ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನ ಜಾನುವಾರುಗಳಿಗೆ ಜೀವ ಹಾನಿ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆ, ಸೇತುವೆ ಹಾನಿಯಾಗಿದ್ದಲ್ಲಿ ಪರಿಶೀಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ತಿಳಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಮುಂಗಾರು ಹಂಗಾಮಿನಲ್ಲಿ ಮಳೆ ಹಾನಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದರು.
“ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಮಳೆ ಪ್ರಮಾಣ ಹೆಚ್ಚಿದಂತೆ ಪ್ರವಾಹ, ಜಲಾವೃತ, ರಸ್ತೆ ಅಪಘಾತ, ವಿದ್ಯುತ್ ದೋಷ, ಮನೆ ಕುಸಿತ ಮುಂತಾದ ಅಪಾಯಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಜೀವ, ಆಸ್ತಿಯ ರಕ್ಷಣೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕು. ಮಳೆಯಿಂದಾಗಿ ಮಣ್ಣಿನ ಮನೆಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸಂಬಂಧಿತ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿರುವ ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ, ಬೆಡ್ತಿ ಹಳ್ಳ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಹರಿಯುತ್ತಿರುವ ಹಳ್ಳ ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ಜಲಮೂಲಗಳ ಸಮೀಪ ಸಂಚರಿಸದಂತೆ, ನೀರಿಗೆ ಇಳಿಯದಂತೆ ತಿಳಿಸಬೇಕು. ತಹಶೀಲ್ದಾರರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಳ್ಳ, ಕೆರೆ ನೀರಿನ ಮಟ್ಟವನ್ನು ನಿರಂತರವಾಗಿ ಪರಿಶೀಲಿಸಬೇಕು. ಅಪಾಯಕಾರಿ ಮಟ್ಟ ತಲುಪಿದ ಸಂದರ್ಭದಲ್ಲಿ ತಕ್ಷಣ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕು. ತಗ್ಗು ಪ್ರದೇಶಗಳು, ಹಳ್ಳ, ಕೆರೆಗಳ ತೀರ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಕ್ರಮವಹಿಸಬೇಕು. ಜೀವ ಹಾನಿಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೂಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಭಾರೀ ಮಳೆ: ಆ.19ರಂದು ಅಂಗನವಾಡಿ, ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ
ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.