ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ 13ರ ಬಾಲಕನ್ನು ಬಳಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ ಬಾಲಕನ ಪೋಷಕರು ಬಾಲಕ ಸದಾ ಮಂಕಾಗಿರುವುದನ್ನು ಕಂಡು ಮನೋವೈದ್ಯರ ಬಳಿ ಕರೆದುಕೊಂಡು ಹೊಗಿದ್ದಾರೆ. ಆಗ ತನ್ನನ್ನು ನೆರೆಮನೆಯ ಮಹಿಳೆ ಬೆದರಿಸಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿರುವುದನ್ನು ಬಾಲಕನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಮಹಿಳೆಯು ತನ್ನ ಮನೆಯಲ್ಲಿ ಬೆಳೆದಿರುವ ನುಗ್ಗೇಕಾಯಿ ಕೊಡುತ್ತೇನೆಂದು ಬಾಲಕನನ್ನು ಪದೇ ಪದೇ ಕರೆಸಿಕೊಂಡು ಅವನನ್ನು ಬಲವಂತವಾಗಿ ತನ್ನ ತೃಷೆಗೆ ಬಳಸಿಕೊಂಡಿದ್ದಾಳೆ ಎಂದು ಬಾಲಕ ಹೇಳಿಕೊಂಡಿದ್ದಾನೆ. ಇದನ್ನು ತಿಳಿದ ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಲಕನ ಮೇಲೆ 13 ಮಂದಿಯಿಂದ ಲೈಂಗಿಕ ದೌರ್ಜನ್ಯ: 24 ಬಾರಿ ಚಾಕುವಿನಿಂದ ಇರಿದು ಹತ್ಯೆ
ಆದರೆ ಆರೋಪಿತ ಮಹಿಳೆಯು, “ನನ್ನ ವಿರುದ್ದ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಮಾಡಬೇಕು” ಎಂದು ಕೋರಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಳು.
ಮಹಿಳೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ ತೀರ್ಪನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದ್ದು, “ಪೋಕ್ಸೋ ಕಾಯ್ದೆಗೆ ಯಾವುದೇ ಲಿಂಗ ಬೇಧವಿಲ್ಲ. ಅಪ್ರಾಪ್ತ ವಯೋಮನದ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ರೂಪಿಸಿರುವ ಕಠಿಣ ಕಾನೂನು ಶಾಸನವಾಗಿದೆ” ಎಂದು ಮಹಿಳೆಯ ವಿರುದ್ದದ ಲೈಂಗಿಕ ಆರೋಪವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
“ಕಾನೂನಿನ ಅಡಿಯಲ್ಲಿ ಪುರುಷ ಮತ್ತು ಮಹಿಳೆಗೆ ಸಮಾನ ಸ್ಥಾನವಿದೆ. 18 ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ಪೋಕ್ಸೊ ಕಾಯ್ದೆಯಡಿಲ್ಲಿ ಸೂಕ್ತ ರಕ್ಷಣೆ ದೊರೆಯಬೇಕು” ಎಂದು ನ್ಯಾಯಾಲಯವು ಸಮರ್ಪಕ ರೀತಿಯಲ್ಲಿ ವ್ಯಾಖ್ಯಾನ ನೀಡಿದೆ.
“ಅಮಾಯಕ ಜೀವಗಳ ಮೇಲೆ ಕಾಮಾಂಧರು ಎಸಗುವ ಪೈಶಾಚಿಕ ಕೃತ್ಯಗಳನ್ನು ನಿರ್ದಾಕ್ಷಿಣ್ಯವಾಗಿ ತಡೆಗಟ್ಟುವುದಕ್ಕಾಗಿಯೇ ನಮ್ಮ ಶಾಸಕಾಂಗ ಪೋಕ್ಸೋದಂತಹ ಮಹತ್ತರ ಕಾಯ್ದೆಯನ್ನು ವಿನ್ಯಾಸಗೊಳಿಸಿದೆ ಎಂಬುದನ್ನು ಯಾರೂ ಮರೆಯಬಾರದು” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಸ್ಪಷ್ಟಪಡಿಸಿದ್ದಾರೆ.
