ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಎಲ್ಲವನ್ನೂ ಹೇಳಿಬಿಡಬೇಕೆಂದು ನಿರ್ಧರಿಸಿದ್ದೇನೆ. ನೆತ್ತಿಯಿಂದ ಸುಡುವ ಬೆಂಕಿ ಹೊತ್ತು ಶಾಂತಿ ತಂಪುಗಳಿಗೆ ಹಾತೊರೆಯುತ್ತ ಅಲೆದಾಡುವ ಶಾಪ ಬಡಿದವನ ಹಾಗೆ, ಈ ರೀತಿ ವ್ಯರ್ಥವಾಗಿ ಬಳಲುವ ನನ್ನನ್ನು ಗಾಸಿಗೊಳಿಸುತ್ತಿದ್ದುದಕ್ಕೇ ನೋಯಿಸುತ್ತಿದ್ದುದಕ್ಕೇ ಒಂದು ಆಕಾರ ಕೊಟ್ಟು ನೋಡಬೇಕು, ಮಾತಿನಲ್ಲಿ ಹಿಡಿಯಬೇಕು ಎಂದುಕೊಂಡು ಬರೆಯಲು ಕುಳಿತಿದ್ದೇನೆ. ಇದು ಸಾವಿನ ಭಯವೆ? ಹೊಸತಾಗಿ ಹುಟ್ಟುವಾಗಿನ ಆತಂಕದ ನೋವೆ? ಅರಿಯಬೇಕು. ಮಸಕುಮಸಕಾಗಿ, ಗಜಿಬಿಜಿಯಾಗಿ ತೊಡಕು ಬಿದ್ದ ಭಾವನೆಗಳ, ಅರ್ಥವಾಗದ ಭಯದ ನೆಲೆ ಹುಡುಕಬೇಕು ಎಂದು, ಹಿಂದೆ ಎಷ್ಟು ಸಲ ಸೋತರೂ ಮತ್ತೆ ಹೊಸತಾಗಿ ಹುಡುಕುವ ಕೆಲಸಕ್ಕೆ ತೊಡಗಿದ್ದೇನೆ. ಬಹಳ ದಿನಗಳಿಂದ ನಡೆಯುತ್ತ ಬಂದ ಈ ಹುಡುಕಾಟಕ್ಕೆ ಬೆನ್ನೆಲುಬಿನಂತಿದ್ದ ನನ್ನ ಗಟ್ಟಿಯಾದ- ನನಗೆ ನಾನೇ ಸ್ಪಷ್ಟಪಡಿಸಿಕೊಳ್ಳಬೇಕಾದ- ನಂಬಿಕೆಯೇನೆಂದರೆ, ನಾನು ಪಡುತ್ತಿದ್ದ ಚಿತ್ರಹಿಂಸೆಗೆ ಕಾರಣವಾದ ಈ ದುರಂತದಲ್ಲಿ ಐದು ಮುಖ್ಯ ಪಾತ್ರಗಳಿವೆ ಎನ್ನುವದು- ಎರಡು ಗಂಡು, ಒಂದು ಹೆಣ್ಣು, ಒಂದು ಬಾವಿ, ಒಂದು ಪತ್ರ. ಹಾಗೂ ಇವುಗಳ ಅನ್ಯೋನ್ಯ ಸಂಬಂಧದ ಖಚಿತವಾದ ಸ್ವರೂಪ ಏನೆಂದು ಸ್ಪಷ್ಟವಾಗಿ, ಸ್ಫುಟವಾಗಿ ತಿಳಿದಾಗಲೇ ನನಗೆ ಬಿಡುಗಡೆ ಎನ್ನುವುದು…

ನಾವು ಮುಂಬಯಿಯಲ್ಲಿ ಮನೆಮಾಡಿದ ಈ ಹದಿನೈದು ವರ್ಷಗಳಲ್ಲಿ ನಮ್ಮ ಮನೆಗೆ ಒಮ್ಮೆಯೂ ಬಂದಿರದ ಇಂದಿರಕ್ಕ ಹೋದ ಹತ್ತೇ ದಿನಗಳಲ್ಲಿ ಎರಡು ಬಾರಿ ಬಂದಿದ್ದಳು. ಎರಡನೆಯ ಸರತಿ ಬಂದಾಗಲಂತೂ ನಾನು ಕಂಡದ್ದನ್ನು, ಅನುಭವಿಸಿದ್ದನ್ನು ಇನ್ನೆಂದಿಗೂ ಮರೆಯಲಾರೆ ಎಂಬಂತೆ ಮಾಡಿದಳಲ್ಲದೇ ಬದುಕಿನ ಬಗ್ಗೆ, ಮನುಷ್ಯ ಸ್ವಭಾವದ ಬಗ್ಗೆ ನಾನು ಮಾಡಿಕೊಂಡ ಎಣಿಕೆಗಳನ್ನು, ಬೆಳೆಯಿಸಿಕೊಂಡ ವಿಚಾರಗಳನ್ನು ಬೇರುಸಹಿತ ಅಲ್ಲಾಡಿಸಿಬಿಟ್ಟಳು.

ಇದನ್ನು ಓದಿದ್ದೀರಾ?: ರಾಮಚಂದ್ರ ಶರ್ಮ ಅವರ ಕತೆ | ಮಾಗಿ

Advertisements

ಹೇಳದೇ ಕೇಳದೇ ಎನ್ನುವಂತೆ ಇಂದಿರಕ್ಕ ಇತ್ತ ಈ ಭೆಟ್ಟಿಗಳಲ್ಲಿ ತೆರೆದುಕೊಂಡದ್ದು ಬರೀ ಎರಡು ವ್ಯಕ್ತಿಗಳ ಮುಖಾಮುಖಿಯಾಗಿರದೆ ಎರಡು ಇತಿಹಾಸಗಳ, ಎರಡು ಪಾಪಪ್ರಜ್ಞೆಗಳ ಮುಖಾಮುಖಿಯಾಗಿತ್ತೇನೋ ಅನ್ನಿಸುತ್ತದೆ.

*

ಹೊತ್ತು ಮುಳುಗಲು ಬಂದಿತ್ತು. ಆಗ ಕೂಡ ಈಗಿನಂತೆಯೇ ಬಾಲ್ಕನಿಯಲ್ಲಿ ಇದೇ ವಿರಾಮ ಕುರ್ಚಿಯಲ್ಲಿ ಒರಗಿದ್ದೆ. ಇದಿರಿನ ರಸ್ತೆಯ ಅಂಚಿನಲ್ಲೇ ಅರಬ್ಬಿಸಮುದ್ರ. ಎದ್ದೆದ್ದು ಬಂದು ದಂಡೆಯಲ್ಲಿಯ ಕಪ್ಪು ಪಾಷಾಣದ ಬಂಡೆಗಳಿಗೆ ಅಪ್ಪಳಿಸುತ್ತ ನೊರೆ ಕಾರುವ ತೆರೆಗಳ ಎಡೆಬಿಡದ ಸದ್ದು. ದೂರ- ನೀರಿನ ಆ ಬದಿಯ ಅಂಚಿನಲ್ಲಿ ಸೂರ್ಯನ ಕೊನೆಯ ಕಿರಣಗಳಲ್ಲಿ ಹೊತ್ತಿ ನಿಂತ ಕೆಂಪಗಿನ ಆಕಾಶ. ಕತ್ತಲು ತುಂಬಿದ ಬಾವಿಯ ತಳಮುಟ್ಟಿದ ನೀರಿನಲ್ಲಿ ಮೂಡಿದ ಪ್ರತಿಬಿಂಬದಂತೆ ಮನಸ್ಸಿನ ಆಳದಲ್ಲಿ ಹೌದೋ ಅಲ್ಲವೋ ಎನ್ನುವಂತೆ ಕಾಣುತ್ತಿದ್ದ ಮಬ್ಬು ಕವಿದ ಹನೇಹಳ್ಳಿ, ಮುಂದಿನ ಕುರ್ಚಿಯಲ್ಲಿ ಆಗಿನಿಂದಲೂ ವಟವಟ ಮಾತಾಡಿ ಈಗಷ್ಟೇ ಒಮ್ಮಿಗೆಲೇ ಗಂಭೀರ ಮೌನ ತಳೆದು ಕುಳಿತುಬಿಟ್ಟ ಇಂದಿರಕ್ಕ ಮೂಡಿಸಿದ ಅನೇಕಾನೇಕ ನೆನಪುಗಳು ಅವಳ ಈಗಿನ ಮೌನದಲ್ಲೇ ತಿರುಗಿ ಜೀವ ಪಡೆಯಹತ್ತಿದ್ದವು: ಅವರ ನೆರೆ ಹಿತ್ತಲಲ್ಲೇ ಮನೆಮಾಡಿದ ಪರಮೇಶ್ವರಿಯ ಮೈದುನನಾದ ದುರ್ಗು ಅಟ್ಟಲಕಾಯಿ ಮರ ಹತ್ತಿ ಕಾಯಿ ಉದುರಿಸುತ್ತಿದ್ದಾಗ ಹೆಗ್ಗೆ ಮುರಿದುಬಿದ್ದು ಗೋಕರ್ಣದ ಆಸ್ಪತ್ರೆ ಸೇರಿದನಂತೆ. ಮೂರು ದಿನಗಳ ಮೇಲೆ ಸತ್ತವನು ಈಗ ದೆವ್ವವಾಗಿ ಊರಿನ ಜನರನ್ನು ಕಾಡುತ್ತಾನಂತೆ. ದುರ್ಗೂಗೆ ಮದುವೆಯಾಗಿರಲಿಲ್ಲ. ಬೆಳ್ಳಗೆ ಸಪೂರವಾಗಿ ಚೆಂದನಾಗಿದ್ದ. ಪರಮೇಶ್ವರಿಗೂ ಇವನಿಗೂ ಇದ್ದ ಸಂಬಂಧದ ಬಗ್ಗೆ ಏನೇನೋ ಕತೆಗಳು. ಪರಮೇಶ್ವರಿಯ ಮಕ್ಕಳಾದ ದೇವಿ, ಮ್ಹಂಕಾಳಿಯರು ಕೂಡ ದುರ್ಗೂಗೇ ಹುಟ್ಟಿದುವೇನೋ ಎಂಬ ಗುಮಾನಿಗೆ ಬಹುಶಃ ಅವುಗಳ ಬಣ್ಣ ಕಾರಣವಿರಬೇಕು. ಪರಮೇಶ್ವರಿಯ ಗಂಡನಾದ ಹೊನ್ನಪ್ಪ ಕಪ್ಪಗಿನ ಕುರೂಪಿ. ಸಾವು-ಕಾಮ ಒಂದಕ್ಕೊಂದು ಕೊಂಡಿಹಾಕಿಕೊಳ್ಳುತ್ತ ಎಬ್ಬಿಸುತ್ತಿದ್ದ ನೆನಪುಗಳಲ್ಲಿ ಒಂದು ಮೂಲ ಅನುಭವದ ಪ್ರತಿಮೆಯಾಗಿ ಎದ್ದು ಬಂದಿತ್ತು- ನಾನು ಕನ್ನಡ ಸಾಲೆಗೆ ಹೋಗುವಾಗಿನ ದಿನಗಳಲ್ಲಿ ಕಂಡ ಸಾಲೆಯ ಹಿಂದಿನ ಹಳೆಯ ಬಾವಿ!

ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಕೇಳಿದೆ:

‘ನೆನಪಿದೆಯಾ? ಆ ಬಾವಿಯಲ್ಲಿ ಒಬ್ಬ ಮುದುಕಿ ಬಿದ್ದು ಸತ್ತದ್ದು? ಹಳೆತ ಮುರುಕಲು ಬಾವಿ ತುಂಬ ಇಕ್ಕಟ್ಟಿನದಾದ್ದರಿಂದ ಅದರಲ್ಲಿ ಇಳಿಯುವ ಧೈರ್ಯ ಯಾರಿಗೂ ಆಗದೇ ಚೂಳೀಬುಟ್ಟಿಗೆ ಎರಡು ಕಡೆಗಳಲ್ಲಿ ಹಗ್ಗ ಕಟ್ಟಿ ಬೆಕ್ಕು ನಾಯಿಗಳನ್ನು ತೆಗೆಯುವಂತೆ ಆ ಮುದುಕಿಯ ಹೆಣ ತೆಗೆದದ್ದು?’

