ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು, ಕೇಸು ಮಾಡಬಾರದು. ಹಾಗಿದ್ರೆ ಬೇರೆ ಯಾವ ಕಾರಣಕ್ಕೆ ಟೀಕಿಸಿದ್ರೆ ಕ್ರಮ ಕೈಗೊಳ್ಳುತ್ತೀರಿ ಸ್ವಾಮಿ? ಅದನ್ನಾದರೂ ಮುಖ್ಯಮಂತ್ರಿಗಳು ಹೇಳಿಬಿಡಲಿ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಾಯಿ ತೆರೆದರೆ ಅಲ್ಲೊಂದು ದ್ವೇಷದ ಕಿಡಿ ಇರುತ್ತದೆ. ಮುಸ್ಲಿಮರನ್ನು ಟೀಕಿಸದೇ ಭಾಷಣ ಅಂತ್ಯವಾಗುವುದೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರೀಶ್ ಪೂಂಜಾ ಹಲವು ಬಾರಿ ನಾಲಿಗೆ ಹರಿಯಬಿಟ್ಟಿದ್ದಾರೆ. ಪೊಲೀಸರನ್ನು ಅವಾಚ್ಯವಾಗಿ ನಿಂದಿಸುವುದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಧಮ್ಕಿ ಹಾಕುವುದು ಮುಂತಾದ ಕಾನೂನುಬಾಹಿರ ಕೃತ್ಯಗಳಿಗೆ ತನ್ನ ಶಾಸಕ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹರೀಶ್ ಪೂಂಜಾ ಮೇಲೆ ಈಗಾಗಲೇ 9 ಪ್ರಕರಣಗಳಿವೆ. ಗಂಭೀರ ದ್ವೇಷ ಭಾಷಣ ಪ್ರಕರಣಗಳಿಗೂ ಕೋರ್ಟ್ ತಡೆ ನೀಡಿದೆ. ಸದನದಲ್ಲೂ ತನ್ನ ಗೂಂಡಾ ಪ್ರವೃತ್ತಿ ತೋರಿಸುವ ಈ ಶಾಸಕನಿಗೆ ಕಾನೂನಿನ ಭಯ ಕಿಂಚಿತ್ತೂ ಇಲ್ಲ. ಸಂವಿಧಾನದ ಆಶಯದಂತೆ ಎಲ್ಲ ಪ್ರಜೆಗಳನ್ನೂ ಒಂದೇ ರೀತಿಯಲ್ಲಿ ಗೌರವಿಸುವ, ರಾಗದ್ವೇಷವಿಲ್ಲದೇ ನಡೆದುಕೊಳ್ಳುವ ಪ್ರಮಾಣ ಮಾಡಿ ನಂತರ ಮಾಡುವುದು ಕೋಮುದ್ವೇಷ ರಾಜಕಾರಣ. “ನನಗೆ ಹಿಂದುತ್ವ ಮೊದಲು, ಹಿಂದೂಗಳಿಗಾಗಿಯೇ ಕೆಲಸ ಮಾಡುತ್ತೇನೆ” ಎಂದು ರಾಜಾರೋಷವಾಗಿ ಹೇಳುವ ಈತನಿಗೆ ನಿಜವಾಗಿಯೂ ಕಾನೂನಿನಡಿ ಶಿಕ್ಷೆಯಾಗುತ್ತಿಲ್ಲ ಎಂಬುದೇ ವಿಪರ್ಯಾಸ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದ್ವೇಷಭಾಷಣ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಾನಹಾನಿಕರ ಹೇಳಿಕೆ ಸೇರಿದಂತೆ ಮೂರು ಪ್ರಕರಣ ದಾಖಲಾಗಿದೆ. ಯಾವುದರಲ್ಲೂ ಬಂಧನವಾಗಿಲ್ಲ. ಎಲ್ಲಾ ಪ್ರಕರಣಗಳಿಗೆ ಕೋರ್ಟ್ ತಡೆ ನೀಡಿದೆ.
