ಈ ದಿನ ಸಂಪಾದಕೀಯ | ಮಳೆ ಸಮಸ್ಯೆಯಾಗಿದ್ದು ಯಾಕೆ ಮತ್ತು ಯಾರಿಗೆಲ್ಲ ಅನುಕೂಲ?  

Date:

Advertisements
ಮಳೆ ಎನ್ನುವುದು ಸಮಸ್ಯೆ ಎನ್ನುವಂತಾಗಿಸುವಲ್ಲಿ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಪಾತ್ರವಿದೆ. ಜೊತೆಗೆ ಜನರ ಅಸೀಮ ನಿರ್ಲಕ್ಷ್ಯವೂ ಕಾರಣವಾಗಿದೆ. ಜನರ ಈ ಹೊಂದಿಕೊಂಡು ಹೋಗುವ ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ.

ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಇದೇ ಸಮಯದಲ್ಲಿ ಮುಂಗಾರು ಅಧಿವೇಶನವೂ ನಡೆಯುತ್ತಿದೆ. ರಾಜಕಾರಣಿಗಳ ಮಾತಿನ ಮಳೆಯೂ ಜೋರಾಗಿದೆ. ಆದರೆ ಆ ಮಾತಿನಲ್ಲಿ ಮಳೆ ಮಾಡಿದ ಅನಾಹುತ ಮತ್ತು ಸರ್ಕಾರದ ಪರಿಹಾರಕಾರ್ಯ ಕುರಿತ ತೋರಿಕೆಯ ಮಾತಾಡಿದ್ದು ಖೇದವೆನಿಸುತ್ತದೆ.

ಇಲ್ಲಿಯವರೆಗೆ ಎಂಟು ಜಿಲ್ಲೆಗಳು ಮುಂಗಾರು ಮಳೆಯ ಅನಾಹುತಕ್ಕೆ ಒಳಗಾಗಿವೆ. ಆರು ಜಿಲ್ಲೆಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುಮಾರು 150 ಮನೆಗಳು ಧರೆಗೆ ಉರುಳಿವೆ, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅತಿಯಾದ ಮಳೆಯಿಂದ 20,244 ರೈತರು ಕಷ್ಟಕ್ಕೀಡಾಗಿದ್ದಾರೆ. ಒಟ್ಟು 5 ಲಕ್ಷ ಹೆಕ್ಟೇರ್‌ ಪ್ರದೇಶದ ವಿವಿಧ ಬೆಳೆಗಳು ಹಾನಿಯಾಗಿವೆ. ಜನರ ಜೀವನ ಅಸ್ತವ್ಯಸ್ತವಾಗಿದೆ.

ಮಳೆ ಎನ್ನುವುದು ನಗರವಾಸಿಗಳಿಗೆ ಅನಿಷ್ಟ, ಅಲರ್ಜಿಯಾದರೆ; ಗ್ರಾಮೀಣ ಭಾಗದ ಜನರಿಗೆ ಜೀವಜಲ. ಕೃಷಿ ಚಟುವಟಿಕೆಗಳು ಗರಿಗೆದರುವ ಕಾಲ. ಆದರೆ, ಈ ಬಾರಿಯ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿಲ್ಲ. ಅವಧಿಗೆ ಮುನ್ನವೇ ಬಂದ ಮುಂಗಾರು ಮಳೆ, ರೈತರನ್ನು ಹೈರಾಣಾಗಿಸಿದೆ. ಆದರೂ ಹೊಲ-ಗದ್ದೆ-ತೋಟಗಳನ್ನು ಹಸನು ಮಾಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಸಮಯಕ್ಕೆ ಸರಿಯಾಗಿ ಸಿಗದೆ ಕಡು ಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆದ ಬೆಳೆ ಕಣ್ಣಮುಂದೆಯೇ ಕೊಚ್ಚಿ ಹೋಗುವುದನ್ನು ಕಂಡು ಕಂಗಾಲಾಗಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಸೌಜನ್ಯ ಕೇಸ್‌ನಲ್ಲಿ ಮತ್ತೆಮತ್ತೆ ಸಂತೋಷ್ ರಾವ್‌ನನ್ನು ಎಳೆತಂದು ಯಾರನ್ನು ರಕ್ಷಿಸಲಾಗುತ್ತಿದೆ?

ಮುಂಗಾರು ಮಳೆ ಇಂತಹ ಅವಧಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ ಎನ್ನುವುದು ಹವಾಮಾನ, ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆಗಳಿಗೆ ತಿಳಿದ ವಿಷಯವೇ ಆಗಿದೆ. ಆದರೆ, ಅದನ್ನು ಎದುರಿಸಲು, ರೈತರಿಗೆ ಎಚ್ಚರಿಸಲು ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಸಿದ್ಧರಾಗಿರುವುದಿಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಎಲ್ಲ ಸರ್ಕಾರಗಳ ಕಣ್ಣೊರೆಸುವ ತಂತ್ರದ ಭಾಗವೇ ಆಗಿಹೋಗಿದೆ.