ಇಂದಿರಕ್ಕನಿಗೆ ನೆನಪಿರಲಿಲ್ಲ.

‘ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದಿನದನ್ನೆಲ್ಲ ಈಗ ನೆನಪು ಮಾಡಿ ಕೇಳುತ್ತೀ. ಒಮ್ಮೆ ಊರಿನ ಕಡೆಗೆ ಬಂದುಹೋಗಲ್ಲ’ ಎಂದಳು.

‘ನಿನ್ನ ದೊಡ್ಡಮ್ಮ ಸತ್ತಾಗೊಮ್ಮೆ ಊರಿಗೆ ಬಂದದ್ದೇ. ಆಮೇಲೆ ನಮ್ಮನ್ನೆಲ್ಲ ಮರೆತೇಬಿಟ್ಟೆ. ದೊಡ್ಡಪ್ಪ ಸಾಯುವಾಗಂತೂ ನೀನು ಇನ್ನೂ ದೂರವಿದ್ದೆಯಂತೆ- ಕಲಕತ್ತೆಯಲ್ಲೋ ಮತ್ತೆಲ್ಲೋ. ನಿನ್ನ ಹೆಸರಿಗೆ ಬಿಟ್ಟುಹೋದ ಹಿತ್ತಲು ಮನೆಗಳ ದೆಸೆಯಾದರೂ ಈಗ ಏನಾಗಿದೆಯೆಂಬುದನ್ನು ನೋಡಬಾರದೆ?’… ಏನೇನೋ ಪ್ರಶ್ನೆಗಳು. ಅರ್ಧ ಮಾಡಿಗೆ ಹುಲ್ಲು, ಉಳಿದುದಕ್ಕೆ ಹಂಚು ಹೊದೆಸಿದ್ದ ನಮ್ಮ ಮನೆ ಈಗ ಕುಸಿದು, ನೆಲಗಟ್ಟು ಗೋಡೆಗಳ ಕಲ್ಲುಗಳೆಲ್ಲ ಮಟಾಮಾಯವಾಗಿ ಬರೀ ಮಣ್ಣಿನ ಗುಪ್ಪೆಯಷ್ಟೇ ಈಗ ಅದು ಇದ್ದುದರ ಗುರುತಾಗಿ ಉಳಿದಿದೆಯಂತೆ. ಪರಮೇಶ್ವರಿಯ ಸೊಕ್ಕಿಗೆ ಮಿತಿಯೇ ಇಲ್ಲದಂತಾಗಿ ಆ ನೆಲವೆಲ್ಲ ತನ್ನದೇ ಎಂಬಂತೆ ಅಲ್ಲೆಲ್ಲ ಕಡೆ ‘ಹಿತ್ತಲ ಕಾಯಿ’ ಬೆಳೆಸಿದ್ದಾಳಂತೆ. ಚಿಕ್ಕ ಒಡೆಯರು ಅದನ್ನು ತನ್ನ ಹೆಸರಿಗೇ ಮಾಡಿದ್ದಾರೆ ಎನ್ನುವಂತಹ ಸುದ್ದಿಯನ್ನು ಊರಿನಲ್ಲಿ ಹಬ್ಬಿಸಿದ್ದಾಳಂತೆ. ಹಿರಿಯರಿಂದ ಬಂದ ಆ ನೆಲದ ಆಸ್ತಿ ಎಲ್ಲರನ್ನೂ ಬಿಟ್ಟು ಪರಮೇಶ್ವರಿಯ ಪಾಲಾಗಬೇಕೇ? ಎಂದು ಪದೇ ಪದೇ ಕೇಳಿದಳು. ಪರಮೇಶ್ವರಿಯ ಸೊಕ್ಕಿನ ಧಿಮಾಕು ಇಂದಿರಕ್ಕನ ಅಭಿಮಾನಕ್ಕೆ ಸವಾಲಾಗಿತ್ತೆಂದು ತೋರುತ್ತದೆ. ಆಗಿನಿಂದಲೂ ಅವಳ ಬಗ್ಗೆ ಮಾತನಾಡಿದ್ದೇ ಆಡಿದ್ದು… ಇಂದಿರಕ್ಕ ನನ್ನ ಹತ್ತಿರ ಮಾತನಾಡಲು ಬಂದದ್ದೇ ಪರಮೇಶ್ವರಿಯ ವಿಷಯವಾಗಿತ್ತೇನೋ ಎನ್ನುವ ಸಂಶಯ ಬಂತು…

ನನ್ನ ಹೆಂಡತಿ ಅಡುಗೆಮನೆಯಿಂದ ಕರೆದಾಗ ಇಂದಿರಕ್ಕ ಎದ್ದು ಒಳಗೆ ಹೋದಳು. ನಸುಕು ಇಳಿದ ಬಾಲ್ಕನಿಯಲ್ಲಿ ನಾನೊಬ್ಬನೇ. ಸೊಂಟದೆತ್ತರದ ಕಟೆಕಟೆಯ ಸರಳುಗಳೊಳಗಿಂದ ಕಾಣುವ ಮೂರುಸಂಜೆಯ ಕೆಂಪು ಮಬ್ಬಿನಲ್ಲಿ ಉಬ್ಬಸ ಪಡುವ ಸಾಗರದ ನೀರು, ಬಂಡೆಗಳ ಮರೆಯಲ್ಲಿ ಅಡಗಿ ಕೂತು ಕಾಮಿಸಬಂದ ಗಂಡು ಹೆಣ್ಣುಗಳು. ಬಾಲ್ಕನಿಯ ದೀಪ ಹಾಕಲು ಬಂದ ನನ್ನ ಮಗಳಿಗೆ ದೀಪ ಈಗಲೇ ಬೇಡ ಮಗೂ ಎಂದೆ- ಕುರ್ಚಿಯಲ್ಲಿ ಹೀಗೇ ಕೆಲಹೊತ್ತು ಬಿದ್ದಿರುವ ಮನಸ್ಸಾಗಿ. ಅವಳು ದೀಪ ಹಾಕದೇ ತನ್ನ ಕೋಣೆಗೆ ಮರಳಿದಾಗ ಪ್ರಜ್ಞೆಯ ಪಾತಾಳದಲ್ಲಿ ತಿರುಗಿ ಹನೇಹಳ್ಳಿ. ಕನ್ನಡ ಸಾಲೆಯ ಹಿತ್ತಲ ಬಾವಿ. ಚೂಳಿಬುಟ್ಟಿಯಲ್ಲಿ ಹೊರ ತೆಗೆಯುವಾಗ ಮುದುಡಿ ಬಿದ್ದ ಹಣ್ಣು ಹಣ್ಣು ಮುದುಕಿಯ ದೇಹ!

ಇದನ್ನು ಓದಿದ್ದೀರಾ?: ತರಾಸು ಅವರ ಕತೆ | ಇನ್ನೊಂದು ಮುಖ

ಅನ್ನಿಸಿತು:

ತೀರ ಎಳೆತನದಲ್ಲಿ ನಮ್ಮನ್ನು ಬಲವಾಗಿ ಅಲುಗಾಡಿಸಿದ ಅನುಭವಗಳು ಮುಂದೊಂದು ದಿನ ಮಾತಿನ ತೆಕ್ಕೆಗೆ ಒಳಪಟ್ಟು ಅರಿವಿನ ಪಾತಳಿಯನ್ನು ಮುಟ್ಟುವದು ಶಕ್ಯವಾಗುವ ತನಕ ಅಂತಹ ಶಕ್ಯತೆಯ ಮುಹೂರ್ತವನ್ನ ಇದಿರುನೋಡುತ್ತ ಅಸ್ಪಷ್ಟವಾದ ಪ್ರತಿಮೆಯ ರೂಪದಲ್ಲಿ ಚಿತ್ತದ ತಳದಲ್ಲಿ ಮಲಗಿರುತ್ತವೇನೋ. ಸ್ಪಷ್ಟ ಮಾತಾಗಿ, ಎಚ್ಚರವಾಗಿ ಅರಳಲಿರುವ ಅನುಭವದ ಬೀಜವೆಂಬಂತೆ ನಾನು ಏಳೋ ಎಂಟೋ ವರುಷದವನಿದ್ದಾಗ ಕಂಡ ಈ ಬಾವಿ, ಈ ಮುದುಕಿಯ ಸಾವುಗಳ ನೆನಪು ಹೀಗೆ ಹಠಾತ್ತನೆ ಮೈಕೊಡವಿ ಎದ್ದು ಬಂದದ್ದು ಇದೇ ಮೊದಲ ಸಾರಿಯಲ್ಲ…