ಪ್ರಕರಣ 1: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಬಂದಿತ್ತು. ಮೇ 22, 2023 ರಂದು ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ಶಾಸಕ ಹರೀಶ್ ಪೂಂಜಾ, ಮತ್ತೊಬ್ಬ ಪ್ರಖರ ಹಿಂದುತ್ವದ ಮುಖಂಡ, ಸಂಘಪರಿವಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲೆಗುಂಪಾಗಿರುವ ಬಂಡಾಯ ನಾಯಕ ಸತ್ಯಜಿತ್ ಸುರತ್ಕಲ್ ಉದ್ದೇಶಿಸಿ ಮಾತನಾಡುತ್ತಾ, “ನೀವು ನನ್ನ ವಿರುದ್ಧ ಪ್ರಚಾರ ಮಾಡಿದ್ದಕ್ಕೆ ಬೇಸರವಿಲ್ಲ. ಆದರೆ 24 ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ ಸಿದ್ದರಾಮಯ್ಯನ ಪರ ಮತ ಕೇಳಿದ್ರಲ್ವಾ, ಇದಕ್ಕೆ ಬೆಳ್ತಂಗಡಿಯ ಜನಕ್ಕೆ ನೀವು ಉತ್ತರಿಸಬೇಕು” ಎಂದು ಹೇಳಿದ್ದರು. ಈ ಕುರಿತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ನಮಿತಾ ಕೆ. ಪೂಜಾರಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್ 153, 153(A), ಮತ್ತು 505 ರ ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಇದರ ಜೊತೆಗೆ ಪುತ್ತೂರು ಮತ್ತು ಮಂಗಳೂರಿನಲ್ಲಿ ದೂರುಗಳು ದಾಖಲಾಗಿದ್ದವು. ಬೆಳ್ತಂಗಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಲು ಕೋರಿ ಶಾಸಕ ಪೂಂಜಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಪೀಠ ನಡೆಸಿತು. ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿತು. ಆದರೆ ಇದುವರೆಗೆ ಸರ್ಕಾರ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಿಲ್ಲ. ಅದೇ ವರ್ಷ ಡಿಸೆಂಬರ್‌ನಲ್ಲಿ ದೂರುದಾರರಿಗೆ ಪೂಂಜಾ ಹೇಳಿಕೆಯ ವಿಡಿಯೋ ಸಿಡಿ ನೀಡುವಂತೆ ಆದೇಶಿಸಿತ್ತು. ಆ ಪ್ರಕರಣ ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ. ಇನ್ನೂ ಇತ್ಯರ್ಥ ಆಗಿಲ್ಲ.

ಇತ್ತ ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿತ್ತು. ಆಗ ಶಾಸಕರ ಹೇಳಿಕೆಯನ್ನು ಉಲ್ಲೇಖಿಸಿ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು, “ಕೊಲೆ ಆರೋಪ ಹೊತ್ತ ಸಿ ಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಅಥವಾ ಕೊಲೆ ಮಾಡಿಲ್ಲ ಅಂತ ಸಾಬೀತುಪಡಿಸಬೇಕು. ಅಥವಾ ಶಾಸಕ ಸುಳ್ಳು ಹೇಳಿದ್ದಾರೆ ಎಂದಾದರೆ ಅವರನ್ನು ಬಂಧಿಸಬೇಕು” ಎಂದು ಹೇಳಿದ್ದರು. ಸೌಜನ್ಯ ಹೋರಾಟಕ್ಕೆ ಶಾಸಕರು ಬೆಂಬಲ ಕೊಡುತ್ತಿಲ್ಲ ಎಂಬ ಸಿಟ್ಟು ಅವರಿಗಿತ್ತು.
ಇದೀಗ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತಿಮರೋಡಿಯವರನ್ನು ಹೇಗಾದರೂ ಮಾಡಿ ಬಂಧಿಸುವಂತೆ ಮಾಡಬೇಕು ಎಂದು ಬಿಜೆಪಿಯವರೇ ತಿರುಚಿದ ವಿಡಿಯೋ ಹರಿಯಬಿಟ್ಟಿದ್ದರು. ಬಿಜೆಪಿ ಶಾಸಕರು ಸದನದಲ್ಲೂ ಪ್ರಸ್ತಾಪ ಮಾಡಿ ಪ್ರಸ್ತಾಪಿಸಿ ಗೃಹಸಚಿವ ಮತ್ತು ಉಪಮುಖ್ಯಮಂತ್ರಿಯ ಹಾದಿ ತಪ್ಪಿಸಿದ್ದಲ್ಲದೇ, ಎರಡೂ ಪಕ್ಷಗಳು ಜನರಿಂದ ತೀವ್ರ ಟೀಕೆಗೆ ಒಳಗಾಗಿವೆ. ಸದನದಲ್ಲಿ ಮಾತನಾಡುತ್ತ ಬಿಜೆಪಿ ನಾಯಕರಾದ ಆರ್ ಅಶೋಕ್, ಸುರೇಶ್ ಕುಮಾರ್, ಎಸ್ ಆರ್ ವಿಶ್ವನಾಥ್, ಸುನಿಲ್‌ಕುಮಾರ್ ಮುಂತಾದವರು ಸಿಎಂ ಮೇಲೆ ಕೊಲೆ ಆರೋಪ ಮಾಡಿದವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ನೈಜ ಆರೋಪಿ ಹರೀಶ್ ಪೂಂಜಾ ಬಂಧನಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆಯಾದರೂ ಸರ್ಕಾರ ಯೋಚಿಸಿಬೇಕಿದೆ.
