ಕನ್ನಡ ಸಿನಿಮಾದ ನಿರ್ದೇಶಕ ಪ್ರೇಮ್ ಅವರು ಎಮ್ಮೆಗಳನ್ನು ಖರೀದಿಸಲು ಮುಂದಾಗಿ ಮೋಸಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಗುಜರಾತ್ ಮೂಲದ ವನರಾಜ್ ಭಾಯ್ ಎಂಬ ವ್ಯಕ್ತಿಯು ಎಮ್ಮೆಗಳನ್ನು ಕೊಡಿಸುವುದಾಗಿ 3.8 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಆರೋಪದ ಮೇಲೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮ್ ಅವರ ಸಹಾಯಕ ಮತ್ತು ನಟ ಚಂದ್ರು ಅವರು ದೂರು ಸಲ್ಲಿಸಿದ್ದಾರೆ.
ಪ್ರೇಮ್ ಅವರು ತಮ್ಮ ಕೃಷಿ ಉದ್ಯಮಕ್ಕಾಗಿ ಉತ್ತಮ ತಳಿಯ ಎರಡು ಎಮ್ಮೆಗಳನ್ನು ಖರೀದಿಸುವ ಉದ್ದೇಶದಿಂದ ವನರಾಜ್ ಭಾಯ್ ಅವರನ್ನು ಸಂಪರ್ಕಿಸಿದ್ದರು. ಮೊದಲು ಮುಂಗಡವಾಗಿ 20,000 ರೂಪಾಯಿ ಪಡೆದ ಆತ, ವಾಟ್ಸಾಪ್ ಮೂಲಕ ಎಮ್ಮೆಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಿ ನಂಬಿಕೆ ಗಳಿಸಿದ್ದ. ಇದನ್ನು ನಂಬಿ ಪ್ರೇಮ್ ಅವರು ಹಂತಹಂತವಾಗಿ ಆನ್‌ಲೈನ್ ಮೂಲಕ ಒಟ್ಟು 3.8 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರಿನಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮ
ಆದರೆ, ಹಣ ಸ್ವೀಕರಿಸಿದ ನಂತರ ವನರಾಜ್ ಭಾಯ್ ಎಮ್ಮೆಗಳನ್ನು ತಲುಪಿಸದೇ ನಾಪತ್ತೆಯಾಗಿದ್ದಾನೆ. “ಹತ್ತು ದಿನಗಳಲ್ಲಿ ಎಮ್ಮೆಗಳನ್ನು ನಿಮ್ಮ ಫಾರ್ಮ್‌ಗೆ ಕಳುಹಿಸುತ್ತೇನೆ” ಎಂದು ಹೇಳಿದ್ದ ಆತನ ಫೋನ್ ಈಗ ಸ್ವಿಚ್ ಆಫ್ ಆಗಿದ್ದು, ಮೋಸದ ಅರಿವಾಗಿ ಪ್ರೇಮ್ ಅವರು ಪೊಲೀಸರ ಬಳಿ ದೂರು ನೀಡಿದ್ದಾರೆ.
ಪ್ರೇಮ್ ಅವರು ತಮ್ಮ ತಾಯಿ ಭಾಗ್ಯಮ್ಮ ಅವರ ನೆನಪಿಗಾಗಿ ಮದ್ದೂರು ಸಮೀಪದ ಬೆಸಗರಹಳ್ಳಿಯಲ್ಲಿ ಹನ್ನೊಂದು ಎಕರೆ ಕೃಷಿ ಭೂಮಿ ಖರೀದಿಸಿ ‘ಅಮ್ಮನ ತೋಟ’ ಎಂದು ನಾಮಕರಣ ಮಾಡಿದ್ದಾರೆ. ಗುಜರಾತ್ ತಳಿಯ ಎಮ್ಮೆಗಳನ್ನು ತಂದು ಅದನ್ನು ಈ ತೋಟದಲ್ಲಿ ಸಾಕುವ ಕನಸು ಹೊಂದಿದ್ದರು. ಈಗಾಗಲೇ ಹಲವು ಸ್ಥಳೀಯ ತಳಿಯ ಹಸುಗಳನ್ನು ಸಂಗ್ರಹಿಸಿ ಪಾಲಿಸುತ್ತಿದ್ದ ಅವರು, ಇತ್ತೀಚೆಗೆ ಹರಿಯಾಣದ ಕಾಮಧೇನು ಸಂಸ್ಥೆಗೆ ಭೇಟಿ ನೀಡಿ ಸಹ್ಯಾದ್ರಿ ತಳಿಯ ಹಸುಗಳು ಮತ್ತು ‘ಭೈರವ’ ಎಂಬ ಹೋರಿಯನ್ನು ಖರೀದಿಸಿದ್ದರು.
