ಶಾಸಕ ಜನಾರ್ದನ ರೆಡ್ಡಿ ಆರೋಪ ಕೇವಲ ಉಹಾಪೋಹ. ಜನಾರ್ದನ ರೆಡ್ಡಿ ಕಟ್ಟು ಕತೆಗಳನ್ನು ಹೇಳುತ್ತಿದ್ದಾರೆ. ನಾನು ಯಾವುದೇ ರಾಜ್ಯಸರ್ಕಾರಕ್ಕೆ ಹೇಳಲು ಸಾಧ್ಯವೇ ಎಂದು ತಮಿಳುನಾಡಿನ ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಪ್ರಮುಖ ರೂವಾರಿ ಎಂಬ ಶಾಸಕ ಜನಾರ್ದನ ರೆಡ್ಡಿ ಆರೋಪಕ್ಕೆ ತಿರುಗೇಟು ನೀಡಿರುವ ಅವರು, “ರೆಡ್ಡಿ ಆರೋಪ ಕೇಳಿ ನಗು ಬರುತ್ತಿದೆ. ನನಗೆ ಇದರ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ. ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ 6 ವರ್ಷ ಆಗಿದೆ” ಎಂದರು.
“ಈಗ ನಾನು ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಅವರ (ರೆಡ್ಡಿ) ಬಂಧನ ಆಗಿತ್ತು. ನಾನು ಅವಾಗ ಮಾತ್ರ ರೆಡ್ಡಿಯವರನ್ನು ನೋಡಿದ್ದು” ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರು ನೀಡಿದ್ದ ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿದ್ದ ಜನಾರ್ದನ ರೆಡ್ಡಿ, ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದಿದ್ದರು.
