ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

Date:

Advertisements

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ ಹೃದಯವಂತಿಕೆಯ ಸ್ಪರ್ಷ ಸಿಕ್ಕಾಗ ಅದ್ಭುತ ಫೋಟೋ ಜರ್ನಲಿಸ್ಟ್ ಹುಟ್ಟುತ್ತಾನೆ. ಆತ ಆ ಕ್ಷಣದಲ್ಲಿ ತೆಗೆದ ಚಿತ್ರ ಚರಿತ್ರೆಯಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ಅಭಿಪ್ರಾಯಪಟ್ಟರು.

ಬೆಂಗಳೂರು ಫೋಟೋ ಜರ್ನಲಿಸ್ಟ್ ಸಂಘ ಆಯೋಜಿಸಿದ್ದ ‘ವಿಶ್ವ ಛಾಯಾಗ್ರಾಹಕ ದಿನ’ವನ್ನು ಉದ್ಘಾಟಿಸಿ ಮಾತನಾಡಿದರು. “ಫೋಟೋ ಜರ್ನಲಿಸ್ಟ್‌ಗಳೇ ಸಂಘಟಿಸಿರುವ ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಕೆವಿನ್ ಕಾರ್ಟರ್ ಮತ್ತು ಸಂಗೊಳ್ಳಿಯ ಸಂಗವ್ವ ಇಬ್ಬರೂ ‘ಫೋಟೋ ಜರ್ನಲಿಸಂನ ದೃಶ್ಯ ಪಠ್ಯಗಳು’ ಎಂದು ಹೇಳಲು ಇಚ್ಚಿಸುತ್ತೇನೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಕರ್ನಾಟಕ 50 | ಪತ್ರಿಕೋದ್ಯಮ ಕಂಡ ಮೂರು ಪಲ್ಲಟಗಳು

Advertisements

“ಮಗು ಮಾತಾಡುವುದಕ್ಕಿಂತ ಮೊದಲು ನೋಟದಿಂದಲೇ ಜಗತ್ತನ್ನು ಗ್ರಹಿಸುತ್ತದೆ. ನೋಟಕ್ಕೆ ಭಾಷೆಯ, ಪದಗಳ, ವಾಕ್ಯಗಳ ಹಂಗಿಲ್ಲ. ಪ್ರೀತಿ, ಪ್ರೇಮದ ಅಂಕುರ ಆಗೋದು ನೋಟದಿಂದಲೇ ಹೊರತು, ಮಾತಿನಿಂದಲ್ಲ. ಅದಕ್ಕೇ ‘Love at First Sight’ ಎಂದು ಹೇಳೋದು. ಹೀಗಾಗಿ ಫೋಟೋ ಜರ್ನಲಿಸ್ಟ್‌ಗಳಿಗೆ ನೋಟ, ಒಳನೋಟ ಬಹಳ ಮುಖ್ಯ” ಎಂದರು.

