ನುಡಿಯಂಗಳ | ಅಂತರಂಗ ಬಿಚ್ಚಿಡುವ ‘ಆಂಗಿಕ ಭಾಷೆ’

Date:

Advertisements

ಶಾಬ್ದಿಕ ಭಾಷೆ ಬೇಕಾದಷ್ಟು ವಿಕಸನ ಹೊಂದಿದ ನಂತರವೂ ಆಂಗಿಕ ಭಾಷೆ ಸಹಸ್ರಮಾನಗಳಿಂದ ಅದಕ್ಕೆ ಪೂರಕವಾಗಿ ನಿಂತಿದೆ. ಹೀಗಾಗಿ, ನಮಗೆ ಮಾತು ಪರಿಣಾಮಕಾರಿಯಾಗಿ ಬರುತ್ತದೋ ಇಲ್ಲವೋ, ಆಂಗಿಕ ಭಾಷೆ ಮಾತ್ರ ಶ್ರೀಮಂತವಾಗಿ ಬರುತ್ತದೆ. ಏಕೆಂದರೆ, ಅದು ನಾವು ಗಳಿಸಿಕೊಂಡಿದ್ದಲ್ಲ, ಬಳುವಳಿಯಾಗಿ ಬಂದಿದ್ದು.

ನಾನು 1980-89ರಲ್ಲಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿದ್ದೆ. ಇಷ್ಟೇ ನಿಮಿಷದಲ್ಲಿ ಮಾತಾಡಬೇಕು, ತಪ್ಪಾಗಿ ಮಾತಾಡಬಾರದು ಎಂಬ ಬದ್ಧತೆಯಿಂದ ಅಲ್ಲಿ ಎಲ್ಲವನ್ನೂ ಬರಹದಲ್ಲಿ ಬರೆದುಕೊಂಡೇ ಓದುವುದು ವಾಡಿಕೆ. ಆದರೆ, ಒಂದು ಕೈಯಲ್ಲಿ ಹಾಳೆಯನ್ನು ಹಿಡಿದುಕೊಂಡು ಮೈಕಿನೆದುರು ಓದುವಾಗ ನನ್ನ ಇನ್ನೊಂದು ಕೈ ನನ್ನ ಮಾತಿಗೆ ತಕ್ಕ ಹಾಗೆ ಆಡುತ್ತಿತ್ತು, ಧ್ವನಿಯ ಏರಿಳಿತದೊಂದಿಗೆ ಮುಖಭಾವವೂ ಬದಲಾಗುತ್ತಿತ್ತು. ಕಣ್ಣುಗಳು ಅರಳುತ್ತಿದ್ದರು. ತಲೆ ಆಡುತ್ತಿತ್ತು. ಸ್ಟುಡಿಯೋದಲ್ಲಿ ನೋಡುವವರು ಯಾರೂ ಇಲ್ಲದೇ ಇರುವಾಗಲೂ…

ನನ್ನ ಯುವ ಕೇಳುಗರು ನನಗೆ ಪರಿಚಿತರಿದ್ದರು. ಅವರು ನನ್ನನ್ನು ಪ್ರೀತಿಸುತ್ತಾರೆ ಎಂದು ನನಗೆ ಗೊತ್ತಿತ್ತು. ಕೇಳುಗರು ಸ್ಟುಡಿಯೋದಲ್ಲಿ ನನ್ನ ಎದುರಿಗೆ ಇಲ್ಲದಿದ್ದರೂ, ಅವರು ಎದುರಿಗೇ ಇದ್ದಾರೇನೊ ಎನ್ನುವ ಹಾಗೆ ನಾನು ಭಾವಿಸಿಕೊಳ್ಳುತ್ತಿದ್ದೆ. ಹೀಗಾಗಿ ಮುಖಾಮುಖಿ ಸಂವಹನದಲ್ಲಿ ಕಂಡುಬರುವ ಆಂಗಿಕ ಭಾಷೆಯ ಬಹಳಷ್ಟು ಅಂಶಗಳು ರೇಡಿಯೋ ಸಂವಹನದಲ್ಲಿಯೂ ಅನಾಯಾಸ ಕಾಣಿಸಿಕೊಳ್ಳುತ್ತಿದ್ದವು. ಪ್ರಸ್ತುತಿಯು ಪರಿಣಾಮಕಾರಿಯಾಗಿರುತ್ತಿತ್ತು.

“ಸ್ಟುಡಿಯೋದ ಏಕಾಂತದಲ್ಲಿ ಕುಳಿತು ಶ್ರೋತೃಗಳೊಂದಿಗೆ ಮಾತಾಡುವಾಗ ನೀವು ಹುಬ್ಬು ಏರಿಸಿದ ‘ಸದ್ದು’ ನೂರು ಕಿ.ಮೀ. ದೂರದಲ್ಲಿ ರೇಡಿಯೋದಲ್ಲಿ ನಿಮ್ಮನ್ನು ಆಲಿಸುತ್ತಿರುವವರಿಗೆ ಕೇಳಿಸಬೇಕು” ಎನ್ನುತ್ತದೆ ಪ್ರಭಾವಶಾಲಿ ರೇಡಿಯೋ ಸಂವಹನದ ಒಂದು ಸೂತ್ರ.

