ಕೋವಿಡ್ ಕಾರಣದಿಂದ ಉಂಟಾದ ಸಮಸ್ಯೆಗಳಲ್ಲಿ ಇದೂ ಒಂದು ಗಂಭೀರ ಸಮಸ್ಯೆಯಾಗಿದೆ. ಹದಿಹರೆಯದಲ್ಲಿ ಗರ್ಭಧಾರಣೆ ಮತ್ತು ಅದರ ಸಮಸ್ಯೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಅಗತ್ಯ ಹೆಚ್ಚಿದೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ. ಅಚ್ಚರಿಯೆಂದರೆ ತಜ್ಞರು ಮೊಬೈಲ್ ಕಡೆಗೆ ಬೆಟ್ಟು ತೋರಿಸುತ್ತಿದ್ದಾರೆ !
ಸಾಮಾಜಿಕ ಪಿಡುಗುಗಳನ್ನು ಮೆಟ್ಟಿನಿಂತು, ಆಧುನಿಕತೆಗೆ ಮುಖ ಮಾಡಿದ್ದೇವೆಂದು ನಮಗೆ ನಾವೇ ಶಹಭಾಷ್ ಗಿರಿ ಕೊಟ್ಟುಕೊಳ್ಳುವ ಮನಸ್ಥಿತಿಗೆ ನಾವು ತಲುಪಿದ್ದೇವೆ. ಆದರೆ, ಆಘಾತಕಾರಿ ಸಂಗತಿಯೊಂದು ನಮ್ಮ ಮಧ್ಯದಲ್ಲಿ ನಡೆದಿರುವ ಬಗ್ಗೆ ನಮಗ್ಯಾರಿಗೂ ಅರಿವೇ ಇಲ್ಲ. ಹೌದು ಕಳೆದ ಮೂರು ವರ್ಷಗಳಲ್ಲಿ 45ಸಾವಿರಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದಾರೆ!
ಇದು ನಿಜವಾಗಿಯೂ ಆಘಾತಕಾರಿ ಬೆಳವಣಿಗೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಬಾಲ್ಯವಿವಾಹಗಳು, ಕೌಟುಂಬಿಕ ದೌರ್ಜನ್ಯ ಹೆಚ್ಚಿವೆ ಎಂಬುದಂತು ನಿಜ. ಜೊತೆಗೆ ಹದಿಹರೆಯದ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಟ್ಟು, ಅದರ ಬಳಕೆಯ ಬಗ್ಗೆ ಅರಿವು ಮೂಡಿಸದ ಪರಿಣಾಮವಾಗಿ ಮಕ್ಕಳ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರಿದೆ ಎನ್ನುತ್ತಾರೆ ತಜ್ಞರು. ಹಾಗಂತ ಬಾಲ್ಯ ವಿವಾಹ ಹೆಚ್ಚಲು ಇದೇ ಪ್ರಮುಖ ಕಾರಣ ಎನ್ನುವಂತಿಲ್ಲ. ಕಾನೂನಿನ ಭಯ ಇಲ್ಲದಿರುವುದು, ಕೊರೊನಾ ಸಮಯದಲ್ಲಿ ಸೃಷ್ಟಿಯಾದ ಸಾಮಾಜಿಕ ಸಂಕಷ್ಟಗಳು, ಅರಿವಿನ ಕೊರತೆ, ಹೆಣ್ಣುಮಗು ಎಂಬ ಉದಾಸೀನತೆ ಇವೆಲ್ಲವೂ ಕಾರಣ. ಮುಖ್ಯವಾಗಿ ಸಂಬಂಧಪಟ್ಟ ಇಲಾಖೆಗಳ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದ ಪಾಲೂ ಇದೆ.
ಮೈಸೂರಿನ ʼಒಡನಾಡಿʼ ಸಂಸ್ಥೆ ಆರ್‌ಟಿಐ ಮೂಲಕ, ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳ ಮಾಹಿತಿಯನ್ನು ಕೇಳಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಮಾಹಿತಿ ದೊರೆತಿದೆ. ಮಾಹಿತಿ ಪ್ರಕಾರ 2020ರಿಂದ 2023ರವರೆಗೆ ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಹದಿಹರೆಯದ ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದಾರೆ. ಇವರಲ್ಲಿ ಕೆಲವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಾಗಿದ್ದಾರೆ.
