ನೂತನ ಕ್ರೀಡಾ ನಿಯಮಗಳಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲು ತೊಂದರೆಯಾಗುತ್ತಿದ್ದು, ಹಳೇ ಕ್ರೀಡಾ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಒತ್ತಾಯಿಸಿದರು.
ಚಿಂತಾಮಣಿ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು “14 ವರ್ಷ ಮತ್ತು 17 ವರ್ಷ ಒಳಪಟ್ಟ ವಯೋಮಾನದ ವಿದ್ಯಾರ್ಥಿಗಳನ್ನು ಎರಡು ವಿಭಾಗಗಳಾಗಿ ಮಾಡಿರುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಭಾಗವಹಿಸುವುದು ಕಷ್ಟಕರ. ಆದುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿಂದೆ ನಡೆಸುತ್ತಿದ್ದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟಗಳೆಂದು ಪ್ರತ್ಯೇಕವಾಗಿ ನಡೆಸಬೇಕು” ಎಂದರು.
“ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಉಲ್ಲಾಸ ಉತ್ಸಾಹ, ಆರೋಗ್ಯವಂತರಾಗಿರಬಹುದು. ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬಹುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳು, ಪ್ರತಿಭಾ ಕಾರಂಜಿಗಳು, ಕಲಿಕಾ ಹಬ್ಬಗಳು, ಕಲಿಕೋತ್ಸವಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಸಹಕಾರಿಯಾಗುತ್ತವೆ” ಎಂದು ಆಶಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನಿರಂತರ ಮಳೆ: ಜಾನುವಾರುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ
“ಕಸಬಾ ಹೋಬಳಿ ವಿದ್ಯಾರ್ಥಿಗಳು ತಾಲೂಕು ಮಟ್ಟದಲ್ಲಿ ವಿಜೇತರಾಗಿ ಹೆಸರು ತರಬೇಕು” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನರಸಿಂಹಪ್ಪ, ಕ್ರೀಡಾಕೂಟದ ಉಸ್ತುವಾರಿಗಳಾದ ದೈಹಿಕ ಶಿಕ್ಷಕ ಉಪೇಂದ್ರ, ನಗರ ಸಿಆರ್‌ಪಿ ಬಾಸ್ಕರ್ ರೆಡ್ಡಿ, ಬೂರಗಮಾಕಲ ಹಳ್ಳಿ ಸಿಆರ್‌ಪಿ ನಾಗರಾಜ್, ನಗರ ಸೆಕೆಂಡ್ ಸಿಆರ್‌ಪಿ ಲಕ್ಷ್ಮಣ್ ರೆಡ್ಡಿ, ಆನೂರು ಸಿಆರ್‌ಪಿ ಮೆನಸಪ್ಪ, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿ ಕ್ರೀಡಾಪಟುಗಳು ಹಾಜರಿದ್ದರು.