ಹಾಗೆ ನೋಡಿದಲ್ಲಿ ನನ್ನ ಹುಟ್ಟಿದೂರು ಹನೇಹಳ್ಳಿ ಅಲ್ಲವೇ ಅಲ್ಲವಂತೆ. ಅಂಕೋಲೆಯ ಹತ್ತಿರದ ಒಂದು ಸಣ್ಣ ಹಳ್ಳಿಯಾದ ಬೊಬ್ರುವಾಡೆಯಂತೆ. ತಾಯಿ ನಾನು ಹುಟ್ಟುವಾಗ ತನ್ನ ಚೊಚ್ಚಲು ಹೆರಿಗೆಯಲ್ಲೇ ಸತ್ತಿದ್ದಳು. ನಾನು ಮೂರೋ ನಾಲ್ಕೂ ವರುಷದವನಿದ್ದಾಗಲೇ ಅಪ್ಪ ಒಂದು ದಿನ ಬೆಳಗಾಗುವ ಮುನ್ನವೇ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಬೇಪತ್ತೆಯಾದರಂತೆ. ಅವರು ನೇರವಾಗಿ ಹೊರಟಿದ್ದು ಪರ್ತಗಾಳಿಯ ಮಠಕ್ಕೆ, ಅಲ್ಲಿಂದ ತೀರ್ಥಯಾತ್ರೆಗೆ ಹೊರಟ ಕೆಲವರ ಜೊತೆ ತಾವೂ ಸೇರಿಕೊಂಡರು. ಉತ್ತರ ಹಿಂದುಸ್ತಾನದ ಕ್ಷೇತ್ರವೊಂದಕ್ಕೆ ಹೊರಟಾಗ ಹಾದಿಯಲ್ಲಿ ಕಾಲರಾದಿಂದ ಸತ್ತರೆಂದು ಮನೆಯವರಿಗೆ ಬಂದ ಸುದ್ದಿ. ಅಂತೂ ನಾನು ದೊಡ್ಡವನಾದ ಮೇಲೆ ಮನೆಯ ಹಿರಿಯರು ನನಗೆ ಹೇಳಿದ ರೀತಿಯಿದು. ಅಪ್ಪನಿಗೆ ಮೊದಲಿನಿಂದಲೂ ಬದುಕಿನಲ್ಲಿ ಹೆಚ್ಚಿನ ಆಸ್ಥೆಯೇ ಇದ್ದಿರಲಿಲ್ಲವಂತೆ. ಒಂದು ಬಗೆಯ ವಿರಕ್ತ ಭಾವದಿಂದಲೇ ಬೆಳೆದವರು. ಮದುವೆ ಮಾಡಿದರೆ ಎಲ್ಲವೂ ಸರಿಹೋಗಬಹುದೆಂದು ಬಲಾತ್ಕಾರದಿಂದಲೇ ಎಂಬಂತೆ ಮದುವೆ ಮಾಡಿದರಂತೆ. ಆಶ್ಚರ್ಯದ ಸಂಗತಿಯೆಂದರೆ ಮದುವೆಯ ನಂತರ ಅವರು ನಿಜಕ್ಕೂ ಬದಲಿಸಿದ್ದು. ಅಮ್ಮನನ್ನು ಹಚ್ಚಿಕೊಂಡಷ್ಟು ಅವರು ಬೇರೆ ಯಾರನ್ನೂ ಹಚ್ಚಿಕೊಂಡಿರಲಿಲ್ಲವಂತೆ! ಎಲ್ಲ ಇಷ್ಟು ತೆರೆದ, ಇಷ್ಟು ಮುಚ್ಚಿದ ಅರ್ಧಂಬರ್ಧ ಸುದ್ದಿಗಳು. ತಬ್ಬಲಿಯಾಗಿಯೂ ಈ ತಬ್ಬಲಿತನದ ಅರಿವಾಗದಂತೆ ನನ್ನನ್ನು ದೊಡ್ಡವನನ್ನಾಗಿ ಮಾಡಿದ್ದು ಅಮ್ಮನ ಹಿರಿಯಕ್ಕ. ಅವಳನ್ನೇ ನಾನು ಅಮ್ಮ ಎಂದು ಕರೆಯುತ್ತಿದ್ದದ್ದು. ದೊಡ್ಡಪ್ಪನೇ ಅಪ್ಪನಾದ. ಅವರಿಗೆ ತಮ್ಮವೇ ಆದ ಮಕ್ಕಳಿರಲಿಲ್ಲ, ನಿಜವಾದ ಅಪ್ಪ-ಅಮ್ಮಂದಿರನ್ನು ಸಂಪೂರ್ಣವಾಗಿ ಮರೆತೇ ಬೆಳೆದವನೆಂದು ಮನೆಯ ಹಿರಿಯರು ತಿಳಕೊಂಡರೂ ನಿಜಸ್ಥಿತಿ ಹಾಗೆ ಇದ್ದಿರಲಿಕ್ಕಿಲ್ಲವೆಂದು ನನಗೆ ಈಗೀಗ ತೋರುತ್ತದೆ. ಹಾಗೆಂದು, ಈ ವಿಷಯವನ್ನು ಕುರಿತು ಅಷ್ಟೊಂದು ತೀವ್ರವಾಗಿ ವಿಚಾರ ಮಾಡಿದವನಲ್ಲ. ನನ್ನ ಅನ್ನಿಸಿಕೆಗಳನ್ನು ಉಳಿದವರ ಮುಂದೆ ವ್ಯಕ್ತಪಡಿಸಿದವನೂ ಅಲ್ಲ. ಆದರೂ ಪೂರ್ವಜನ್ಮದ ಸ್ಮೃತಿಯೆಂಬಂತೆ ಮನಸ್ಸಿನ ಕತ್ತಲೆಯ ಲೋಕದಿಂದ ಎದ್ದುಬರುತ್ತಿದ್ದ ಅಪ್ಪನ ಆಕೃತಿ, ಹೇಳಿದರೆ ಉಳಿದವರು ನಂಬಲಿಕ್ಕಿಲ್ಲ ಎಂಬ ಅಳುಕಿನಿಂದ ನನ್ನಲ್ಲೇ ಮುಚ್ಚಿಟ್ಟುಕೊಂಡ- ನಾನು ಮೂರು ನಾಲ್ಕು ವರುಷದವನಿದ್ದಾಗಲೂ ಕಂಡಂತಿದ್ದರ ನೆನಪು. ಬಾಳಿನ ಅರ್ಥವನ್ನು ಕುರಿತು ಧೇನಿಸುವಾಗೆಲ್ಲ ಏಳುವ ಪ್ರಶ್ನಾರ್ಥಕದ ಹಾಗೆ, ಜೀವದ ಆಳದಲ್ಲಿ ಅನುಭವಿಸಿಯೂ ಬೇರೆಯವರೊಡನೆ ಹಂಚಿಕೊಳ್ಳಲಾಗದ ಗುಟ್ಟಿನ ಹಾಗೆ ಹಳ್ಳಿಯನ್ನು ಬಿಟ್ಟುಬಂದ ಇಪ್ಪತ್ತೈದು ವರ್ಷಗಳ ಮೇಲೂ ಹಳ್ಳಿಯನ್ನು ನೆನೆದಾಗೆಲ್ಲ ಗವ್ವೆಂದು ಕಾಡುತ್ತಿದ್ದ ಪ್ರಶ್ನೆ: ಅಪ್ಪ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋದದ್ದೇಕೆ? ಅವರು ಸತ್ತದ್ದು ಕಾಲರಾದಿಂದಲೇ? ಸತ್ತಾದ್ದಾದರೂ ಹೌದೆ?ದುತ್ತೆಂದು ಒಂದು ದಿನ- ಇದೀಗ ಇಂದಿರಕ್ಕ ಬಂದಂತೆ- ಬಂದು ಮನೆಯ ಕದ ತಟ್ಟಬಹುದೆ? ಅಷ್ಟೆಲ್ಲ ಪ್ರೀತಿಯಿಂದ ಸಲಹಿ ಬೆಳೆಸಿದ ದೊಡ್ಡಪ್ಪ-ದೊಡ್ಡಮ್ಮರ ಸಾವಿಗಿಂತ ಹೆಚ್ಚಾಗಿ ಕಾಡಿದ್ದು ಅಪ್ಪನ ನಿಗೂಢ ನಿರ್ಗಮನ…

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಮದುವೆಯಾಗಿ ಮುಂಬಯಿಯಲ್ಲಿ ಸಂಸಾರ ಹೂಡಿದ ಹದಿನೈದು ವರ್ಷಗಳಲ್ಲಿ ಇಂದಿರಕ್ಕ ನಮ್ಮ ಮನೆಗೆ ಬಂದದ್ದು ಇದೇ ಮೊದಲ ಸಲ ಎಂಬುದನ್ನು ನೆನೆದಾಗ ನನಗೇ ಆಶ್ಚರ್ಯ. ಹಾಗೆ ನೋಡಿದರೆ ಹನೇಹಳ್ಳಿಯಿಂದ ಯಾರು ತಾನೇ ನಮ್ಮ ಮನೆಗೆ ಈವರೆಗೆ ಬಂದಿದ್ದಾರೆ? ಇಂದಿರಕ್ಕ ಬಂದದ್ದು ತೀರ ಅನಿರೀಕ್ಷಿತವಾಗಿತ್ತು. ಬಂದ ರೀತಿ ಕೂಡ, ತಂದೆಯ ಶ್ರಾದ್ಧಕರ್ಮದ ಸಲುವಾಗಿ ಗೋಕರ್ಣಕ್ಕೆ ಹೋಗಿದ್ದ ಮುಂಬಯಿಗನೊಬ್ಬನನ್ನು ಜೊತೆ ಮಾಡಿ- ಅವನಿಗೆ ನನ್ನ ಪರಿಚಯವಿದೆ, ಮನೆಯ ಪತ್ತೆ ಗೊತ್ತಿದೆ ಎಂಬಷ್ಟೇ ಸಂಗತಿಗಳ ಮೇಲೆ ಭಾರ ಹಾಕಿ- ಸೀದ ಬಂದುಬಿಟ್ಟಿದ್ದಳು, ಪತ್ರವನ್ನು ಕೂಡ ಬರೆಯದೇ. ಬರೆದದ್ದೇ ಆದರೆ ಅದೇ ಅವಳ ಮೊತ್ತ ಮೊದಲಿನ ಪತ್ರವಾಗಬಹುದಿತ್ತೇನೋ! ನಾನಂತೂ ಅವಳಿಗೆ ಈವರೆಗೆ ಬರೆದದ್ದೇ ನೆನಪಿಲ್ಲ. ಅದಕ್ಕಿಂತಲೂ ಹೆಚ್ಚಿನ ಸೋಜಿಗದ ಸಂಗತಿಯೆಂದರೆ ನಾನು ವಯಸ್ಸಿಗೆ ಬಂದಮೇಲೆ ಹೀಗೆ ಹತ್ತಿರ ಕೂತು, ಮೈಚಳಿ ಬಿಟ್ಟು ಅವಳೊಡನೆ ಮಾತನಾಡಿದ್ದು ಇದೇ ಮೊದಲ ಸರತಿಯಾದ್ದು. ಇಲ್ಲವಾದರೆ ಅವಳ ಸಾನ್ನಿಧ್ಯದಲ್ಲಿ ನನಗೇಕೋ ಅರ್ಥವಾಗದ ನಡುಕ. ಸಾವಿನಂತಹದನ್ನು; ಕಾಮದಂತಹದನ್ನು; ಪಶುವಿನಂತಹದನ್ನು; ಮೂರು ಸಂಜೆಯ ಹೊತ್ತಿಗೆ ಮಣೆಯ ಮೇಲೆ ಅಕ್ಕಿಕಾಳು, ತೆಂಗಿನಗರಿಗಳ ತುಂಡುಗಳನ್ನು ಹರಹಿ ಹೋ ಹೋ ಹೋ ಹಾ ಹಕ್ ಎಂದು ಒದರುತ್ತಿದ್ದ ಆಗೇರ ಎಂಕೂನ ಗಾಡಿಗತನದಂತಹದನ್ನು; ಕನ್ನಡ ಸಾಲೆಯ ಹಳೇ ಮುರುಕಲು ಬಾವಿಯಂತಹದನ್ನು- ಸಾವಿರ ರೀತಿಯಿಂದ ಬಣ್ಣಿಸಿದರೂ ಮಾತಿನ ಹೊರಗೇ ಉಳಿಯುತ್ತಿದ್ದ, ಕತ್ತಲೆಯಲ್ಲಿ ಕಂಬಳೀ ಕೊಂಪೆ ಹಾಕಿಕೊಂಡು ಹೆದರಿಸಲು ನಿಂತ ಥರ ಕಪ್ಪಾಗಿ ನಿಗೂಢವಾದದ್ದನ್ನು ನೆನಪಿಗೆ ತರುತ್ತಿದ್ದ ನನ್ನ ಮೇಲಿನ ಅವಳ ವಿವೇಕಶೂನ್ಯವಾದ ಪ್ರಭಾವ- ನನ್ನ ಈವರೆಗಿನ ಬರವಣಿಗೆಯಲ್ಲಿ ಹತ್ತು ಹಲವು ರೀತಿಯಿಂದ ಪ್ರಕಟವಾಗುವ ಸ್ತ್ರೀ ರೂಪಕ್ಕೆ ಮೂಲದ್ರವ್ಯವಾಗಿಯೂ- ನನ್ನ ತಿಳಿವಿನ ಆಚೆಯದಾಗಿಯೇ ಉಳಿದಿದೆ.

ಹೊಳೆದ ಕಾರಣ:

ಮೀಸೆಯ ಗೆರೆಮೂಡುವ ದಿನಗಳಲ್ಲಿ ನಾನು ನೋಡಿದ- ಯೌವನದ ಮದ ಮುಸುಗುಡುತ್ತಿದ್ದ ಅವಳ ಮೈಯ ಮಾಟವಿರಬಹುದು; ಕಣ್ಣುಗಳಿಂದ, ಬಳುಕುವ ಸೊಂಟದಿಂದ, ಇಡುವ ಹೆಜ್ಜೆಗಳ ಗತ್ತಿನಿಂದ ಸೂಸುವ ಕಾಮದ ಉರ್ಕಂತವಿರಬಹುದು; ಕಾಣದಿದ್ದರೂ ಕಾಣಿಸಿಕೊಂಡಂತೆ ಲೀಲೆ ಹೂಡಿ ಸ್ವಪ್ನ-ಸ್ಖಲನಕ್ಕೆ ಕಾರಣವಾದ ಅವಳ ಮೊಲೆಗಳಿರಬಹುದು: ಚಿಕ್ಕಂದಿನಲ್ಲಿ ‘ಏ ಕಳ್ಳ ಗುಲಾಮ, ನಿನ್ನ ಗಿಳಿ ಮರಿ ನೋಡೋಣ’ ಎಂದು ಕೇಳಿದ್ದರ, ಮುಟ್ಟಿ ನೋಡಿದ್ದರ ಅರ್ಥ ಹೊಳೆಯುತ್ತಿದ್ದ ದಿನಗಳಲ್ಲಿ ತಲೆವರೆಗೆ ಎಳೆದುಕೊಂಡ ಹೊದಿಕೆಯ ಮುಸುಕಿನ ಮರೆಯಲ್ಲಿ ಅವಳ ಬಗ್ಗೆ ಹಗಲುಗನಸುಗಳ ಗರ್ಭಗುಡಿಯೊಳಗಿನ ವ್ಯಭಿಚಾರವಿರಬಹುದು.

