ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ ರಕ್ಷಕರ ಸೋಗು ಧರಿಸಿರುವ ಬಿಜೆಪಿಯವರು ನಿಜಕ್ಕೂ ಕೊಂಕು ಮಾತನಾಡದೇ ಸತ್ಯ ಹೊರಗೆ ಬರಲಿ ಎಂದು ಆಗ್ರಹಿಸಬೇಕಿತ್ತು, ಅಲ್ಲವೇ?
ಧರ್ಮಸ್ಥಳ ಗ್ರಾಮದ ಆಸುಪಾಸಿನ ಕಾಡಿನಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ನ್ಯಾಯಕ್ಕಾಗಿ ಆಗ್ರಹಿಸುವುದು ಬಿಟ್ಟು ಎಂದಿನಂತೆ ಹಿಂದುತ್ವದ ಅಜೆಂಡಾವನ್ನು ಮುಂದು ಮಾಡಿಕೊಂಡು ಯಾರನ್ನೋ ರಕ್ಷಿಸುವ ಸಲುವಾಗಿ ವಿತಂಡವಾದದಲ್ಲಿ ಮುಳುಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ಸದನದಲ್ಲಿ ಧರ್ಮಸ್ಥಳ ವಿಷಯಕ್ಕೆ ಬಿಜೆಪಿ ಸದಸ್ಯರು ಜೋತು ಬಿದ್ದಿದ್ದನ್ನು ಕಾಣಬಹುದು. ಬಿಜೆಪಿಯ ವಿ. ಸುನಿಲ್ ಕುಮಾರ್ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಕೋರಿದರು. ಆ.14ರಂದು ಸ್ಪೀಕರ್ ಯು ಟಿ ಖಾದರ್ ಅವರು ಧರ್ಮಸ್ಥಳ ವಿಚಾರವಾಗಿ ಚರ್ಚೆಗೆ ಅವಕಾಶ ಮಾಡಿಕೊಡುತ್ತಾರೆ.
ನಿಲುವಳಿ ಸೂಚಿಸಿದ್ದ ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಮಾತನಾಡುತ್ತ ‘ಸೌಜನ್ಯಗೆ ನ್ಯಾಯ ಸಿಗಲಿ, ತಪಿಸ್ಥರಿಗೆ ಶಿಕ್ಷೆಯಾಗಲಿ’ ಎಂದು ಕೇವಲ ಐದು ಪದ ಉಚ್ಚರಿಸಿರುವುದು ಬಿಟ್ಟರೆ ಉಳಿದಂತೆ ಮಾತನಾಡಿದ್ದು ಧರ್ಮಸ್ಥಳದಲ್ಲಿ ಕೇಳಿಬಂದಿರುವ ಕೊಲೆ, ಅತ್ಯಾಚಾರ ಆರೋಪಗಳ ತನಿಖೆಯ ವಿರುದ್ಧವಾಗಿಯೇ ಎಂಬುದು ಗಮನಾರ್ಹ.
ಸದನದಲ್ಲಿ ಸುನಿಲ್ ಕುಮಾರ್ ಹೇಗೆ ಮಾತನಾಡಿದರು ಎಂದರೆ ಧರ್ಮಸ್ಥಳದಲ್ಲಿ ಸ್ಥಾಪಿತವಾಗಿರುವ ವ್ಯವಸ್ಥೆಯನ್ನು ರಕ್ಷಿಸಲು ಬಂದ ವಕ್ತಾರನಂತೆ. ಹಿಂದುತ್ವವವನ್ನು ಬಂಡವಾಳವನ್ನಾಗಿ ಮಾಡಿಕೊಂಡು ಮಾತನಾಡುವ ಕಲೆ ಸುನಿಲ್ ಕುಮಾರ್‌ಗೆ ಸಿದ್ಧಿಸಿದೆ. ಧರ್ಮಸ್ಥಳದಲ್ಲಿ ಸಾಕಷ್ಟು ಅನ್ಯಾಯ, ಅಕ್ರಮ ನಡೆದಿದೆ ಎಂದು ಆರೋಪಗಳು ಕೇಳಿಬಂದು ದೇಶಾದ್ಯಂತ ಧರ್ಮಸ್ಥಳ ಪ್ರಕರಣ ಗಮನ ಸೆಳೆದಿದೆ. ಇಂತಹ ಹೊತ್ತಲ್ಲಿ ಧರ್ಮಸ್ಥಳ ಬಗ್ಗೆ ಸುದ್ದಿ ಮಾಡುವುದನ್ನೇ, ಅದರ ಬಗ್ಗೆ ಮಾತನಾಡುವುದನ್ನೇ ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಸುನಿಲ್ ಕುಮಾರ್ ಆರೋಪಿಸುತ್ತಾರೆ.
