ಈ ದಿನ ಸಂಪಾದಕೀಯ | ತಬ್ಬಲಿ ಅಲೆಮಾರಿಗಳನ್ನು ‘ಶವಪೆಟ್ಟಿಗೆ’ಗೆ ಹಾಕಿದ ಕಾಂಗ್ರೆಸ್ ಸರ್ಕಾರ

Date:

Advertisements
ಅಲೆಮಾರಿಗಳ ಪಾಲನ್ನು ಅಲೆಮಾರಿಗಳಿಗೆ ಹಿಂತಿರುಗಿಸದೆ ಹೋದರೆ ಕರ್ನಾಟಕದ ಸಾಮಾಜಿಕ ನ್ಯಾಯ ಮಾದರಿಗೆ ಕೊನೆಯ ಮೊಳೆ ಹೊಡೆದಾಯಿತು ಎಂದೇ ನಾಡಿನ ಸಮಸ್ತ ಜನ ಭಾವಿಸಬೇಕಾಗುತ್ತದೆ. 

ಮಾದಿಗ ಸಮುದಾಯ ಮೂರು ದಶಕಗಳ ಕಾಲ ನಡೆಸಿದ ಐತಿಹಾಸಿಕ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಅಂತಿಮವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಿದ್ದು ಸ್ವಾಗತಾರ್ಹ. ಆದರೆ ಸುದೀರ್ಘ ಕಾಲ ಹೋರಾಡಿದವರು ಸಂಭ್ರಮಿಸಲಾಗದ ಇಕ್ಕಟ್ಟನ್ನು ಸರ್ಕಾರ ಸೃಷ್ಟಿಸಿಬಿಟ್ಟಿದೆ.

ಒಳಮೀಸಲಾತಿ ಜಾರಿಯಾಗುವುದು ಖಚಿತವಿತ್ತು. ದುರಾದೃಷ್ಟವಶಾತ್ ಅನ್ಯಾಯಯುತ ಮಾದರಿಯಲ್ಲಿ ಜಾರಿಯಾಗುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಇಂತಹ ನಿರ್ಣಯಕ್ಕೆ ಬರುವುದಿದ್ದರೆ ಪರಿಶಿಷ್ಟ ಸಮುದಾಯಗಳ ಮೀಸಲಾತಿ ವರ್ಗೀಕರಣಕ್ಕೆ ಜಸ್ಟಿಸ್ ಎಚ್‌.ಎನ್. ನಾಗಮೋಹನ ದಾಸ್ ಏಕಸದಸ್ಯ ಆಯೋಗವನ್ನು ರಚಿಸುವ ಅಗತ್ಯವೂ ಇರಲಿಲ್ಲ. ಆಯೋಗ ಕೊಟ್ಟ ಮಹತ್ವದ ಅಂಕಿ-ಅಂಶಗಳಿಗೆ, ಶಿಫಾರಸ್ಸುಗಳಿಗೆ ಸರ್ಕಾರ ಯಾವ ಕಿಮ್ಮತ್ತನ್ನೂ ಕೊಟ್ಟಿಲ್ಲ. ತಬ್ಬಲಿ ಅಲೆಮಾರಿಗಳ ನ್ಯಾಯಯುತ ಪಾಲನ್ನು ನಾಮಾವಶೇಷ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಟ್ಟಿದೆ.

ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಆಯೋಗವು ಪರಿಶಿಷ್ಟರ ಶೇ.17ರಷ್ಟು ಮೀಸಲಾತಿಯನ್ನು ಎ, ಬಿ, ಸಿ, ಡಿ, ಇ ಎಂದು ವರ್ಗೀಕರಣ ಮಾಡಿತ್ತು. ಪ್ರವರ್ಗ ‘ಎ’ಗೆ 59 ಅಲೆಮಾರಿಗಳನ್ನು ಸೇರಿಸಿ ಶೇ. 1, ಪ್ರವರ್ಗ ‘ಬಿ’ಗೆ ಮಾದಿಗ ಮತ್ತು ಮಾದಿಗ ಸಂಬಂಧಿತ ಸಮುದಾಯಗಳನ್ನು ಸೇರಿಸಿ ಶೇ. 6, ಪ್ರವರ್ಗ ‘ಸಿ’ಗೆ ಹೊಲೆಯ ಮತ್ತು ಹೊಲೆಯ ಸಂಬಂಧಿತ ಸಮುದಾಯಗಳನ್ನು ಸೇರಿಸಿ ಶೇ. 5, ಪ್ರವರ್ಗ ‘ಡಿ’ಗೆ ಸ್ಪೃಶ್ಯ ಸಮುದಾಯಗಳಾದ ಭೋವಿ, ಲಂಬಾಣಿ, ಕೊರಚ, ಕೊರಮಗಳನ್ನು ಸೇರಿಸಿ ಶೇ. 4, ಎಷ್ಟೇ ಕೋರಿದರೂ ಮೂಲ ಜಾತಿಯನ್ನು ಬರೆಸದೆ ಆದಿಕರ್ನಾಟಕ (ಎಕೆ), ಆದಿದ್ರಾವಿಡ (ಎಡಿ), ಆದಿ ಆಂಧ್ರ (ಎಎ) ಎಂದೇ ಬರೆಸಿರುವವರಿಗೆ ಶೇ. 1ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡುವಂತೆ ಶಿಫಾರಸ್ಸು ಮಾಡಿತ್ತು.