ಪೊಲೀಸ್ ಸ್ಟೇಷನ್ನಿನಲ್ಲಿ ಒಬ್ಬ ಪೇದೆ ಟೇಬಲ್ಲಿನ ಮೇಲೆ ಕಾಲು ಚಾಚಿಕೊಂಡು ತೂಕಡಿಸುತ್ತಿದ್ದಾನೆ. ಅಷ್ಟರಲ್ಲಿ ಫೋನು ರಿಂಗಣಿಸುತ್ತದೆ. ಪೇದೆ ಉದಾಸೀನದಿಂದ ಫೋನನ್ನು ಎತ್ತಿಕೊಂಡು, ಅಷ್ಟೇ ಅಲಕ್ಷ್ಯದಿಂದ, ‘ಹಲೋ…’ ಎನ್ನುತ್ತಾನೆ. ಆ ಕಡೆಯಿಂದ ಮಾತಾಡುತ್ತಿರುವುದು ಪೊಲೀಸ್ ಕಮಿಷನರ್. ಅದು ಗೊತ್ತಾದ ಕೂಡಲೇ ಆತ ಗಡಿಬಿಡಿಸಿ, ಕುರ್ಚಿಯಿಂದ ಎದ್ದು, ಸಮವಸ್ತ್ರ ಸರಿ ಮಾಡಿಕೊಂಡು, ‘ಸಾ..ಸಾ.ಸಾರ್’ ಎಂದು ತಡವರಿಸಿ, ಸೆಟೆದು ನಿಂತು, ಸಟಕ್ ಎಂದು ಸಲ್ಯೂಟ್ ಹೊಡೆದು, ‘ಗು…ಗು.., ಗುಡ್ ಮಾರ್ನಿಂಗ್ ಸಾರ್.’ ಎನ್ನುತ್ತಾನೆ. ನಮಗೆಲ್ಲಾ ಇದನ್ನು ನೋಡಿ ನಗುಬರುತ್ತದೆ. ‘ಅಲ್ಲಾ, ಕಮಿಷನರ್ ಎದುರಿಗೆ ಇಲ್ಲದಿರುವಾಗಲೂ ಈ ಪೆದ್ದ ಎದ್ದು ನಿಂತು ಸೆಲ್ಯೂಟ್ ಹೊಡೀತಾನಲ್ಲ..ಹ್ಹ…ಹ್ಹ…ಹ್ಹ..’ ಎಂದು.

WhatsApp Image 2025 08 19 at 8.21.39 AM


ಇರಲಿ, ಈಗ ನೀವೇ ಒಂದು ಕೆಲಸ ಮಾಡಿ, ಕೈ, ತಲೆ ಆಡಿಸದೇ, ಮುಖಭಾವ ತೋರಿಸದೇ, ಧ್ವನಿಯ ಏರಿಳಿತವನ್ನು ಮಾಡದೇ ಒಂದೇ ಒಂದು ನಿಮಿಷ ಫೋನಿನಲ್ಲಿ ಮಾತಾಡಿ ನೋಡಿ, ಆದೀತೇ? ಸಾಧ್ಯವೇ ಇಲ್ಲ. ಸಾರ್ವಜನಿಕ ಟೆಲಿಫೋನುಗಳ ಬೂತುಗಳಲ್ಲಿ ಬಾಗಿಲು ಹಾಕಿಕೊಂಡು ಫೋನಿನ ಮೂಲಕ ಮಾತಾಡುತ್ತಿರುವವರ ಹಾವ ಭಾವ ಭಂಗಿ, ಮುಖಭಾವ ಇತ್ಯಾದಿಗಳನ್ನು ಗಾಜಿನ ಮೂಲಕ ನೋಡಿ, ಅವರ ಮಾತುಗಳು ಕೇಳಿಸದೇ ಇದ್ದರೂ, ಅವರು ಯಾರೊಂದಿಗೆ- ತಮ್ಮ ಪ್ರೇಮಿಯೊಂದಿಗೆ, ಶಿಸ್ತಿನ ತಂದೆಯೊಂದಿಗೆ, ಕಠೋರ ಬಾಸ್‍ರೊಂದಿಗೆ, ಸಾಲ ಕೊಟ್ಟು ತೀರಿಸಿರೆಂದು ಒತ್ತಾಯಿಸುತ್ತಿರುವ ಧಣಿಯೊಂದಿಗೆ, ಹೈಸ್ಕೂಲಿನ ಚಡ್ಡಿ ದೋಸ್ತರೊಂದಿಗೆ- ಮಾತಾಡುತ್ತಿದ್ದಾರೆ ಎಂಬುದನ್ನು ಹೆಚ್ಚುಕಡಿಮೆ ಊಹಿಸಬಹುದು.