ನೆಲ ನಂಬಿ ಬದುಕುವವರಿಗೆ ಮಳೆಯಿಂದಾದ ಅನಾಹುತಗಳು, ಒಂದು ರೀತಿಯಲ್ಲಿ ಹೃದಯ ಹೆಪ್ಪುಗಟ್ಟುವ ವಿಷಯವಾದರೆ; ತುರ್ತು ಕಾರ್ಯಾಚರಣೆ, ಪರಿಹಾರ, ಗಂಜಿಕೇಂದ್ರ, ಸಂತ್ರಸ್ತರ ನೆರವಿನ ನೆಪದಲ್ಲಿ ನಡೆಯುವ ‘ಕಾಮಗಾರಿ’ ಕಂಗಾಲಾಗಿಸುತ್ತದೆ. ಮಳೆಯಿಂದಾಗುವ ಅವಘಡ ಪರೋಕ್ಷವಾಗಿ ಅಧಿಕಾರಸ್ಥರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ‘ತುರ್ತು’ ನೆಪದಲ್ಲಿ ಕೋಟ್ಯಂತರ ರೂಪಾಯಿಗಳು ಮಳೆನೀರಿನಂತೆಯೇ ಹರಿದುಹೋಗುತ್ತದೆ.

ರಕ್ಷಣಾ ಕಾರ್ಯಾಚರಣೆ, ಸುರಕ್ಷಿತ ತಾಣಗಳತ್ತ ಸಂತ್ರಸ್ತರ ರವಾನೆ, ತಾತ್ಕಾಲಿಕ ಊಟ-ವಸತಿ ವ್ಯವಸ್ಥೆಯತ್ತ ಗಮನ ಹರಿಸುವ ಜಿಲ್ಲಾಡಳಿತ, ಆ ನಂತರ ಕೊಚ್ಚಿಹೋದ ರಸ್ತೆಗಳು, ಮುರಿದುಬಿದ್ದ ಸೇತುವೆಗಳ ಮರು ನಿರ್ಮಾಣದ ‘ಕಾಮಗಾರಿ’ಗಳತ್ತ ನೋಡುತ್ತದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಕೈ ತುಂಬಾ ಕೆಲಸ, ಅಧಿಕಾರಿಗಳ ಸರಬರ ಓಡಾಟ, ಗುತ್ತಿಗೆದಾರರ ಗೆಬರಾಟ- ಎಲ್ಲವೂ ತಿಂಗಳೊಪ್ಪತ್ತಿನಲ್ಲಿ ಮುಗಿದುಹೋಗಿರುತ್ತದೆ.

ಇನ್ನು ಮಳೆ ನಗರವಾಸಿಗಳ ಪಾಲಿಗೆ ಅನಿಷ್ಟದ ವಿಷಯ. ಮಳೆ ಎಂದಾಕ್ಷಣ ಮೊದಲಿಗೆ ಸುದ್ದಿಯಾಗುವುದು ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟ. ಅದರಲ್ಲೂ ಈಗ ನಗರದ ಬಹುಪಾಲು ರಸ್ತೆಗಳು ಸ್ಮಾರ್ಟ್‌ ಸಿಟಿಯ ಅಭಿವೃದ್ಧಿಯ ನೆಪದಲ್ಲಿ ವೈಟ್ ಟ್ಯಾಪಿಂಗ್ ಕಾಣುತ್ತಿವೆ. ಬಹುತೇಕ ರಸ್ತೆಗಳಲ್ಲಿ ಆಳುದ್ದ ಗುಂಡಿ ತೋಡಿ ಬಿಡಲಾಗಿದೆ. ಮಳೆ ನೀರು ತುಂಬಿ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದೆ ಜನ ನಿತ್ಯ ನರಕದೊಂದಿಗೇ ಬದುಕುತ್ತಿದ್ದಾರೆ. ಬಡವರು, ಮಧ್ಯಮವರ್ಗದವರು, ಕೊಳೆಗೇರಿ ನಿವಾಸಿಗಳು- ಮಳೆ ಬಂದಾಗ ಜೀವವನ್ನು ಕೈಯಲ್ಲಿಡಿದು ಬದುಕುವುದು ಅನಿವಾರ್ಯವಾಗಿದೆ.