ಆದರೆ, ಸರ್ಕಾರಕ್ಕೆ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದರ ಬಗ್ಗೆ ಆಸಕ್ತಿಯೇ ಇಲ್ಲ. ಅವರು ಯಾವ ಬಿಜೆಪಿ ನಾಯಕರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ನೋಡಿದರೆ ಅವರ ಸಾಧನೆ ಶೂನ್ಯ. ಮನಸ್ಸು ಮಾಡಿದ್ದರೆ ಪೋಕ್ಸೋ ಕೇಸು ದಾಖಲಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಸರ್ಕಾರ ಬಂಧಿಸಬೇಕಿತ್ತು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಮತ್ತು ಜೆಡಿಎಸ್‌ನ ಒಬ್ಬೊಬ್ಬರೂ ಅದೆಷ್ಟು ಕೀಳಾಗಿ ಟೀಕೆ ಮಾಡಿದ್ದರು! ಸಿಎಂ ಅವರನ್ನು ʼಸೈಟ್ ಕಳ್ಳʼ ಎಂದು ಪೋಸ್ಟರ್ ಮಾಡಿ ಹಂಚಿದ್ರು. ಪತ್ನಿ ಪಾರ್ವತಿ ಅವರನ್ನೂ ಅವಮಾನಿಸಿದ್ರು. ಆಗಲೂ ವಿಪಕ್ಷಗಳಿಗೆ ಅವರದ್ದೇ ಪ್ರಕರಣಗಳಲ್ಲಿ ಪಾಠ ಕಲಿಸಬೇಕು ಎಂಬ ರೋಷ ಕಾಂಗ್ರೆಸ್ ಸರ್ಕಾರಕ್ಕೆ ಬರಲೇ ಇಲ್ಲ.
ಸೋಮವಾರ ವಿಧಾನಸಭೆಯಲ್ಲಿ ತಿಮರೋಡಿ ಅವರ ಹೇಳಿಕೆಯ ಬಗ್ಗೆ ಚರ್ಚೆ ನಡೆದು ಇಡೀ ಸದನ ಅಪಹಾಸ್ಯಕ್ಕೀಡಾದಾಗ, 2023ರಲ್ಲಿ ಕಾಂಗ್ರೆಸ್‌ನವರಿಗೆ ಹರೀಶ್ ಪೂಂಜಾ ವಿರುದ್ಧ ದೂರು ಬರೆದುಕೊಟ್ಟಿದ್ದ ಮಂಗಳೂರಿನ ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳಿಪ್ಪಾಡಿ ಅವರು ಫೇಸ್‌ಬುಕ್‌ನಲ್ಲಿ ಒಂದು ಬರಹ ಹಾಕಿದ್ದಾರೆ. “ಅದು ಕಳೆದ ವಿಧಾನ ಸಭಾ ಚುನಾವಣಾ ಸಮಯ. ಹರೀಶ್ ಪೂಂಜಾ ಅವರು ಬಹಿರಂಗ ಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘರ್ಜಿಸುತ್ತಾ ತನ್ನ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರಿಗೆ ಸತ್ಯಜಿತ್ ಸುರತ್ಕಲ್ ಅವರು ಬೆಂಬಲಿಸಿದ್ದನ್ನು ವಿರೋಧಿಸುತ್ತಾ ನೀಡಿದ್ದ ಹೇಳಿಕೆಯ ವಿಚಾರವಾಗಿ ನಾನು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಗೆ ತಿಳಿಸಿ ಒಂದು ದೂರನ್ನು ಬರೆದು ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ.