Advertisements

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ವರ್ಗೀಕರಿಸಬೇಕೆಂಬ ಸುಪ್ರೀಂಕೋರ್ಟ್‌ನ ಆದೇಶವನ್ನು ಗಮನದಲ್ಲಿರಿಸಿಕೊಂಡೇ ಆಯೋಗ ತನಗೆ ವಹಿಸಿದ ಕೆಲಸವನ್ನು ಮಾಡಿತ್ತು. ಆದರೆ ಹೊಲೆಯ ಸಂಬಂಧಿತ ಮೊಗೇರ, ಪರಯಾಗಳು ಸೇರಿದಂತೆ ಇನ್ನಿತರ ಸಮುದಾಯಗಳನ್ನು ಹಾಗೂ ಎಕೆ, ಎಡಿ, ಎಎ ಎಂದು ಬರೆಸಿದವರನ್ನು ಸಂಪೂರ್ಣವಾಗಿ ‘ಸಿ’ ಗುಂಪಿಗೆ ಸೇರಿಸಬೇಕೆಂಬ ಆಗ್ರಹ ಬಲಗೈ ಸಮುದಾಯಗಳಿಂದ ಬಂದಿತು. ಸ್ಪೃಶ್ಯ ಸಮುದಾಯಗಳು ತಮ್ಮ ಪಾಲು ಹೆಚ್ಚಿಸಿಕೊಳ್ಳುವ ಕಸರತ್ತನ್ನು ತೆರೆಮರೆಯಲ್ಲಿ ಮಾಡಿದವು. ಮತರಾಜಕಾರಣದ ಹಂಗಿಗೆ ಬಿದ್ದ ಸರ್ಕಾರ ಆಯೋಗ ಶಿಫಾರಸು ಮಾಡಿದ್ದ ಹಂಚಿಕೆಯ ಪ್ರಮಾಣವನ್ನು ಬದಲಾವಣೆ ಮಾಡಿ ಘೋಷಿಸಿದೆ. ಪರಯಾ, ಮೊಗೇರರನ್ನು ಹೊಲೆಯ ಸಂಬಂಧಿತ ಗುಂಪಿಗೂ; ಎಕೆ, ಎಡಿ, ಎಎಗಳನ್ನು ಎರಡು ಭಾಗ ಮಾಡಿ ಹೊಲೆಯ, ಮಾದಿಗ ಸಂಬಂಧಿತ ಗುಂಪುಗಳಿಗೂ ಹಂಚಿಕೆ ಮಾಡಿ ಇಬ್ಬರಿಗೂ ತಲಾ ಶೇ.6ರಷ್ಟು ಮೀಸಲಾತಿ ನೀಡಲಾಗಿದೆ. ಪ್ರವರ್ಗ ‘ಎ’ನಲ್ಲಿ ಎಡಗೈ ಗುಂಪನ್ನು, ಪ್ರವರ್ಗ ‘ಬಿ’ನಲ್ಲಿ ಬಲಗೈ ಗುಂಪನ್ನು, ಪ್ರವರ್ಗ ‘ಸಿ’ನಲ್ಲಿ ಸ್ಪೃಶ್ಯ ಮತ್ತು ಅಲೆಮಾರಿಗಳನ್ನು ಸೇರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ. ಜಸ್ಟಿಸ್ ದಾಸ್ ಅವರು ‘ಎ’ ವರ್ಗದಲ್ಲಿ ಗುರುತಿಸಿದ್ದ ಸಮುದಾಯಗಳನ್ನು ತಾಂತ್ರಿಕ ಕಾರಣಗಳಿಗಾಗಿ ‘ಡಿ’ನಲ್ಲಿ ಸೇರಿಸಲಾಗಿದ್ದ ಸ್ಪೃಶ್ಯರೊಂದಿಗೆ ಸೇರಿಸಲಾಗಿದೆ ಮತ್ತು ಈ ಗುಂಪನ್ನು ‘ಸಿ’ ಎಂದು ವರ್ಗೀಕರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಈ ಸಮುದಾಯಗಳ ಸ್ಥಿತಿಗಳನ್ನು ಅಧ್ಯಯನ ಮಾಡಿ ಕಾಲಕಾಲಕ್ಕೆ ವರದಿ ಸಲ್ಲಿಸಲು ಶಾಶ್ವತ ಪರಿಶಿಷ್ಟ ಸಮುದಾಯಗಳ ಆಯೋಗ ರಚಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಆದರೆ ಬಡಪಾಯಿ ಅಲೆಮಾರಿಗಳನ್ನು ಬಲಿಷ್ಠರ ಜೊತೆಯಲ್ಲಿ ಸೇರಿಸುವ ಮನಸ್ಸಾದರೂ ಈ ಸರ್ಕಾರಕ್ಕೆ ಹೇಗೆ ಬಂದಿತು ಎಂಬುದನ್ನು ಸಮಸ್ತ ಪರಿಶಿಷ್ಟ ಸಮುದಾಯಗಳೂ ಒಳಗೊಂಡಂತೆ ಹೃದಯವಂತರೆಲ್ಲರೂ ಪ್ರಶ್ನಿಸಲೇಬೇಕಾಗಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಸದಾಶಿವ ಆಯೋಗದ ವರದಿಯಿಂದ ಹಿಡಿದು, ಬಿಜೆಪಿ ಮಾಡಿದ ಮಾಧುಸ್ವಾಮಿ ಉಪಸಮಿತಿಯ ಅವೈಜ್ಞಾನಿಕ ವರದಿಯವರೆಗೂ ಅಲೆಮಾರಿಗಳನ್ನು ಪ್ರತ್ಯೇಕವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಔದಾರ್ಯವನ್ನು ಕಂಡಿದ್ದೆವು. ಜಸ್ಟಿಸ್ ದಾಸ್ ಅವರೂ ಅಲೆಮಾರಿಗಳಿಗೆ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಇದಕ್ಕೆ ಬೆಲೆಯನ್ನೇ ನೀಡಲಿಲ್ಲ. ಯಾರೂ ನಿರೀಕ್ಷೆ ಮಾಡಿರದಂತೆ ತೀರಾ ಅವೈಜ್ಞಾನಿಕವಾಗಿ ಸ್ಪೃಶ್ಯರೊಂದಿಗೆ ಅಲೆಮಾರಿಗಳನ್ನು ಸೇರಿಸುವುದೆಂದರೆ ಈ ಸಮುದಾಯಗಳನ್ನು ಜೀವಂತವಾಗಿ ಶವಪೆಟ್ಟಿಗೆಗೆ ಹಾಕಿದಂತೆಯೇ ಸರಿ.

