ಕೃಷ್ಣಾನದಿಯ ಒಳಹರಿವು ಹೆಚ್ಚಾಗಿರುವ ಕಾರಣ ಆಲಮಟ್ಟಿ ಜಲಾಶಯದ ಹೊರಹರಿವನ್ನು 1.75 ಲಕ್ಷ ಕ್ಯೂಸೆಕ್‌ನಿಂದ 2 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಭಾರಿ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನಿರೀಕ್ಷೆಯಿದ್ದು, ಮುಂಜಾಗ್ರತೆ ಕ್ರಮವಾಗಿ ಜಲಾಶಯದ ಹೊರಹರಿವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ಚಿದ್ದರಿಂದ ಒಳಹರಿವು ಹೆಚ್ಚುತ್ತಿದೆ. ಇದೇ ರೀತಿ ಮಳೆಯ ಅಬ್ಬರ ಮುಂದುವರೆದರೆ ಹೊರಹರಿವು ಮತ್ತಷ್ಟು ಹೆಚ್ಚಾಗಲಿದೆ.
ಮಹಾರಾಷ್ಟ್ರದ ನವಜಾದಲ್ಲಿ ಮಂಗಳವಾರ 31.6 ಸೆಂ.ಮೀ ದಾಖಲೆಯ ಮಳೆಯಾಗಿದೆ. ಘಟಪ್ರಭಾ ನದಿಯಿಂದಲೂ 50 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. 2.5 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಿಟ್ಟಾಗ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಗಳ ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಆಲಮಟ್ಟಿ ಜಲಾಶಯಕ್ಕೆ ಸಂಜೆ 6ಕ್ಕೆ 1,11,306 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 519.60 ಮೀ ಎತ್ತರದ ಜಲಾಶಯದಲ್ಲಿ 518.92 ಮೀ.ವರೆಗೆ ನೀರು ಇದೆ.
ಪ್ರವಾಹಕ್ಕೊಳಗಾಗಬಹುದಾದ ಕೃಷ್ಣಾ ತೀರದ ಗ್ರಾಮಗಳಲ್ಲಿ ನಿಡಗುಂದಿ ತಾಲೂಕು ಆಡಳಿತ ಆಲಮಟ್ಟಿ ಜಲಾಶಯದ ನೀರು ಬಿಟ್ಟ ಬಗ್ಗೆ ನದಿ ತೀರಕ್ಕೂ ಜನ, ಜಾನುವಾರುಗಳು ತೆರಳದಂತೆ ಡಂಗೂರ ಸಾರಿ ಸೂಚಿಸಲಾಗುತ್ತಿದೆ.
ಆಲಮಟ್ಟಿ ಜಲಾಶಯಕ್ಕೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದರೂ ಕೆಬಿಜೆಎನ್‌ಎಲ್ ಸಮರ್ಥವಾಗಿ ನಿರ್ವಹಣೆ ಮಾಡಿದ ಪರಿಣಾಮ ನದಿ ತೀರದಲ್ಲಿ ಇದುವರೆಗೆ ಯಾವುದೇ ಪ್ರವಾಹ ಸ್ಥಿತಿ ಉಂಟಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಕುಡಿಯುವ ನೀರಿನ ಬಾವಿ ಮುಚ್ಚಿಸಿದ ಸವರ್ಣೀಯರು
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾರೀ ಪ್ರದೇಶದಲ್ಲಿ ಸುರಿಯುವ ಪ್ರಮಾಣದ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪ ನದಿಗಳಿಗೆ ಅಬ್ಬರ ಉಂಟಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತದೆ. ಹೀಗೆ ಹರಿದು ಬರುವ ನೀರನ್ನು ನದಿ ಮುಂಭಾಗಕ್ಕೆ ಬಿಟ್ಟಾಗ ತೀರದ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುವುದು ಪ್ರತಿ ವರ್ಷ ಕಂಡುಬರುತ್ತಿತ್ತು. ಕೆಲ ಬಾರಿ ಜನವಸತಿಗೂ ನೀರು ನುಗ್ಗಿರುವುದೂ ಇದೆ. ಕಳೆದ ವರ್ಷವೂ ಕೂಡ ನದಿ ತೀರದ ಕೆಲ ಜಮೀನುಗಳಿಗೆ ಹಾನಿಯಾಗಿತ್ತು. ಆದರೆ ಈ ಬಾರಿ ಈ ಪ್ರವಾಹ ಉಂಟಾಗದಂತೆ ಕೆಬಿಜೆಎನ್‌ಎಲ್ ಅಭಿಯಂತರರು ನೀರು ನಿರ್ವಹಣೆ ಮಾಡಿದ್ದರಿಂದ ಪ್ರವಾಹ ಸ್ಥಿತಿ ಎದುರಾಗಿಲ್ಲ.