ಈ ರೀತಿಯ ಕೋಮು ಪ್ರಚೋದಕ ಹೇಳಿಕೆ ನೀಡಿದ್ದ ಹರೀಶ್ ಪೂಂಜಾ ವಿರುದ್ಧ ಕ್ರಿಮಿನಲ್ ಕೇಸ್ ಅಲ್ಲದೆ, ಮುಂದುವರಿದ ಕಾನೂನು ಕ್ರಮವಾಗಿ ಮಾನಹಾನಿ ದೂರನ್ನೂ ದಾಖಲು ಮಾಡಲು ನಾನು ಸಿದ್ಧತೆ ನಡೆಸಿದ್ದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ರವರಲ್ಲಿ ಇದು ಒಂದು ಪಕ್ಷಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಸಿದ್ದರಾಮಯ್ಯರವರಲ್ಲಿ ಅಭಿಪ್ರಾಯ ಕೇಳುವಂತೆ ತಿಳಿಸಿದ್ದೆ . ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಅವರಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸ್ ವಿಚಾರವಾಗಿ ಪ್ರಸ್ತಾಪಿಸಿದಾಗ, “ಹರೀಶ್ ಪೂಂಜಾನ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅದು ರಾಜಕೀಯವಾಗಿ ಹೇಳಿರುವ ಮಾತು. ಅದಕ್ಕೆಲ್ಲಾ ಕೇಸ್ ಹಾಕಿ ಅವರಿಗೆ ತೊಂದರೆ ಕೊಡಲು ಹೋಗಬೇಡಿ. ಅದನ್ನೆಲ್ಲಾ ಮರೆತು ಬಿಡಿ”- ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಪ್ರಕರಣ 2: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ
ಮೇ 18, 2024 ರಂದು, ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತನಾದ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯ ಬಿಡುಗಡೆಗೆ ಒತ್ತಾಯಿಸಿ ಹರೀಶ್ ಪೂಂಜಾ ನೂರಾರು ಜನರನ್ನು ಕಟ್ಟಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ಈ ವೇಳೆ ಅವರು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ಎರಡು ಎಫ್‌ಐಆರ್‌ಗಳು ದಾಖಲಾದವು. ಮೊದಲ ಎಫ್‌ಐಆರ್ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ) ಮತ್ತು 504 (ಶಾಂತಿಭಂಗಕ್ಕೆ ಉದ್ದೇಶಪೂರ್ವಕವಾಗಿ ನಿಂದನೆ) ಅಡಿಯಲ್ಲಿ, ಎರಡನೇ ಎಫ್‌ಐಆರ್ ಐಪಿಸಿ ಸೆಕ್ಷನ್‌ಗಳು 143, 147, 341, 504, 506, ಮತ್ತು 149ರ ಅಡಿಯಲ್ಲಿ, ಅನುಮತಿಯಿಲ್ಲದೆ ಪ್ರತಿಭಟನೆ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ.

ಶಾಸಕರ ಬಂಧನವಾಗುವುದನ್ನು ತಡೆಯಲು ಮೇ 22, 2024 ರಂದು, ಬಿಜೆಪಿ ಬೆಂಬಲಿಗರ ಗುಂಪು ಅವರ ಮನೆಯಲ್ಲಿ ಜಮಾಯಿಸುತ್ತದೆ. ಪೊಲೀಸರು ನೋಟಿಸ್ ಕೊಟ್ಟು ಹೋಗಿದ್ದರು. ನಂತರ, ರಾತ್ರಿ ಠಾಣೆಗೆ ಹಾಜರಾಗಿ ಅದೇ ರಾತ್ರಿ ಠಾಣೆ ಜಾಮೀನಿನ ಮೇಲೆ ಬಿಡುಗಡೆಯಾದರು. ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಶಾಸಕರು ಪೊಲೀಸ್ ಠಾಣೆಯಲ್ಲಿ ಹಸ್ತಕ್ಷೇಪ ಮಾಡುವ ಕಾನೂನುಬದ್ಧತೆಯನ್ನು ಅದು ಪ್ರಶ್ನಿಸಿತ್ತು.