ಎಡ- ಬಲ ಸಮುದಾಯಗಳಿಗೆ ತಲಾ ಶೇ.6 ಮೀಸಲಾತಿ ಕೊಟ್ಟಿದ್ದನ್ನು ಉಭಯ ಅಸ್ಪೃಶ್ಯ ಸಮುದಾಯಗಳು ಒಪ್ಪಬಹುದಾದರೂ ದಿಕ್ಕಿಲ್ಲದ ಜನರ ಪಾಲನ್ನು ಬರ್ಖಾಸ್ತು ಮಾಡುವುದು ಸಾಮಾಜಿಕ ನ್ಯಾಯಕ್ಕೆ ಎಸಗುವ ದ್ರೋಹ. ಹಿಂದುಳಿದ ವರ್ಗದಿಂದ ಬಂದ ಸಿದ್ದರಾಮಯ್ಯನವರಿಂದ ಅಲೆಮಾರಿಗಳು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಈ ಹಿಂದೆ ಅಲೆಮಾರಿಗಳಿಗಾಗಿ ವಿಶೇಷ ಕೋಶವನ್ನು ರಚಿಸಿದ್ದ ಸಿದ್ದರಾಮಯ್ಯನವರು ಆ ಉದ್ದೇಶಕ್ಕಾಗಿ ನೂರು ಕೋಟಿ ರೂ. ಮೀಸಲಿಟ್ಟಿದ್ದರು. ಅದನ್ನು ನೆನೆಯುವ ಅಲೆಮಾರಿಗಳು ಇಂದು ಕಣ್ಣೀರು ಹಾಕುತ್ತಿದ್ದಾರೆ. “ನಾವು ಸಿದ್ದರಾಮಯ್ಯನವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ನಮಗೆ ದಯಾಮರಣ ಕೊಡಿ” ಎಂದು ಅಂಗಲಾಚುತ್ತಿದ್ದಾರೆ. ಈ ಹೊತ್ತಿನಲ್ಲಿ ಬಾಬಾಸಾಹೇಬರ ಕುಡಿಗಳೆಂದು ಹೇಳಿಕೊಳ್ಳುವ ಎಲ್ಲ ಅಸ್ಪೃಶ್ಯ ಸಮುದಾಯಗಳು ತಮ್ಮದೇ ಸೋದರ ಸಂಬಂಧಿ ಅಲೆಮಾರಿಗಳ ಜೊತೆ ನಿಂತು ಅವರಿಗೆ ಪಾಲನ್ನು ದೊರಕಿಸಿಕೊಡುವುದು ಈ ಹೊತ್ತಿನ ತುರ್ತು. ಅಲೆಮಾರಿಗಳ ಅನ್ನದ ಬಟ್ಟಲನ್ನು ಕಿತ್ತು ತಮಗೆ ಕೊಡಬೇಡಿ ಎಂದು ಬಲಾಢ್ಯ ಸ್ಪೃಶ್ಯ ಸಮುದಾಯಗಳು ಹೃದಯ ವೈಶಾಲ್ಯತೆ ಮೆರೆಯಬೇಕು. ‘ನಮ್ಮನ್ನು ಬೇರ್ಪಡಿಸಿ ಎಂದು ಅಲೆಮಾರಿಗಳು ಆಗ್ರಹಿಸುತ್ತಿರುವುದನ್ನು ಸರ್ಕಾರ ಪರಿಗಣಿಸಬೇಕು’ ಎಂದು ಸ್ಪೃಶ್ಯ ಸಮುದಾಯಗಳೂ ಒತ್ತಾಯಿಸಬೇಕು. ಆದರೆ ಅಂತಹ ಯಾವುದೇ ಸೂಚನೆಗಳು ಈವರೆಗೆ ಕಾಣದಿರುವುದು ದುರಂತ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ಸುಪ್ರೀಂಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಸರ್ಕಾರ ಅಂಗೀಕರಿಸಿರುವ ಈ ವರ್ಗೀಕರಣ ಕೋರ್ಟ್‌ನಲ್ಲಿಯೂ ನಿಲ್ಲುವುದಿಲ್ಲ. ಆರ್ಥಿಕವಾಗಿ ಸಬಲರಲ್ಲದ ಸಮುದಾಯಗಳು ನ್ಯಾಯಾಂಗದಲ್ಲಿ ಗುದ್ದಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿರುವ ಸರ್ಕಾರಕ್ಕೆ ಆ ತಬ್ಬಲಿಗಳ ಕಣ್ಣೀರು ಅರ್ಥವಾಗಬೇಕಾಗಿದೆ. “ಸಿದ್ದರಾಮಯ್ಯನವರು ನಮ್ಮ ಪಾಲಿನ ಅಂಬೇಡ್ಕರ್ ಆಗುತ್ತಾರೆಂದು ಭಾವಿಸಿದ್ದೆವು. ಆದರೆ ಅದಾಗಲಿಲ್ಲ. ನಮ್ಮ ಮಕ್ಕಳ ಬದುಕು ಬೀದಿಪಾಲಾಯಿತು. 79 ವರ್ಷಗಳಿಂದಲೂ ಬೀದಿಯಲ್ಲಿ ಬಿದ್ದಿದ್ದ ನಮ್ಮನ್ನು ಸ್ಪೃಶ್ಯರ ಜೊತೆ ಸೇರಿಸುವುದಕ್ಕಿಂತ ಪರಿಶಿಷ್ಟರ ಪಟ್ಟಿಯಿಂದಲೇ ತೆಗೆದುಹಾಕಿ, ವಿಷಕೊಟ್ಟುಬಿಡಿ” ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿರುವ ಅಲೆಮಾರಿಗಳನ್ನು ಸರ್ಕಾರ ಎದೆಗಪ್ಪುವ ಹೃದಯವಂತಿಕೆಯನ್ನು ಪ್ರದರ್ಶಿಸಬೇಕು. ಇಲ್ಲವಾದರೆ ಕರ್ನಾಟಕದ ಸಾಮಾಜಿಕ ನ್ಯಾಯ ಮಾದರಿಗೆ ಕೊನೆಯ ಮೊಳೆ ಹೊಡೆದಾಯಿತು ಎಂದೇ ನಾಡಿನ ಸಮಸ್ತ ಜನ ಭಾವಿಸಬೇಕಾಗುತ್ತದೆ. ಈಗ ಪಾಲು ಪಡೆದಿರುವ ಮಾದಿಗ ಸಮುದಾಯ ಅಲೆಮಾರಿಗಳೊಂದಿಗೆ ಹೋರಾಟ ಮುಂದುವರಿಸುವ ಘೋಷಣೆಯನ್ನು ಮಾಡಿದೆ. ದಲಿತ ಚಳವಳಿಯ ಎಲ್ಲ ಜೀವಗಳು ಅಲೆಮಾರಿಗಳೊಂದಿಗೆ ನಿಲ್ಲುವ ಸೂಚನೆಗಳಷ್ಟೇ ಸದ್ಯದ ಭರವಸೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ

ನಿನ್ನೆ ದೆಹಲಿಯಲ್ಲಿ ನಡೆದ ರಾಹುಲ್‌ ಪತ್ರಿಕಾಗೋಷ್ಠಿಯ ನಂತರ ಮಹಾರಾಷ್ಟ್ರ ಯಾಕೆಂದರೆ ಅಲ್ಲಿ...

Download Eedina App Android / iOS

X