ಅಥವಾ…

ಈಗ ನೆನಪು ಮಾಡಲೂ ಮುಜುಗರವಾಗುತ್ತಿದ್ದ ಸಂಗತಿ:

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಸಾಲೆಯಿಂದ ಬಂದದೇ ಗಂಜೀ ಊಟ ಮುಗಿಸಿ ಆಡಲಿಕ್ಕೆಂದು ಇಂದಿರಕ್ಕನ ಮನೆಗೆ ಹೋಗಿದ್ದೆ. ಇಂದಿರಕ್ಕ ಹಿಂದಿನ ಜಗಲಿಯ ಮೇಲಿದ್ದಳು. ಕಂಬಕ್ಕೆ ಆನಿಸಿಟ್ಟ ಕಟ್ಟಿಗೆಯ ದಬ್ಬೆಗಳಿದ್ದ ಚೌಕು ಕನ್ನಡಿಯ ಮುಂದೆ ನೆಲದ ಮೇಲೆ ಕೂತು ಕೂದಲು ಬಾಚಿಕೊಳ್ಳುತ್ತಿದ್ದಳು. ಸೀರೆಯನ್ನು ಮೊಣಕಾಲುಗಳಿಂದ ತೀರ ಹಿಂದಕ್ಕೆ ಜಗ್ಗಿದ್ದರಿಂದ ತೋರುತ್ತಿದ್ದ ನುಣುಪಾಗಿ ಲಕಲಕಿಸುವ ಬೆಳ್ಳಗಿನ ಮಾಂಸಲ ತೊಡೆಗಳನ್ನು ನೋಡಿ ದಿಗಿಲುಗೊಂಡೆ. ನೆಲದ ಮೇಲೆಲ್ಲ ಧೂಳು. ಮೊನ್ನೆ ಮೊನ್ನೆ ತಂದ ಸೀರೆ ಎಂದೇನೋ ಗೊಣಗುಟ್ಟಿದಂತೆ ನೆನಪು. ನಾನು ತೀರ ಹತ್ತಿರ ಕೂತು ಅವಳು ಕೂದಲು ಬಾಚಿಕೊಳ್ಳುವುದನ್ನೇ ನೋಡುತ್ತಿದ್ದೆ. ಆದರೂ ಸೀರೆಯನ್ನು ಸರಿಪಡಿಸಿಕೊಳ್ಳಲಿಲ್ಲ. ಕನ್ನಡಿಯಲ್ಲಿ ಆಗಿನ ಮಟ್ಟಿಗೆ ಅವಳು ನೋಡಿಕೊಳ್ಳುತ್ತಿದ್ದದ್ದು ತನ್ನ ಮೋರೆಯನ್ನಲ್ಲ- ಬೆತ್ತಲೆ ತೊಡೆಗಳನ್ನು ಎಂಬ ಸಂಶಯ ಬಂದು ದಿಗ್ಭ್ರಮೆಗೊಂಡೆ. ಮುಂದಿನ ಅರ್ಧಗಳಿಗೆಯಲ್ಲಿ- ಏನಾಗುತ್ತಿದೆಯೆಂದು ತಿಳಿಯುವ ಮೊದಲೇ ಸರಕ್ಕನೆ ನನ್ನನ್ನು ಮುಂದೆಕ್ಕೆಳೆದು ನೋಡು ನೋಡು ಈ ಕರಿಯ ಮಚ್ಚೆ, ಎಷ್ಟು ಬೆಚ್ಚಗಿದೆ ನೋಡು ಎನ್ನುತ್ತ ನನ್ನ ಅಂಗೈಯನ್ನು ತೊಡೆಯ ಮೇಲಿರಿಸಿ ಸವರಿಕೊಂಡಳು. ಹೌದು, ಬೆಳ್ಳಗಿನ ತೊಡೆಯ ನಡುವೆ ಪಾವಾಣೆಯಷ್ಟು ದೊಡ್ಡದಾದ ಕಪ್ಪು ಹಸಿರು ಬಣ್ಣದ ಮಚ್ಚೆ. ಬೆಚ್ಚಿಗತ್ತೋ ತಣ್ಣಗಿತ್ತೋ ನೆನಪಿಲ್ಲ. ನೆನಪಿದ್ದದ್ದಿಷ್ಟು:

ಈ ಅನಿರೀಕ್ಷಿತ ಘಟನೆಯಿಂದ ಬಿಳಿಚಿ ಕಾಲು ಕಿತ್ತು ಅಲ್ಲಿಂದ ಓಡಿದ್ದು; ಹಿಂತಿರುಗಿ ನೋಡಿದಾಗ ಅಂತಹದೇನೂ ನಡೆಯಲೇ ಇಲ್ಲ ಎಂಬ ಮೋಡಿಯಲ್ಲಿ ಇಂದಿರಕ್ಕ ತಿರುಗಿ ಕನ್ನಡಿಯಲ್ಲಿ ನೋಡಿಕೊಳ್ಳುವುದರಲ್ಲಿ ಗರ್ಕಾದದ್ದು; ಈವರೆಗೂ ಗುಟ್ಟಾಗಿಯೇ ಉಳಿದ ಈ ಹೆಣ್ಣು ತೊಡೆಯ ಮೊದಲ ಸ್ಪರ್ಶ ಇದೆಲ್ಲದರ ಅರ್ಥವಾಗುತ್ತಿದ್ದ ಮುಂದಿನ ಪ್ರೌಢ ದಿನಗಳ ಗುಂಗಾಗಿ ನನ್ನ ವೈವಾಹಿಕ ಜೀವನದ ಮೇಲೂ ನೆರಳು ಚಾಚಿದ್ದು… ಇಂದಿರಕ್ಕ ಮಾತ್ರ ಇದೆಲ್ಲವನ್ನೂ ಮರೆತೇಬಿಟ್ಟಂತೆ ಅಥವಾ ಇದಾವುದೂ ನಡೆಯಲೇ ಇಲ್ಲವೆಂಬಂತೆ ನಟಿಸುತ್ತ- ನನ್ನದೇ ಭ್ರಮೆಯಿದೆಲ್ಲ ಎನ್ನುವ ಸಂಶಯ ಹುಟ್ಟಿಸಿ ನನ್ನನ್ನು ಸತಾಯಿಸಿದ್ದು…

ಅಲ್ಲ-

ಇದೂ ಮುಖ್ಯವಲ್ಲ. ಅಲ್ಲವೇ ಅಲ್ಲ. ಗೊತ್ತಿದ್ದೂ ಮುಚ್ಚುಮರೆಯೇಕೆ? ಇಷ್ಟೆಲ್ಲ ನಡೆದ ಮೇಲೂ ಬಿಚ್ಚಲು ಅಂಜುವುದೇಕೆ? ಎಲ್ಲವನ್ನೂ ಹೇಳಲು ಹೊರಟು ಐನ ಗಳಿಗೆಯಲ್ಲಿ ಹಿಂದೆಗೆಯುವುದೇಕೆ…

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ಇಂದಿರಕ್ಕ ಯಾವಾಗಲೂ ಹಾಗೆಯೇ- ಒಂದು ಒಗಟಾಗಿಯೇ ನನ್ನ ಬದುಕಿನಲ್ಲಿ ಬಂದಿದ್ದಳು. ಅವಳು ಶಂಕರರಾಯನನ್ನು ಮದುವೆಯಾಗಿ ನಮ್ಮ ಹಳ್ಳಿಗೆ ಬಂದಾಗ ನಾನು ಎಂಟೋ ಒಂಬತ್ತೋ ವರುಷದವನಿರಬೇಕು. ಎಣಿಸಿ ನೋಡಿದರೆ ಕನ್ನಡ ಮೂರನೇ ಇಯತ್ತೆಯಲ್ಲಿದ್ದಂತೆ ಅಂದಾಜು. ಇಪ್ಪತ್ತು ವಯಸ್ಸಿನ ಮದುವಣಗಿತ್ತಿ ನನ್ನ ಬಾಲ ಮನಸ್ಸಿನ ಮೇಲೆ ಅಚೊತ್ತಿ ನಿಲ್ಲುವಂತೆ ಮಾಡಿದ ಪರಿಣಾಮವೆಂದರೆ ಇಷ್ಟೊಂದು ಲಾವಣ್ಯವತಿಯಾದ, ಚೆಲುವೆಯಾದ ಇನ್ನೊಬ್ಬ ಹೆಣ್ಣನ್ನು- ಹನುಮಟ್ಟೆಯ ಮಹಾಮಾಯೀ ದೇವಸ್ಥಾನದ ಕುಣಿತದವಳನ್ನು ಬಿಟ್ಟರೆ -ನಾನು ಈವರೆಗೂ ನೋಡಿಯೇ ಇರಲಿಲ್ಲವೆಂದು. ಮುಂದಿನ ಕೆಲವೇ ದಿನಗಳಲ್ಲಿ ಕೇರಿಯ ಜನ ಶಂಕರರಾಯ ಅವಳಿಗೆ ಶೋಭಿಸುವ ಗಂಡನಲ್ಲವೇ ಅಲ್ಲವೆಂದು ಆಡಿಕೊಂಡಿತು. ಇನ್ನೂ ಮುಂದೆ, ವರುಷಗಳೇ ಸರಿದಂತೆ ಶಂಕರರಾಯ ಖೊಜ್ಜ, ಹಾಗೆಂದೇ ಇಂದಿರಕ್ಕನಿಗೆ ಮಕ್ಕಳಾಗಿಲ್ಲ ಎನ್ನುವ ಅರ್ಥ ಧ್ವನಿಸುವ ಮಾತು ಹಳ್ಳಿಯಲ್ಲಿ ನೆಲೆನಿಂತು- ದೊಡ್ಡವರ ಜಗತ್ತಿನಲ್ಲಿ ಕಾಲಿಡಲಿಕ್ಕೇ ಹೆದರುತ್ತಿದ್ದ ನನ್ನನ್ನು ಇನ್ನಷ್ಟು ಕಂಗಾಲುಗೊಳಿಸಿತು. ಮಕ್ಕಳು ಇಲ್ಲದ್ದಕ್ಕೋ ಏನೋ ನಾನೆಂದರೆ ಅವಳಿಗೆ ಬಹಳ ಅಕ್ಕರೆಯವನಾಗಹತ್ತಿದ್ದೆ. ಹತ್ತಿರದವನಾಗಹತ್ತಿದ್ದೆ…

ಅಂತಹ ವೇಳೆಗೇ ನಡೆದದ್ದು:

ಅಪ್ಪನ ನಿರ್ಗಮನದಷ್ಟೇ ನಿಗೂಢವಾದ ಆ ಪೊತ್ತೆ ಮೀಸೆಯವನ ಆಗಮನ.