“ಭಯೋತ್ಪಾದಕನನ್ನು ಬಂಧಿಸಿದರೆ ಆತನ ಪುತ್ರ ಕರೆದ ಎಂದು ಅವರ ಬೆಂಬಲಕ್ಕೆ ಠಾಣೆಗೆ ಹೋಗುತ್ತೀರಾ?” ಎಂದು ಹರೀಶ್ ಪೂಂಜಾ ಅವರನ್ನು ಕರ್ನಾಟಕ ಹೈಕೋರ್ಟ್ ಖಾರವಾಗಿ ಪ್ರಶ್ನಿಸಿತ್ತು. ಪೂಂಜಾ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪಕ್ಷದ ಕಾರ್ಯಕರ್ತ ಶಶಿರಾಜ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸದೇ ಬೆಳ್ತಂಗಡಿ ಪೊಲೀಸರು ಕರೆದೊಯ್ದಿದ್ದರು. ಶಶಿರಾಜ್ ಪತ್ನಿಯ ಕೋರಿಕೆ ಮೇರೆಗೆ ಮೇ 19ರ ರಾತ್ರಿ ಪೂಂಜಾ ಪೊಲೀಸ್ ಠಾಣೆಗೆ ಹೋಗಿದ್ದರು. ಯಾವ ಆಧಾರದ ಮೇಲೆ ಶಶಿರಾಜ್ ಅವರನ್ನು ಬಂಧಿಸಿದ್ದೀರಿ? ಎಫ್‌ಐಆರ್ ಹಾಕಿದ್ದೀರಾ? ಎಂದು ಕೇಳಿದ್ದರು. ಈ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೂಂಜಾ ಏರುಧ್ವನಿಯಲ್ಲಿ ಮಾತನಾಡಿರಬಹುದು. ಶಶಿರಾಜ್ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಆರೋಪ ಇದ್ದು, ಅವರ ಮೇಲೆ ಪರವಾನಗಿ ಪಡೆಯದ ಆರೋಪದ ಮೇಲೆ ಸ್ಫೋಟಕ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅಂದು 11 ಗಂಟೆ ರಾತ್ರಿಯಲ್ಲಿ ಪೂಂಜಾ ವಿರುದ್ಧ ಐಪಿಸಿ ಸೆಕ್ಷನ್ 353 ಮತ್ತು 504 ಅಡಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕಾಗಿ ಪೊಲೀಸ್ ಠಾಣೆ ನಿಮ್ಮ ಜಹಾಗೀರಾ ಎಂದು ಪೂಂಜಾ ಕೇಳಿದ್ದಾರೆ” ಎಂದು ವಕೀಲರು ವಾದಿಸಿದ್ದರು.
ಆಗ ಪೀಠವು “ಶಾಸಕ, ಸಚಿವರು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಹೇಗೆ ಕೆಲಸ ಮಾಡಬೇಕು? ಎಫ್‌ಐಆರ್ ಆದ ತಕ್ಷಣ ಶಾಸಕರು ಠಾಣೆಯಲ್ಲಿ ಹೋಗಿ ಕುಳಿತರೆ ಪೊಲೀಸ್ ಅಧಿಕಾರಿ ಹೇಗೆ ಕೆಲಸ ಮಾಡಬೇಕು? ಇಂಥ ಸಂದರ್ಭದಲ್ಲಿ ಶಾಸಕರು ಪೊಲೀಸ್ ಠಾಣೆಗೆ ಹೋಗಬಹುದು ಎಂಬ ಸಂಬಂಧದ ಒಂದೇ ಒಂದು ಐತಿಹ್ಯ ಹೊಂದಿರುವ ತೀರ್ಪು ತೋರಿಸಿ” ಎಂದು ಆಕ್ಷೇಪಿಸಿತ್ತು. ಪೊಲೀಸರ ನಿಂದನೆ ಪ್ರಕರಣವನ್ನು ಪುತ್ತೂರು ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ತನಿಖೆ ನಡೆಸಿ, ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯಾಲಯ ಪರಿಗಣಿಸಿದೆ” ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪೀಠದ ಗಮನಕ್ಕೆ ತಂದಿದ್ದರು. ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು, ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಈ ನಡುವೆ, ಪೂಂಜಾ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಸಾವಧಾನದಿಂದ ಇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತ್ತು.
ಇದಾಗಿದ್ದು 2024 ಮೇ 21ಕ್ಕೆ. ಅದಾದ ನಂತರ ಕೇಸಿನ ಕತೆ ಏನಾಯ್ತು? ಒಂದು ವರ್ಷ ಮೂರು ತಿಂಗಳಾಗಿದೆ.
