- ಅನರ್ಹತೆ ರದ್ದಾದ ಬಳಿಕ ಸಂಸದನಾಗಿ ಮೊದಲ ಬಾರಿಗೆ ವಯನಾಡಿಗೆ ಭೇಟಿ ನೀಡಿದ ರಾಹುಲ್ ಗಾಂಧಿ
- ‘ಮಣಿಪುರವನ್ನು ಮತ್ತೆ ನಾವು ಒಂದಾಗಿಸಲಿದ್ದೇವೆ’ ಎಂದ ಕಾಂಗ್ರೆಸ್ ಮುಖಂಡ
’50 ಅಲ್ಲ, 100 ಬಾರಿ ನನ್ನನ್ನು ಅನರ್ಹಗೊಳಿಸಿದರೂ ವಯನಾಡಿನೊಂದಿಗಿನ ನನ್ನ ಸಂಬಂಧ ಕಡಿಯಲು ಸಾಧ್ಯವಿಲ್ಲ, ಅದು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ’ ಎಂದು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಹೇಳಿದರು.
ಸಂಸದ ಸ್ಥಾನದಿಂದ ಅನರ್ಹತೆ ರದ್ದಾದ ಬಳಿಕ ಮೊದಲ ಬಾರಿಗೆ ಸಂಸದನಾಗಿ ವಯನಾಡಿನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.
‘ನಾಲ್ಕು ತಿಂಗಳ ಬಳಿಕ ಇಂದು (ಶನಿವಾರ) ವಯನಾಡಿಗೆ ಬಂದು ನನ್ನ ಕುಟುಂಬವನ್ನು ಮತ್ತೆ ಸೇರಿದ್ದೇನೆ. ನನ್ನನ್ನು ನಿಮ್ಮಿಂದ ಎಷ್ಟು ದೂರ ಮಾಡಲು ಶ್ರಮಿಸುತ್ತಾರೋ, ಆಗ ಒಂದು ಕುಟುಂಬವಾಗಿ ನಾವು ಮತ್ತಷ್ಟು ಶಕ್ತಿಶಾಲಿಯಾಗುತ್ತೇವೆ ಎಂಬುದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ತಿಳಿದುಕೊಳ್ಳಬೇಕು. ನನ್ನನ್ನು ಕುಗ್ಗಿಸಲು ಶ್ರಮಿಸಿದ ವೇಳೆ ನೀವು ತೋರಿದ, ಪ್ರೀತಿ ಗೌರವಾದರಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದರು.
‘ಮಣಿಪುರದಲ್ಲಿ ಎಲ್ಲೆಂದರಲ್ಲಿ ಕೊಲೆ, ಅತ್ಯಾಚಾರ ಮತ್ತು ರಕ್ತವೇ ಕಾಣುತ್ತಿದೆ. 19 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಮನಕಲಕುವ ದೃಶ್ಯವನ್ನು ನಾನು ಎಲ್ಲೂ ನೋಡಿರಲಿಲ್ಲ. ಸಂಸತ್ತಿನಲ್ಲಿ ಪ್ರಧಾನಿ ಭಾಷಣ ನೋಡಿದೆ. ನಗುತ್ತಾ ತಮಾಷೆ ಮಾಡುತ್ತಾ ಎರಡೂವರೆ ಗಂಟೆಯಲ್ಲಿ ಬಹಳಷ್ಟು ಹೇಳಿದ್ದರು. ಆದರೆ ಎರಡೂವರೆ ನಿಮಿಷ ಮಾತ್ರ ಮಣಿಪುರದ ಬಗ್ಗೆ ಪ್ರಸ್ತಾಪಿಸಿದರು’ ಎಂದು ರಾಹುಲ್ ಗಾಂಧಿ ಹೇಳಿದರು.
‘ಭಾರತದ ಭಾಗವಾಗಿರುವ ಮಣಿಪುರ ಎಂಬ ಕುಟುಂಬವನ್ನು ನಾಶ ಮಾಡಲು ಬಿಜೆಪಿ ಪ್ರಯತ್ನಿಸಿದೆ. ಆದರೆ ನಾವು ಮಣಿಪುರದ ಜನರಿಗೆ ಪ್ರೀತಿಯನ್ನು ಮರಳಿ ತರುತ್ತೇವೆ. ಭಾರತ ಎಂದರೆ ಒಬ್ಬರನ್ನೊಬ್ಬರು ಕೊಲ್ಲುವ ದೇಶವಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಭಾರತದ ಕಲ್ಪನೆಯನ್ನು ಕೊಲ್ಲುವವರು ರಾಷ್ಟ್ರೀಯವಾದಿಗಳಲ್ಲ. ಮಣಿಪುರದಲ್ಲಿ ಕೇಂದ್ರ ಸರ್ಕಾರವು ಭಾರತದ ಪರಿಕಲ್ಪನೆಯನ್ನು ಕೊಂದಿದೆ. ಮೋದಿ ರಾಷ್ಟ್ರೀಯವಾದಿಯಲ್ಲ’ ಎಂದು ಪ್ರಧಾನಿಯ ನರೇಂದ್ರ ಮೋದಿಯವರ ವಿರುದ್ಧ ರಾಹುಲ್ ಕಿಡಿ ಕಾರಿದರು.
‘ಮಣಿಪುರ ಈಗ ಒಂದಾಗಿ ಉಳಿದಿಲ್ಲ. ಬಿಜೆಪಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಲು ಎರಡು ಭಾಗವನ್ನಾಗಿಸಿದೆ. ಮಣಿಪುರದ ಎಲ್ಲ ಜನರನ್ನು ನಾವು ಮತ್ತೆ ನಾವು ಒಂದಾಗಿಸಲಿದ್ದೇವೆ. ಹಿಂದಿನಂತೆ ಶಾಂತಿ ನೆಲೆಸಲು ಶಕ್ತಿ ಮೀರಿ ಕಾಂಗ್ರೆಸ್ ಪ್ರಯತ್ನಿಸಲಿದೆ. ಇದುವೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇರುವ ವ್ಯತ್ಯಾಸ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದರು.
‘ನಾನು ಮೊದಲು ವಯನಾಡಿಗೆ ಬಂದಾಗ ಇಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಇಲ್ಲಿನ ಎಲ್ಲ ಪಕ್ಷಗಳು ಜಾತಿ ಭೇದವಿಲ್ಲದೆ ಸಂಕಷ್ಟದಲ್ಲಿದ್ದ ಸಾವಿರಾರು ಜನರಿಗೆ ನೆರವು ನೀಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಅವರೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು’ ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಸುಮಾರು ಒಂಭತ್ತು ಕುಟುಂಬಗಳಿಗೆ ನಿರ್ಮಿಸಲಾಗಿದ್ದ ಹೊಸ ಮನೆಯ ಕೀಯನ್ನು ರಾಹುಲ್ ಗಾಂಧಿವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.