ಇದನ್ನು ಕಂಡ ಕೂಗುಮಾರಿಗಳಂತಹ ದೃಶ್ಯ ಮಾಧ್ಯಮಗಳು ಎದ್ದು ನಿಲ್ಲುತ್ತವೆ. ನಗರದ ಭಯಾನಕತೆಯನ್ನು ಬಿಡಿಸಿಡುತ್ತವೆ. ಜನ ಆಕ್ರೋಶಗೊಂಡು, ಅಧಿಕಾರಿಗಳನ್ನು ಮತ್ತು ಆಳುವ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ತೋರಿಸುತ್ತವೆ. ಮೀಡಿಯಾಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ, ಬಿಬಿಎಂಪಿಯ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಅಭಿವೃದ್ಧಿ ಸಚಿವರು ನಗರ ವೀಕ್ಷಣೆಗೆ ಇಳಿಯುತ್ತಾರೆ. ಮತ್ತದೇ ತುರ್ತು ಕಾಮಗಾರಿಗಳ ಆಶ್ವಾಸನೆಗಳು, ಪರಿಹಾರದ ಘೋಷಣೆಗಳು, ಜನರ ಮುಂದೆ ಅಧಿಕಾರಿಗಳಿಗೆ ತರಾಟೆ, ಕಷ್ಟಕ್ಕೊಳಗಾದವರ ಬಗ್ಗೆ ಕಣ್ಣೀರು- ಎಲ್ಲವೂ ಕ್ಯಾಮರಾಗಳ ಮುಂದೆ. ಸಚಿವರ ಜನಪರ ಕಾಳಜಿ ಸುದ್ದಿಯಾಗುತ್ತದೆ. ‘ತುರ್ತು’ ಕಾಮಗಾರಿಗಳ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳು ಬಿಡುಗಡೆಯಾಗುತ್ತದೆ. ಆದರೆ ಬೆಂಗಳೂರು ನಗರದ ಸಿಟಿ ಮಾರ್ಕೆಟ್ಟು, ಚಿಕ್ಕಪೇಟೆ ಗಲ್ಲಿ, ಆನಂದರಾವ್ ಸರ್ಕಲ್ಲಿನ ಅಂಡರ್ ಪಾಸ್, ಅಪಾರ್ಟಮೆಂಟುಗಳಿಗೆ ನೀರು, ರಾಜಕಾಲುವೆಗಳ ಒತ್ತುವರಿ- ಎಲ್ಲವೂ ಯಥಾರೀತಿ.

ಇದನ್ನು ಓದಿದ್ದೀರಾ?: ಒಳಮೀಸಲಾತಿಯ ಆಂತರ್ಯದಲ್ಲಿ ಬುದ್ಧಪ್ರಜ್ಞೆ

ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ. ಶಿವಕುಮಾರ್, ಅಪಾರ ಅನುಭವ ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿ ಎನ್ನಲಾಗುತ್ತದೆ. ಅದಕ್ಕೆ ಪೂರಕವಾಗಿ ಅವರು ಬೆಂಗಳೂರಿಗೆ ಸ್ಕೈ-ಡೆಕ್, ಸುರಂಗ ರಸ್ತೆ, ಫ್ಲೈ ಓವರ್, ಮೆಟ್ರೋ, ಎರಡನೇ ವಿಮಾನ ನಿಲ್ದಾಣ, ಸಿಲಿಕಾನ್ ಸಿಟಿಯನ್ನು ವಿಶ್ವಮಟ್ಟಕ್ಕೆ ಏರಿಸಿ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎನ್ನುತ್ತಾರೆ. ಆದರೆ, ಮೂಲಭೂತ ಸಮಸ್ಯೆಗಳಾದ ರಸ್ತೆಗಳು, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬಿಬಿಎಂಪಿ ಶಾಲೆಗಳ ಬಗ್ಗೆ ಗಮನವೇ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು, ಜನರ ಜೇಬು ಬಿಟ್ಟು ಬೇರೆ ನೋಡುತ್ತಿಲ್ಲ. ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎ ಸೇರಿದಂತೆ ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳು, ಇಲಾಖೆಗಳ ನಡುವೆ ಸಮನ್ವಯತೆಯೇ ಇಲ್ಲ.

ಮಳೆ ಎನ್ನುವುದು ಸಮಸ್ಯೆ ಎನ್ನುವಂತಾಗಿಸುವಲ್ಲಿ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಪಾತ್ರವಿದೆ. ಜೊತೆಗೆ ಜನರ ಅಸೀಮ ನಿರ್ಲಕ್ಷ್ಯವೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚನ್ನೇ ಕಳೆದುಕೊಂಡಿದ್ದಾರೆ. ಜನರ ಈ ಹೊಂದಿಕೊಂಡು ಹೋಗುವ ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ತಾಲೂಕಿಗೊಬ್ಬರು ಶಾಸಕರಿದ್ದಾರೆ, ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರಿದ್ದಾರೆ, ಆಡಳಿತಯಂತ್ರವಿದೆ. ಆದರೂ ಆಳುವ ಸರಕಾರಕ್ಕೆ ಮಳೆಯನ್ನು ನಿರ್ವಹಿಸುವ ಬುದ್ಧಿವಂತಿಕೆಯೂ ಬರಲಿಲ್ಲ. ಪ್ರಕೃತಿಯ ಮೇಲೆ ನಡೆಸುವ ಅತ್ಯಾಚಾರಕ್ಕೆ ಅಡೆತಡೆಯೂ ಇಲ್ಲ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ

ನಿನ್ನೆ ದೆಹಲಿಯಲ್ಲಿ ನಡೆದ ರಾಹುಲ್‌ ಪತ್ರಿಕಾಗೋಷ್ಠಿಯ ನಂತರ ಮಹಾರಾಷ್ಟ್ರ ಯಾಕೆಂದರೆ ಅಲ್ಲಿ...

Download Eedina App Android / iOS

X