Advertisements
WhatsApp Image 2025 08 19 at 8.21.39 AM1


ನಾವು ಒಬ್ಬರೊಂದಿಗೆ ಮುಖಾಮುಖಿ ಸಂವಹನ ನಡೆಸಿರುವಾಗ ನಮ್ಮ ಮಾತಿನ ಕಡೆಗೆ ನಮ್ಮ ಹೆಚ್ಚಿನ ಗಮನ ಇರುತ್ತದೆ. ಮಾತಿನಲ್ಲಿಯೇ ನಾವು ಅವರನ್ನು ಸಮ್ಮೋಹನಗೊಳಿಸುತ್ತಿದ್ದೇವೆ, ಮನವೊಲಿಸುತ್ತಿದ್ದೇನೆ, ನಮ್ಮನ್ನು ಮೆಚ್ಚುವಂತೆ ಮಾಡುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ. ಆದರೆ, ನಮ್ಮ ಮಾತನ್ನು ಆಲಿಸುತ್ತಿರುವವರು ನಮ್ಮ ಮಾತಿನ ಜೊತೆ ನಮ್ಮ ಹಾವ- ಭಾವ-ಭಂಗಿಗಳನ್ನು ಗಮನಿಸುತ್ತಿದ್ದಾರೆ. ಅದೇ ಹೆಚ್ಚು ಅಲ್ಲಿ ಬಹಳ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ನಾವು ಗಮನಿಸದೇ ಹೋಗಬಹುದು. ಅದೇ ಆಂಗಿಕ ಭಾಷೆ, ಅದು ಭಾಷೆಗಿಂತ ಹೆಚ್ಚಾಗಿ ಸಂವಹನದ ಕಾರ್ಯವನ್ನು ನಿರ್ವಹಿಸುತ್ತದೆ.

ಭರತನಾಟ್ಯ

ಶಬ್ದಂ ಭಾವಭಂಡಾರ

ಭರತನಾಟ್ಯದ ಒಂದು ಸಾಂಪ್ರದಾಯಿಕ ಪ್ರದರ್ಶನದಲ್ಲಿ ಏಳು ಘಟಕಗಳು ಇರುತ್ತವೆ: ಪುಷ್ಪಾಂಜಲಿ, ಅಲರಿಪು, ಜತಿಸ್ವರಮ್, ಶಬ್ದಂ, ವರ್ಣಂ, ಪದಮ್, ಮತ್ತು ತಿಲ್ಲಾನ. ನಾಲ್ಕನೆಯ, ‘ಶಬ್ದಂ’ ಭಾಗದಲ್ಲಿ ನರ್ತಕರು ಶುದ್ಧ ನೃತ್ಯದ ಮೋಡಿಯಿಂದ ಹೊರಬಂದು, ಭಾವಾಭಿವ್ಯಕ್ತಿಯ ಕಥೆಯ ನಿರೂಪಣೆಗೆ ತೊಡಗುತ್ತಾರೆ. ಶರೀರದ ವಿವಿಧ ಭಂಗಿಗಳು, ಕೈಸನ್ನೆಯ ಮುದ್ರೆಗಳು, ಕಣ್ಣು, ಮುಖಭಾವಗಳನ್ನು ಬಳಸಿ ಒಂದು ಸಾಹಿತ್ಯ ಕೃತಿಯನ್ನು ತಮ್ಮ ನಾಟ್ಯ-ಕುಂಚದಲ್ಲಿ ಚಿತ್ರಿಸುತ್ತಾರೆ. ಆಂಗಿಕ ಭಾಷೆಗೆ, ಮತ್ತು ನರ್ತಕರು ಪ್ರೇಕ್ಷಕರೊಂದಿಗೆ ಅದನ್ನು ಭಾವಪೂರ್ಣವಾದ ಸಂವಹನಕ್ಕೆ ಇದೊಂದು ಸುಂದರವಾದ ಮತ್ತು ಉತ್ಕೃಷ್ಟವಾದ ನಿದರ್ಶನವಾಗಿದೆ.

ಆಂಗಿಕ ಭಾಷೆ: ಯಾರಾದರೂ ಒಬ್ಬರು ತಮ್ಮ ಎದುರಿಗೆ ಕುಳಿತಿರುವ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ ಮಾತಿನೊಂದಿಗೆ ಅವರು ಸಕ್ರಿಯವಾಗಿ ಬೆರಳು, ಕೈ, ಕಣ್ಣು, ತಲೆ, ಮುಖಭಾವ, ದೇಹಭಂಗಿ ಇತ್ಯಾದಿಗಳನ್ನು ಬಳಸುವುದನ್ನು ನೋಡುತ್ತೇವೆ. ನಾವೂ ಇದಕ್ಕೆ ಹೊರತಲ್ಲ. ನಾವು ಮಾತಿನಲ್ಲಿ ಬಳಸುವ ಭಾಷೆಯನ್ನು ಶಾಬ್ದಿಕ ಅಥವಾ ಮೌಖಿಕ ಭಾಷೆ ಎನ್ನುವುದಾದರೆ, ಇದರೊಂದಿಗೆ ಬಳಕೆಯಾಗುತ್ತಿರುವುದನ್ನು ‘ಆಂಗಿಕ ಭಾಷೆ’ ಎನ್ನುತ್ತೇವೆ. ಏಕೆಂದರೆ ಅವೆಲ್ಲವೂ ಸಂವಹನದಲ್ಲಿ ಭಾಗವಹಿಸುತ್ತಿವೆ, ಕೆಲವೊಮ್ಮೆ ಮಾತು ಸೋತರೂ, ಸಂವಹನದಲ್ಲಿ ಈ ಆಂಗಿಕ ಅಂಶಗಳು ಅರ್ಥ, ಭಾವವನ್ನು ಸಂವಹನಿಸುತ್ತವೆ. ಆದ್ದರಿಂದ ಅವುಗಳನ್ನೂ ಭಾಷೆ, ‘ಆಂಗಿಕ ಭಾಷೆ’ ಎಂದೇ ಗುರುತಿಸಬೇಕಾಗುತ್ತದೆ.