“ಯಾರೋ ಒಬ್ಬ ಅನಾಮಿಕ ವ್ಯಕ್ತಿ ಹೇಳಿದ ಮಾತ್ರಕ್ಕೆ ಧರ್ಮಸ್ಥಳದಲ್ಲಿ ಗುಂಡಿ ತೋಡುವುದು ಎಷ್ಟು ಸರಿ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ನಮಗೆ ಗೌರವವಿದೆ. ಅವರೆಲ್ಲರ ವಿರುದ್ಧ ಅಪಪ್ರಚಾರ ನಡೆದಿದೆ. ಆ ಬಗ್ಗೆ ಎಲ್ಲೂ ದೂರು ದಾಖಲಾಗಿಲ್ಲ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವಲ್ಲಿ ಒಂದು ಗ್ಯಾಂಗ್ ನಿರತವಾಗಿದೆ” ಎಂದು ಆಧಾರವಿಲ್ಲದೇ ಸದನದೊಳಗೆ ಸುನಿಲ್ ಕುಮಾರ್ ಮಾತನಾಡುತ್ತಾರೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಸದನದಲ್ಲಿ ಎಷ್ಟು ಎಳಸು ರೀತಿಯಲ್ಲಿ ಪ್ರಶ್ನಿಸುತ್ತಾರೆ ಎಂದರೆ, ‘ಅನಾಮಿಕ ದೂರಿನ ಮೇರೆಗೆ ಎಸ್‌ಐಟಿ ರಚನೆ ಮಾಡಲು ಸರ್ಕಾರಕ್ಕೆ ಹೇಳಿದ್ದು ಯಾರು? ಕಾಡಿನಲ್ಲಿ ಅಗೆಯುವುದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದಿದ್ದೀರಾ’ ಎಂದು ಕೇಳುತ್ತಾರೆ. ಮುಂದುವರಿದು ಪ್ರಶ್ನಿಸುತ್ತಾರೆ, ‘ಮುಸುಕುಧಾರಿಯನ್ನು ಏಕೆ ಬಂಧಿಸಿಲ್ಲ, ಅವನಿಗೆ ಏಕೆ ರಕ್ಷಣೆ ನೀಡಲಾಗಿದೆ? ಅವನು ಬಿರಿಯಾನಿ ತಿನ್ನುತ್ತ ಮಜಾ ತಗೊಳ್ಳುತ್ತಿದ್ದಾನೆ’ ಎಂದು.
ಪ್ರಕರಣದ ಗಂಭೀರತೆಯನ್ನೇ ಬಿಜೆಪಿಯವರು ಶಿಥಿಲಗೊಳಿಸಲು ವ್ಯಾಪಕವಾಗಿ ಪ್ರಯತ್ನಿಸುತ್ತಿದ್ದಾರೆ. ನೂರಾರು ಶವಗಳನ್ನು ಧರ್ಮಸ್ಥಳದ ಮಾಹಿತಿ ಕೇಂದ್ರದ ಸೂಚನೆ ಮೇರೆಗೆ ಅಕ್ರಮವಾಗಿ ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ಮುಂದೆ ಬಂದು ಹೇಳುತ್ತಿರುವಾಗ ಸತ್ಯಾಸತ್ಯತೆ ತಿಳಿಯುವ ಇಚ್ಛಾಶಕ್ತಿಯನ್ನು ಬಿಜೆಪಿಯವರು ತೋರುತ್ತಿಲ್ಲ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆಗಲೇ ಮಧ್ಯಂತರ ವರದಿಗಾಗಿ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಏನು ಹೇಳಬೇಕು?