ಪೊತ್ತೆ ಮೀಸೆಯವನು ಎನ್ನುವುದಕ್ಕೆ ಕಾರಣ ಅವನ ಪೊತ್ತೆ ಮೀಸೆಯಷ್ಟೇ ನನ್ನ ಸ್ಮೃತಿಯಲ್ಲಿ ನೆಲೆನಿಂತದ್ದು; ಅವನ ರೂಪ ನೆನೆದಾಗೆಲ್ಲ ಕಣ್ಣಮುಂದೆ ನಿಲ್ಲುತ್ತಿದ್ದದ್ದು. ಎಲ್ಲಿಂದ ಬಂದ? ಯಾಕೆ ಬಂದ? ಗೊತ್ತಾಗಲಿಲ್ಲ. ಅಂತೂ ಬಂದ. ಬಂದವನೇ ಮಾದನ ಚಿಟ್ಟೆಯಲ್ಲಿ- ಷಷ್ಠಿ ತೇರಿನ ರಾತ್ರಿ ಮೃಗಬೇಟೆಯಾಡುತ್ತಿದ್ದ ಜೋಡಿ ಅಶ್ವತ್ಥ ಕಟ್ಟೆಗಳಿಲ್ಲವೆ? ಅವುಗಳ ಹತ್ತಿರವೇ ಇದ್ದ- ದಾಸಪ್ಪನ ಚಹದಂಗಡಿಯಲ್ಲಿ ಝಾಂಡ ಹಾಕಿದ. ದಾಸಪ್ಪನ ಮಗ ಸರ್ವೋತ್ತಮ ನನ್ನ ಗೆಳೆಯ. ಅವನಿಂದಲೇ ಗೊತ್ತಾಯಿತು. ಹೋದ ಮೂರು ದಿನಗಳಿಂದಲೂ ಸಂಜೆಯ ಹೊತ್ತಿಗೆ ಚಹ ಕುಡಿಯುವ ನೆಪಮಾಡಿ ಅಂಗಡಿಗೆ ಬರುತ್ತಾನಂತೆ. ಕತ್ತಲೆಕತ್ತಲೆಯಾದ ಮೂಲೆಯಲ್ಲಿಯ ಬಾಂಕಿನ ಮೇಲೆ ಒಬ್ಬನೇ ಕೂತು ಚಹ ಕುಡಿಯುತ್ತಾನಂತೆ. ಬೀಡಿ ಸೇದುತ್ತಾನಂತೆ. ಯಾರೊಬ್ಬರ ಕೂಡ ಮಾತಿಲ್ಲ ಕತೆಯಿಲ್ಲ. ಕತ್ತಲೆಯಾದದ್ದೇ ಹೊರಟುಹೋಗುತ್ತಿದ್ದ. ಮುಂದೊಂದು ದಿನ ಗುಸುಗುಸು ಎಂದಂತೆ ಸುದ್ದಿ: ಅವನು ಇಳಕೊಂಡದ್ದು ಗೋಕರ್ಣದ ಒಬ್ಬರ ಮನೆಯಲ್ಲೆಂದೂ ಹನೇಹಳ್ಳಿಗೆ ಬರುತ್ತಿದ್ದದ್ದು ಇಂದಿರಕ್ಕನನ್ನು ಸಂಧಿಸಲೆಂದೂ ಯಾರೋ ಹೇಳಿದರು. ಯಾರೋ ನಂಬಿದರು. ಕೇಳಿ ಕನಲಿದೆ. ಹೆದರಿದೆ. ನನಗಾಗ ವಯಸ್ಸು ಹದಿಮೂರು ಇರಬೇಕು. ನಾನೇ ಖುದ್ದು ದಾಸಪ್ಪನ ಅಂಗಡಿಗೆ ಹೋದಾಗ ಕಣ್ಣಿಗೆ ಬಿದ್ದ. ಬಿದ್ದದ್ದೇ ಯಾವ ಸಾಕ್ಷಿ ಪುರಾವೆಗಳೂ ಬೇಕಾಗಿರದ ಸತ್ಯಸಂಗತಿಯೆಂಬಷ್ಟು ಸ್ಪಷ್ಟವಾಗಿ ಹೊಳೆದುಬಿಟ್ಟಿತ್ತು: ಅವನ ಆಗಮನಕ್ಕೂ ಇಂದಿರಕ್ಕನಿಗೂ ಸಂಬಂಧ ಇದ್ದದ್ದು ಹೌದು ಎಂದು. ಯಾಕೆ ಹಾಗೆ ಅನ್ನಿಸಿತೋ ನನ್ನ ತಿಳಿವಿಗೆ ದಕ್ಕದೇ ಇದ್ದ ಮಾತಾಗಿಯೇ ಉಳಿದಿದೆ. ಈ ಸಂಬಂಧ ಸುಳ್ಳಾಗಲಿ ಎಂಬ ಆಂತರ್ಯದ ಬೇಡಿಕೆಯೇ ಸಂಬಂಧ ಇದ್ದದ್ದು ಹೌದು ಎನ್ನುವ ಭೀತಿಯಾಗಿ ಪರಿಣಮಿಸಿತ್ತೇ? ಶಂಕರರಾಯನ ಬಗ್ಗೆ ಗುಟ್ಟಾಗಿ ತಳೆದಿರಬಹುದಾದ ಜುಗುಪ್ಪೆಯೇ ಈ ಸಂಬಂಧ ಹೌದಾಗಲಿ ಎಂಬ ಕಾಮನೆಯಾಗಿ ಪರಿಣಮಿಸಿತ್ತೇ? ತಿಳಿಯದು. ಹಬ್ಬಿದ ಸುದ್ದಿಯನ್ನು ನಂಬಿದ್ದ ನನಗೆ ಹಾಗೆ ಭಾಸವಾಯಿತೇ? ಅಥವಾ ಭಾಸವಾದದ್ದನ್ನೇ ನಂಬಿ ನಾನೇ ಹಾಗೆ ಸುದ್ದಿ ಹಬ್ಬಿಸಿದನೇ? ಒಟ್ಟಾರೆ ಇದೆಲ್ಲ- ಆಗದೇ ಇದ್ದುದನ್ನೇ ಆಯಿತು ಎಂದು ನಂಬಿ- ಮುಂದೆ ನಿಜಕ್ಕೂ ಆದದ್ದರ ಕಠೋರ ಸತ್ಯಕ್ಕೆ ಕಣ್ಣು ಮುಚ್ಚುವ ಹೋರಾಟವಾಗಿದ್ದಿರಬಹುದು ಎಂದು ಅನ್ನಿಸುತ್ತದೆ. ಅವನ ಮೋರೆ ನೋಡುತ್ತ ಕೂರುವ ಮನಸ್ಸಾಗದೆ ಬಹಳ ದಿನಗಳಿಂದ ಹೋಗಿರದ ಕಪಿಲ ತೀರ್ಥಕ್ಕೆ ಹೋಗೋಣವೆಂದು ಅಂಗಡಿಯ ಹೊರಗೆ ಬಿದ್ದು ಈಶ್ವರ ದೇವಸ್ಥಾನದ ಮಗ್ಗುಲಿನ ಓಣಿ ಸೇರಿದ್ದೇ, ಹಿಂದಿನಿಂದ ಯಾರೋ ‘ಏ ಹುಡುಗಾ’ ಎಂದಂತೆ ಕೇಳಿಸಿ ತಿರುಗಿ ನೋಡಿದರೆ ಪೊತ್ತೆ ಮೀಸೆಯವನು ಬೆನ್ನುಹತ್ತಿದ್ದ. ಅವನು ಇಷ್ಟು ದಿವಸ ಹೊಂಚುಹಾಕಿ ಕೂತದ್ದೇ ನನ್ನನ್ನು ಸಂಧಿಸಲಿರಬಹುದು ಎಂಬ ವಿಚಾರ ಬಂದದ್ದೇ ಥಥ್ಥರ ನಡುಗಿದೆ. ನೆಲದಲ್ಲಿ ಕಾಲು ಹೂತು ಹೋದವನ ಹಾಗೆ ಅವನು ನನ್ನ ಹತ್ತಿರ ಬರುವುದನ್ನೇ ಕಾಯುತ್ತಾ ನಿಂತುಬಿಟ್ಟೆ. ಅವನು ಬಂದವನೇ ಧೋಪ್ ಎಂದು ನನ್ನ ಹೆಗಲ ಮೇಲೆ ಅವನ ಇಷ್ಟು ದೊಡ್ಡ ಅಂಗೈಯನ್ನಿಟ್ಟ. ಮೊನ್ನೆ ಮೊನ್ನೆಯೇ ಎನ್ನುವಂತಿದೆ, ಅವನ ಅಂಗೈಯ ಭಾರದ ಹಿಂದಿನ ಪ್ರಚಂಡ ಧೈರ್ಯದ ಅನುಭವ. “ನೀನು ಇಂದಿರಾಳ ನೆರೆಮನೆಯವರ ಹುಡುಗನಲ್ಲವೇನೋ? ಹೆಸರೇನೋ?” ಎಂದ. ಅವನ ಮಾತಿನ ದರ್ಪಕ್ಕೆ ಬೆರಗುಗೊಂಡು ”ರಾಮಚಂದ್ರ” ಎಂದೆ ತಡವರಿಸುತ್ತ. ”ರಾಮಚಂದ್ರ, ಇದು ನೋಡು ಈ ಲಕ್ಕೋಟೆ. ಇದನ್ನು ಕೂಡಲೇ ಹೋಗಿ ಇಂದಿರಾಗೆ ಕೊಡು” ಎಂದ, ತಾನು ಅಂದಂತೆ ನಾನು ಮಾಡಿಯೇ ಮಾಡುತ್ತೇನೆ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲದ ಸ್ಫುಟವಾದ ಧ್ವನಿಯಲ್ಲಿ. ಅವರಿಬ್ಬರ ಸಂಚಿನಲ್ಲಿ ಭಾಗವಹಿಸುವ ಆ ಮೂಹುರ್ತವನ್ನೇ ಕಾಯುತ್ತಿದ್ದವನ ಹಾಗೆ ಲಕೋಟೆಯನ್ನು ಕೈಗೆ ತೆಗೆದುಕೊಂಡವನೇ ಅಲ್ಲಿಂದ ಕಾಲುಕಿತ್ತು ಓಡಹತ್ತಿದೆ. ಇಂದಿರಕ್ಕನಿಗೆ ಲಕೋಟೆ ಮುಟ್ಟಿಸುವ ಆತುರವೋ ಅವನ ದರ್ಪದಿಂದ ದೂರ ಸರಿಯುವ ಅವಸರವೋ, ಅಂತೂ ಚಕ್ರಖಂಡೇಶ್ವರ ದೇಗುಲ ತಲುಪುವವರೆಗೂ ಓಟದ ವೇಗ ತಗ್ಗಿಸಲಿಲ್ಲ. ಮನೆ ಸೇರಲು ಚಕ್ರಖಂಡೇಶ್ವರ ದಾಟಲೇ ಬೇಕೆಂದಿಲ್ಲವಾಗಿತ್ತು. ಹೆಜ್ಜೆಗಳು ಮಾತ್ರ ಅತ್ತವೇ ಬಿದ್ದಿದ್ದವು.