ಸಂವಹನದ ಮೂರು ಘಟಕಗಳು

ಸಂವಹನದಲ್ಲಿ ಮೂರು ಅಂಶಗಳು ಜೊತೆಜೊತೆಗೇ ಕೆಲಸ ಮಾಡುತ್ತಿರುತ್ತವೆ: ಮಾತಿನಲ್ಲಿ ಬಳಸುವ ಶಬ್ದಗಳು, ಮಾತಿನಲ್ಲಿನ ಧ್ವನಿಭಾವ, ಎಂದರೆ ಧ್ವನಿಯ ಏರಿಳಿತ ಮತ್ತು ಆಂಗಿಕ ಭಾಷೆ.

ಸಾಮಾನ್ಯವಾಗಿ, ಸಂವಹನವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವಲ್ಲಿ ನಾವು ಬಳಸುವ ಪದಗಳ ಕುರಿತು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತೇವೆ. ನಿಜವೇ. ಪದಗಳ ಶಕ್ತಿಯೇ ಹಾಗೆ. ಸರಿಯಾಗಿ ಆಯ್ದುಕೊಂಡ ಪದಗಳನ್ನು ಸಮರ್ಪಕವಾದ ಸರಣಿಯಲ್ಲಿ ಜೋಡಿಸಿದರೆ ಅರ್ಥವು ಆಸ್ಫೋಟಿಸುತ್ತದೆ. ಅದು ಕೇಳುಗರ ಮೇಲೆ ಉದ್ದೇಶಿತ ಪರಿಣಾಮ ಬೀರುತ್ತದೆ. ಅದನ್ನು ನಾವು, ಅವರ ಸಂತೋಷ, ಸಮಾಧಾನ, ಅಚ್ಚರಿ, ಸಿಟ್ಟು, ಸೆಡವು ಇತ್ಯಾದಿ ಪ್ರತಿಕ್ರಿಯೆಗಳಲ್ಲಿ ಕಾಣುತ್ತೇವೆ. ಇದರಿಂದ ಉತ್ತೇಜಿತರಾಗಿ ನಾವು ನಮ್ಮ ಮೌಖಿಕ ಭಾಷೆಯನ್ನು ಇನ್ನಷ್ಟು ಹರಿತಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಆದರೆ, ಇದೇ ಹೊತ್ತಿಗೆ, ನಾವು ಮಾತಿನಲ್ಲಿ ಇನ್ನೊಬ್ಬರ ಮೇಲೆ ಅಪೇಕ್ಷಿತ ಪರಿಣಾಮವನ್ನು ಬೀರಿದ್ದೇವೆ ಎಂದುಕೊಳ್ಳುತ್ತಿರುವ ಹೊತ್ತಿನಲ್ಲಿ ಇನ್ನೊಂದು ಅಂಶವನ್ನು ಗೌಣವಾಗಿ ಕಂಡಿರುತ್ತೇವೆ. ನಾವು ಶಬ್ದಗಳನ್ನು ಬಳಸಿ ಮಾತಾಡುತ್ತಿರುವಾಗ ಅವು ಒಣಗಿದ ಬೆಂಡಿನ ಹಾಗೆ ಶುಷ್ಕವಾಗಿರುವುದಿಲ್ಲ. ಅವು ಆದ್ರವಾಗಿರುತ್ತವೆ, ಭಾವಾವೇಶದಿಂದ ತುಂಬಿರುತ್ತವೆ, ನಮ್ಮ ಧ್ವನಿಯಲ್ಲಿನ ಏರಿಳಿತ ಈ ಮ್ಯಾಜಿಕನ್ನು ಮಾಡಿರುತ್ತದೆ. ನಮ್ಮ ಅಭಿವ್ಯಕ್ತಿಯ ಉದ್ದೇಶಕ್ಕೆ ತಕ್ಕ ಹಾಗೆ ನಾವು ಹೆಣೆಯುವ ಶಬ್ದಗಳೇ ಇದನ್ನು ಪ್ರೇರೇಪಿಸುತ್ತವೆ. ಜೊತೆಗೆ, ಮಾತಿನ ನಡುವಿನ ನಿಲುಗಡೆ(pause)ಗಳು, ಅರೆಕ್ಷಣದ ಮೌನ, ಮಾತಿಗಿಂತ ಹೆಚ್ಚಿನ ಅರ್ಥವನ್ನು ಸೃಷ್ಟಿಸುತ್ತದೆ.