ಗೃಹ ಸಚಿವರೇ ಹೇಳಿದಂತೆ ಎರಡು ಜಾಗದಲ್ಲಿ ಅಸ್ಥಿಪಂಜರ ಮತ್ತು ಎಲುಬುಗಳು ಎಸ್‌ಐಟಿ ಉತ್ಖನನ ವೇಳೆ ಸಿಕ್ಕಿದೆ. ಈ ಸಂಗತಿ ಬಿಜೆಪಿಯವರಿಗೆ ಎಲ್ಲೂ ಗಂಭೀರವಾಗಿ ಕಾಣುತ್ತಿಲ್ಲ. ಅಂದರೆ ಅವರ ಉದ್ದೇಶ ಬೇರೆಯೇ ಇದೆ. ಅವರಿಗೆ ಎಸ್‌ಐಟಿಯಿಂದ ಸತ್ಯ ಹೊರಗೆ ಬರುವುದು ಬೇಕಿಲ್ಲ. ಧರ್ಮಸ್ಥಳದ ಅನ್ಯಾಯಗಳ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಉತ್ತರ ಸಿಗಬೇಕಿಲ್ಲ.
‘ಬೋಗಸ್ ಬುರುಡೆ ಸಿಕ್ಕಿದೆ, ಗುಂಡಿಯಲ್ಲಿ ಒಂದು ಇಲಿಯೂ ಸಿಕ್ಕಿಲ್ಲ’ ಎಂದು ಅಶೋಕ್ ಹೇಳುತ್ತಾರೆ. ಇದು ಪ್ರತಿಪಕ್ಷ ನಾಯಕ ಆಡುವ ಮಾತಾ? ಅಕ್ರಮವಾಗಿ ಹೂತು ಹಾಕಿರುವ ಶವದ ಬುರುಡೆಯೊಂದು ಸಿಗುತ್ತದೆ ಎಂದರೆ ಬಿಜೆಪಿಗೆ ಏಕೆ ದೊಡ್ಡ ಸಂಗತಿ ಅನ್ನಿಸುವುದಿಲ್ಲ? ನಿಷ್ಪಕ್ಷಪಾತವಾಗಿ ತನಿಖೆಗೆ ಬಿಜೆಪಿ ಆಗ್ರಹಿಸಿದ್ದರೆ ಅದಕ್ಕೊಂದು ಬೆಲೆ ಇರುತ್ತಿತ್ತು. ಧಾರ್ಮಿಕ ಕ್ಷೇತ್ರದಲ್ಲಿ ಹೀಗೆ ಅಕ್ರಮವಾಗಿ ಶವಗಳನ್ನು ಹೂತು ಹಾಕಲಾಗಿದೆ ಎನ್ನುವ ಆರೋಪವನ್ನು ಬಿಜೆಪಿ ನಾಯಕರು ಏಕೆ ಹೀಗೆ ತಳ್ಳಿ ಹಾಕುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ?