ಈ ದಿನ.ಕಾಮ್ ಜತೆ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು “ಕಾನೂನು ಪ್ರಾಧಿಕಾರ ನೀಡುತ್ತಿರುವ ಅಂಕಿ ಅಂಶಗಳಿಗೂ, ಅಧಿಕಾರಿಗಳು ನೀಡುವ ಅಂಕಿ-ಅಂಶಗಳಿಗೂ ಹೊಂದಾಣಿಕೆಯಾಗುತ್ತಿಲ್ಲ. ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕು. ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ನಮ್ಮಲ್ಲಿ ಈ ತರಹದ ಘಟನೆಗಳು ನಡೆದಿಲ್ಲ ಎನ್ನುತ್ತಾರೆ ಇಲ್ಲವೆ ನಮ್ಮ ಬಳಿ ಅಂಕಿ-ಅಂಶಗಳಿಲ್ಲ ಎನ್ನುತ್ತಾರೆ. ಈ ಬಗ್ಗೆ ಸಾಮಾಜಿಕ ಪರಿಶೋಧನೆಗಳಾಗಬೇಕು. ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ರೀತಿ, ಅದರ ಫಲಿತಾಂಶಗಳ ಬಗ್ಗೆ ಸಾಮಾಜಿಕ ಪರಿಶೋಧನೆ ನಡೆದಿಲ್ಲ. ವಿಷಯಕ್ಕೆ ಸಂಬಂಧಿಸಿದ ತಜ್ಞರು ಇವರ ಬಳಿ ಇರುವುದೇ ಇಲ್ಲ.

ಕೋವಿಡ್ ಲಾಕ್‌ಡೌನ್‌ನಲ್ಲಿ ಹೆಚ್ಚು ತೊಂದರೆಗೊಳಗಾದವರು ಮಕ್ಕಳು. ಮನೆಯಿಂದ ಹೊರ ಹೋಗಿ ಇವುಗಳನ್ನು ಎದುರಿಸುವ ವ್ಯವಸ್ಥೆಗಳಿರಲಿಲ್ಲ. ಆ ಸಮಯದಲ್ಲಿ ಕೌಟುಂಬಿಕ ದೌರ್ಜನ್ಯಗಳು, ಅತ್ಯಾಚಾರಗಳು, ಲೈಂಗಿಕ ಶೋಷಣೆಗಳು ನಡೆದಿವೆ. ಈ ಸಮಯದಲ್ಲಿ ಕಾನೂನುಗಳು ಸಹ ಅಡ್ಡಿಯಾಗಿದ್ದವು. ಈ ದೌರ್ಜನ್ಯಗಳಿಗೆಲ್ಲ ಅದರದ್ದೆ ಆದ ಕಾರಣಗಳಿವೆ. ಆರ್ಥಿಕ ಕಾರಣಗಳು, ಸಾಮಾಜಿಕ ಕಾರಣಗಳು, ಮಾನಸಿಕ ಕಾರಣಗಳು ಹೀಗೆ. ಎಲ್ಲರೂ ಕೆಲಸ ಕಳೆದುಕೊಂಡು ಮನೆಯಲ್ಲಿದ್ದ ಸಂದರ್ಭದಲ್ಲಿ ಉಂಟಾದ ತಲ್ಲಣಗಳು ಇಂತಹ ಅವಾಂತರಗಳಿಗೆ ಕಾರಣವಾಗಿವೆ.
ಕೋವಿಡ್ ಸಮಯದಲ್ಲಿ ಎಲ್ಲ ಮಕ್ಕಳಿಗೆ ಮೊಬೈಲ್ ಫೋನ್‌ಗಳನ್ನ ಪರಿಚಯ ಮಾಡಲಾಯಿತು. ಬಳಕೆ ಹೇಗೆ, ಅದರಲ್ಲಿ ಏನು ನೋಡಬೇಕು, ನೋಡಬಾರದು ಎಂಬುದರ ಬಗ್ಗೆ ತಯಾರಿಗಳಿರಲಿಲ್ಲ. ಇದು ಕೆಲವು ಅವಾಂತರಗಳಿಗೆ ಕಾರಣವಾಗಿದೆ. ಇಂತಹ ಸಾಕಷ್ಟು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.
