ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮಿಸ್ ಯೂನಿವರ್ಸ್ ಇಂಡಿಯಾ 2025 ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ತಾನ್ಯಾ ಶರ್ಮಾ ಮೊದಲ ರನ್ನರ್ ಅಪ್, ಹರಿಯಾಣದ ಮೆಹಕ್ ಧಿಂಗ್ರಾ ಎರಡನೇ ರನ್ನರ್ ಅಪ್ ಮತ್ತು ಅಮಿಶಿ ಕೌಶಿಕ್ ಮೂರನೇ ರನ್ನರ್ ಅಪ್ ಆಗಿದ್ದಾರೆ.
ಸೋಮವಾರ(ಆಗಸ್ಟ್ 18) ರಾಜಸ್ಥಾನದ ಜೈಪುರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ, ಮಣಿಕಾ ವಿಶ್ವಕರ್ಮ ಮಿಸ್ ಯೂನಿವರ್ಸ್ ಇಂಡಿಯಾ 2025 ಕಿರೀಟವನ್ನು ಪಡೆದಿದ್ದಾರೆ. ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ ಅವರು ಮಣಿಕಾಗೆ ಕಿರೀಟಧಾರಣೆ ಮಾಡಿದರು. ಈ ನವೆಂಬರ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಣಿಕಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನು ಓದಿದ್ದೀರಾ? ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಮುಡಿಗೇರಿಸಿಕೊಂಡ 18ರ ರಿಯಾ ಸಿಂಘಾ
ತಮ್ಮ ಗೆಲುವಿನ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಣಿಕಾ, “ನನ್ನ ಪ್ರಯಾಣವು ನನ್ನ ಊರು ಗಂಗಾನಗರದಿಂದ ಪ್ರಾರಂಭವಾಯಿತು. ನಾನು ದೆಹಲಿಗೆ ಬಂದು ಸ್ಪರ್ಧೆಗೆ ಸಿದ್ಧಳಾದೆ. ನಾವು ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಬೇಕು. ನನಗೆ ಸಹಾಯ ಮಾಡಿದ ಮತ್ತು ನಾನು ಈ ಮಟ್ಟಿಗೆ ಬೆಳೆಯುವಂತೆ ಮಾಡಿದ ಎಲ್ಲರಿಗೂ ಧನ್ಯವಾದ. ಸ್ಪರ್ಧೆಯು ಕೇವಲ ಒಂದು ಕ್ಷೇತ್ರವಲ್ಲ, ಇದು ನಮ್ಮ ಪಾತ್ರವನ್ನು ನಿರ್ಮಿಸುವ ಜಗತ್ತು” ಎಂದು ಹೇಳಿದರು.
VIDEO | Jaipur, Rajasthan: Manika Vishwakarma crowned Miss Universe India 2025. She says,
— Press Trust of India (@PTI_News) August 19, 2025
“Even though I come from a small town, I’ve always had the support of my family and community. I received a good education, and none of this would have been possible without their support.”… pic.twitter.com/f7d9W8ZaTK
ಮಣಿಕಾ ಮೂಲತಃ ರಾಜಸ್ಥಾನದ ಶ್ರೀ ಗಂಗಾನಗರದವರಾಗಿದ್ದು, ಈಗ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಮಿಸ್ ಯೂನಿವರ್ಸ್ ರಾಜಸ್ಥಾನ 2024 ಕಿರೀಟವನ್ನು ಸಹ ಮಣಿಕಾ ಪಡೆದಿದ್ದಾರೆ. ಪ್ರಸ್ತುತ ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆಯುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿನಿ.
ಶಾಸ್ತ್ರೀಯ ನೃತ್ಯದಲ್ಲಿ ತರಬೇತಿ ಪಡೆದಿರುವ ಮಣಿಕಾ, ಚಿತ್ರಕಲೆಯನ್ನೂ ಮಾಡುತ್ತಾರೆ. ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ಆಯೋಜಿಸಲಾದ BIMSTEC ಸೆವೊಕಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಲಲಿತ ಕಲಾ ಅಕಾಡೆಮಿ ಮತ್ತು ಜೆಜೆ ಸ್ಕೂಲ್ ಆಫ್ ಆರ್ಟ್ಸ್ ಅವರನ್ನು ಗೌರವಿಸಿದೆ.
