ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಆಗಸ್ಟ್ 19ರಂದು ಬೆಳಿಗ್ಗೆ 10 ಗಂಟೆಯಿಂದ ಹೊರಬಿಡಲಾಗುವುದೆಂದು ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರು ಕೆಪಿಸಿ ಲಿಂಗನಮಕ್ಕಿಯವರು ಆಗಸ್ಟ್ 18ರಂದು ತಿಳಿಸಿದ್ದು, ಸಾರ್ವಜನಿಕರು ಈ ಮುಂದಿನಂತೆ ಸೂಚನೆಗಳನ್ನು ಪಾಲಿಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮಿಪ್ರಿಯಾ ಕೆ ತಿಳಿಸಿದ್ದಾರೆ.
“ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಅವರ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಆಗಸ್ಟ್ 20 ಬೆಳಿಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿರುತ್ತದೆ. ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಗಣನೀಯವಾಗಿ ಏರುತ್ತಿರುತ್ತದೆ” ಎಂದು ಹೇಳಿದರು.
“ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು ಆಗಸ್ಟ್ 18ರಂದು ಮಧ್ಯಾಹ್ನ 1 ಗಂಟೆಗೆ ಜಲಾಶಯದ ನೀರಿನ ಮಟ್ಟವು 1815.50 ಅಡಿಗಳಿಗೆ ತಲುಪಿದೆ. ಈ ದಿನ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 59,891 ಕ್ಯೂಸೆಕ್‌ಗಳಿಗಿಂತಲೂ ಅಧಿಕವಾಗಿದ್ದು, ಇದೇ ರೀತಿಯಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ” ಎಂದಿದ್ದಾರೆ.
ಲಿಂಗನಮಕ್ಕಿ ಜಲಾಶಯದ ತಗ್ಗು ಪ್ರದೇಶದಲ್ಲಿ ಶರಾವತಿ ನದಿಯ ಇಕ್ಕೆಲಗಳ ಪ್ರದೇಶದಲ್ಲಿರುವ ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿರುವ ತಳಮಟ್ಟದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಪ್ರವಾಹ ಸಂಭವನೀಯ ಸ್ಥಳಗಳ ಸಾರ್ವಜನಿಕರು ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ಇಬ್ಬರು ಸ್ಥಳದಲ್ಲಿಯೇ ಸಾವು, ಹಲವರಿಗೆ ಗಾಯ
ಶರಾವತಿ ನದಿಯ ತಗ್ಗು ಪ್ರದೇಶಗಳಲ್ಲಿರುವ ಸಾರ್ವಜನಿಕರ ಕುರಿತು ಕಾಳಜಿ ಕೇಂದ್ರಗಳನ್ನು ಅಣಿಗೊಳಿಸಲಾಗಿರುತ್ತದೆ. ಮೀನುಗಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿಯ ಒಳಗೆ ಅಥವಾ ಅದರ ಸುತ್ತಲಿನ ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸಬೇಕು. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ತುರ್ತು ಸೇವೆಗೆ 24/7 ಕಂಟ್ರೋಲ್ ರೂಮ್ ಟೋಲ್ ಪ್ರೀ ಸಂಖ್ಯೆ 08382-229857 ಮತ್ತು ವಾಟ್ಸ್ಯಾಪ್ ಸಂಖ್ಯೆ 9483511015 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.