“ಆಫ್ರಿಕಾದ ಫೋಟೋ ಜರ್ನಲಿಸ್ಟ್ ತೆಗೆದ ಒಂದು ಫೋಟೋ ಇವತ್ತಿಗೂ ತೀವ್ರ ಚರ್ಚೆಯ ಸಂಗತಿಯಾಗಿಯೇ ಉಳಿದಿದೆ. ಯುದ್ಧ ಸಂತ್ರಸ್ಥ ಸುಡಾನ್ ದೇಶದಲ್ಲಿ ತೆಗೆದ ಫೋಟೋ ಅದು. ಗಂಜಿ ಕೇಂದ್ರಕ್ಕೆ ತೆವಳುತ್ತಿದ್ದ ಒಂದು ಮಗು ಹಸಿವಿನಿಂದ ನೆಲಕ್ಕೇ ತಲೆಕೊಟ್ಟು ನಿತ್ರಾಣಗೊಂಡಿದೆ. ಅಲ್ಲೇ ಒಂದು ರಣಹದ್ದು ಮಗುವನ್ನೇ ತಿನ್ನಲು ಹೊಂಚು ಹಾಕಿ ಕುಳಿತಿದೆ. ಈ ಫೋಟೋಗೆ 1994ರಲ್ಲಿ ವಿಶ್ವಶ್ರೇಷ್ಠ ಪುಲಿಟ್ಜರ್ ಪ್ರಶಸ್ತಿ ಬಂತು. ಆದರೆ ಪ್ರಶಸ್ತಿ ಪಡೆದ ಕೆವಿನ್ ಕಾರ್ಟರ್ ಮೂರು ತಿಂಗಳಲ್ಲಿ ಅಳುಕಿನಿಂದ ಆತ್ಮಹತ್ಯೆ ಮಾಡಿಕೊಂಡರು. ಇದು ಪತ್ರಿಕಾ ವೃತ್ತಿಯ ಚರಿತ್ರೆಯಲ್ಲಿ ಅಳಿಸಲಾಗದ ಒಂದು ಪಠ್ಯ” ಎಂದು ಹೇಳಿದರು.

“ಕೆವಿನ್ ತೆಗೆದ ಒಂದು ಫೋಟೋ ಹುಟ್ಟಿಸಿದ ಪ್ರಶ್ನೆಗಳು ಆತನನ್ನು ಆತ್ಮಹತ್ಯೆಗೆ ದೂಡಿದರೆ, ಅದೊಂದು ಫೋಟೋದ ಮೇಲೆ ನೂರಾರು ಭಾಷೆಗಳಲ್ಲಿ ಕೋಟಿಗಟ್ಟಲೆ ಪದಗಳು, ವಾಕ್ಯಗಳಲ್ಲಿ ಚರ್ಚೆ ನಡೆಯಿತು. ಹೀಗಾಗಿ ನೋಟವೇ ಒಂದು ಭಾಷೆ. ಇದು ವಿಶ್ವ ಭಾಷೆಯಾಗಿದೆ” ಎಂದು ಕೆ.ವಿ.ಪ್ರಭಾಕರ್ ವಿವರಿಸಿದರು.

“ಹಾಗೆಯೇ ಒಂದೂ ಮಾತು, ಒಂದೇ ಒಂದು ಪದದ ಸಹವಾಸವಿಲ್ಲದೆ ಸಂಗೊಳ್ಳಿಯ ಸಂಗವ್ವ ವಿಶ್ವಕ್ಕೇ ಪರಿಚಯವಾದರು. ಸರ್ಕಾರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಘೋಷಿಸಿದಾಗ ಕುಹಕ, ಅಣಕ, ಟೀಕೆ, ವಿಮರ್ಷೆಗಳ ಮಹಾಪೂರವೇ ಹರಿಯುತ್ತಿತ್ತು. ಆದರೆ, ಉಚಿತ ಬಸ್ ಹತ್ತುವಾಗ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಸರ್ಕಾರಿ ಬಸ್‌ನ ಮೆಟ್ಟಿಲುಗಳಿಗೆ ನಮಸ್ಕರಿಸಿದ ಒಂದು ಫೋಟೋ ಎಲ್ಲಾ ಕುಹಕ, ಅಣಕಗಳನ್ನು ಅಳಿಸಿಹಾಕಿತು. 24 ಗಂಟೆಯಲ್ಲಿ ಸಂಗವ್ವ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿಬಿಟ್ಟರು. ಹೀಗಾಗಿ ಕೆವಿನ್ ಕಾರ್ಟರ್ ಮತ್ತು ಸಂಗೊಳ್ಳಿಯ ಸಂಗವ್ವ ಫೋಟೋ ಜರ್ನಲಿಸಂನ ಎರಡು ಪಠ್ಯಗಳು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

