ಆರೋಗ್ಯ ವಿಮಾ ರಕ್ಷಣೆಯನ್ನು ವಿಸ್ತರಿಸುವಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಆರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿ ಭಾರತವಿದೆ. ಮೊದಲ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ತಿಳಿಸಿದೆ. ಆದರೆ ಶೇಕಡ 70ರಷ್ಟು ಭಾರತೀಯರಲ್ಲಿ ಆರೋಗ್ಯ ವಿಮೆಯಿಲ್ಲ ಎಂದೂ ಹೇಳಿದೆ.
ದಿ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ದೇಶದಲ್ಲಿ 15–49 ವರ್ಷ ವಯಸ್ಸಿನ 29.8% ಮಹಿಳೆಯರು ಮತ್ತು 33.3% ಪುರುಷರು ವಿವಿಧ ರೀತಿಯ ಆರೋಗ್ಯ ವಿಮೆಯನ್ನು ಹೊಂದಿದ್ದಾರೆ. ಆದರೆ ಒಂದು ದೊಡ್ಡ ಭಾಗವು ವಿಮೆಯಿಲ್ಲದೆ ಉಳಿದಿದೆ ಎಂದು ಅಧ್ಯಯನ ವರದಿ ಒತ್ತಿಹೇಳುತ್ತದೆ.
ಇದನ್ನು ಓದಿದ್ದೀರಾ? ಆರೋಗ್ಯ ವಿಮೆ, ಜೀವ ವಿಮೆ ಮೇಲಿನ ಜಿಎಸ್‌ಟಿ ತೆರವಿಗೆ ಒತ್ತಾಯಿಸಿ ‘ಇಂಡಿಯಾ’ ಪ್ರತಿಭಟನೆ
‘ಆಗ್ನೇಯ ಏಷ್ಯಾ ಪ್ರದೇಶದ (2015–2022) ಆರು ದೇಶಗಳಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಆರೋಗ್ಯ ವಿಮಾ ರಕ್ಷಣೆ’ ಎಂಬ ಅಧ್ಯಯನವು ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-NFHS (2019–21) ಡೇಟಾವನ್ನು ವಿಶ್ಲೇಷಿಸಿದೆ. ಬಾಂಗ್ಲಾದೇಶ, ಇಂಡೋನೇಷ್ಯಾ, ಮ್ಯಾನ್ಮಾರ್, ಮಾಲ್ಡೀವ್ಸ್ ಮತ್ತು ನೇಪಾಳ – ಆರು ಆಗ್ನೇಯ ಏಷ್ಯಾದ ದೇಶಗಳ ಆರೋಗ್ಯ ಡೇಟಾವನ್ನು ವಿಶ್ಲೇಷಿಸಲಾಗಿದೆ.
ವರದಿ ಪ್ರಕಾರ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (RSBY) ಮತ್ತು ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ನಂತಹ ಉಪಕ್ರಮಗಳು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಆರ್ಥಿಕ ರಕ್ಷಣೆಯನ್ನು ಸುಧಾರಿಸುವಲ್ಲಿ ಪಾತ್ರ ವಹಿಸಿದೆ. ಆದರೆ ದೇಶದಲ್ಲಿ ಆರೋಗ್ಯ ರಕ್ಷಣೆಗೆ ಆರ್ಥಿಕ ದುರ್ಬಲತೆ ಮುಂದುವರೆದಿದೆ. ಇನ್ನು ಮಧ್ಯಮ ವರ್ಗಕ್ಕೂ ಈ ಆರೋಗ್ಯ ವಿಮೆ ಸೌಲಭ್ಯವಿಲ್ಲ. ಇನ್ನು ಸರ್ಕಾರಿ ಯೋಜನೆಗೆ ಒಳಪಡದವರು ಖಾಸಗಿ ವಿಮೆಯನ್ನು ಪಡೆಯಲು ಸಾಧ್ಯವಾಗದ ಆರ್ಥಿಕ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದೆ.
ಆರೋಗ್ಯ ವಿಮೆ ವಿಚಾರದಲ್ಲೂ ಲಿಂಗ ಅಸಮಾನತೆ ಮುಂದುವರೆದಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳು ಆಗದಿರುವುದೇ ಮಹಿಳೆಯರು ಹೆಚ್ಚು ವಿಮೆ ಪಡೆಯದಿರಲು ಕಾರಣವಾಗಿರಬಹುದು ಎಂದು ಅಧ್ಯಯನ ಹೇಳುತ್ತದೆ.
ಹಾಗೆಯೇ ಆರೋಗ್ಯ ವಿಮೆಯನ್ನು ಕೈಗೆಟುಕುವಂತೆ ಮಾಡಲು ಖಾಸಗಿ ಆರೋಗ್ಯ ವಿಮಾ ಪ್ರೀಮಿಯಂಗಳ ಮೇಲಿನ ಶೇಕಡ 18ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡುವಂತಹ ತೆರಿಗೆ ನೀತಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.