ವಿಧಾನಸಭೆಯಲ್ಲಿ ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ನಡೆದ ಚರ್ಚೆಗೆ ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸುದೀರ್ಘವಾಗಿ ಮತ್ತು ಸಮರ್ಥವಾಗಿ ಉತ್ತರಿಸಿದ್ದಾರೆ. ಎಸ್‌ಐಟಿ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಷಡ್ಯಂತ್ರ ಮಾಡಿದರಿಗೆ ದಿಟ್ಟವಾಗಿ ಉತ್ತರ ನೀಡಿ, “ಎಸ್‌ಐಟಿ ಯಾರದೇ ಒತ್ತಡಕ್ಕೆ ಮಣಿಯದೆ ಬಹಳ ಗಂಭೀರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಇನ್ನೂ ಎಷ್ಟು ಕಡೆ ಅಗೆಯಬೇಕು, ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಎಸ್‌ಐಟಿ ತೀರ್ಮಾನಿಸಲಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಧಾರರಹಿತ ಮತ್ತು ಸುಳ್ಳು : ಧರ್ಮಸ್ಥಳ ಬೆಳವಣಿಗೆ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
“ಈವರೆಗೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು, ಮಣ್ಣಿನ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆ ವರದಿ ಇನ್ನೂ ಬಂದಿಲ್ಲ. ಹೀಗಾಗಿ ವರದಿ ಬರುವವರೆಗೂ ವಿಚಾರದಲ್ಲಿ ಮುಂದಕ್ಕೆ ಹೋಗದಿರಲು ಎಸ್ಐಟಿ ತೀರ್ಮಾನಿಸಿದೆ. ಈ ಪ್ರಕರಣದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ. ತನಿಖೆ ನಡೆಯುವಾಗ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ. ಮಧ್ಯಂತರ ವರದಿ ಇನ್ನೂ ಬಂದಿಲ್ಲ. ಶೀಘ್ರ ಸಂಪೂರ್ಣ ತನಿಖೆ ಮಾಡಿ ಎಂದು ಸರ್ಕಾರ ಎಸ್‌ಐಟಿಗೆ ಹೇಳಬಹುದು. ಆದರೆ, ಎಸ್‌ಐಟಿಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಅಥವಾ ದೂಷಣೆ ಮಾಡಲ್ಲ. ಅದರ ಅಗತ್ಯವೂ ಇಲ್ಲ. ಇದರಲ್ಲಿ ಏನನ್ನೂ ಮುಚ್ಚಿಡುವುದಿಲ್ಲ. ಸರ್ಕಾರಕ್ಕೆ ಬೇರೆ ಯಾವ ಉದ್ದೇಶವೂ ಇಲ್ಲ. ವಸ್ತುಸ್ಥಿತಿ ಸದನದ ಮುಂದಿಟ್ಟಿದ್ದೇನೆ” ಎಂದು ಹೇಳಿದ್ದಾರೆ.
“ಯಾರದ್ದೋ ಒತ್ತಡಕ್ಕೆ ಮಣಿದು ಸರ್ಕಾರ ಎಸ್‌ಐಟಿ ರಚನೆ ಮಾಡಲಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ದೂರೊಂದು ದಾಖಲಾಯಿತು. ಅದನ್ನು ಆಧರಿಸಿ, ಆರಂಭದಲ್ಲಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಎಸ್‌ಐಟಿ ರಚಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ನಾನು ಮತ್ತು ಮುಖ್ಯಮಂತ್ರಿ ಚರ್ಚಿಸಿ ತೀರ್ಮಾನ ತೆಗೆದುಕೊಂಡೆವು” ಎಂದು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ್ದಾರೆ.