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

ನಿರ್ಜನವಾದ ಹಾಳುಬಿದ್ದ ಆ ಗುಡಿ ಹೊಕ್ಕವನೇ ಓಟದ ದಣಿವಾರಿಸಲೆಂಬಂತೆ ಕೆಂಪು ಬಣ್ಣದ ಗಾರೆ ಮೆತ್ತಿದ ಪೌಳಿಯನ್ನು ಹತ್ತಿ ಕುಳಿತೆ. ಕುತೂಹಲಕ್ಕೆಂಬಂತೆ ಲಕೋಟೆಯನ್ನು ಬೆಳಕಿಗೆ ಅಡ್ಡ ಹಿಡಿದು ನೋಡಿದರೆ ಕೆಲವೇ ಅಕ್ಷರಗಳನ್ನು ಗೀಚಿದ ಸಣ್ಣ ಚೀಟಿಯಿದ್ದಂತಿತ್ತು. ಅದೆಂತಹ ದುಷ್ಟಬುದ್ದಿ ಹುಟ್ಟಿತೋ. ನಾನೇನು ಮಾಡುತ್ತಿದ್ದೇನೆ ಎನ್ನುವುದರ ಅರಿವು ಮೂಡುವ ಮೊದಲೇ ಲಕೋಟೆಯ ಬಾಯಿ ತೆರೆದು ಚೀಟಿಯನ್ನು ಹೊರತೆಗೆದಿದ್ದೆ. ಓದಿದ್ದೆ: ರಾತ್ರಿ ಊಟವಾದದ್ದೇ ನಿಮ್ಮದನಗಳ ಕೊಟ್ಟಿಗೆಯ ಹತ್ತಿರ ಬಾ ಕಾಯುತ್ತೇನೆ ಎನ್ನುವ ಅರ್ಥದ ಸಂದೇಶ ಹೊತ್ತ ಚೀಟಿ. ಸಿಟ್ಟು ಬಂತು. ಹೇಸಿಗೆಯೆನಿಸಿತು. ಸರ್ವೋತ್ತಮ ಹೇಳಿದ್ದು ನಿಜ ಹಾಗಾದರೆ. ಆದರೂ ನನಗಾವ ಅಧಿಕಾರವಿತ್ತೆಂದಾಗಬೇಡವೇ ಈ ಪತ್ರವನ್ನೊಡೆದು ಹೀಗೆ ಓದಲು? ಬೆವತೆ. ಬೇರೆಯವರ ಪತ್ರವನ್ನು ಹೀಗೆ ಗುಟ್ಟಾಗಿ ಓದುವುದು ಪಾಪವೆಂದು ಬಗೆದೆನೋ, ನಾಳೆ ಗುಟ್ಟು ರಟ್ಟಾದೀತು ಎಂದು ಹೆದರಿದೆನೋ ತಿಳಿಯದು. ನನ್ನ ಇಂದಿರಕ್ಕನ ಬಗ್ಗೆ ಜನರಾಡಿಕೊಳ್ಳುತ್ತಿದ್ದದ್ದು ಸತ್ಯವೋ ಕಟ್ಟುಕತೆಯೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಲೆಂದೇ ಓದಿರಬಾರದೇಕೆ?- ಸಮರ್ಥಿಸಿಕೊಂಡಷ್ಟೂ ಅಸಮಾಧಾನವೇ ಹೆಚ್ಚಾಗಿ ತಲ್ಲಣಿಸಿದೆ. ಥತ್! ನನಗೇಕೆ ಇಲ್ಲದ ಉಪಾದ್ವ್ಯಾಪ. ಪತ್ರವನ್ನು ತಿರುಗಿ ಲಕೋಟೆಯಲ್ಲಿ ಹಾಕಿ ಕೊಟ್ಟರಾಯಿತು ಎಂದು ಯೋಚಿಸಿ ಲಕೋಟೆಯನ್ನು ಕೈಗೆ ತೆಗೆದುಕೊಂಡರೆ ಅದು ಹರಿದಿತ್ತು. ಹತಾಶನಾಗಿ ಹಿಂದು ಮುಂದಿನ ವಿಚಾರ ಮಾಡದೇ ಲಕೋಟೆ ಪತ್ರ ಎರಡನ್ನೂ ಹರಿದು ಚೂರು ಚೂರು ಮಾಡಿ ದೇವಸ್ಥಾನದ ಹಿಂದಿನ ತರಗೆಲೆಗಳಲ್ಲಿ ತೂರಿಬಿಟ್ಟಿದ್ದೇ ತಡ- ನನ್ನ ದುಷ್ಟ ಕೃತ್ಯಕ್ಕೆ ಸಾಕ್ಷಿಯಾಗಿ ನಿಂತು ನೋಡುತ್ತಿದ್ದ ಚಕ್ರಖಂಡೇಶ್ವರನ ಸಿಟ್ಟು ದೊಡ್ಡ ನಾಗರಹೂವಿನ ರೂಪದಲ್ಲಿ ಬೆನ್ನಟ್ಟಿ ಬರುತ್ತಿದೆಯೆನ್ನುವಂತಹ ಭ್ರಮೆಯಾಗಿ ಅಲ್ಲಿಂದ ಓಡಹತ್ತಿದೆ. ಓಡಿ ಓಡಿ ಸಾವೇರನ ಎಣ್ಣೆಯ ಗಾಣವನ್ನು ಸಮೀಪಿಸುವ ಹೊತ್ತಿಗೆ ಇಂದಿರಕ್ಕ ಅವಳ ಮಿಂಡ ಇಬ್ಬರೂ ಅರಿವಿನಿಂದ ಕಳಚಿಬಿದ್ದು ನನ್ನ ಪಾಪ ಕೃತ್ಯವಷ್ಟೇ ಮನಸ್ಸನ್ನು ಅವರಿಸಿ ನಿಂತಿತು. ರಾತ್ರಿ ಊಟ ಮುಗಿಸಿ ನಿದ್ದೆ ಮಾಡಲೆಂದರೆ ನಿದ್ದೆ ಬರದಾಯಿತು. ಅವರು ಭೇಟಿಯಾಗಲಿದ್ದ ಹೊತ್ತು ಹತ್ತಿರವಾಗುತ್ತಿದ್ದ ಹಾಗಂತೂ ಮನಸ್ಸು ವ್ಯಗ್ರಗೊಂಡು ತಳಮಳಿಸಿ ಹಾಸಿಗೆಯಲ್ಲಿ ಹೊರಳಾಡಿದೆ. ಕೊನೆಗೊಮ್ಮೆ- ನನ್ನ ಇಂದಿರಕ್ಕ ಒಳ್ಳೆಯವಳೇ. ಇವನೇ ದುಷ್ಟ. ಅಂತೂ ಜರುಗಬಹುದಾಗಿದ್ದ ಒಂದು ದೊಡ್ಡ ಪಾಪಕೃತ್ಯದಿಂದ ಅವಳನ್ನು ಪಾರುಮಾಡಿದೆನೆಂದು ಥಟ್ಟನೆಂಬಂತೆ ಹೊಳೆದ ನನ್ನ ಕೃತ್ಯಕ್ಕೆ ಇದ್ದಿರಲೂಬಹುದಾದ- ಈ ಹೊಸ ಅರ್ಥದಿಂದ ನಿರಾಳವೆನಿಸಿ ನಿದ್ದೆಹೋದ.

ಬೆಳಿಗ್ಗೆ ಏಳುವಾಗ ಮಾತ್ರ ಅದೇ ಕಣ್ಣು ತೆರೆಯಹತ್ತಿದ್ದ, ಬೆಳಕು ಕಾಣಹತ್ತಿದ್ದ ಜಗತ್ತಿನಲ್ಲಿ ಯಾರೊಬ್ಬರಿಗೂ ಗೊತ್ತಿರದ ಪಾಪದ ಗುಟ್ಟನ್ನು ಹೊತ್ತ ಎದೆ ತಿರುಗಿ ಭಾರವಾಗಿತ್ತು. ಅಂದಿನಿಂದಲೇ ಆರಂಭವಾಗಿತ್ತೇನೋ ಬಾಳಿನ ಉದ್ದಕ್ಕೂ ನನಗೆ ಗುಣವಾಗದ ರೋಗದ ಜಿಗುಟುತನದಿಂದ ಅಂಟಿಕೊಂಡು ಬಂದ- ವಿಚಾರಗಳಿಗೆ, ಭಾವನೆಗಳಿಗೆ ಕಾವು ಕೊಡುವ ನನ್ನ ದುರಭ್ಯಾಸ. ಈವರೆಗೆ ಹತ್ತು ಸಾವಿರ ರೀತಿಯಿಂದ ಆ ಪತ್ರವನ್ನು ಹರಿದೊಗೆದ ಕೃತ್ಯವನ್ನು ವಿಶ್ಲೇಷಿಸಿದ್ದೇನೆ. ಹಾಗೆ ಹರಿದೊಗೆದದ್ದರ ಪರಿಣಾಮದಿಂದ ಹರಿದದ್ದನ್ನು ಸಮರ್ಥಿಸಿಕೊಂಡಿದ್ದೇನೆ. ಆದರೂ ಪತ್ರವನ್ನು ತೆರೆಯುವ ಗಳಿಗೆಯಲ್ಲೇ, ಓದಿ ಹರಿದೊಗೆಯುವ ಗಳಿಗೆಯಲ್ಲೇ ಆ ಉದ್ದೇಶ ಹೊಳೆದಿರಲಿಕ್ಕಿಲ್ಲ ಅಲ್ಲವೇ ಎಂಬ ಸಂಶಯದಿಂದ ತಳಮಳಿಸಿದ್ದೇನೆ. ಯಾರೊಡನೆಯೂ ಹಂಚಿಕೊಳ್ಳಲಾಗದ ಗುಟ್ಟಿನ ವೇದನೆ ಉಳಿದ ಅನೇಕ ಗುಟ್ಟುಗಳಿಗೂ ತೆಕ್ಕೆ ಹಾಕಿ ಎದೆಯಲ್ಲಿ ಸುಡುವ ಹುಣ್ಣಿನ ಹಾಗೆ ಬೆಳೆಯಹತ್ತಿದಾಗ ಸಂಕಟಪಟ್ಟಿದ್ದೇನೆ. ಹರಿದ ಪತ್ರದ ತುಂಡುಗಳನ್ನು ಮತ್ತೆ ಒಂದುಗೂಡಿಸಿದ ಹಾಗೆ, ಒಂದುಗೂಡಿಸಿ ಲಕೋಟೆಯಲ್ಲಿ ಹಾಕಿ ಮುಚ್ಚಿದ ಹಾಗೆ, ಮತ್ತೆ ತೆರೆದ ಹಾಗೆ- ಒಟ್ಟಿನಲ್ಲಿ ಕೊನೆಗೂ ತನ್ನ ವಿಳಾಸ ಮುಟ್ಟಿರದ ಸಂದೇಶದ ಹಾಗೆ ನನ್ನ ಭಾವನೆಗಳು, ಅನ್ನಿಸಿಕೆಗಳು, ನಂಬಿಕೆಗಳು, ವಿಚಾರಗಳು ಎಲ್ಲ ನಾನು ಈವರೆಗೆ ಬರೆದದ್ದರ ಆದ್ಯಂತವೂ ಒಂದಕ್ಕೊಂದು ವಿರುದ್ಧವಾದ ದಿಕ್ಕುಗಳಲ್ಲೇ ವಿಶ್ಲೇಷಣೆಗೊಂಡು ಯಾವ ಒಂದು ನಿಲುಗಡೆಗೆ ಬರದೇನೇ ಅಂತರಪಿಶಾಚಿಗಳ ಹಾಗೆ ತೇಲಾಡಿವೆ…

ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಝಗ್ ಎಂದು ಹೊತ್ತಿಕೊಂಡ ಬೀದಿಯ ದೀಪ ಭಾವಸಮಾಧಿಗೆ ಭಂಗ ತಂದಿತು. ಕತ್ತಲು ಕವಿದದ್ದರಿಂದ ಬಂಡೆಗಳ ಮೇಲೆ ಕೂತ ಜನ ಬೆದರಹತ್ತಿದಾಗ ರಸ್ತೆಯ ಮುರುಕಿನಲ್ಲಿದ್ದ ಬಸ್‌ಸ್ಟಾಪಿನಲ್ಲಿ ಗದ್ದಲ ಶುರುವಾಯಿತು. ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಕಾಣದಿದ್ದರೂ ತನ್ನ ಅಸ್ತಿತ್ವವನ್ನು ನಿಲ್ಲಿಸದೆ ಸಾರುವ, ಹೊರಳಾಡುತ್ತ ಉಬ್ಬಸಪಡುವ ನೀರಿನ ಸದ್ದು ಮತ್ತೆ ಕಿವಿಗೆ ಬೀಳಹತ್ತಿತ್ತು. “ಈಗಲಾದರೂ ದೀಪ ಹಾಕಲೇ ಅಪ್ಪ?” ಎಂದು ಕೇಳಿದ ನನ್ನ ಮಗಳು ನನ್ನ ಉತ್ತರವನ್ನು ಕಾಯದೇ ಬಾಲ್ಕನಿಯಲ್ಲಿಯ, ಹಾಲಿನಲ್ಲಿಯ ದೀಪಗಳನ್ನು ಬೆಳಗಿಸಿದಳು. ಗುಟ್ಟಾದುದನ್ನು ಹೇಳುವವಳ ರೀತಿ ಹತ್ತಿರ ಬಂದು, ”ಅಪ್ಪಾ, ಇಂದಿರಕ್ಕ ನೀನು ಅವಳ ಬಗ್ಗೆ ಬರೆದ ಕತೆ ಓದಿದ್ದಾಳಂತೆ” ಎಂದಳು. ನಾನು ಬರೇ ”ಹೌದೇ?” ಎಂದೆ. ರಾತ್ರಿ, ಊಟ ಮುಗಿದು ಮಲಗುವ ಕೋಣೆ ಸೇರಿ ಹಾಸಿಗೆಯಲ್ಲಿ ಅಡ್ಡವಾದಾಗ ಹೆಂಡತಿಗೆ ಕೇಳಿದೆ, ”ಇಂದಿರಕ್ಕ ಒಮ್ಮಿಂದೊಮ್ಮೆಗೆ ಮುಂಬಯಿಗೆ ಬಂದ ಕಾರಣ ತಿಳಿಯಿತೇ?”

