ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ರಸ್ತೆ, ಚರಂಡಿ ಹಾಗೂ ಸೇತುವೆಗೆ ಅಪಾರ ಪ್ರಮಾಣ ಹಾನಿಯಾಗಿದ್ದು, ಅದರ ದುರಸ್ತಿಗಾಗಿ ₹10 ಕೋಟಿ ಅನುದಾನ ನೀಡುವಂತೆ ಕಾಂಗ್ರೆಸ್ ಮುಖಂಡ ಭೀಮಸೇನರಾವ್ ಸಿಂಧೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂಗೆ ಮನವಿ ಪತ್ರ ಸಲ್ಲಿಸಿರುವ ಅವರು, ʼರಸ್ತೆ, ಚರಂಡಿ ಹಾಗೂ ಸೇತುವೆಗಳು ಹಾಳಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.ಪ್ರಮುಖ ರಸ್ತೆ, ಚರಂಡಿಗಳು ಹಾಗೂ ಸೇತುವೆಗಳು ಮುರಿದು ಹೋಗಿವೆ. ಕೆಲ ಕಡೆಗಳಲ್ಲಿ ಗ್ರಾಮಗಳ ಮಧ್ಯೆ ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿದ್ದು ಜನಸಾಮಾನ್ಯರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಶಾಲಾ ವಿದ್ಯಾರ್ಥಿಗಳ ಓಡಾಟ, ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ತುರ್ತು ಅವಶ್ಯಕತೆಗಳಿಗೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆʼ ಎಂದು ತಿಳಿಸಿದ್ದಾರೆ.
ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಕೆರೆಗಳು ಒಡೆದು ರೈತರ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದ್ದರಿಂದ ಕೂಡಲೇ ರೈತರಿಗೆ ಪರಿಹಾರ ನೀಡುವಂತೆ ಕೃಷಿ ಸಚಿವರಿಗೂ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬೀದರ್ | ವಾಹನ ಡಿಕ್ಕಿ : ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿ ಸಾವು
ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತಕ್ಷಣದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಬೇಕು. ಹಾನಿಗೊಳಗಾದ ಬೆಳೆಗಳಿಗೆ ಗರಿಷ್ಠ ಮೊತ್ತದ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.