ಪ್ರಕರಣ 3: ಮೇ 3, 2025 ರಂದು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ತೆಕ್ಕಾರಿನ ಕಂತ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ. ದಿನ ಬೆಳಗಾದರೆ ಡೀಸೆಲ್ ಕದಿಯುತ್ತಾರೆ. ತೆಕ್ಕಾರು ಗ್ರಾಮದಲ್ಲಿ ಹಿಂದೂಗಳದ್ದು 150 ಮನೆಗಳು, 1200 ಕುಟುಂಬಗಳಿರುವುದು ಮುಸ್ಲಿಮರದ್ದು. ಇನ್ನು ಒಂದು ಹತ್ತು ವರ್ಷ ಕಳೆದರೆ 1200 ಇರುವ ಮುಸ್ಲಿಮರ ಸಂಖ್ಯೆ 600ಕ್ಕೆ ಇಳಿಯುವುದಿಲ್ಲ. ಇನ್ನು ಹತ್ತು ವರ್ಷ ಕಳೆದರೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5000 ದಿಂದ 10000 ಆಗುತ್ತದೆ. ದೇವಸ್ಥಾನದವರು ಮುಸ್ಲಿಮರಿಗೆ ಯಾಕೆ ದೇವಸ್ಥಾನದ ಕಾರ್ಯಕ್ರಮಗಳಿಗೆ ಆಮಂತ್ರಣ ಕೊಡುತ್ತೀರಿ?” ಎಂದು ದ್ವೇಷ ಭಾಷಣ ಮಾಡಿದ್ದರು. ವಾಸ್ತವದಲ್ಲಿ ಆತ ನಿಂತು ಮಾತನಾಡಿದ ವೇದಿಕೆಯೇ ಮುಸ್ಲಿಮರ ಜಮೀನಿನಲ್ಲಿತ್ತು. ವಾರದ ಕಾರ್ಯಕ್ರಮಕ್ಕೆ ನೀರು ಪೂರೈಸಿದವರು ಪಕ್ಕದ ಮುಸ್ಲಿಂ ಕುಟುಂಬ. ಬಹಳ ವರ್ಷಗಳಿಂದ ಅಲ್ಲಿನ ಮುಸ್ಲಿಮರು ದೇವಸ್ಥಾನದ ಉತ್ಸವಗಳಲ್ಲಿ ಭಾಗಿಯಾಗುತ್ತಿದ್ದರು. ಅದು ಸೌಹಾರ್ದದ ನೆಲ. ಅದನ್ನು ಹಾಳುಗೆಡವಿದ ಕಿಡಿಗೇಡಿ ಶಾಸಕನಿಗೆ ದೇವಸ್ಥಾನದ ಆಡಳಿತ ಮಂಡಳಿ, ನಾಗರಿಕರು ಸೇರಿ ಉಗಿದಿದ್ದರು. ಆದರೆ, ಸರ್ಕಾರ ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ. ಕೋರ್ಟ್‌ಗಳು ಅದು ಎಂಥಾ ಅಪರಾಧವಾದರೂ ತಡೆ ಕೊಡುತ್ತಿದೆ.
ಮುಸ್ಲಿಮರ ವಿರುದ್ಧ ಭಾವನೆ ಕೆರಳಿಸುವ ಭಾಷಣ ಮಾಡಿದ ಆರೋಪದ ಮೇಲೆ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಎಂ.ಎಸ್. ಇಬ್ರಾಹಿಂ ಮುಸ್ಲಿಯಾರ್ ದೂರು ದಾಖಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 196 ಮತ್ತು 353(2) ರ ಅಡಿಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕರ್ನಾಟಕ ಹೈಕೋರ್ಟ್ ಮೇ 22, 2025 ರಂದು ಈ ಪ್ರಕರಣದ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿದೆ.
ಹಿನ್ನೆಲೆ : 2025 ಮೇ 1ರಂದು ಮಂಗಳೂರಿನ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ಮತ್ತೊಂದು ರೌಡಿ ಗ್ಯಾಂಗ್ ಕೊಲೆ ಮಾಡಿತ್ತು. ಸುಹಾಸ್ ಶೆಟ್ಟಿಯ ಕೊಲೆಗೂ ವಾರದ ಹಿಂದೆ ಪೆಹಲ್ಗಾಮ್ ಹತ್ಯಾಕಾಂಡದ ಪ್ರತೀಕಾರವಾಗಿ ಮಂಗಳೂರಿನ ಕುಡುಪುವಿನಲ್ಲಿ ಕೇರಳ ಮೂಲದ ಮುಸ್ಲಿಂ ಯುವಕ ಮೊಹಮ್ಮದ್ ಅಶ್ರಫ್ ಮೇಲೆ ಹಿಂದೂ ಗುಂಪು ಹಲ್ಲೆ ನಡೆಸಿ ಕೊಂದಿತ್ತು. ಈ ಪ್ರಕರಣದಲ್ಲಿ ಸುಮಾರು ಇಪ್ಪತ್ತು ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ಮುಸ್ಲಿಂ ಯುವಕನ ಕೊಲೆಗೆ ಪ್ರತೀಕಾರವಾಗಿ ಹಿಂದೂ ಯುವಕನ ಕೊಲೆ ನಡೆದಿಲ್ಲ. ಆದರೆ, ಬಿಜೆಪಿ ಹಾಗೆ ಬಿಂಬಿಸಿತ್ತು. ತಮ್ಮವರು ಮಾಡಿದ ಗುಂಪು ಹತ್ಯೆಯನ್ನು ಖಂಡಿಸದ ಬಿಜೆಪಿ ಶಾಸಕರು, ಹಿಂದುತ್ವ ಸಂಘಟನೆಯ ಮುಖಂಡರು ರೌಡಿ ಶೀಟರ್ ಸುಹಾಸನ ಮೇಲೆ ಮತ್ತೊಂದು ಗುಂಪು ದಾಳಿ ನಡೆಸಿ ಕೊಂದು ಹಾಕಿದಾಗ ಮುಸ್ಲಿಮರ ವಿರುದ್ಧ ದ್ವೇಷ ಕಾರಲು ಶುರು ಮಾಡಿದ್ದರು. ಆದರೆ ರೌಡಿ ಶೀಟರ್, ಎರಡೆರಡು ಕೊಲೆ ಆರೋಪಿ ಸುಹಾಸನನ್ನು ಮುಗಿಸಲು ಮತ್ತೊಂದು ರೌಡಿ ಗುಂಪು ಹೊಂಚು ಹಾಕಿತ್ತು. ಆ ತಂಡದಲ್ಲಿ 2022ರಲ್ಲಿ ಸುಳ್ಯದ ಪ್ರವೀಣ್ ನೆಟ್ಟಾರುವಿನ ಕೊಲೆಗೆ ಪ್ರತೀಕಾರವಾಗಿ ಕೊಲೆಯಾದ ಸುರತ್ಕಲ್‌ನ ಮೊಹಮ್ಮದ್ ಫಾಝಿಲ್‌ನ ಸಹೋದರನೂ ಇದ್ದ. ಇದು ಬಿಜೆಪಿಯವರಿಗೆ ಕಾಂಗ್ರೆಸ್ ಮೇಲೆ ಆರೋಪ ಮಾಡಲು ಮೂಲವಾಯ್ತು. ಫಾಝಿಲ್ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟ 25ಲಕ್ಷ ರೂ. ಪರಿಹಾರದ ಹಣದಲ್ಲಿ ಸುಪಾರಿ ಕೊಟ್ಟು ಸುಹಾಸನನ್ನು ಕೊಲೆ ಮಾಡಲಾಗಿದೆ ಎಂದು ನೇರವಾಗಿ ಸರ್ಕಾರದ ಮೇಲೆ ಪ್ರಹಾರ ನಡೆಸಿದ್ದರು.

ಬಿಜೆಪಿ ಮತ್ತು ಕೋಮುವಾದಿ ಹಿಂದುತ್ವದ ಕಾರ್ಯಕರ್ತರು ಸುಹಾಸನನ್ನು ಹುತಾತ್ಮನನ್ನಾಗಿ ಬಿಂಬಿಸಿದ್ದರು. ಸ್ವತಃ ಬಿಜೆಪಿ ಸರ್ಕಾರ, ಗೃಹಸಚಿವ ಆರ್ ಅಶೋಕ್ ಸುಹಾಸ್‌ಗೆ ರೌಡಿಶೀಟರ್ ಪಟ್ಟ ಕೊಟ್ಟಿತ್ತು. ಆದರೆ, ಹಿಂದೂ ಕಾರ್ಯಕರ್ತರ ಕೊಲೆ, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು, ಜಿಹಾದಿಗಳಿಗೆ ಭಯ ಇಲ್ಲ ಎಂಬ ತಮ್ಮ ಎಂದಿನ ಶೈಲಿಯ ಭಾಷಣ ಮಾಡಿ ಇನ್ನಷ್ಟು ಪ್ರಚೋದನೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ ಪೊಲೀಸರ ನಿರ್ಬಂಧದ ನಡುವೆಯೇ ಬಜ್ಪೆ ಚಲೋ ಮಾಡಿ ಪ್ರಚೋದನೆ ಮಾಡಿದ್ದರು. ಅದಾಗಿ ಎರಡೇ ದಿನದಲ್ಲಿ ಮೇ 27ರಂದು ಕೊಳತ್ತಮಜಲಿನ ಪಿಕಪ್ ಮಾಲಕ ರೆಹ್ಮಾನ್‌ನನ್ನು ಆತನ ಜೊತೆಗೆ ಕೆಲಸ ಮಾಡಿದ್ದ, ಪರಿಚಯದ ನೆರೆಯ ಯುವಕರು ನಿರ್ಮಾಣ ಹಂತದ ಮನೆಗೆ ಮರಳು ತರಲು ಹೇಳಿ, ಕಾದು ಕುಳಿತು ಕೊಚ್ಚಿ ಹಾಕಿದ್ದರು. ಆಗ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ ಎಂದು ಇದೇ ಬಿಜೆಪಿಯ ನಾಯಕರು ಸಮರ್ಥಿಸಿಕೊಂಡಿದ್ದರು. ಕೊಲೆಗಾರರು ಜೈಲಿನಲ್ಲಿದ್ದಾರೆ. ಅವರ ಕುಟುಂಬಗಳು ಹೇಗಿವೆ ಎಂದು ನೋಡುವವರಾರು?
