ಶಿರಸಿ ನಗರದ ನಿಲೇಕಣಿ ಮೀನು ಮಾರುಕಟ್ಟೆಯ ವ್ಯಾಪಾರಿಗಳು 13 ತಿಂಗಳಿನಿಂದ ಬಾಡಿಗೆ ಪಾವತಿಸಿಲ್ಲ. ಅಂದಾಜು 15.98 ಲಕ್ಷ ಬಾಕಿ ಉಳಿದಿದೆ. ಈಗಾಗಲೇ ನೋಟಿಸ್ ನೀಡಲಾಗಿದ್ದು, ವಾರದ ಒಳಗೆ ಹಣವನ್ನು ಸಲ್ಲಿಸದಿದ್ದರೆ ಮಾರುಕಟ್ಟೆ ಸ್ಥಗಿತಗೊಳಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಲೇಕಣಿಯ ಮೀನು ಮಾರುಕಟ್ಟೆಗೆ ನಗರಸಭೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ. ಆದರೂ ಸಾರ್ವಜನಿಕರು ಹಾಗೂ ಮೀನು ಮಾರಾಟ ಮಹಿಳೆಯರು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಬೀದಿ ಬದಿಯಲ್ಲಿ ಮೀನು ಮಾರಾಟ ತಪ್ಪಿಸಲು ಹಿಂದಿನ ಶಾಸಕರು ಹಾಗೂ ನಗರಸಭೆಯ ಹಿಂದಿನ ಆಡಳಿತ ಮಂಡಳಿ ನಿಲೇಕಣಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸೌಲಭ್ಯ ಕಲ್ಪಿಸಿದ್ದರು ಎಂದು ತಿಳಿಸಿದ್ದಾರೆ.
ಹಿಂದಿನ ಸಾಲಿನ 2 ತಿಂಗಳು ಹಾಗೂ ಈ ಸಾಲಿನ 11 ತಿಂಗಳ ಬಾಡಿಗೆ ಬಾಕಿ ಉಳಿದಿದೆ. ಬಾಡಿಗೆ ಸಂಗ್ರಹಣೆಗೆ ಈಗಾಗಲೇ ಒಂದು ನೋಟಿಸ್ ನೀಡಿದ್ದೇವೆ. ಶೀಘ್ರದಲ್ಲೇ 2ನೇ ನೋಟಿಸ್ ನೀಡಲಾಗುತ್ತದೆ. ಬಾಡಿಗೆ ಪಾವತಿಸದಿದ್ದರೆ ಮಾರುಕಟ್ಟೆಯ ಶಟರ್ ಎಳೆಯಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.
ನಗರದ ಬಿಡಿಬೈಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಿಗೆ ಪೊಲೀಸ್ ಇಲಾಖೆಯಿಂದ ‘ಗಾರ್ಡ್ ಆಫ್ ಹಾನರ್’ ನೀಡುವ ಪದ್ಧತಿ ಇದೆ. ಆದರೆ ಈ ವರ್ಷ ಅದು ನಡೆಯಲಿಲ್ಲ. ಯಾಕೆ ಎಂಬುದು ಸ್ಪಷ್ಟವಾಗಬೇಕು. ಇಲ್ಲಿ ಹೆಸರು ಮುಖ್ಯವಲ್ಲ; ನಗರಸಭೆ ಅಧ್ಯಕ್ಷೆಯ ಸ್ಥಾನ ಮುಖ್ಯ. ಅಧ್ಯಕ್ಷೆ ಸ್ಥಾನಕ್ಕೆ ಅಗೌರವ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಸದ, ಶಾಸಕ, ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಶರ್ಮಿಳಾ ಮಾದನಗೇರಿ ತಿಳಿಸಿದರು.
ಇದನ್ನು ಓದಿದ್ದೀರಾ? ಆಧಾರರಹಿತ ಮತ್ತು ಸುಳ್ಳು : ಧರ್ಮಸ್ಥಳ ಬೆಳವಣಿಗೆ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸದಸ್ಯರು ಆನಂದ ಸಾಲೇರ, ಕುಮಾರ ಬೋರ್ಕರ, ಗೀತಾ ಶೆಟ್ಟಿ ಮತ್ತಿತರರು ಹಾಜರಿದ್ದರು.
