಥೆ ಇಲ್ಲದ ರಸ್ತೆಗೆ ಸಂಬಂಧಪಟ್ಟ ಕೆಆರ್ ಡಿಸಿಎಲ್ ಇಂಜಿನಿಯರ್ ತಕ್ಷಣಕ್ಕೆ ಕೆಲಸ ನಿಲ್ಲಿಸಬೇಕು. ತಾಲ್ಲೂಕು ಆಡಳಿತ ಸರ್ಕಾರದ ಗಮನಕ್ಕೆ ತಂದು ಟೋಲ್ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಕೇಶಿಪ್ ರಸ್ತೆ ನಿರ್ಮಾಣವಾಗಿ ಈಗಾಗಲೇ ಹತ್ತು ವರ್ಷ ಕಳೆದಿದೆ. ದಿಢೀರ್ ಟೋಲ್ ನಿರ್ಮಾಣ ಮಾಡಿರುವುದು ತೆರಿಗೆ ವಸೂಲಿಗೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣವನ್ನು ಈ ರೀತಿಯಲ್ಲಿ ವಸೂಲಿಗೆ ನಿಂತಿದೆ. ಗ್ರಾಮೀಣ ಭಾಗದ ರಸ್ತೆಗೆ ಏಕಾಏಕಿ ಸುಂಕ ವಸೂಲಿ ಮಾಡುವುದು ಸರ್ಕಾರದ ರೈತ ವಿರೋಧಿತನ ಎತ್ತಿಹಿಡಿದಂತಾಗಿದೆ. ಕೂಡಲೇ ಅಧಿಕಾರಿಗಳು ಟೋಲ್ ತೆರವು ಮಾಡದಿದ್ದರೆ ರೈತರೇ ಎಲ್ಲವನ್ನೂ ಕಿತ್ತೊಗೆಯುತ್ತಾರೆ. ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದರು.
ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಹೆಚ್ಚಿನ ಬಂಡವಾಳ ಹಾಕದ ಈ ರಸ್ತೆ ಕೇವಲ ಸ್ಥಳೀಯ ರೈತರ ಬಳಕೆಗೆ ಸೀಮಿತವಾಗಿದೆ. ಟೋಲ್ ನಿರ್ಮಿಸಿ ಸ್ಥಳೀಯರಿಗೆ ಉಚಿತ ಎಂದು ಹೇಳಿ ನಂತರ ವಸೂಲಿ ಮಾಡ್ತಾರೆ. ಸ್ಥಳೀಯರಿಗೆ ಉದ್ಯೋಗ ಎಂದು ಹೇಳಿ ನಂತರ ಉತ್ತರ ಭಾರತದವರಿಗೆ ಕೆಲಸ ಕೊಟ್ಟು ಬಲವಂತದಲ್ಲಿ ವಸೂಲಿ ಮಾಡುತ್ತಾರೆ. ಈ ಕಾಮಗಾರಿ ನಿಲ್ಲಿಸಿ ತೆರವು ಕಾರ್ಯ ಶಾಸಕರು, ಸಂಸದರು ಮಾಡಬೇಕು. ಈ ಹಿಂದೆ ಶಾಸಕ ಕೆ.ಎನ್.ರಾಜಣ್ಣ ಕ್ಷೇತ್ರದಲ್ಲಿ ಟೋಲ್ ಮುಂದೆ ನಿಂತು ತೆರವು ಮಾಡಿದ್ದರು. ಗುಬ್ಬಿ ಶಾಸಕರು ಸ್ಥಳಕ್ಕೆ ಬರಬೇಕು. ಕೆಲಸ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರ್, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಸಿ.ಕೆ.ಪ್ರಕಾಶ್, ಸತ್ತಿಗಪ್ಪ, ಯತೀಶ್, ವೀರಭದ್ರೇಗೌಡ, ಸ್ಥಳೀಯ ಗ್ರಾಪಂ ಸದಸ್ಯ ನರೇಶ್, ಮುಖಂಡ ಫಿರ್ದೋಸ್ ಆಲಿ, ದಲಿತ ಮುಖಂಡರಾದ ಕುಂದರನಹಳ್ಳಿ ಬಸವರಾಜ್, ನಟರಾಜ್ ಇತರರು ಇದ್ದರು.