ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಆ.20ರಂದು ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಮೂರು ಪಟ್ಟಣ ಪಂಚಾಯತ್‌ನರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಲಭಿಸಿದ್ದು, 1ರಲ್ಲಿ ಬಿಜೆಪಿ ಮತ್ತು 1ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ ಲಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್, ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣ ಪಂಚಾಯತ್, ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯತ್, ಕೋಲಾರ ಜಿಲ್ಲೆಯ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತ್, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣ ಪಂಚಾಯತ್‌ಗಳಲ್ಲಿ ಕಳೆದ ಆಗಸ್ಟ್ 17ರಂದು ಮತದಾನ ಪ್ರಕ್ರಿಯೆ ನಡೆದಿತ್ತು. ಈ ಪೈಕಿ ಕಾಂಗ್ರೆಸ್ 3ರಲ್ಲಿ ಗೆದ್ದಿದ್ದರೆ, 2ರಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ ಜಯ ಲಭಿಸಿದೆ.
ಕಡಬ, ಕಾಳಗಿ ಹಾಗೂ ರಟ್ಟೀಹಳ್ಳಿ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿದರೆ, ವೇಮಗಲ್-ಕುರುಗಲ್ ಪಟ್ಟಣ ಪಂಚಾಯತ್‌ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೆಲುವು ಲಭಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣ ಪಂಚಾಯತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೇರಿದೆ.

ದಕ್ಷಿಣ ಕನ್ನಡ ಜಿಲ್ಲೆ: ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
ಕಡಬ ಪಟ್ಟಣ ಪಂಚಾಯತ್‌ನ 13 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಸ್ಥಾನದಲ್ಲಿ ವಿಜಯಶಾಲಿಯಾಗಿದ್ದು, ಅಧಿಕಾರದ ಗದ್ದುಗೆಗೆ ಏರಿದೆ. ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ, ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಕಲಬುರಗಿ ಜಿಲ್ಲೆ: ಕಾಳಗಿ ಪಟ್ಟಣ ಪಂಚಾಯತ್
ಕಾಳಗಿ ಪಟ್ಟಣ ಪಂಚಾಯತ್‌ನ ಒಟ್ಟು 11 ವಾರ್ಡ್‌ಗಳ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 6 ಅಭ್ಯರ್ಥಿಗಳು, ಬಿಜೆಪಿಯ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.
ತೀವ್ರ ಹಣಾಹಣಿ ಕಂಡಿದ್ದ ಈ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲಿಲ್ಲ, ಜತೆಗೆ ಬಿಜೆಪಿಯನ್ನೂ ಬೆಂಬಲಿಸಿರಲಿಲ್ಲ. ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ವಾರ್ಡ್ ನಂ. 5ರ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಕೇವಲ 2 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಎದುರು ಪರಾಭವಗೊಂಡಿದ್ದಾರೆ. ಒಂದು ವೇಳೆ ಇವರು ಗೆದ್ದಿದ್ದರೆ, ಕಾಂಗ್ರೆಸ್ ಏಳರಲ್ಲಿ ಜಯ ಗಳಿಸುತ್ತಿತ್ತು.
ರಟ್ಟೀಹಳ್ಳಿ ಪಟ್ಟಣ ಪಂಚಾಯತ್: ಪಕ್ಷೇತರರಿಗೆ ‘ಡಿಮ್ಯಾಂಡ್‘
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯತಿ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟು 15 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೂ ಕೂಡ 2 ವಾರ್ಡ್‌ನಲ್ಲಿ ಗೆದ್ದಿರುವ ಪಕ್ಷೇತರರಿಗೆ ಡಿಮ್ಯಾಂಡ್ ಆರಂಭವಾಗಿದೆ.

ಒಟ್ಟು 15 ಸ್ಥಾನಗಳ ಪೈಕಿ ಕಾಂಗ್ರೆಸ್ ಏಳರಲ್ಲಿ ಗೆದ್ದುಕೊಂಡಿದೆ. ಬಿಜೆಪಿ 6ಕ್ಕೆ ತೃಪ್ತಿಪಟ್ಟುಕೊಂಡಿದೆ. ಇಬ್ಬರು ಪಕ್ಷೇತರರು ಸದ್ಯ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷೇತರರಿಗೆ ಭಾರೀ ಬೇಡಿಕೆ ಶುರುವಾಗಿದೆ. ಪಕ್ಷೇತರರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.
ಚಿಕ್ಕಮಗಳೂರು: ಅಜ್ಜಂಪುರ ಪಟ್ಟಣ ಪಂಚಾಯಿತಿಯ ಬಿಜೆಪಿ ತೆಕ್ಕೆಗೆ
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣ ಪಂಚಾಯಿತಿಯ ಚುನಾವಣೆಯ 11 ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷದ 6 ಅಭ್ಯರ್ಥಿಗಳು ಬಹುಮತದಿಂದ ಗೆಲ್ಲುವ ಮೂಲಕ ಬಿಜೆಪಿ ಪಕ್ಷವು ಪಟ್ಟಣ ಪಂಚಾಯತಿಯಲ್ಲಿ ಅಧಿಕಾರಕ್ಕೆ ಬಂದಿದೆ. ಐದು ವಾರ್ಡ್‌ಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕರಾದ ಎಸ್.ಎಮ್.ನಾಗರಾಜ್ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ವೇಮಗಲ್ ಕುರುಗಲ್ ಪಟ್ಟಣ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ-ಜೆಡಿಎಸ್ ಮೈತ್ರಿ
ಕೋಲಾರ ಜಿಲ್ಲೆಯ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಆರು, ಬಿಜೆಪಿ 6, ಜೆಡಿಎಸ್ 4 ಹಾಗೂ ಪಕ್ಷೇತರ 1 ಸ್ಥಾನ ಪಡೆದಿದ್ದಾರೆ. ಆ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಗೆದ್ದು ಬೀಗಿದೆ.

ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಟ್ಟಿಗೆ ಚುನಾವಣೆ ನಡೆಸಿತ್ತು. ಆದರೆ ಕಾಂಗ್ರೆಸ್ ಪಕ್ಷ ವೇಮಗಲ್ ಕುರುಗಲ್ ಭಾಗದಲ್ಲಿ ಪ್ರಭಾವವಾಗಿದ್ದ ಮೈತ್ರಿ ವಿರುದ್ಧ ಬಿರುಸಿನ ಪ್ರಚಾರ ಮಾಡಿತ್ತು ಹಾಗೂ ಹಲವಾರು ಮೈತ್ರಿ ಮುಖಂಡರನ್ನು ಸಹ ಸೆಳೆದರು ಸಹ 17 ಸ್ಥಾನಗಳಲ್ಲಿ ಆರು ಸ್ಥಾನವನ್ನು ಪಡೆದಿದೆ.