ಕಾಂಗ್ರೆಸ್ ಉದಾಸೀನತೆಗೆ ಜನರ ಆಕ್ರೋಶ
ಕಳೆದ ಏಪ್ರಿಲ್ 1ರಂದು ಉಡುಪಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ, “ಸಿಎಂ ಸಿದ್ದರಾಮಯ್ಯ ಹಾಗೂ ಔರಂಗಜೇಬ್‌ಗೂ ಯಾವುದೇ ವ್ಯತ್ಯಾಸ ಇಲ್ಲ. ಬಹುಸಂಖ್ಯಾತ ಹಿಂದೂಗಳ ಹಣ ದೋಚಿ ಮುಸಲ್ಮಾನರಿಗೆ ಬೇಕಾಬಿಟ್ಟಿ ಯೋಜನೆ ನೀಡುತ್ತಿದ್ದಾರೆ. ಹಿಂದೂಗಳಿಂದ ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತಾರೆ. ಆ ಹಣವನ್ನು ಮುಸಲ್ಮಾನರಿಗೆ ಹಂಚಿಕೆ ಮಾಡುತ್ತಾರೆ. ಔರಂಗಜೇಬ್ ಜಿಝಿಯಾ ಎಂಬ ತೆರಿಗೆ ಮೂಲಕ ಹಣ ಸಂಗ್ರಹ ಮಾಡುತ್ತಿದ್ದ. ನಮ್ಮ ರಾಜ್ಯದಲ್ಲಿ ಔರಂಗಜೇಬನ ಆಡಳಿತ ಇದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ನಮ್ಮ ರಾಜ್ಯದ ಹಿಂದೂಗಳು ಏನು ಅನ್ಯಾಯ ಮಾಡಿದ್ದರು?” ಎಂದು ಕೋಮುದ್ವೇಷ ಭಾಷಣ ಮಾಡಿದ್ದರು. ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.
ಸಿ ಎಂ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು, ಕೇಸು ಮಾಡಬಾರದು. ಹಾಗಿದ್ರೆ ಬೇರೆ ಯಾವ ಕಾರಣಕ್ಕೆ ಟೀಕಿಸಿದ್ರೆ ಕ್ರಮ ಕೈಗೊಳ್ಳುತ್ತೀರಿ ಸ್ವಾಮಿ? ಅದನ್ನಾದರೂ ಮುಖ್ಯಮಂತ್ರಿಗಳು ಹೇಳಿಬಿಡಿಲಿ.
ಕಾಂಗ್ರೆಸ್‌ನ ಈ ಉದಾಸೀನತೆಯೇ ಸರ್ಕಾರವನ್ನು ಆಗಾಗ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಬಿಜೆಪಿಯರ ಮೇಲಿನ ಹತ್ತಾರು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಮಿತಿ ರಚಿಸಿಕೊಂಡು, ವರದಿ ತರಿಸಿಕೊಂಡು ಸರ್ಕಾರ ಏನೂ ಮಾಡುತ್ತಿಲ್ಲ ಎಂಬುದು ಕೋಮುವಾದಿ ಬಿಜೆಪಿ ವಿರುದ್ಧ, ಕಾಂಗ್ರೆಸ್ ಪರ ನಿಂತು ಚುನಾವಣೆಯ ಸಮಯದಲ್ಲಿ ನಿಸ್ವಾರ್ಥವಾಗಿ ಬೀದಿಗಿಳಿದು ಕೆಲಸ ಮಾಡಿದವರಿಗೆ ಬೇಸರ ತಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನ ಈ ಬಗ್ಗೆ ಪ್ರಶ್ನೆ ಮಾಡುತ್ತಿರುತ್ತಾರೆ.
ಯೂಟ್ಯೂಬ್‌ಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಸ್ವತಃ ಹರೀಶ್ ಪೂಂಜಾ ನಿನ್ನೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸುವುದು, ನಿಯಂತ್ರಣ ಹೇರುವುದು ಸುಲಭ. ಆದರೆ, ಕೋಮುವಾದಿ ರಾಜಕಾರಣಿಗಳ ಬಾಯಿಗೆ ಬೀಗ ಹಾಕುವವರು ಯಾರು?

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.