ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ನಿಲಯಗಳ ಹೊರಗುತ್ತಿಗೆ ಸಿಬ್ಬಂದಿಗಳು 10ರಿಂದ 15 ವರ್ಷಗಳಿಂದಲೂ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರ ಕಾರ್ಮಿಕ ಇಲಾಖೆಯಡಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿದರೂ ಇದನ್ನು ಜಾರಿ ಮಾಡದೇ ಮೀನಾ ಮೇಷ ಮಾಡುತ್ತಿದ್ದಾರೆ. ಇಂತಹ ನಡೆಯನ್ನು ಬಿಟ್ಟು ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘ ಕೊಪ್ಪಳ ಜಿಲ್ಲಾ ಸಮಿತಿಯು ಸಾಮೂಹಿಕ ಪ್ರತಿಭಟನೆ ನಡೆಸಿತು.
“ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಸಿಬ್ಬಂದಿಗಳಿಗೆ 2 ತಿಂಗಳ ವೇತನ ನೀಡಿರುವುದೇ ಹೊರತು ಪಿಎಫ್ ಇಎಸ್ಐ ಜಮಾ ಆಗಿಲ್ಲ. ದೂರು ನೀಡಿದರೂ ಇಲಾಖೆ ಆಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಖಾಸಗಿ ಏಜೆನ್ಸಿಗಳನ್ನು ರದ್ದು ಮಾಡಿ ಬೀದರ್ ಮಾದರಿ ಸೊಸೈಟಿ ರಚಿಸಿ. ಇಲ್ಲವೇ ಸರ್ಕಾರ ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು” ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
“8ರಿಂದ 10ವರ್ಷ ಕೆಲಸ ಮಾಡಿದ ಅನೇಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿ ಶಾಸಕರು, ಸಂಸದರು ನಿರ್ದೇಶಿಸಿದಂತೆ ಅಧಿಕಾರಿಗಳು ಸಿಬ್ಬಂದಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಿ ಹಳೆ ಸಿಬ್ಬಂದಿಗಳಿಗೆ ಕೆಲಸ ಕೊಡಬೇಕು. ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಪರಿಷ್ಕರಣೆ ಕರಡು ಅಧಿಸೂಚನೆ ಹೊರಡಿಸಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿ ಮಾಡಬೇಕು. ಕನಿಷ್ಠ ವೇತನ ತಿಂಗಳಿಗೆ ₹36,000 ಕೊಡಬೇಕು. ಕ್ರೇಸ್ ಟೆಂಡರ್ ನೋಟಿಫಿಕೇಷನ್ ರದ್ದು ಮಾಡಿ. ಬೀದರ್ ಮಾದರಿ ಸೊಸೈಟಿ ರಚಿಸಿ, ಹೊರಗುತ್ತಿಗೆ ನೌಕರರ ಹಿತ ಕಾಪಾಡಬೇಕು. ಇಲ್ಲವೇ ಸಹಕಾರ ಸಂಘಕ್ಕೆ ಅನುಮತಿ ನೀಡಿ ಮುಂದುವರೆಸಿ ಅಥವಾ ಕೊಪ್ಪಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ರಚಿಸಿ ವೇತನ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಭಾರೀ ಮಳೆ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಣೆ: ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ನಿವೃತ್ತಿವರೆಗೆ ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಕೊಟ್ಟು ಕಾಯಂ ಮಾಡಬೇಕು. ಬಾಕಿ ಇರುವ ವೇತನ ತಕ್ಷಣ ಕೊಡಬೇಕು. ಕಾರ್ಮಿಕ ಇಲಾಖೆಯ ಕಾನೂನು ಪ್ರಕಾರ ವಾರದ ರಜೆ ನೀಡಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಿಬ್ಬಂದಿಗಳಿಗೆ 2 ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಸ್ವಿಸ್ ಏಜೆನ್ಸಿಯವರು ಯಾವುದೇ ಸಿಬ್ಬಂದಿಗೂ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಪಿಎಫ್ ಇಎಸ್ಐ ಕಟ್ಟಿಲ್ಲ. ಐಡಿ ಕಾರ್ಡ್ ಯಾವುದೇ ಮೂಲಭೂತ ಸೌಲಭ್ಯ ನೀಡದೇ ಇರುವುದರಿಂದ ಕೂಡಲೇ ಸ್ವಿಸ್ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು” ಎಂದು ಒತ್ತಾಯಿಸಿದರು.
ಗ್ಯಾನೇಶ ಕಡಗದ, ಮಹ್ಮದ್ ರಫೀಕ್, ಫಕೀರಪ್ಪ, ಹುಸೇನಪ್ಪ, ಬಸವರಾಜ, ನಿರುಪಾದಿ, ನೂರ್‌ಪಾಷ, ಮಂಜು ಜೋಶಿ, ಕನಕರಾಯ ಡಗ್ಗಿ, ತೊಂಡೆಪ್ಪ, ಬಾಳೇಶ, ಮಾರುತಿ, ಖಾಸಿಂ ಸಾಬ ಸರ್ದಾರ್, ಸುಂಕಪ್ಪ ಸೇರಿದಂತೆ ಇತರರು ಇದ್ದರು.
https://shorturl.fm/uH3Wr