ಶ್ರಾವಣ ಮಾಸದ ಕಡೇ ಸೋಮವಾರ ನಡೆಯುವ ಗುಬ್ಬಿಯ ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಬಸವೇಶ್ವರಸ್ವಾಮಿ ಪರೇವು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರಾವಣ ಮಾಸದ ಕಡೇ ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ನಡೆದು ಪುಷ್ಪಾಲಂಕಾರ ಭಕ್ತರನ್ನು ಸೆಳೆಯಿತು. ಈ ಜೊತೆಗೆ ತೊರೆಮಠದ ಶ್ರೀ ಆಟವಿ ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಪಾದಪೂಜೆ ಕಾರ್ಯಕ್ರಮ ಟ್ರಸ್ಟ್ ವತಿಯಿಂದ ನಡೆಸಲಾಯಿತು. ಮಧ್ಯಾಹ್ನ 12 ಕ್ಕೆ ಮಹಾ ಮಂಗಳಾರತಿ ಅನ್ನ ದಾಸೋಹ ಸಂಜೆವರೆಗೆ ನಿರಂತರ ನಡೆಯಿತು.
ತೊರೆ ಮಠದ ಅಧ್ಯಕ್ಷ ಶ್ರೀ ಅಟವಿ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ ಪ್ರತಿ ವರ್ಷ ನಡೆಯುವ ಈ ಪರೇವು ಜಾತ್ರೆಯಲ್ಲಿ ಅನ್ನ ದಾಸೋಹ ಕಾರ್ಯಕ್ರಮವೇ ವಿಶೇಷವಾಗಿ ನಡೆದು ಬಂದಿದೆ. ಸಾವಿರಾರು ಭಕ್ತರು ಆಗಮಿಸುವ ಈ ಸಿಡಿಲು ಬಸವೇಶ್ವರಸ್ವಾಮಿಗೆ ಇಂದಿಗೂ ಹರಕೆ ಕಟ್ಟಿಕೊಳ್ಳುವ ಹಾಗೂ ಹರಕೆ ತೀರಿಸುವ ಪೂಜೆ ಪ್ರತಿ ಅಮಾವಾಸ್ಯೆ ನಡೆದು ಬಂದಿದೆ. ಬಹಳ ಸತ್ಯ ನಿಷ್ಠೆಯಲ್ಲಿ ನಡೆದುಕೊಳ್ಳುವ ಭಕ್ತರು ದಾಸೋಹ ಕಾರ್ಯಕ್ರಮಕ್ಕೆ ದವಸ ಧಾನ್ಯ ಹಾಗೂ ಆರ್ಥಿಕ ದೇಣಿಗೆ ನೀಡುತ್ತಿದ್ದಾರೆ. ಭಿನ್ನ ವಿಗ್ರಹಕ್ಕೆ ಪೂಜೆ ನಡೆಯೋಲ್ಲ ಎಂಬ ಮಾತಿಗೆ ವಿರೋಧವಾಗಿ ಪೂಜೆ ವಿಧಿವತ್ತಾಗಿ ನಿರಂತರ ನಡೆದು ಬಂದಿದೆ. ಇಲ್ಲಿನ ಮಹಿಮೆ ಭಕ್ತರನ್ನು ಇಂದಿಗೂ ಆಕರ್ಷಿಸಿದೆ ಎಂದರು.

ಟ್ರಸ್ಟಿ ಎಚ್.ಎನ್.ಲೋಕೇಶ್ ಮಾತನಾಡಿ ಸಿಡಿಲು ಬಡಿದು ಎರಡು ಹೋಳು ಆಗಿರುವ ಬಸವಣ್ಣನಿಗೆ ನಿತ್ಯ ಪೂಜೆ, ಅಮಾವಾಸ್ಯೆ ಕಟ್ಲೆ ಹಾಗೂ ವರ್ಷಕ್ಕೊಮ್ಮೆ ಪೆರೇವು ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಂದಿಗೂ ಸಿಡಿಲು ಬಸವಣ್ಣನ ಬಗ್ಗೆ ಅಪಾರ ನಂಬಿಕೆ, ಭಕ್ತಿ ಹೊಂದಿದ್ದಾರೆ. ನೂರಾರು ವರ್ಷದ ಬಸವಣ್ಣ ಕಲ್ಲಿನ ವಿಗ್ರಹ ಎರಡು ಭಾಗವಾದರೂ ಇಂದಿಗೂ ಬೆಳವಣಿಗೆ ಇದೆ. ಮತ್ತೊಂದು ವಿಶೇಷ ಸಮೀಪದ ಹೇರೂರು ಮಾಳೆ ಎಂಬ ಗ್ರಾಮದ ಮುಸ್ಲಿಂ ಸಮಾಜ ಕೂಡಾ ಇಲ್ಲಿನ ಬಸವಣ್ಣನಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಣೆ ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಶೌಕತ್ ಆಲಿ, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಮುಖ್ಯಾಧಿಕಾರಿ ಮಂಜುಳಾದೇವಿ, ಟ್ರಸ್ಟ್ ಅಧ್ಯಕ್ಷ ಪಣಗಾರ್ ನಿಜಲಿಂಗಪ್ಪ, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ಮಹಾದೇವ್, ಎಚ್.ಎನ್.ರಮೇಶ್, ನಾಗರಾಜ್ ಇತರರು ಇದ್ದರು.
https://shorturl.fm/G8hw8