“ಇವತ್ತಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟವೇ ಇರಲಿ, ಯುದ್ಧಗಳೇ ಇರಲಿ‌, ನಮ್ಮ ಪೂರ್ವಜರ ಮುಖಗಳನ್ನು ದಾಖಲಿಸಿ ಕೊಡುವುದು ಫೋಟೋಗಳು. ಹೀಗಾಗಿ ಫೋಟೋ ಜರ್ನಲಿಸ್ಟ್‌ಗಳು ಏಕ ಕಾಲಕ್ಕೆ ಚರಿತ್ರಕಾರರೂ ಕೂಡ ಆಗಿರುತ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ವರದಿಗಳು, ಮಾತುಗಳು, ಪದಗಳು ಸುಳ್ಳು ಹೇಳಬಹುದು ಅಥವಾ ಸತ್ಯವನ್ನು ತಿರುಚಬಹುದು. ಆದರೆ, ಫೋಟೋಗಳು, ನೋಟಗಳು ಸುಳ್ಳು ಹೇಳುವುದಿಲ್ಲ. ನಾವು ಬರೆಯುವ ಸುದ್ದಿಗಳಿಗೆ ಸತ್ಯದ ಮೊಹರೆ ಒತ್ತುವುದು ಫೋಟೋಗಳು. ಫೋಟೋಗ್ರಫಿ ಪತ್ರಿಕೋದ್ಯಮದ ಅವಿಭಾಜ್ಯ ಅಂಗ. ಫೋಟೋಗಳು ಘಟನೆಯ ನೈಜ ಚಿತ್ರಣವನ್ನು ಓದುಗರ ಗ್ರಹಿಕೆಗೆ ಒದಗಿಸುತ್ತವೆ” ಎಂದು ಅಭಿಪ್ರಾಯಿಸಿದರು.

“ಆಧುನಿಕ ತಂತ್ರಜ್ಞಾನ ಫೋಟೋಗ್ರಫಿ ಹೆಚ್ಚಿನ ಮೌಲ್ಯವನ್ನು ತಂದುಕೊಟ್ಟಿದೆ. ಕೃತಕ‌ ಬುದ್ದಿಮತ್ತೆ ಒಂದು ಸವಾಲು ಮತ್ತು ಅವಕಾಶವೂ ಹೌದು. ಯಾವುದೇ ತಂತ್ರಜ್ಞಾನ ಬಂದರೂ ಅದಕ್ಕೆ ಸ್ವಂತ ಕಾಲ್ಪನಿಕ‌ ಶಕ್ತಿ ಇರುವುದಿಲ್ಲ. ಎಲ್ಲಿಯವರೆಗೂ ಫೋಟೋ ಜರ್ನಲಿಸ್ಟ್‌ಗಳ ಕಲ್ಪನಾ ಸಾಮರ್ಥ್ಯ ಸೃಜನಶೀಲ ಮತ್ತು ಶ್ರೀಮಂತ ಹಾಗೂ ಸಹೃದಯತೆಯಿಂದ ಕೂಡಿರುತ್ತದೋ ಅಲ್ಲಿಯವರೆಗೂ ಯಾವ ತಂತ್ರಜ್ಞಾನವೂ ಅಪಾಯ ಒಡ್ಡುವುದಿಲ್ಲ” ಎಂದು ಅಭಿಪ್ರಾಯಿಸಿದರು.

