ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿಯಲ್ಲಿ ಒಳಹರಿವು ವಿಪರೀತ ಹೆಚ್ಚಿದೆ. ಶೃಂಗೇರಿಯಲ್ಲಿಯೇ ತುಂಗಾನದಿಯು ಅಬ್ಬರಿಸಿ ಹರಿಯುತ್ತಿದ್ದು, ತಿರ್ಥಹಳ್ಳಿಯಲ್ಲಿ ತುಂಗೆಯ ಆರ್ಭಟ ಇನ್ನೂ ಜೋರಾಗಿದೆ. ಇಲ್ಲಿನ ರಾಮೇಶ್ವರ ಮಂಟಪ ಬಹುತೇಕ ಮುಳುಗಡೆಯಾಗಿದೆ.
ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ ಜಲರಾಶಿಯೇ ಹರಿದು ಬರುತ್ತಿದೆ. ಇವತ್ತು ಲಭ್ಯ ಮಾಹಿತಿ ಪ್ರಕಾರ, ಗಾಜನೂರು ಜಲಾಶಯಕ್ಕೆ ಇವತ್ತು ಜಲಾಶಯಕ್ಕೆ ಒಟ್ಟು 73,415 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಒಟ್ಟು 76,656 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಇದರ ಪರಿಣಾಮವಾಗಿ ಶಿವಮೊಗ್ಗ ನಗರ ಭಾಗದಲ್ಲಿಯೇ ತುಂಗೆ ತನ್ನ ವ್ಯಾಪ್ತಿಯ ವಿಶಾಲತೆಯನ್ನು ಪ್ರದರ್ಶನ ಮಾಡುತ್ತಿದ್ದಾಳೆ. ಕೆಂಬಣ್ಣದ ಸೀರೆಯುಟ್ಟು ಮೆರವಣಿಗೆ ಹೊರಟಂತೆ ಕಾಣುತ್ತಿರರುವ ತುಂಗಾ ನದಿ ಅಪಾಯದ ರೌದ್ರವತೆಯನ್ನು ನೋಡುಗರ ಮನಸಿನಲ್ಲಿಯೇ ಸೃಷ್ಟಿಸುತ್ತಿದ್ದಾಳೆ.
ತುಂಗಾ ನದಿಯ ಅಪಾಯದ ತೀವ್ರತೆಯನ್ನು ಲೆಕ್ಕ ಹಾಕುವ ಹಿಂದಿನ ಪದ್ದತಿಯಂತೆ ನೋಡುವುದಾದರೆ, ಶಿವಮೊಗ್ಗದ ಕೋರ್ಪಳ್ಳಯ್ಯನ ಮಂಟಪ್ಪ ಮುಳುಗಿದೆ. ಇದನ್ನು ನೋಡಲು ಮಂಟಪದ ಬಳಿಗೆ ಜನರು ಬಂದು ಹೋಗುತ್ತಿದ್ದಾರೆ. ಜಿಟಿ ಮಳೆಯ ನಡುವೆ ತುಂಗಾನದಿ ಮೈದುಂಬಿ ಹರಿವುದನ್ನು ಕಂಡು ಜನರು ರೋಮಾಂಚನಗೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಇವತ್ತು ಸಹ ಮಳೆ ಮುಂದುವರಿದರೆ ತಗ್ಗುಪ್ರದೇಶಗಳಲ್ಲಿ ಪ್ರವಾಹ ಭೀತಿಯ ಆತಂಕವೂ ಇದೆ.