ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳನ್ನು ಒಳಗೊಂಡ ಇಂಡಿಯಾ ಒಕ್ಕೂಟವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಗೋವಾದ ಮೊದಲ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ರೆಡ್ಡಿ ಅವರು ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲ ಮತ್ತು ಬಿಜೆಪಿಯ ಹಿರಿಯ ನಾಯಕ ಸಿ.ಪಿ. ರಾಧಾಕೃಷ್ಣನ್ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ.
ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿ ಜನಿಸಿದ ರೆಡ್ಡಿ ಅವರು 1971ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು. 1995ರಲ್ಲಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.
ಇದನ್ನು ಓದಿದ್ದೀರಾ? ಉಪರಾಷ್ಟ್ರಪತಿ ರಾಜೀನಾಮೆಗೆ ಕಾರಣಗಳೇನು?; ಮೋದಿ-ಶಾ v/s ಧನಕರ್ – ಗುದ್ದಾಟವೇನು?
2005ರಲ್ಲಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದರು. 2007ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. 2011ರ ಜುಲೈನಲ್ಲಿ ನಿವೃತ್ತರಾದರು. ಬಳಿಕ ಗೋವಾದ ಮೊದಲ ಲೋಕಾಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
ಇಂಡಿಯಾ ಒಕ್ಕೂಟವು ಹಲವು ಸುತ್ತಿನ ಚರ್ಚೆ ನಡೆಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರವನ್ನು ಘೋಷಿಸಿದ್ದಾರೆ. ಮಾಜಿ ಇಸ್ರೋ ವಿಜ್ಞಾನಿ ಮೈಲ್ಸ್ವಾಮಿ ಅಣ್ಣಾದೊರೈ ಮತ್ತು ಮಹಾತ್ಮ ಗಾಂಧಿಯವರ ಮೊಮ್ಮಗ ಮತ್ತು ಲೇಖಕ ತುಷಾರ್ ಗಾಂಧಿ ಅವರ ಹೆಸರುಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