ಮಕ್ಕಳಿಗೆ ಸಮರ್ಪಕವಾದಂತಹ ಅರಿವು ಮೂಡಿಸಬೇಕು. ಇದನ್ನು ಶಾಲೆಗಳಿಂದಲೇ ಪ್ರಾರಂಭಿಸಬೇಕು. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಕಡ್ಡಾಯವಾಗಬೇಕು ಎನ್ನುವುದು ಇಂತಹ ಕಾರಣಗಳಿಗೆ. ಲೈಂಗಿಕ ಶಿಕ್ಷಣ ನೀಡುವುದೆಂದರೆ, ಇಂತಹ ದಾಳಿಗಳು ನಡೆದಾಗ ನಮ್ಮನ್ನ ನಾವು ಹೇಗೆ ರಕ್ಷಿಸಿಕೊಳ್ಳುವುದು, ಕಾನೂನಿನ ಕ್ರಮಗಳೇನು, ಕೈಗೆಟಕುವ ಕಾನೂನು ವ್ಯವಸ್ಥೆಗಳ್ಯಾವವು, ಸಂಪರ್ಕಿಸಬೇಕಾದ ಪೊಲೀಸ್ ಸಂಖ್ಯೆಗಳೇನು, ಸಹಾಯ ಮಾಡಬಲ್ಲ ಸಂಘ ಸಂಸ್ಥೆಗಳ್ಯಾವವು ಎಂಬುದರ ಮಾಹಿತಿ ನೀಡುವುದು. ಮಕ್ಕಳು ಇಂತಹ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುವಂತೆ ಅವರನ್ನು ತಯಾರು ಮಾಡಬೇಕು.
ಈ ಶೋಷಣೆಗಳಿಗೆ ನಮ್ಮ ಆಚಾರ, ವಿಚಾರ ಹಾಗೂ ಸಂಪ್ರದಾಯಗಳು ಪೂರಕವಾಗಿವೆ. ನಾವು ಮಕ್ಕಳನ್ನು ಬೆಳೆಸುವ ರೀತಿ, ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಚಳವಳಿಯ ರೀತಿಯಲ್ಲಿ ಬದಲಾಗಬೇಕು ಅಂದಾಗ ಮಾತ್ರ ಇಂತ ಪ್ರಕರಣಗಳನ್ನು ತಡೆಯಲು ಸಾಧ್ಯ” ಎಂದು ಹೇಳಿದರು.
ಬಾಲ್ಯವಿವಾಹ ತಡೆಗೆ ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲವೇ? ಸದ್ಯದ ಅಂಕಿ-ಅಂಶಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರತಿಕ್ರಿಯೆ ಏನು? ತಕ್ಷಣದ ಕ್ರಮದ ಬಗ್ಗೆ ತಿಳಿಯಲು ಈದಿನ.ಕಾಮ್ ಆಯೋಗದ ಅಧ್ಯಕ್ಷರಾದ ನಾಗಣ್ಣ ಗೌಡ ಅವರನ್ನು ಸಂಪರ್ಕಿಸಿತ್ತು.
“ಈ ವಿಷಯ ನಮ್ಮ ಗಮನದಲ್ಲಿದೆ. ಜಿಲ್ಲಾವಾರು ವರದಿಗಳನ್ನ ಗಮನಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಇಂತಹ ಐದರಿಂದ ಹತ್ತು ಪ್ರಕರಣಗಳಿವೆ. ಕಂಡುಬಂದಿರುವ ಪ್ರಕರಣಗಳು ಇಷ್ಟಾದರೆ ಕಾಣದೇ ಇರುವ ಪ್ರಕರಣಗಳು ಇವೆ. ಏನಾಗಿದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ನೀಡುವಂತೆ ಎಲ್ಲ ಜಿಲ್ಲೆಗಳಿಗೆ ಆದೇಶ ನೀಡಿದ್ದು, ಒಂದು ವಾರದಲ್ಲಿ ವರದಿ ಕೊಡುವಂತೆ ಕೇಳಲಾಗಿದೆ. ವೈದ್ಯರು, ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದಿಂದಲೂ ಮಾಹಿತಿ ಕೇಳಿದ್ದೇವೆ. ಈ ಸಮಸ್ಯೆ ಇರುವುದು ನಿಜ, ಅಂಕಿ-ಅಂಶಗಳಲ್ಲಿ ವ್ಯತ್ಯಾಸಗಳಾಗಿವೆ. ಸೈಬರ್ ಕ್ರೈಂನಿಂದಾಗಿ ಆಗಿರುವ ಸಮಸ್ಯೆಗಳೇ ಹೆಚ್ಚು. ಮಕ್ಕಳಿಗೆ ಇರುವ ತಪ್ಪು ತಿಳಿವಳಿಕೆ ಇಂತಹ ಪ್ರಕರಣಗಳಿಗೆ ಹಾದಿ ಮಾಡಿಕೊಟ್ಟಿವೆ. ಆನ್‌ಲೈನ್ ಕ್ಲಾಸ್‌ಗಳಿಗಾಗಿ ಪ್ರತಿ ಮಗುವಿನ ಕೈಗೂ ಮೊಬೈಲ್ ನೀಡಲಾಯಿತು. ಕೊರೊನಾ ಕಾಯಿಲೆ ನಿಂತಿದೆ, ಮಕ್ಕಳಲ್ಲಿ ಮೊಬೈಲ್ ಕಾಯಿಲೆ ಹೆಚ್ಚಾಗಿದೆ” ಎಂದು ವಿವರಿಸಿದರು.

