ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಅದರಲ್ಲೂ ಮಳೆಯಾಗದ ಜಿಲ್ಲೆಗಳಲ್ಲೂ ಈ ಬಾರಿ ಮಳೆಯಾರ್ಭಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಬುಧವಾರ (ಆಗಸ್ಟ್ 20)ದಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಈ ಹಿಂದೆ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ತಾಲೂಕುಗಳಿಗೆ ಸೋಮವಾರ ಮತ್ತು ಮಂಗಳವಾರವೂ ರಜೆ ಘೋಷಿಸಲಾಗಿತ್ತು. ಇದೀಗ ಬುಧವಾರವೂ ರಜೆ ಘೋಷಿಸಲಾಗಿದ್ದು, ಸತತ ಮೂರು ದಿನ ರಜೆ ನೀಡಿದಂತಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಆಗಸ್ಟ್ 20, 2025ರ ಬುಧವಾರದಂದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿವೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತೀವ್ರ ಮಳೆಯೊಂದಿಗೆ ಜೋರಾದ ಗಾಳಿಯ ಎಚ್ಚರಿಕೆಯನ್ನು ಘೋಷಿಸಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಈಗಾಗಲೇ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಪರಿಣಾಮ ಭೂಕುಸಿತ, ಪ್ರವಾಹ ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಕೆಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 20ರಂದೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.