ಜೊತೆಗೆ, ನಾವು ಮಾತಾಡುತ್ತಿರುವಾಗ, ಮಾತಿನ ಅರ್ಥ, ಭಾವ, ಉದ್ದೇಶಕ್ಕೆ ತಕ್ಕ ಹಾಗೆ ನಾವು ಕಣ್ಣನ್ನು ಅಗಲಿಸುತ್ತೇವೆ, ಕಿರಿದುಗೊಳಿಸುತ್ತೇವೆ, ಹುಬ್ಬೇರಿಸುತ್ತೇವೆ, ಇಲ್ಲವೇ ಗಂಟಿಕ್ಕುತ್ತೇವೆ; ತುಟಿಗಳು ಅಗಲಿಸುತ್ತವೆ, ಅದುರುತ್ತವೆ, ನಸು ನಗುತ್ತವೆ, ಅಗಲವಾಗಿ ಕಿಸಿಯುತ್ತವೆ. ತಲೆ ಬುಡವಿಲ್ಲವೇನೋ ಎನ್ನುವ ಹಾಗೆ ಹಿಂದೆಮುಂದೆ, ಆಚೆಈಚೆ ಆಡುತ್ತಿರುತ್ತವೆ. ಹಾಗೆಂದು ಕೈಗಳೇನೂ ಸುಮ್ಮನಿರುವುದಿಲ್ಲ. ಅವು ವಿವಿಧ ಮುದ್ರೆಗಳನ್ನು ತಾಳತೊಡಗುತ್ತವೆ; ಶರೀರವು ಕೂಡ ವಿವಿಧ ಭಂಗಿಗಳನ್ನು ತೋರ್ಪಡಿಸುತ್ತದೆ. ಇವೆಲ್ಲವೂ ಸಂದರ್ಭಕ್ಕೆ ತಕ್ಕ ಹಾಗೆ ಮಾತಿನ ಭಾಷೆಯೊಂದಿಗೆ ಸಾಂಗತ್ಯವನ್ನು ನೀಡಿದಾಗ, ರಸ ಶೃಂಗಾರ, ಹಾಸ್ಯ, ರೌದ್ರ ಯಾವುದೇ ಇರಲಿ, ಸಂವಹನವು ಸತ್ವಯುತವಾಗಿರುತ್ತದೆ. ಆಲಿಸುವವರ ಮೇಲೆ ಉದ್ದೇಶಿತ ಪರಿಣಾಮವನ್ನು ಬೀರಿರುತ್ತವೆ.

ಪರಿಣಾಮಕಾರಿ ಸಂವಹನಕ್ಕಾಗಿ, ಮೇಲೆ ಹೇಳಿದ ಹಾಗೆ ಮಾತಿನೊಂದಿಗೆ ನಾವು ಬಳಸುವ ಎಲ್ಲಾ ಸಾಧನ, ಉಪಸಾಧನಗಳನ್ನು ಒಟ್ಟಾರೆಯಾಗಿ ನಾವು ‘ಆಂಗಿಕ ಭಾಷೆ’ ಎನ್ನುತ್ತೇವೆ. ನಾವು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಭಾಷೆ ಸಾಮಾಜಿಕ, ಆಂಗಿಕ ಭಾಷೆ ನೈಸರ್ಗಿಕ. ಭಾಷೆಯನ್ನು ಕಲಿಯುತ್ತೇವೆ. ಆಂಗಿಕ ಭಾಷೆ ವಿಕಾಸದ ಹಾದಿಯಲ್ಲಿ ನಮಗೆ ಬಳುವಳಿಯಾಗಿ ಬಂದಿರುತ್ತದೆ.

ಆಂಗಿಕ ಅಭಿವ್ಯಕ್ತಿಯ ವಿಕಾಸ

WhatsApp Image 2025 08 19 at 8.21.40 AM1
(ಚಿತ್ರ ಕೃಪೆ: ಸೈನ್ಸ್ ನ್ಯೂಸ್ ಟುಡೆ)

ಹೋಮೋ ಸೇಪಿಯನ್ನರು ಎನ್ನುವ ಮಾನವ ಪ್ರಜಾತಿಯು ವಿಕಾಸ ಹೊಂದಿದ್ದು 2,30,000 ವರ್ಷಗಳ ಹಿಂದೆ ಎನ್ನಲಾಗುತ್ತದೆ. ಹೊಸ ಜಿನೋಮಿಕ್ ಅಧ್ಯಯನದ ಪ್ರಕಾರ ಮನುಷ್ಯನಲ್ಲಿ ಭಾಷೆಯ ಅರಿವು ಮೂಡಿ ಅದು ಸಾಮಾಜಿಕ ಬಳಕೆಗೆ ಬಂದಿದ್ದು ಸುಮಾರು 1,00,000 ವರ್ಷಗಳ ಹಿಂದೆ. ಹಾಗಾದರೆ, ಮೊದಲ 1,30,000 ವರ್ಷಗಳ ಕಾಲ ಮಾನವರ ನಡುವೆ ಸಂವಹನ ಇರಲಿಲ್ಲವೇ. ಇತ್ತು. ಅದು ಇತರ ಮುಂದುವರಿದ ಸಸ್ತನಿಗಳಲ್ಲಿದ್ದ ಹಾಗೆ (ಆದರೂ ಸ್ವಲ್ಪ ಸುಧಾರಿತ ರೂಪದಲ್ಲಿ) ಕೇವಲ ಆಂಗಿಕ ಭಾಷೆಯಲ್ಲಿತ್ತು. ಅದರಿಂದ ವಿಕಸನ ಹೊಂದುತ್ತಾ, ಹೆಚ್ಚು ಸೂಕ್ಷ್ಮಗೊಳ್ಳುತ್ತಾ ಆಂಗಿಕ ಭಾಷೆಯು ಮುಂದುವರೆದಿದೆ.