“ಬಾಲ್ಯವಿವಾಹ ತಡೆಗೆ ಆಯೋಗವನ್ನು ಇನ್ನೂ ಶಕ್ತಿಯುತಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಪಂಚಾಯ್ತಿ ಮಟ್ಟದಲ್ಲೂ ಕಮಿಟಿ ರಚನೆ ಮಾಡುತ್ತಿದ್ದೇವೆ. ಇದರ ಬಗ್ಗೆ ಜಾಗೃತಿ ಮತ್ತು ಮಕ್ಕಳಿಗೆ ಕೌನ್ಸಲಿಂಗ್ ನೀಡಲು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆಯಾಗುತ್ತಿದೆ. ಬಾಲ್ಯ ವಿವಾಹಗಳು ಈ ಹೊತ್ತಿಗಾಗಲೇ ಕಡಿಮೆಯಾಗಬೇಕಿತ್ತು. ಆದರೆ, ಮಕ್ಕಳು ಶಾಲೆಯಲ್ಲಿದ್ದರೆ ನಮಗೆ ಅನೂಕೂಲ. ಅವರಿಗೆ ಶಿಕ್ಷಣ ಸರಿಯಾಗಿ ಸಿಕ್ಕರೆ ಸರಿ ತಪ್ಪುಗಳು ಅವರಿಗೇ ತಿಳಿಯುತ್ತವೆ. ನಾವು ಬಿಇಒಗಳಿಗೆ, ಮಕ್ಕಳು ಎರಡು ದಿನ ಶಾಲೆಗೆ ಬರದಿದ್ರೂ ಫಾಲೋಅಪ್ ಮಾಡಲು ಈಗಾಗಲೇ ತಿಳಿಸಿದ್ದೇವೆ. ಒಂದು ದಿನ ಮಗು ಶಾಲೆಗೆ ಬರದಿದ್ದರೂ ಪೋಷಕರನ್ನುಸಂಪರ್ಕಿಸಿ ಮಾಹಿತಿ ಪಡೆಯಲು ಹೇಳಿದ್ದೇವೆ” ಎಂದರು
ಪ್ರೌಢಶಾಲೆಯಿಂದ ಪಿಯುಸಿವರೆಗಿನ ಮಕ್ಕಳಿಗೆ ಈ ವಯಸ್ಸಿನಲ್ಲಿ ಅವರ ದೇಹದಲ್ಲಾಗುವ ಬದಲಾವಣೆ, ಮಾನಸಿಕ ಗೊಂದಲಗಳಿಗೆ ಪ್ರತಿ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ಕೌನ್ಸಲಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಒಬ್ಬ ವೈದ್ಯರು, ದಾದಿ ಹಾಗೂ ಶಿಕ್ಷಕಿಯರು ಇದರಲ್ಲಿ ಇರಲಿದ್ದಾರೆ ಎಂದು ನಾಗಣ್ಣ ಮಾಹಿತಿ ನೀಡಿದರು.
ಈ ತರಹದ ಕ್ರಮಗಳು ದಾಖಲೆ, ಹೇಳಿಕೆಗಳಲ್ಲಷ್ಟೇ ಇರುತ್ತದೆ. ವಾಸ್ತವದಲ್ಲಿ ಯಾವುದೂ ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂಬುದೇ ವ್ಯವಸ್ಥೆಯ ದೊಡ್ಡ ಲೋಪ. ಈ ಕಾಲಘಟ್ಟದಲ್ಲೂ ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆ ಮತ್ತು ಅದರ ಸಮಸ್ಯೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಅಗತ್ಯ ಹೆಚ್ಚಿದೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ.