ಮಲೆನಾಡಿನ ಸೌಂದರ್ಯದ ಮಧ್ಯೆ ಮೇಗೂರು ಶಾಲೆ ಸ್ವಚ್ಛತೆ, ಅಭಿವೃದ್ಧಿಯಿಂದ ಕಂಗೊಳಿಸುತ್ತಿದ್ದು, ಎಲ್ಲ ಮಕ್ಕಳೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿಯೂ ಮೇಗೂರು ಶಾಲೆ ಮಾದರಿ ಶಾಲೆಯಾಗಿ ಮಾರ್ಪಟ್ಟಿರುವುದು ಶ್ಲಾಘನೀಯ. ಹಾಗೆಯೇ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳೂ ಕೂಡ ಮಾದರಿ ಶಾಲೆಗಳಾಗಬೇಕು.
ಮಲೆನಾಡಿನ ಹಚ್ಚ ಹಸಿರಿನ ಗಿರಿಗಳ ನಡುವೆ ಹಸಿರಿನಿಂದ ಕಂಗೊಳಿಸುತ್ತಿರುವ ಶೃಂಗೇರಿ ಕ್ಷೇತ್ರ. ಶೃಂಗೇರಿ ಕ್ಷೇತ್ರಕ್ಕೆ ಸೇರಿದ ಕೊಪ್ಪ ತಾಲೂಕಿನ ಸರ್ಕಾರಿ ವಾಲ್ಮೀಕಿ ಆಶ್ರಮ ಮೇಗೂರು ಶಾಲೆ ಮಾದರಿ ಶಾಲೆಯಾಗಿ ಮಾರ್ಪಟ್ಟಿದೆ.
ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಾಗಿ ಕಾಡಿನಲ್ಲಿ ಹಾಗೂ ಹಾಡಿಯಲ್ಲಿ ಬುಡಕಟ್ಟು, ಅಲೆಮಾರಿ ಸಮುದಾಯದವರು ವಾಸಿಸುತ್ತಾರೆ. ಸುಮಾರು 1990 ಸೆಪ್ಟೆಂಬರ್ 7ರಂದು ಮೇಗೂರಿನಲ್ಲಿ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯನ್ನು ಸ್ಥಾಪಿಸಲಾಯಿತು. ಮೊದಲು ಶಾಲೆ ಸ್ಥಾಪಿಸಿದಾಗ ಮೂರ್ತಿ ಜಿ ಕೆ ಎಂಬುವವರು ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶಾಲೆ ಆರಂಭವಾದಾಗ ಮಕ್ಕಳು ಕಲಿಯಲು ಬರುತ್ತಿರಲಿಲ್ಲ. ಇಲ್ಲಿನ ಬುಡಕಟ್ಟು ಜನಾಂಗದವರು ತುಂಬ ಹೆದರುತ್ತಿದ್ದರು. ಅವರಿಗೆ ವಿದ್ಯಾಭ್ಯಾಸ ಏನೂ ಎಂಬುದೇ ತಿಳಿದಿರಲಿಲ್ಲ. ನಂತರದ ದಿನಗಳಲ್ಲಿ ಶಿಕ್ಷಕ ಮೂರ್ತಿ ಜಿ ಕೆ ಎಂಬುವವರು ತಮ್ಮ ಮಕ್ಕಳನ್ನು ಓದಿಸಿ ಎಂದು ಜನರಿಗೆ ಮನವರಿಕೆ ಮಾಡಿ, ಹಾಡಿ ಹಾಗೂ ಕುಗ್ರಾಮಗಳಿಂದ ಮಕ್ಕಳನ್ನು ಓದಿಸಲು ಕರೆ ತಂದರು. ಶಾಲೆಯ ಕಲಿಕೆಗೆ ಹೆಚ್ಚಿನ ಮಕ್ಕಳು ಬಂದು ಸೇರುತ್ತಿದ್ದರು. ಶಾಲೆಯ ಮಕ್ಕಳ ಕಲಿಕೆ ಹಾಗೂ ಅಭಿವೃದ್ಧಿಗೆ ತುಂಬಾ ಶ್ರಮಿಸಿದ್ದಾರೆ.

ಅದೇ ರೀತಿಯಲ್ಲಿ 33 ವರ್ಷದಿಂದ ಶಾಲೆಯ ಅಭಿವೃದ್ಧಿಗೆ ಶ್ರಮಿಸಿರುವ ಪಾಟೀಲ್ ಹಾಗೂ ಸವಿತಾ ಮುಂತಾದವರು ಇಲ್ಲಿ ಸಹ ಶಿಕ್ಷಕರಾಗಿದ್ದರು. ಮಕ್ಕಳ ಕಲಿಕೆ ಏಳಿಗೆಗೆ ಮತ್ತು ಅಭಿವೃದ್ಧಿಗೆ ಅವರ ಶ್ರಮ ಅಪಾರವಾಗಿದೆ.
33 ವರ್ಷದಿಂದ ಇಲ್ಲಿ ಕಲಿತವರು ಅಪಾರ. ಇಲ್ಲಿ ಬುಡಕಟ್ಟು, ಆದಿವಾಸಿ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಕಲಿಕೆಯನ್ನು ಆರಂಭಿಸಿ ಉನ್ನತ ಮಟ್ಟದ ವ್ಯಾಸಂಗಕ್ಕೆ ತೆರಳಿ ಅಧಿಕಾರಿಗಳಾಗಿದ್ದಾರೆ. ಹಿಂದೆ ಇದ್ದ ಕಡು ಬಡತನದಲ್ಲಿಯೂ ಶಿಕ್ಷಕರು ಮಕ್ಕಳನ್ನು ಕರೆತಂದು ಅಕ್ಷರ ಅಭ್ಯಾಸ ಮಾಡಿಸಿ ಜೀವನಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ.
ಮೇಗೂರು ಶಾಲೆಯಲ್ಲಿ ಈಗ 150ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. 1ರಿಂದ 5ನೇ ತರಗತಿಯವರೆಗೂ ಶಿಕ್ಷಣ ಕಲಿಯಬಹುದು. ಐದನೇ ತರಗತಿಯ ಕೊಠಡಿಗಳೂ ಇವೆ. 2 ವಸತಿ ಗೃಹಗಳಿವೆ. ಶೌಚಾಲಯ, ಸ್ನಾನ ಮಾಡುವ ಕೋಣೆಗಳು ಬೇರೆ ಬೇರೆ ಇವೆ. ಶಾಲೆಯ ಪರಿಸರದ ಸುತ್ತಲೂ ಸ್ವಚ್ಛತೆಯಿಂದ ಕೂಡಿರುವ ವಾತಾವರಣದಲ್ಲಿ ಓದುವ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ.

ಪ್ರಸ್ತುತ ವರ್ಷದಲ್ಲಿ ಮೊರಾರ್ಜಿ ಪರೀಕ್ಷೆಗೆ 22 ಮಂದಿ ಮಕ್ಕಳ ಪೈಕಿ 21 ಜನ ಮಕ್ಕಳು ತೇರ್ಗಡೆಯಾಗಿದ್ದಾರೆ. ನವೋದಯ ಪರಿಕ್ಷೆಯಲ್ಲಿ ಇಬ್ಬರು ಆಯ್ಕೆಯಾಗಿದ್ದಾರೆ. ಸಾಂಸೃತಿಕ ಮನರಂಜನೆ, ಕ್ರೀಡೆಗಳಲ್ಲಿಯೂ ಹೆಚ್ಚಿನ ಮಕ್ಕಳು ಆಸಕ್ತಿ ತೋರಿಸುತ್ತಾರೆ. ಇಲ್ಲಿ ಓದುವ ಮಕ್ಕಳು ಬಡ ಕುಟುಂಬದವರು. ಕೆಲವು ಮಕ್ಕಳ ಪೋಷಕರು ಬದುಕು ಕಟ್ಟಿಕೊಳ್ಳಲು ನಿರಂತರ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಕೂಲಿ ಕೆಲಸಗಳನ್ನೇ ಆವಲಂಬಿಸಿ ಜೀವನ ನಡೆಸುತ್ತಿದ್ದಾರೆ.
ಈ ಶಾಲೆಗೆ ಚಿತ್ರದುರ್ಗ, ರಾಣಿಬೆನ್ನೂರು ಶಿವಮೊಗ್ಗ, ಚಿಕ್ಕಮಗಳೂರು, ಕಡಬಗೆರೆ, ಹರಿಹರ, ಬಾಳೆಹೊನ್ನೂರು, ಆಲ್ದೂರು ಸೇರಿದಂತೆ ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಂದ ಮಕ್ಕಳು ಓದಲು ಬಂದ್ದಿದ್ದಾರೆ.
ಮುಖ್ಯ ಶಿಕ್ಷಕ ಮಹೇಶ್ ಬಿ ಆರ್ ಮೂಲತಃ ಕೊಪ್ಪ ತಾಲೂಕಿನ ನಾರ್ವೆಯವರು. ಮೇಗೂರು ಶಾಲೆಗೆ ಬರುವ ಮೊದಲು ಬ್ರಹ್ಮಕೊಡು, ಸಂಕದಗಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 2016ರಲ್ಲಿ ಈ ಶಾಲೆಗೆ ಬಂದವರು ಈಗಲೂ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಬುಡಕಟ್ಟು, ಅಲೆಮಾರಿ, ಹಕ್ಕಿಪಿಕ್ಕಿ ಸಮುದಾಯ ಹಾಗೂ ಕಾಡಿನ ಹಾಡಿಯಲ್ಲಿ ವಾಸಿಸುವ ಮಕ್ಕಳು ಓದಲು ಬರುತ್ತಿದ್ದಾರೆ.

ಮುಖ್ಯ ಶಿಕ್ಷಕ ಮಹೇಶ್ ಬಿ ಆರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೊದಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ಸೇರಿ ಕಾರ್ಯ ನಿರ್ವಹಿಸಿದ್ದವು. ಆದರೆ ಕೆಲವು ವರ್ಷಗಳಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಗೆ ಸೇರಿದೆ. ಹಿಂದೆ ಶಿಕ್ಷಕರಾಗಿದ್ದವರು ಶಾಲೆಯ ಅಭಿವೃದ್ದಿ, ಮಕ್ಕಳನ್ನು ಕಲಿಕೆಯಲ್ಲಿ ಮುಂದೆ ತರಲು ಹಾಗೂ ಮಕ್ಕಳ ಸಂಖ್ಯೆ ಹೆಚ್ಚಿಸಲು ತುಂಬಾ ಶ್ರಮಿಸಿದ್ದಾರೆ” ಎಂದು ಹೇಳಿದರು.
“ಮಕ್ಕಳಿಗೆ ದೈನಂದಿನ ತಿಂಡಿ, ಊಟ ಹಾಗೂ ಸ್ನಾಕ್ಸ್ ಕೊಡುತ್ತಿದ್ದೇವೆ. ಕ್ರೀಡೆಯಲ್ಲಿ ಮಕ್ಕಳು ಜಿಲ್ಲಾ ಮಟ್ಟಕ್ಕೆ ಸಹ ಅಯ್ಕೆಯಾಗಿದ್ದಾರೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ತಿಳಿದು ಅದಕ್ಕೆ ಪೂರಕವಾಗಿ ಕಲಿಸುತ್ತೇವೆ.
5 ಮಂದಿ ಶಿಕ್ಷಕರು, 3 ಮಂದಿ ಅಡುಗೆ ಸಿಬ್ಬಂದಿ, ಪರಿಸರ ಸ್ವಚ್ಛವಿಡಲು ಹಾಗೂ ರಾತ್ರಿ ಕಾವಲುಗಾರನಾಗಿ ಒಬ್ಬರು ಇದ್ದಾರೆ. ಪೋಷಕರನ್ನು ಬಿಟ್ಟು ಬಂದಿರುವ ಮಕ್ಕಳನ್ನು ಎಲ್ಲ ಶಿಕ್ಷಕರು, ಅಡುಗೆ ಸಿಬ್ಬಂದಿ ಸೇರಿ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾ ಇದ್ದೇವೆ. ವ್ಯವಸ್ಥೆ, ಅಭಿವೃದ್ಧಿ ಹಾಗೂ ಮಾದರಿ ಶಾಲೆ ಆಗಲು ಶಾಲೆಗೆ ವಾರ್ಡನ್ ಆಗಿರುವ ರೇವಣ್ಣನವರು ಶ್ರಮಿಸಿದ್ದಾರೆ. ಅದೇ ರೀತಿಯಲ್ಲಿ ಅಧಿಕಾರಿಗಳೂ ಸಹಕರಿಸಿದ್ದಾರೆ” ಎಂದರು.

“ರಾಜ್ಯದಲ್ಲಿ ಸುಮಾರು 116 ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಗಳು ಇವೆ. 400 ರಿಂದ 500 ಶಿಕ್ಷಕರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ವೇತನ ಪಡೆಯುತ್ತ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅತಿಥಿ ಶಿಕ್ಷಕರಾಗಿ ಕೆಲಸ ಮಾಡಲು ಸ್ವಲ್ಪ ಕಷ್ಟವಾಗುತ್ತದೆ” ಎಂದು ಮಾಹಿತಿ ನೀಡಿದರು.
“ಪ್ರತಿ ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನರಲ್ ನಾಲೆಡ್ಜ್ ಹಾಗೂ ಪ್ರತಿದಿನ ಸಂಜೆ ಮೊರಾರ್ಜಿ ಮತ್ತು ನವೋದಯ ಪರೀಕ್ಷೆಗೆ ತರಬೇತಿ ತರಗತಿಗಳನ್ನು ಮಾಡುತ್ತೇವೆ. ಮಕ್ಕಳನ್ನು ಕಾಳಜಿ ಮಾಡುತ್ತಾ ಅವರೊಂದಿಗೆ ನಾವೂ ಕೂಡ ಮಕ್ಕಳಾಗಿ ಇರುತ್ತೇವೆ” ಎಂದು ಮತ್ತೊಬ್ಬ ಸಹ ಶಿಕ್ಷಕಿ ಪ್ರತಿಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಪ್ಯೂಟರ್ ತರಬೇತಿ, ಆಟ, ಪಾಠದ ಕಡೆ ಮಕ್ಕಳ ಆಸಕ್ತಿ ಹೆಚ್ಚಾಗಿದೆ. ನಾನು ಇಲ್ಲಿ ಬಂದು ಪಾಠ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ. ನಮಗೆ ಒಂದೊಳ್ಳೆ ಅವಕಾಶ ಸಿಕ್ಕಿದೆ” ಎಂದು ಹೊಸದಾಗಿ ಬಂದಿರುವ ಶಿಕ್ಷಕಿ ನವ್ಯಶ್ರೀ ಈ ದಿನ.ಕಾಮ್ ಜೊತೆ ಮಾತಾಡಿದರು.

ಅಡುಗೆ ಸಿಬ್ಬಂದಿ ರತ್ನ ಅವರು ಮೂಲತಃ ಹರಿಹರಪುರದವರು. 10 ವರ್ಷದಿಂದ ಮೇಗೂರು ಶಾಲೆಗೆ ಅಡುಗೆ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ರುಚಿ ರುಚಿಯಾದ ಊಟ ತಿನಿಸುಗಳನ್ನು ಮಾಡುತ್ತಾ ಮಕ್ಕಳ ಬೇಕು ಬೇಡಗಳನ್ನು ತಿಳಿದು ಅಡುಗೆ ತಯಾರಿಸುತ್ತಾರೆ. ಮಕ್ಕಳಲ್ಲಿ ಅರೋಗ್ಯ ಏರುಪೇರಾದಾಗ ಉದಾಹರಣೆಗೆ ಜ್ವರ ಬಂದರೆ ತಣ್ಣೀರು ಬಟ್ಟೆ ಇಡುವುದು, ಪೋಷಕರು ಬರುವ ಮೊದಲೇ ಚಿಕಿತ್ಸೆಗೆ ಕರೆದೊಯ್ಯುವುದು, ಹೆಣ್ಣು ಮಕ್ಕಳ ತಲೆಯಲ್ಲಿ ಹೇನು ಇದ್ದರೆ ತೆಗೆಯುವುದು. ಅಡುಗೆ ಮನೆ ಹಾಗೂ ಶಾಲೆಯ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸಿದ್ದಾರೆ.
ಹಳೇ ವಿದ್ಯಾರ್ಥಿ ಸರೋಜಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಿಂದೆ ಇದ್ದಿದ್ದಕ್ಕೂ, ಈಗ ಇರುವುದಕ್ಕೂ ತುಂಬಾ ಬದಲಾವಣೆ ಆಗಿದೆ. ಒಳ್ಳೆಯ ಪಾಠ ಪ್ರವಚನಗಳು ನಡೆಯುತ್ತವೆ. ಹಾಗೆಯೇ ಶುಚಿ ರುಚಿಯಾದ ಊಟ ಕೊಡುತ್ತಾರೆ. ಓದಲು ಮಕ್ಕಳಿಗೆ ಸಹಾಯ ಮಾಡುತ್ತಾರೆ. ನನ್ನ ಮಗನನ್ನೂ ಈ ಶಾಲೆಯಲ್ಲಿಯೇ ಓದಿಸುತ್ತಿದ್ದೇನೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಬೀದರ್ | ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಸೋರಿಕೆ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಆರೋಪ
ಮಲೆನಾಡಿನ ಮಧ್ಯೆ ಈ ಶಾಲೆ ಸ್ವಚತೆ, ಅಭಿವೃದ್ಧಿಯಿಂದ ಕಂಗೊಳಿಸುತ್ತದೆ. ಪರೀಕ್ಷೆಯಲ್ಲಿ ಎಲ್ಲ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಮೇಗೂರು ಶಾಲೆ ಮಾದರಿ ಶಾಲೆಯಾಗಿ ಮಾರ್ಪಟ್ಟಿರುವುದು ಶ್ಲಾಘನೀಯ.
“ಸರ್ಕಾರ ಗಮನ ಹರಿಸಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮತ್ತಷ್ಟು ಕೊಠಡಿಗಳನ್ನು ನಿರ್ಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರಲು ಅನುವು ಮಾಡಿಕೊಡಬೇಕು ಹಾಗೂ ಹಲವು ವರ್ಷಗಳಿಂದ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕೆಲಸವನ್ನು ಕಾಯಂ ಮಾಡಬೇಕು. ಬಡ ಮಕ್ಕಳ ಕಲಿಕೆಗೆ ಅವಕಾಶ ನೀಡಿ ಉನ್ನತವಾಗಿ ಓದಿ ಸಾಧನೆ ಮಾಡಿ, ದೊಡ್ಡ ವ್ಯಕ್ತಿಗಳಾಬೇಕೆಂಬ ಪೋಷಕರ ಆಸೆಗಳನ್ನು ಮಕ್ಕಳು ಈಡೇರಿಸಿ ಅವರ ಭವಿಷ್ಯ ಉಜ್ವಲವಾಗಿ ಬೆಳೆಯುವಂತೆ ಸಹಕರಿಸಬೇಕು” ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.