“ಇದೊಂದು ಅತ್ಯಂತ ಸೂಕ್ಷ್ಮ ವಿಷಯ ಆಗಿರುವುದರಿಂದ ವಿರೋಧಪಕ್ಷಗಳೂ ಸಹಕರಿಸಬೇಕು. ವೀರೇಂದ್ರ ಹೆಗ್ಗಡೆ ಅವರ ಮೇಲೆ ಬಂದಿರುವ ಆರೋಪ ಸಂಬಂಧ ಸತ್ಯ ಹೊರ ಬರಬೇಕು. ನಾವು ಏನನ್ನೂ ಮುಚ್ಚಿಡುವುದಿಲ್ಲ. ಯಾರ ಒತ್ತಡಕ್ಕೂ ಮಣಿದು ಎಸ್‌ಐಟಿ ರಚನೆ ಮಾಡಿಲ್ಲ. ಸದ್ಯ ಸಿಕ್ಕಿರುವ ಮೂಳೆಗಳು ಯಾರದು? ಕೊಲೆಯೇ? ಅಸಹಜ ಸಾವೇ? ಸಹಜ ಸಾವೇ ಎಂಬುದು ತನಿಖೆಯಿಂದ ಹೊರಬರಬೇಕು. ಇದರಲ್ಲಿ ಯಾವುದೇ ರೀತಿ ರಾಜಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಸಾಕ್ಷಿ ರಕ್ಷಣೆ ಕಾಯ್ದೆ ಅನ್ವಯ ದೂರುದಾರ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿ, ರಕ್ಷಣೆಗೆ ಅರ್ಜಿ ಸಲ್ಲಿಸಿದ್ದ. ಮ್ಯಾಜಿಸ್ಟ್ರೇಟ್ ಅವರು ದೂರುದಾರನಿಗೆ ಯಾವ ರೀತಿ ರಕ್ಷಣೆ ಕೊಡಬೇಕು ಎಂಬುದನ್ನು ಸೂಚಿಸಿ ಆದೇಶ ನೀಡಿದ್ದಾರೆ. ಆ ಪ್ರಕಾರವೇ ಸಾಕ್ಷಿಗೆ ರಕ್ಷಣೆ ನೀಡಲಾಗಿದೆ” ಎಂದು ಅಶೋಕ್ ಪ್ರಶ್ನೆಗೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
“ಹಲವು ಜಾಗಗಳಲ್ಲಿ ಮಣ್ಣು ಅಗೆಯಲಾಗಿದೆ. ಎರಡು ಜಾಗಗಳಲ್ಲಿ ಅಸ್ಥಿಪಂಜರ ಸಿಕ್ಕಿದೆ. ಅದನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಅಗೆದ ಜಾಗಗಳಲ್ಲಿ ಲ್ಯಾಟರೈಟ್ ಮಣ್ಣು ಇದ್ದು, ಮೂಳೆಗಳು ಕರಗಿ ಹೋಗಿರುವ ಸಾಧ್ಯತೆಯೂ ಇದೆ. ಹೀಗಾಗಿ ಮಣ್ಣಿನ ಮಾದರಿಯನ್ನು ಪಡೆದು ವಿಶ್ಲೇಷಣೆಗೆ ಕಳಿಸಲಾಗಿದೆ. ಅಲ್ಲಿ ಘಟನೆ ಆಗಿದೆ ಎಂದು ಯಾರೂ ಹೇಳಲು ಆಗುವುದಿಲ್ಲ. ಆಗಿಲ್ಲ ಅಂತ ಯಾರಿಗೂ ಹೇಳಲು ಆಗಲ್ಲ. ಏನೂ ನಡೆದೇ ಇಲ್ಲ ಎಂದು ತನಿಖೆಯಲ್ಲಿ ಬಂದರೆ ಧರ್ಮಸ್ಥಳದ ಗೌರವ ಇನ್ನಷ್ಟು ಹೆಚ್ಚಾಗುವುದಿಲ್ಲವೇ? ಒಂದು ವೇಳೆ ಆಗಿದೆ ಅಂತ ವರದಿ ಬಂದರೆ ಅನ್ಯಾಯವಾದವರಿಗೆ ನ್ಯಾಯ ಸಿಕ್ಕಿದಂತೆ ಆಗುತ್ತದೆ. ಇದಕ್ಕೆ ರಾಜಕೀಯ ಬೆರೆಸುವುದು ಬೇಡ. ನ್ಯಾಯಕ್ಕೆ ಬಿಡೋಣ. ಸತ್ಯ ಹೊರಬರಲಿ. ಅದನ್ನು ಧರ್ಮಸ್ಥಳದವರೂ ಒಪ್ಪಬೇಕಾಗುತ್ತದೆ ಜನರೂ ಒಪ್ಪಬೇಕಾಗುತ್ತದೆ” ಎಂದು ಪರಮೇಶ್ವರ್ ದಿಟ್ಟವಾಗಿ ಮಾತನಾಡಿದ್ದಾರೆ.
ಸದನದಲ್ಲಿ ಪರಮೇಶ್ವರ್ ನೀಡಿದ ಉತ್ತರಕ್ಕೆ ಬಿಜೆಪಿಯವರು ತಬ್ಬಿಬ್ಬಾಗಿ ಹೋಗಿದ್ದಾರೆ. ಮತ್ತಷ್ಟು ಮರ್ಯಾದೆ ಹೋಗುತ್ತದೆ ಎಂದು ಮೊದಲೇ ಅರಿತು ‘ಸಚಿವರ ಉತ್ತರ ನಿರಾಸೆ ಉಂಟು ಮಾಡಿದೆ’ ಎಂದು ಹೇಳಿ ಸಭಾತ್ಯಾಗ ಮಾಡಿದ್ದಾರೆ. ಜೆಡಿಎಸ್ ಸದಸ್ಯರು ಸಹ ಅವರ ಜೊತೆ ಹೊರ ನಡೆದಿದ್ದಾರೆ.
