ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಳುಗಿದ್ದು, ಸುತ್ತಮುತ್ತಲಿನ ನಾಲ್ಕು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಸತತ ಏಳು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ 1 ಲಕ್ಷ 80 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರ ಪರಿಣಾಮವಾಗಿ ಯಳಗುಂದಿ, ಯರಗೋಡಿ, ಕಡದರೆಗಡ್ಡಿ, ಓಂಕಾರದೊಡ್ಡಿ, ಮ್ಯಾದರದೊಡ್ಡಿ ಹಾಗೂ ಹಂಚಿನಾಳು ಗ್ರಾಮಗಳ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹಳ್ಳ-ಕೊಳಗಳಿಂದ ನೀರಿನ ಹರಿವು ಹೆಚ್ಚಿದ ಕಾರಣ ನದಿಯಲ್ಲಿ ನೀರಿನ ಪ್ರಮಾಣ ತೀವ್ರ ಏರಿಕೆಯಾಗಿದೆ.
ತುಂಗಭದ್ರಾ ಜಲಾಶಯವೂ ತುಂಬಿಕೊಂಡಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಬಿಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ಒಂದು ಭಾಗದಲ್ಲಿ ನಿರಂತರ ಮಳೆಯ ತೊಂದರೆ ಇದ್ದರೆ, ಮತ್ತೊಂದು ಕಡೆ ಪ್ರವಾಹದ ಭೀತಿ ಕಾಡುತ್ತಿದೆ.

ಈ ಬಗ್ಗೆ ಸ್ಥಳೀಯ ಸಂತ್ರಸ್ತ ಮೌನೇಶ್ ಪೂಜಾರಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ, “ಮಳೆಗಾಲದಲ್ಲಿ ನಡುಗಡ್ಡೆ ಬಿಡುವಂತೆ ಮಾತ್ರ ಅಧಿಕಾರಿಗಳು ಸೂಚನೆ ಕೊಡುತ್ತಾರೆ. ಪ್ರವಾಹದ ಸಂದರ್ಭದಲ್ಲಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಬಂದು ಪರಿಶೀಲನೆ ಮಾಡಿ ಆಶ್ವಾಸನೆ ಭರವಸೆ ಕೊಡುತ್ತಾರೆ. ಆದರೆ ಶಾಶ್ವತ ಪರಿಹಾರದ ಕಡೆ ಯಾರೂ ಗಮನಹರಿಸುತ್ತಿಲ್ಲ. ಅಧಿಕಾರಿಗಳು ಬದಲಾಗುತ್ತಿದ್ದಂತೆ ಸಮಸ್ಯೆಯನ್ನು ಮತ್ತೆ ಮತ್ತೆ ನಾವು ಎದುರಿಸಬೇಕಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿರಂತರ ಮಳೆ : ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ
ಪ್ರತಿ ವರ್ಷವೂ ಮಳೆಗಾಲದ ಸಮಯದಲ್ಲಿ ಇದೆ ಗೋಳು, ನೋವು ಅನುಭವಿಸುತ್ತೇವೆ. ಸೇತುವೆ ಮುಳುಗಡೆಯಾದಾಗ ಸಂಪರ್ಕ ಆರೋಗ್ಯದಲ್ಲಿ ಸಮಸ್ಯೆಯಾದರೆ ತುರ್ತು ಸೇವೆಗೆ ಆಸ್ಪತ್ರೆಯಿಲ್ಲ. ಹೀಗೆ ಅನೇಕ ದುರ್ಘಟನೆ ಸಂಭವಿಸಿವೆ ಎಂದು ಅಳಲು ತೋಡಿಕೊಂಡರು.