ಇದನ್ನು ಓದಿದ್ದೀರಾ? ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ

“ಸುಮಾರು 20 ವರ್ಷಗಳ ಹಿಂದೆ ಫೋಟೋಗ್ರಫಿ ಈಗಿನಷ್ಟು ಸರಾಗ ಮತ್ತು ಸುಲಭವಾಗಿರಲಿಲ್ಲ ಬಹಳ ಕಷ್ಟ ಪಡಬೇಕಾಗಿತ್ತು. ಆದರೆ ಬದಲಾದ ತಂತ್ರಜ್ಞಾನದಿಂದಾಗಿ ಫೋಟೋಗ್ರಫಿ ಅತ್ಯಂತ ಸುಲಭವಾಗಿದ್ದು, ಸೃಜನಶೀಲತೆ ರೂಪಿಸಿಕೊಂಡು ಫೋಟೋಗಳ ಮೂಲಕವೇ ಅರ್ಥಪೂರ್ಣ ಸ್ಟೋರಿಗಳನ್ನು ಸೃಷ್ಟಿಸುವ ಶಕ್ತಿ -ಸಾಮರ್ಥ್ಯ ರೂಡಿಸಿಕೊಂಡರೆ ಮಾತ್ರ ಈಗಿನ ಸ್ಪರ್ಧಾಜಗತ್ತಿನಲ್ಲಿ ಉಳಿಯಲು ಸಾಧ್ಯ” ಎಂದರು.

“ಇವತ್ತಿಗೂ ಗ್ರಾಮೀಣ ಮತ್ತು ತಾಲ್ಲೂಕು ಮಟ್ಟದಲ್ಲಿ ಸುದ್ದಿ ಬರೆಯುವ ವರದಿಗಾರರಿಗಿಂತ ಫೋಟೋಗ್ರಾಫರ್‌ಗಳಿಗೇ ಹೆಚ್ಚು ಬೇಡಿಕೆ ಇದೆ. ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಒಂದು ಫೋಟೋ ಬಂದರೆ ಸಾಕು ಎಂದು ರಾಜಕಾರಣಿಗಳು ಕಾತರಿಸುತ್ತಾರೆ. ಯಾವುದೇ ಭಾಷೆಯವರಿಗಾದರೂ, ಅನಕ್ಷರಸ್ಥರಿಗೂ ಕೂಡ ಫೋಟೋ ಮೂಲಕ ಸಂವಹನ ನಡೆಸಬಹುದಾದ ಸಾಧ್ಯತೆಯೇ ಫೋಟೋ ಜರ್ನಲಿಸ್ಟ್‌ಗಳ ಮಹತ್ವವನ್ನು ಹೇಳುತ್ತದೆ” ಎಂದು ಹೇಳಿದರು.

“ಒಂದು ವರದಿಯನ್ನು ಸಂಪಾದಕರು ತೆಗೆದು ಪಕ್ಕಕ್ಕಿಡಬಹುದು. ಆದರೆ ಉತ್ತಮವಾದ ಒಂದು ಫೋಟೋವನ್ನು ಯಾರೂ ಪಕ್ಕಕ್ಕಿಡುವುದಿಲ್ಲ. ಆದ್ದರಿಂದ ಪತ್ರಿಕೆಗಳಲ್ಲಿ ಲಭ್ಯವಿರುವ ಸ್ಪೇಸ್ ಅನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಿ” ಎಂದು ಕೆವಿಪಿ ಕರೆ ನೀಡಿದರು.

ಡೆಕ್ಕನ್ ಹರಾಲ್ಡ್ ಸಂಸ್ಥೆಯ ಮುಖ್ಯಸ್ಥರಾದ ಕೆ.ಎನ್.ಶಾಂತಕುಮಾರ್, ಮಾಧ್ಯಮ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಹಿರಿಯ ಫೋಟೋ ಜರ್ನಲಿಸ್ಟ್ ಭಾಗ್ಯಪ್ರಕಾಶ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಮೋಹನ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ವೇತನ ಪಾವತಿ ಗೊಂದಲ ಬಗೆಹರಿಸಲು ಕ್ರಮ: ಡಿ.ಕೆ.ಶಿವಕುಮಾರ್

ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ವೇತನ ಗೊಂದಲವನ್ನು ಅಧಿಕಾರಿಗಳ ಜತೆ ಚರ್ಚಿಸಿ,...

Download Eedina App Android / iOS

X