ಸಚಿವರ ಉತ್ತರವನ್ನು ಡೈವರ್ಟ್ ಮಾಡಲು ‘ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ತಿಮರೋಡಿ ಹೇಳಿಕೆ ನೀಡಿದ್ದಾರೆ’ ಎಂಬ ವಿಚಾರ ಇಟ್ಟುಕೊಂಡು ಬಿಜೆಪಿಯವರು ಸರಕಾರದ ವಿರುದ್ಧ ಮುಗಿಬಿದ್ದರು. 2023ರಲ್ಲಿ ತಿಮರೋಡಿ ಅವರು ಹರೀಶ್ ಪೂಂಜಾ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಮಾತು ಆಗಿತ್ತು ಎಂಬುದು ಗೊತ್ತಾಗುತ್ತಿದ್ದಂತೆ ಇಂಗುತಿಂದ ಮಂಗನಂತೆ ಆಡುತ್ತಿದ್ದಾರೆ.
ಒಟ್ಟಾರೆ ಬಿಜೆಪಿಯವರ ನಡೆ ಹೇಗಿದೆ ಎಂದರೆ ಧರ್ಮಸ್ಥಳ ಬಗೆಗಿನ ಆರೋಪಗಳ ಸತ್ಯ ಹೊರಗೆ ಬರಬೇಕಿಲ್ಲ. ಅದಕ್ಕೆ ಹೇಗೆ ಬೇಕೋ ಹಾಗೆ ವಿತಂಡವಾದಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ ರಕ್ಷಕರ ಸೋಗು ಧರಿಸಿರುವ ಬಿಜೆಪಿಯವರು ನಿಜಕ್ಕೂ ಕೊಂಕು ಮಾತನಾಡದೇ ಸತ್ಯ ಹೊರಗೆ ಬರಲಿ ಎಂದು ಆಗ್ರಹಿಸಬೇಕಿತ್ತು. ಆ ಕೆಲಸವನ್ನು ಮನಸಾರೆಯಾಗಿ ಬಿಜೆಪಿಯವರು ಎಲ್ಲೂ ಮಾಡುತ್ತಿಲ್ಲ. ಎಂದಿನಂತೆ ‘ಬೆಂಕಿ’ಯಲ್ಲಿ ಹಿಂದುತ್ವವನ್ನು ಸುಖಾಸುಮ್ಮನೇ ಎಳೆದು ತಂದು ಚಳಿಕಾಯಿಸಿಕೊಳ್ಳುತ್ತಿದ್ದಾರೆ. ರಾಜಕಾರಣಕ್ಕೆ ಧರ್ಮಸ್ಥಳ ಪ್ರಕರಣ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಹಿಂದುಗಳನ್ನು ಎತ್ತಿಕಟ್ಟುವ ಪ್ರಯತ್ನವನ್ನು ದೊಡ್ಡದಾಗಿಯೇ ಮಾಡುತ್ತಿದ್ದಾರೆ.
ಅಕ್ರಮವಾಗಿ ಶವ ಹೂತಿರುವ ಪ್ರಕರನದ ಬಗ್ಗೆ ಗಂಭೀರವಾಗಿ ತನಿಖೆ ನಡೆಯುತ್ತಿದೆ. ಇದೇ ಹೊತ್ತಲ್ಲಿ ಬಿಜೆಪಿಯ ನಾಯಕರು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಏನೂ ಸೂಚಿಸುತ್ತದೆ? ದರ್ಮಸ್ಥಳದ ಪರವಾಗಿ ನಾವಿದ್ದೇವೆ ಎನ್ನುವ ಸಂದೇಶವನ್ನು ನೇರವಾಗಿಯೇ ಬಿಜೆಪಿಯವರು ಸಾರಿದಂತಿದೆ. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಹೇಳಿ?

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.