ಬಿಜೆಪಿಯವರು ಹೇಳಿದಾಕ್ಷಣ ಎಲ್ಲವೂ ಸತ್ಯ ಆಗುವುದಿಲ್ಲ. ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ಮುಂದುವರೆಸಬೇಕು, ನ್ಯಾಯ ಸಿಗಬೇಕು. ನಾವು ಯಾವುದೇ ದೇವಸ್ಥಾನದ ವಿರುದ್ಧವೂ ಅಲ್ಲ ಧರ್ಮದ ವಿರುದ್ಧವೂ ಅಲ್ಲ. ಎಲ್ಲ ಧರ್ಮದವರೂ ನಮ್ಮ ಮೇಲೆ ನಂಬಿಕೆ ಇರುವವರು ನಮ್ಮ ಜೊತೆ ಸೇರಿದ್ದಾರೆ. ಧರ್ಮಸ್ಥಳ ಎಂಬ ಊರಿನಲ್ಲಿ ಆಗಿರುವ ಅಸಹಜ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟಗಾರ, ನಟ ಚೇತನ್ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಇದು ಕೇವಲ ಒಂದು ಧರ್ಮದ ಅಥವಾ ಒಂದು ಸಿದ್ಧಾಂತದ ಹೋರಾಟ ಅಲ್ಲ. ಕರ್ನಾಟಕದಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಎಸ್‌ಐಟಿಯವರು ಈ ತನಿಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು. ಬಿಜೆಪಿಯವರು ಹೋರಾಟ ಮಾಡಲಿ” ಎಂದರು.
“ಬಿಜೆಪಿಯವರು ತಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ನಾಯಕತ್ವದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರಬಹುದು, ನೀವು ಪಾದಯಾತ್ರೆ ಯಾವುದು ಬೇಕಿದ್ದರೂ ಮಾಡಿ. ಅದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ನ್ಯಾಯದ ಪರವಾಗಿ ಇದ್ದೀರ ಎಂಬುದು ಕಾಣುತ್ತಿಲ್ಲ” ಎಂದು ಹೇಳಿದರು.
“ಬಿಜೆಪಿಗೆ ವೋಟ್ ಹಾಕಿರುವವರು, ಆರ್‌ಎಸ್‌ಎಸ್ ಪರವಾಗಿರುವವರು, ನಮ್ಮ ಸಮಾಜದ ಜತೆಗೆ ಇದ್ದಾರೆ. ಮುಖ್ಯವಾಗಿ ಧರ್ಮಸ್ಥಳ ಊರಿನಲ್ಲಿ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಬೇಕಿದೆ. ಕರ್ನಾಟಕದಲ್ಲಿ ಒಕ್ಕೊರಲಿನಿಂದ ಈ ನ್ಯಾಯಕ್ಕಾಗಿ ಒಟ್ಟಾಗಿದ್ದಾರೆ” ಎಂದರು.