ನಮ್ಮ ಮಿದುಳು ವಿಕಸಿತವಾದಂತೆ ಮತ್ತು ನಮ್ಮ ಮುಖದ ರಚನೆಯು ಕಾಲಾಂತರದಲ್ಲಿ ಹೆಚ್ಚು ಸೂಕ್ಷ್ಮತೆಯನ್ನು ಗಳಿಸಿಕೊಂಡಂತೆ, ಮಾತಿನಲ್ಲಿ ಸೃಷ್ಟಿಯಲ್ಲಿ ಬಳಕೆಯಾಗುವ ಧ್ವನಿಪಟಲ, ನಾಲಗೆ, ತುಟಿ, ಮೂಗು ಇತ್ಯಾದಿ ಹೆಚ್ಚು ಹೆಚ್ಚು ಪಳಗಿದ ಹಾಗೆ, ಮನುಷ್ಯರು ಹೆಚ್ಚು ಸಮರ್ಥವಾದ ಮೌಖಿಕ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಹಾಗೆಯೇ, ಸಂವಹನದಲ್ಲಿ ಇತರ ಸಸ್ತನಿಗಳಿಗಿಂತ ಭಿನ್ನವಾಗಿ, ಮತ್ತು ಹೆಚ್ಚು ಸೂಕ್ಷ್ಮವಾದ ಆಂಗಿಕ ಭಾಷೆಯನ್ನು ಬಳಸಲು ಸಮರ್ಥರಾಗಿದ್ದಾರೆ. ಆಂಗಿಕ ಭಾಷೆಯು, ಆಯಾ ಸಂಸ್ಕೃತಿಯನ್ನು ಅನುಸರಿಸಿ ಕೆಲವು ವಿಶಿಷ್ಟ ಸನ್ನೆ, ಭಂಗಿಗಳನ್ನು ಹೊರತುಪಡಿಸಿ ಇಡೀ ಜಗತ್ತಿನ ಮಾನವ ಜನಾಂಗಕ್ಕೆ ಹೆಚ್ಚುಕಡಿಮೆ ಸಾರ್ವತ್ರಿಕ. ಮೌಖಿಕ ಭಾಷೆ ಮಾತ್ರ ಅಸಂಖ್ಯಾತ (ಜಗತ್ತಿನಲ್ಲಿ ಸುಮಾರು 1759 ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ).

ಶಾಬ್ದಿಕ ಭಾಷೆ ಬೇಕಾದಷ್ಟು ವಿಕಸನ ಹೊಂದಿದ ನಂತರವೂ ಆಂಗಿಕ ಭಾಷೆ ಸಹಸ್ರಮಾನಗಳಿಂದ ಅದಕ್ಕೆ ಪೂರಕವಾಗಿ ನಿಂತಿದೆ. ಹೀಗಾಗಿ, ನಮಗೆ ಮಾತು ಪರಿಣಾಮಕಾರಿಯಾಗಿ ಬರುತ್ತದೋ ಇಲ್ಲವೋ, ಆಂಗಿಕ ಭಾಷೆ ಮಾತ್ರ ಶ್ರೀಮಂತವಾಗಿ ಬರುತ್ತದೆ. ಏಕೆಂದರೆ, ಅದು ನಾವು ಗಳಿಸಿಕೊಂಡಿದ್ದಲ್ಲ, ಬಳುವಳಿಯಾಗಿ ಬಂದಿದ್ದು.

WhatsApp Image 2025 08 19 at 8.21.40 AM2
ಮೆಹ್ರಾಬಿಯನ್

ಆಲ್ಬರ್ಟ್ ಮೆಹ್ರಾಬಿಯನ್‍ ಅವರು ಒಬ್ಬ ಮನೋವಿಜ್ಞಾನಿ, ಲಾಸ್ ಆ್ಯಂಜಲಿಸ್‍ನ ಯುನಿವರ್ಸಿಟಿಯಲ್ಲಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿ ಪ್ರಾಧ್ಯಾಪಕರು. ಇವರು ಸಂವಹನದಲ್ಲಿ ಆಂಗಿಕ ಭಾಷೆಯ ಕುರಿತು ನಡೆಸಿದ ಆಳವಾದ ಅಧ್ಯಯನದ ಫಲಿತಾಂಶಗಳನ್ನು 1976ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದರು. ಅದನ್ನು ತಮ್ಮ, ‘ಸೈಲೆಂಟ್ ಮೆಸೆಜಸ್’ ಎಂಬ ಕೃತಿಯಲ್ಲಿ ವಿಷದೀಕರಿಸಿದ್ದಾರೆ. ಅದರಲ್ಲಿ ಹೊಮ್ಮುವ ಒಂದು ಸುಪ್ರಸಿದ್ಧ ಸೂತ್ರ ಎಂದರೆ: “ಮೆಹರಬಿಯನ್ನರ 7-38-55ರ ನಿಯಮ”. ಈ ನಿಯಮದ ಪ್ರಕಾರ ಮುಖಾಮುಖಿ ಸಂವಹನದ ಯಶಸ್ಸಿನಲ್ಲಿ ನಾವು ಬಳಸುವ ಪದಗಳ ಪಾತ್ರವು ತೀರಾ ಕಡಿಮೆ, ಕೇವಲ 7% ಎಂದರೆ ನಮಗೆ ಅಚ್ಚರಿಯಾಗಬಹುದು. ಪದಗಳನ್ನು ಬಳಸಿ ಮಾತಾಡುವಾಗ ನಾವು ಬಳಸುವ ಧ್ವನಿಯ ಏರಿಳಿತವು ಸುಮಾರು 38% ಪಾತ್ರವನ್ನು ವಹಿಸುತ್ತದೆ. ಎಂದಾಗ, ಪರಿಣಾಮಕಾರಿ ಸಂವಹನದಲ್ಲಿ ಬಹು ಪ್ರಮುಖ, 55%ರಷ್ಟು ಪಾತ್ರವನ್ನು ವಹಿಸುತ್ತಿರುವುದು ಎಂದರೆ ನಮ್ಮ ಆಂಗಿಕ ಭಾಷೆ, ಬಾಡಿ ಲ್ಯಾಂಗ್ವೇಜ್. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಅವು ಪರಸ್ಪರ ಪೂರಕವಾಗಿ, ಸಂಯೋಜಿತವಾಗಿ ಕೆಲಸ ಮಾಡುತ್ತವೆ ಎಂಬುದು.

