ಶಿವಮೊಗ್ಗ, ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಸಾಗರ ರಸ್ತೆಯ ಪ್ರವಾಸಿ ಮಂದಿರದ ವೃತ್ತದ ಬಳಿ ಬುಧವಾರ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ವಿದ್ಯಾರ್ಥಿಗಳಾದ ಆದಿತ್ಯ (21) ಮತ್ತು ಸಂದೀಪ್ (21) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರು ದಾವಣಗೆರೆ ಜಿಲ್ಲೆ ಸುರಹೊನ್ನೆ ಹಾಗೂ ಉಡುಪಿ ಜಿಲ್ಲೆಯ ಮೂಲದವರಾಗಿದ್ದರು.
ಸಿಮ್ಸ್ ಮೆಡಿಕಲ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದರು ಎಂದು ಪೊಲೀಸರು ಮಾಹಿತಿಯಲ್ಲಿ ತಿಳಿದುಬಂದಿದೆ.
ಅಪಘಾತದ ಹಿನ್ನೆಲೆಯಲ್ಲಿ, ಯುವಕರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ರಸ್ತೆಯಲ್ಲೇ ತೀವ್ರ ಗಾಯಗಳಿಂದ ಕೊನೆಯುಸಿರೆಳೆದಿದ್ದಾರೆ.
ವಾಹನದಲ್ಲಿದ್ದ ಹಾಲಿನ ಪ್ಯಾಕೆಟ್ಗಳು ಒಡೆದು ರಸ್ತೆಯ ಮೇಲೆಲ್ಲಾ ಹರಿದಿರುವುದು ಅಪಘಾತದ ಭೀಕರತೆಯನ್ನು ತೋರಿಸುತ್ತಿತ್ತು.
ಯುವಕರು ಬೆಳಗಿನ ಜಾವ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಂಡು ವಾಪಸ್ ಹಾಸ್ಟೆಲ್ಗೆ ಬರುವಾಗ ಬಸ್ ನಿಲ್ದಾಣದ ಕಡೆಯಿಂದ ಹೊರಟಿದ್ದ ಹಾಲಿನ ವಾಹನ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಇದರಿಂದ ಬೈಕ್ ನಜ್ಜುಗುಜ್ಜಾಗಿದ್ದು ವಿದ್ಯಾರ್ಥಿಗಳಿಬ್ಬರು ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾರೆ.
ಘಟನೆ ಮಾಹಿತಿ ಸಂಬಂಧ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸದ್ಯ ಹಾಲಿನ ವಾಹನದ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.