ಧ್ವನಿಯ ಏರಿಳಿತ: ನಾವು ಶಬ್ದಗಳನ್ನು ಬಳಸಿ ಮಾತಾಡುವಾಗ, ಯಾವ ಭಾವನೆಯನ್ನು ವ್ಯಕ್ತಪಡಿಸಲು ಅವುಗಳ ಆಯ್ಕೆಯನ್ನು ಮಾಡಿಕೊಂಡು, ವಾಕ್ಯಗಳಲ್ಲಿ ಸಂಯೋಜಿಸಿ ಬಳಸಿದ್ದವೋ ಅದಕ್ಕೆ ತಕ್ಕ ಹಾಗೆ ಧ್ವನಿಯ ಏರಿಳಿತವು, ಅಲ್ಲಲ್ಲಿ ನಿಲುಗಡೆ ಇತ್ಯಾದಿ ಅನಾಯಾಸ, ಅಪ್ರಜ್ಞಾಪೂರ್ವಕವಾಗಿ ಹೊಮ್ಮುತ್ತದೆ(ನಾವು ಅಭಿನಯ ಮಾಡದೇ ನೈಜವಾಗಿ ನಾವು ನಾವಾಗಿ ಮಾತಾಡುವಾಗ).

ಆಂಗಿಕ ಭಾಷೆ: ಆಂಗಿಕ ಭಾಷೆಯೂ ಮಾತಿನ ಭಾವಕ್ಕೆ ತಕ್ಕ ಹಾಗೆ ಅದರ ಪರಿಣಾಮವನ್ನು ಹೆಚ್ಚು ಸಶಕ್ತಗೊಳಿಸುವ ಸಲುವಾಗಿ ಜೊತೆಕೊಡುತ್ತದೆ. ಇದೂ ಕೂಡ ಸಾಮಾನ್ಯವಾಗಿ ನೈಜವಾಗಿ, ಪ್ರಜ್ಞಾಪೂರ್ವಕವಾಗಿ ಅಭಿವ್ಯಕ್ತವಾಗುತ್ತದೆ (ನಾಟಕ, ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಕಲಿಯುವವರು, ಧ್ವನಿಯ ಏರಿಳಿತ ಮತ್ತು ಆಂಗಿಕ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡಿ, ಅನಾಯಾಸವೇನೋ ಎನ್ನುವಷ್ಟು ನೈಜವಾಗಿ ಬಳಸಿ, ಒಳ್ಳೆಯ ನಟರು ಎನ್ನಿಸಿಕೊಳ್ಳುತ್ತಾರೆ).

ಶಾಬ್ದಿಕ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ರಚಿಸಿಕೊಳ್ಳುವುದರಿಂದ ಮಾತಿನಲ್ಲಿ ಬೇಕಿದ್ದರೆ ಸುಳ್ಳು ಹೇಳಬಹುದು. ನೀವು ಸ್ವಲ್ಪವೂ ಇಷ್ಟವಿಲ್ಲದ ಸ್ನೇಹಿತರೊಬ್ಬರು ಎದುರಿಗೆ ಬಂದರೆ ನೀವು ನಸುನಕ್ಕು, “ನಮಸ್ಕಾರ, ಚೆನ್ನಾಗಿದ್ದೀರಾ? ನಿಮ್ಮನ್ನು ನೋಡಿ ಬಹಳ ಸಂತೋಷ ಆಯ್ತು” ಎಂದು ಹೇಳಬಹುದು. ಇದು ಸುಳ್ಳು. ಆದರೆ, ಇದನ್ನು ಹೇಳುವಾಗ ನಿಮ್ಮ ಕೃತಕ ನಗು, ನಿಮ್ಮ ಆಂಗಿಕ ಸನ್ನೆ, ಭಂಗಿಯು ನಿಮ್ಮ ಸುಳ್ಳನ್ನು ಬಹಿರಂಗಪಡಿಸಬಹುದು.

ಆಂಗಿಕ ಭಾಷೆಯನ್ನು ಆಲಿಸುವುದು

ಇಷ್ಟು ಹೊತ್ತು ನಾವು ಮುಖಾಮುಖಿ ಸಂವಹನದಲ್ಲಿ ನಾವು ಮಾತಾಡುವವರಾಗಿದ್ದಾಗ ಆಂಗಿಕ ಭಾಷೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಮಾತಾಡಿದ್ದೇವೆ. ನಮ್ಮ ಆಂಗಿಕ ಭಾಷೆಯನ್ನು ನಮ್ಮ ಮಾತನ್ನು ಆಲಿಸುವವರು ವೀಕ್ಷಿಸುತ್ತಿರುತ್ತಾರೆ. ಆದರೆ, ಇನ್ನೊಬ್ಬರು ಮಾತಾಡುವಾಗ ಅವರು ಬಳಸುವ ‘ಆಂಗಿಕ ಭಾಷೆ’ಯನ್ನು ಆಲಿಸುವ ಸಾಮರ್ಥ್ಯವೂ ನಮಗೆ ಇರಬೇಕಾಗುತ್ತದೆ. ಅವರು ಮಾತಾಡುವ ಭಾಷೆ, ಅದರಲ್ಲಿ ಬಳಕೆಯಾಗುವ ಧ್ವನಿಭಾವ ಇವುಗಳನ್ನು ಗ್ರಹಿಸುತ್ತಿರುವಾಗಲೇ ನಾವು ಅವರ ಆಂಗಿಕ ಅಭಿವ್ಯಕ್ತಿಯನ್ನೂ ಅಷ್ಟೇ ಚೆನ್ನಾಗಿ ಗ್ರಹಿಸಬೇಕಾಗುತ್ತದೆ. ಇದು ನಮಗೆ ಸಾಮಾನ್ಯವಾಗಿ ರೂಢಿಯಾಗಿರುತ್ತದೆ. ಆದರೂ ಇದರ ಕುರಿತು ಸ್ವಲ್ಪ ಗಮನ ಹರಿಸಿ ಕಲಿಯುವುದಾದರೆ ನಾವು ಬೇರೊಬ್ಬರು ನಮ್ಮೊಂದಿಗೆ ಮಾತಾಡುತ್ತಿರುವಾಗ ಅವರು ಸಂಪೂರ್ಣವಾಗಿ ಅರ್ಥವಾಗುತ್ತಾರೆ. ಅಷ್ಟೇ ಅಲ್ಲ, ಅವರು ಮನಸ್ಸಿನಲ್ಲಿ ಒಂದಿದ್ದು ಭಾಷೆಯಲ್ಲಿ ಇನ್ನೊಂದು ಹೇಳಲು ನೋಡುತ್ತಿರುವಾಗ ಅವರ ಈ ‘ಸುಳ್ಳ’ನ್ನು ಕಂಡುಹಿಡಿಯಲೂ ಆಂಗಿಕ ಭಾಷೆಯನ್ನು ಆಲಿಸುವ ಈ ಕೌಶಲವು ಸಹಾಯಕವಾಗುತ್ತದೆ.

WhatsApp Image 2025 08 18 at 11.53.30 AM

ಆಂಗಿಕ ಭಾಷೆಯನ್ನು ಚೆನ್ನಾಗಿ ಗ್ರಹಿಸಿ, ನಾವು ಮಾತಾಡುವಾಗ ಅದನ್ನು ಶಾಬ್ದಿಕ ಭಾಷೆಯಷ್ಟೇ ಪರಿಣಾಮಕಾರಿಯಾಗಿ ಬಳಸುವುದನ್ನು ಕಲಿಯುವುದು ಸಾಮಾಜಿಕ ಸನ್ನಿವೇವೇಶಗಳಲ್ಲಿ, ವ್ಯವಹಾರದ, ಆಡಳಿತದ ಸಭೆಗಳಲ್ಲಿ ಮತ್ತು ವೈಯಕ್ತಿಕ ಸಂಬಂಧಗಳಲ್ಲಿಯೂ ಪ್ರಯೋಜನಕಾರಿಯಾಗಿರುತ್ತದೆ. ಇದು ನಿಮ್ಮನ್ನು ಹೆಚ್ಚು ಸಮಾನುಭೂತಿಯುಳ್ಳವರನ್ನಾಗಿ, ಇತರರ ಭಾವನೆಗಳ ಅರಿವುಳ್ಳವರನ್ನಾಗಿ ಮಾಡುತ್ತದೆ. ಈ ಕೌಶಲವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ನಿಮ್ಮನ್ನು ಹೆಚ್ಚು ಉತ್ತಮ ಸಂವಹನಕಾರರನ್ನಾಗಿ ಸಜ್ಜುಗೊಳಿಸುತ್ತದೆ. ನಿಮ್ಮ ಜೀವನದ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರುತ್ತದೆ.

ಆಂಗಿಕ ಭಾಷೆಯ ಕುರಿತು ಈ ಲೇಖನದಲ್ಲಿ ನಾವು ಒಟ್ಟಾರೆಯಾಗಿ ಒಂದಷ್ಟು ತಿಳಿದಿದ್ದೇವೆ. ಇದು ಸಂವಹನ, ಸಂಧಾನ, ಸಂದರ್ಶನ, ವಿಚಾರ/ವಸ್ತುಗಳ ಮಾರಾಟ ಇತ್ಯಾದಿ ಬದುಕಿನ ಸನ್ನಿವೇಶಗಳಲ್ಲಿ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇದೇ ‘ನುಡಿಯಂಗಳ’ದ ಮುಂಚಿನ ಸಂಚಿಕೆಗಳಲ್ಲಿ ಮತಾಡೋಣವಂತೆ.

ಇದನ್ನೂ ಓದಿ ನುಡಿಯಂಗಳ | ಓದುವ ಕೌಶಲದ ವಿಹಂಗಮ ನೋಟ

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

ದಿಲ್ಲಿ ಮಾತು | ಅಜ್ಞಾನಿಗಳ ನಾಡಿನಲ್ಲಿ ʼಡಾಯನ್‌ʼ ಎಂಬ ಕ್ರೂರ ಪದ್ಧತಿ  

ಮಹಿಳೆಯರನ್ನು ಮಾಟಗಾತಿ, ಡಾಕಿನಿ ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ,...

Download Eedina App Android / iOS

X