”ಹೌದು, ನಿಮ್ಮನ್ನು ಭೆಟ್ಟಿಯಾಗಲೆಂದೇ ಬಂದದ್ದಲ್ಲ. ನಾಡಿದ್ದು ಇಲ್ಲಿಂದ ಕಾಶಿಗೆ ಹೋಗುವ ಒಂದು ಸ್ಪೆಶಲ್ ಟ್ರೇನು ಹೊರಡುತ್ತದಂತೆ- ಯಾತ್ರೆಗೆ ಹೋಗುವವರ ಸಲುವಾಗಿ. ನಮ್ಮತ್ತ ಕಡೆಯಿಂದ ಬಂದ ಜನವೇ ಇಪ್ಪತ್ತೈದು ಮೂವ್ವತ್ತಕ್ಕೆ ಮಿಕ್ಕಿದೆಯಂತೆ. ಬೆಳಗ್ಗೆ ಇವಳನ್ನು ಇಲ್ಲಿ ಬಿಡಲು ಬಂದಿದ್ದನಲ್ಲ ಹುಡುಗ- ಅವನೂ ಹೋಗುತ್ತಾನಂತೆ. ಇವರೆಲ್ಲರ ಜೊತೆ ಯಾತ್ರೆಗೆ ಹೊರಟಿದ್ದಾಳೆ. ನೀವೇ ವೀಟೀಗೆ ಹೋಗಿ ಟ್ರೈನ್ ಹತ್ತಿಸಿಕೊಡಬೇಕಂತೆ.” ತಿಳಿಹೇಳುವ ಧಾಟಿಯಲ್ಲಿ ವಿವರಿಸಿದಳು, ಹೆಂಡತಿ. ಅವಳ ಭೇಟಿಯ ನಿಜವಾದ ಕಾರಣ ಗೊತ್ತಾದದ್ದೇ ಒಳಗೊಳಗೇ ಶೇಖರಿಸ ಹತ್ತಿದ ದುಗುಡ ಕರಗ ಹತ್ತಿದ ಅನುಭವವಾಗಿ ನೆಮ್ಮದಿಯೆನಿಸಿತು.

”ನನ್ನ ಕತೆ ಓದಿದ್ದಾಳಂತೆ ಹೌದೆ? ನೀನು ಯಾಕೆ ಏನೂ ಹೇಳಲಿಲ್ಲ?”

”ನಿಮ್ಮ ಸ್ವಭಾವ ನನಗೆ ಗೊತ್ತಿದ್ದರಿಂದ. ಅವಳ ಹೆಸರನ್ನಾದರೂ ಬದಲು ಮಾಡಿ ಪ್ರಕಟಿಸಿ ಎಂದು ಹೇಳಿದರೂ ಕೇಳಲಿಲ್ಲ. ಅಲ್ಲಿ ಬಂದ ಅನುಭವದಿಂದ ಬಿಡುಗಡೆ ಹೊಂದಬೇಕಾದರೆ ಅವಳ ಹೆಸರೇ ಅವಶ್ಯ ಎಂಬ ದೊಡ್ಡ ದೊಡ್ಡ ಮಾತುಗಳನ್ನಾಡಿದಿರಿ. ಅವಳೆಲ್ಲಿ ಆ ಕತೆ ಓದುತ್ತಾಳೆಂದಾಗಬೇಡವೇ ಎಂದೂ ಅಂದಿರಿ. ಈಗ ಅವಳು ಓದಿದ್ದಾಳೆ ಎಂದು ಗೊತ್ತಾದ ಮೇಲೆ ಅವಳ ಮನಸ್ಸಿಗೆ ನೋವಾಯಿತೇನೋ ಎಂಬ ಭೀತಿ ಅಲ್ಲವೇ? ಹೆದರಬೇಡಿ. ಅಂತಹದೇನೂ ಅವಳೆನ್ನಲಿಲ್ಲ. ಸುಮ್ಮನೆ ‘ಕತೆ ಓದಿದೆ’ ಎಂದಷ್ಟೇ ಹೇಳಿದಳು” ಎಂದಳು…

ಇದರ ಮರುದಿವಸ ತುಂಬ ಸುಖದಲ್ಲಿಯೇ ಕಳೆಯಿತೆನ್ನಬೇಕು. ಶನಿವಾರವಾದ್ದರಿಂದ ಆಫೀಸಿಗೆ ಅರ್ಧ ದಿನದ ಸೂಟಿ. ಬೆಳಗ್ಗಿನ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೆ ಮನೆಗೇ ಬಂದದ್ದೆ. ಇಂದಿರಕ್ಕ ಬಂದದ್ದರ ಕಾರಣ ಏನೆನ್ನುವುದು ಸ್ಪಷ್ಟವಾಗಿ ಗೊತ್ತಾದದ್ದಕ್ಕೋ ಏನೋ ಆಫೀಸಿನಿಂದ ಬರುವಾಗಲೇ ಬಹಳ ಗೆಲುವಾದ ಮೂಡಿನಲ್ಲಿದ್ದೆ. ಊಟವಾದದ್ದೇ ಸಣ್ಣ ನಿದ್ದೆಮಾಡಿ ಎದ್ದಮೇಲೆ ಇಂದಿರಕ್ಕನಿಗೆ, ಚಹ ಕುಡಿದು ಹೊರಗೆ ಹೋಗೋಣ, ಆಸುಪಾಸಿನ ಊರು ತೋರಿಸುತ್ತೇನೆ ಎಂದು ಸೂಚಿಸಿದಾಗ ಬೇಡವೆಂದಳು. ನಿನ್ನೆ ಬಸ್ಸಿನಿಂದ ಬಂದ ದಣಿವೇ ಇನ್ನೂ ಕಳೆದಿಲ್ಲ, ನಾಳೆ ಬೇರೆ ಎರಡು ದಿನಗಳ ಪ್ರವಾಸದ ಮೇಲೆ ಹೊರಡಬೇಕು. ಕಾಶಿಯಿಂದ ಬಂದ ಮೇಲೆ ನೋಡೋಣ, ಎಂದಳು. ನಮಗೂ ಅದು ಸರಿಯೆಂದು ತೋರಿದ್ದರಿಂದ ಹೊರಗೆ ಹೋಗುವ ವಿಚಾರ ಬಿಟ್ಟುಕೊಟ್ಟೆವು. ಬಾಲ್ಕನಿಯಲ್ಲೇ ಕುರ್ಚಿ ಹಾಕಿ ಮುಂದೆಯೇ ಹಬ್ಬಿಕೊಂಡ ನೀರಿನ ಪ್ರಚಂಡ ಉತ್ಸಾಹಕ್ಕೆ ಮನಸ್ಸನ್ನು ತೆರೆದು ಕೂತೆವು. ಇನ್ನೂ ಬಾಡದೇ ಇದ್ದ ಸ್ವಚ್ಛವಾದ ಸ್ಫುಟವಾದ ಸಂಜೆಯ ಬೆಳಕಿನಲ್ಲಿ ತಕಪಕನೆ ಹೊಳೆಯುತ್ತ ಎದ್ದೆದ್ದು ಬೀಳುವ ದೊಡ್ಡ ದೊಡ್ಡ ತೆರೆಗಳು, ಅವುಗಳನ್ನೇ ನೋಡುತ್ತ ಕುಳಿತ ನನ್ನಲ್ಲೂ ನೆನಪುಗಳ ತೆರೆಗಳನ್ನೆಬ್ಬಿಸಿದುವು. ಕೇಳಿಯೇ ಕೇಳಿದೆ: ಪೀರಹಬ್ಬದ ಮೆರವಣಿಗೆಯಲ್ಲಿ ಒಂದು ಕೈಯಲ್ಲಿ ಲೋಭಾನದ ಹರಿವಾಣಗಳನ್ನೂ ಇನ್ನೊಂದರಲ್ಲಿ ನವಿಲುಗರಿಗಳ ಚಾಮರವನ್ನೂ ಹಿಡಿದು ಮಂತ್ರವಾದಿಯ ಹಾಗೆ ನಡೆಯುತ್ತಿದ್ದ ಬುಡಣಸಾಬರ ಕುರಿತು. ಶಿವರಾತ್ರಿಯ ದಿನಗಳಲ್ಲಿ ಅಭಿಷೇಕಕ್ಕೆಂದು ಬಂದ ಉತ್ತರ ಹಿಂದುಸ್ತಾನದ ದಂಪತಿಗಳನ್ನು ಹೆಂಗಸಿನ ಮೈಮೇಲಿನ ಬಂಗಾರದ ದುರಾಶೆಯಿಂದ ಕೊಂದು ಅಡುಗೆಮನೆಯಲ್ಲೇ ಹುಗಿದು ಫಾಸಿಗೆ ಹೋದ ಗೋಕರ್ಣದ ಭಟ್ಟರ ಮನೆಯವರನ್ನು ಕುರಿತು. ಮೂಲಗೇಣಿಯ ಒಕ್ಕಲಾದ ಕುಂಟನ ಮನೆಯ ಬೀರ, ಕಾಳೇಗೌಡರ ಬಗ್ಗೆ ಅಮಾವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ಹುಚ್ಚು ಹಿಡಿದು-‘ಖೊಟ್ಟೆ ರೊಟ್ಟಿ ಕೊಡಿರೋ’ ಎನ್ನುತ್ತ ಊರೂರು ಅಲೆಯುತ್ತಿದ್ದ ಮಳ್ಳ ಹನುಮನ ಬಗ್ಗೆ. ಊರ ಪಟೇಲರಾದ ಸಣ್ಣಮ್ಮನಾಯ್ಕ; ಕಲಾಯಿಕಾರ ಕರೀಮ, ಶೇಖ ಫರೀದ್, ಬಡಿಗ ಸಣ್ಣಪ್ಪಾಚಾರಿ, ಗಾಣಿಗ ಸಾವೇರ, ಮಡಿವಾಳ ಮಾದೇವ, ಸೂಲಗಿತ್ತಿ ಸಂತಾನ್, ಚಿಕ್ಕಂದಿನ ಗೆಳೆಯರಾಸ ಬಸ್ತ್ಯಾಂವ್, ಅಂತೋನಿ, ದಿನ್ನಿ; ಸೂಳೆಯರಾದ ನಾಗಮ್ಮ, ಬೀರಮ್ಮ; ಊರಿನ ಅಂಗಡಿಕಾರರು, ಸಾಲೆಯ ಮಾಸ್ತರರು; ಗುನಗರು, ಪೂಜಾರಿಗಳು; ಗೇರು ಹಕ್ಕಲು, ಕರಡು ಹುಲ್ಲು, ಮೊಗೆಕಾಯಿ ಬೇಣಗಳು, ಹಿತ್ತಿಲ ಬೇಲಿಗಳು, ಹಿತ್ತಲಕಾಯಿ, ಹೂವುಗಳು, ದೇಗುಲ, ಇಗರ್ಜಿ, ಮಠಗಳು, ಕೀರ್ತನೆ ಭಜನೆಗಳು, ತೇರು, ಬಂಡೀಹಬ್ಬ ಓಕುಳಿಗಳು; ಸುತ್ತಲಿನ ಹಳ್ಳಿಗಳು, ನದಿ, ಹಳ್ಳ, ತಾರಿ, ಸಂಕ, ಹೊಂಡ, ತೀರ್ಥಗಳು- ಎಲ್ಲ ನೆನಪು ಆದ ಆದಂತೆ ಮಾತಿನಲ್ಲಿ ಬಂದು ಮನಸ್ಸಿಗೆ ಬಂದು ಮನಸ್ಸಿಗೆ ಖುಷಿಯಾಯಿತು. ಇಂದಿರಕ್ಕ ಕೌತುಕ ತುಂಬಿದ ಮುಗುಳುನಗೆ ಬೀರುತ್ತ ಲಕ್ಷ್ಯ ಕೊಟ್ಟು ಆಲಿಸಿದಳು. ಎಷ್ಟೊಂದನ್ನೆಲ್ಲ ನೆನಪಿನಲ್ಲಿ ತುಂಬಿ ಇಟ್ಟುಕೊಂಡೀಯಪ್ಪಾ ಎನ್ನುತ್ತ ಕೇಳಿದ್ದಕ್ಕೆಲ್ಲ ಉತ್ತರ ಕೊಟ್ಟಳು. ನಡುವೆಯೇ ಒಮ್ಮೆ ಎಲ್ಲ ಬಿಟ್ಟು ಊರಿನ ಬಾವಿಗಳ ಬಗ್ಗೆ ಯಾಕೆ ಇಷ್ಟೊಂದು ನೆನಪು? ಎಂದಳು. ದಿಗಿಲಾಗುತ್ತಿದೆ: ಬಾವಿಗಳ ಬಗ್ಗೆ ಕೇಳಿದ್ದೇ ನನಗೆ ನೆನಪಿಲ್ಲ! ಅವಳು ಹಾಗೆ ಕೇಳಿದ್ದು ಲಕ್ಷ್ಯಕ್ಕೆ ಬಂದದ್ದು ಕೂಡ ರಾತ್ರಿ ಮಲಗಿದಲ್ಲಿ, ಸಂಜೆಯ ಮಾತುಗಳನ್ನು ಮೆಲಕು ಹಾಕುತ್ತಿದ್ದಾಗ…

ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು

ಬಾವಿ ಎಂದದ್ದಕ್ಕೋ ಏನೋ, ನೆನಪಾಯಿತು: ಪೊತ್ತೆ ಮೀಸೆಯವನ ಪ್ರಕರಣವಾದ ಒಂದೆರಡು ವರ್ಷಗಳಲ್ಲೇ ಬೇಸಿಗೆಯ ರಜೆಯಲ್ಲೊಮ್ಮೆ ಕಾಸರಗೋಡಿಗೆ ಅಜ್ಜನ ಮನೆಗೆ ಹೋಗಿದ್ದೆ. ಸೋದರ ಮಾವನ ಮಗ ರಾಘವ ನನ್ನ ಸರೀಕ. ಕೆಲವೇ ದಿನಗಳ ಮೊದಲು ಸಾಲೆಯ ಮಾಸ್ತರನೊಬ್ಬ ಆಕಸ್ಮಿಕವಾಗಿ ಬಾವಿಯಲ್ಲಿ ಹಾರಿ ಜೀವ ತೆಗೆದುಕೊಂಡದ್ದನ್ನು ವಿವರಪೂರ್ಣವಾಗಿ ವರ್ಣಿಸುತ್ತ “ಅವನನ್ನು ನಾವು ದೊಡ್ಡ ಮೀಸೆ ಮಾಸ್ತರರು ಎನ್ನುತ್ತಿದ್ದೆವು” ಅಂದಾಗ ಒಂದು ಕ್ಷಣದ ಮಟ್ಟಿಗೆ ಎದೆ ಧಸ್ ಎಂದಿತು. ಹಾಗೆ ಎದೆ ಧಸ್ ಎಂದದ್ದಕ್ಕೆ ಹೊಳೆದ ಕಾರಣ ಕೂಡ ಈಗ ನೆನಪಾಗಿ ಅದರ ಅಸಾಧ್ಯತೆಯ ಬಗ್ಗೆ, ವಿಕ್ಷಿಪ್ತತೆಯ ಬಗ್ಗೆ ನಗು ಬಂತು. ಹಾಗೂ ಇವತ್ತು ಕೂಡ ಅವಳು ನನ್ನ ಕತೆಯ ಬಗ್ಗೆ ತಿರುಗಿ ಮಾತೆತ್ತಲಿಲ್ಲವಲ್ಲ ಎಂಬುದರಿಂದ ಸಮಾಧಾನವೆನಿಸಿತು…

ಆದರೆ ಈ ಸಮಾಧಾನ ಬಹಳ ಕಾಲ ಬಾಳುವಂತಹದಾಗಿರಲಿಲ್ಲ ಎನ್ನುವದು ಗೊತ್ತಾದದ್ದು ಮಾರನೆಯ ದಿನ ಮುಂಜಾನೆ. ಒಂದರ್ಥದಲ್ಲಿ ನನ್ನ ಇಂದಿನ ದುಃಖಕ್ಕೆ, ನೋವಿಗೆ ಗೋಪುರ ಕಟ್ಟಿದ ಘಟನೆ ನಡೆದದ್ದೇ ಆಗ…

ನನಗಂದು ದಿನಕ್ಕಿಂತ ಬೇಗ ಎಚ್ಚರವಾಯಿತು. ನಿನ್ನೆ ಹಳ್ಳಿಯನ್ನು ನೆನೆದು ಅಷ್ಟೊಂದು ಮಾತನಾಡಿದ್ದಕ್ಕೋ ಏನೋ ಒಳಗಿನ ಗಂಟುಗಳೆಲ್ಲ ತಂತಾನೆ ಸಡಿಲಿ ಜೀವಕ್ಕೆ ಹಗುರವೆನಿಸಿತು. ಏನಾದರೂ ಬರೆಯೋಣವೆಂದು ಹಾಸಿಗೆಯಿಂದ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಬಾಲ್ಕನಿಯಲ್ಲಿ ಕೂಡಬೇಕೆಂದು ದೀಪ ಹಾಕಲು ಸ್ವಿಚ್ಚನ್ನು ಒತ್ತಲು ಹೋದರೆ, “ದೀಪ ಬೇಡ, ಹೀಗೇ ಸೊಗಸಾಗಿದೆ ನೋಡು” ಎಂದು ಬಾಲ್ಕನಿಯಿಂದ ಬಂದ ಇಂದಿರಕ್ಕನ ದನಿಗೆ ಜಿಗಿದು ಬೀಳುವಂತಾಯಿತು. ಹಾಲಿನಿಂದ ಬಾಲ್ಕನಿಗೆ ಹೋಗುವ ಬಾಗಿಲು ತೆರೆದೇ ಇದ್ದದ್ದೂ ಲಕ್ಷ್ಯಕ್ಕೆ ಬಂತು. ದೀಪ ಹಾಕದೇ ಬಾಲ್ಕನಿಗೆ ಹೋದಾಗ ತನ್ನ ಮುಂದಿನ ಕುರ್ಚಿ ತೋರಿಸಿ ಬಾ ಕೂಡ್ರು ಎಂದಳು, ನನ್ನ ಹಾದಿಯನ್ನು ಎಂದಿನಿಂದಲೇ ಕಾಯುತ್ತ ಕುಳಿತವಳ ಹಾಗೆ. ನಸುಕಿನಲ್ಲಿ ಇಲ್ಲಿ ನಿಜಕ್ಕೂ ತುಂಬ ಚೆನ್ನಾಗಿರುತ್ತದೆ ಅಲ್ಲವೇ ಎಂದಳು. ಯಾಕೋ ಇಂದಿರಕ್ಕನ ಧ್ವನಿ ಎಂದಿನದಾಗಿ ತೋರಲಿಲ್ಲ. ನೀರಿನ ಸ್ಪರ್ಶದಿಂದ ತಂಪಾಗಿ ಬೀಸುತ್ತಿದ್ದ ಗಾಳಿ, ಕನಸಿನ ಮಾಯೆಯಂತೆ ಚುಮು ಚುಮು ಬೆಳಕಿನಲ್ಲಿ ಈಗ ಕಂಡಂತಾಗಿ ಮರುಗಳಿಗೆ ಕಾಣಿಸದಂತೆ ಬರಿಯ ಶಬ್ದಮಾತ್ರವಾಗಿ ಅರಿವನ್ನು ತಟ್ಟುತ್ತಿದ್ದ ನೀರು ತಮ್ಮ ಎಂದಿನ ಆಹ್ಲಾದಕರತೆಯನ್ನು ಕಳೆದುಕೊಂಡಿದ್ದವು. ನನ್ನ ಕತೆಯ ಬಗ್ಗೆ ಮಾತನಾಡಲು ಎಲ್ಲ ಬಿಟ್ಟು ಈ ಗಳಿಗೆಯನ್ನು ಆರಿಸಿಕೊಂಡಳೋ ಎಂದು ಥಟ್ಟನೆ ಅನ್ನಿಸಿದಾಗ ಮೈಮೇಲೆ ಮುಳ್ಳು ನಿಂತವು. ಇಂದಿರಕ್ಕ ಯಾವುದೇ ರೀತಿಯ ಭಿಡೆ ದರಕಾರುಗಳಿಲ್ಲದೆ ನೇರವಾಗಿ ವಿಷಯಕ್ಕೆ ಬಂದು “ನಿನ್ನ ಕತೆ ಓದಿದ್ದೇನೆ” ಎಂದಳು. ಇದರ ಪೂರ್ವಪ್ರಜ್ಞೆ ಇದ್ದೂ ನನಗೆ ಹೊಟ್ಟೆಯಲ್ಲಿ ತಣ್ಣೀರು ಸುರಿದ ಅನುಭವ. ಹೊರಳಾಡುವ ನೀರು ಕೂಡ ಆ ಕ್ಷಣದ ಮಟ್ಟಿಗೆ ಹೊರಳಾಡುವದನ್ನು ಮರತೇ ಬಿಟ್ಟಂಥ ಭಾಸ…

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

“-ಹರಿದೊಗೆದ ಆ ಸಣ್ಣ ಚೀಟಿಯ ಮೂಲಕ ನೀನು ಅನುಭವಿಸುತ್ತ ಬಂದ ನೋವಿನ ಕಲ್ಪನೆ ನಾನು ಮಾಡಿಕೊಳ್ಳಬಲ್ಲೆ. ಆದರೆ ಪತ್ರಕ್ಕೆ ನೀನು ಹಚ್ಚಿದ ಅರ್ಥ ಸರಿಯಾದದ್ದಲ್ಲವೆಂದು ನಿನಗೂ ಗೊತ್ತಿದೆ” ಎಂದಳು. ಹರಿದೊಗೆವಾಗ- ಆ ಸಣ್ಣ ವಯಸ್ಸಿನಲ್ಲಿ ಇದ್ದಿರಲಿಕ್ಕಿಲ್ಲವಾದರೂ ಮುಂದೆ ದೊಡ್ಡವನಾದ ಮೇಲೆ ಹೆಣ್ಣಿನ ಅನುಭವ ಬಂದಮೇಲಾದರೂ ನನಗೆ ಗೊತ್ತಿರಬೇಕಂತೆ. ಮದುವೆಯಾದಾಗಿನಿಂದಲೇ ತನ್ನ ಗಂಡನ ಬಗ್ಗೆ -ಅವನು ಬದುಕಿದ್ದಾಗ, ಸತ್ತ ಮೇಲೆ ಕೂಡ ಅವಳಿಗನ್ನಿಸಿದ್ದ ತಿರಸ್ಕಾರ, ಜುಗುಪ್ಪೆ ಪಾಪದವು ಎಂದು ತೋರಿರಲಿಲ್ಲವಂತೆ. ಪ್ರಾಯ ತುಂಬಿ ತುಳುಕಾಡುತ್ತಿದ್ದ ಮೈಯ ಸೊಕ್ಕಿಗೆ ಪಾಪ-ಪುಣ್ಯಗಳ ತಾರತಮ್ಯ ಹೇಗೆ ಹೊಳೆಯಬೇಕು? ಯಾಕೆ ಹೊಳೆಯಬೇಕು? ನನ್ನ ಕತೆ ಓದಿ ಅವಳಿಗೆ ಸಿಟ್ಟೇ ಬಂದುಬಿಟ್ಟಿತಂತೆ, ಅಳುಬುರುಕರ ಅಜ್ಜಿಪುರಾಣವೆನ್ನಿಸಿತಂತೆ… “ನಿನಗೆ ಆ ಪತ್ರ ಹರಿದೊಗೆದ ಪಾಪವೇ ದೊಡ್ಡದಾಗಿ ತೋರಿತಲ್ಲವೆ? ಆದ್ದರಿಂದಲೇ ನನ್ನಿಂದಾಗಬಹುದಾಗಿದ್ದ ಒಂದು ಕೆಟ್ಟ ಕೆಲಸದಿಂದ ನನ್ನನ್ನು ರಕ್ಷಿಸಿದೆ ಎಂದು ಜಂಭ ಕೊಚ್ಚಿಕೊಂಡೆ” ಎಂದಳು… ನಾನು ಅವಳ ಮಿಂಡ ಎಂದು ಕರೆದ ಆ ಪೂತ್ತೆ ಮೀಸೆಯವನು ಅವಳ ಮಿಂಡನಾಗಿರಲಿಲ್ಲವಂತೆ. ಸಣ್ಣಂದಿನಿಂದಲೇ ಅವನನ್ನು ಪ್ರೀತಿಸಿದ್ದಳಂತೆ. ಮದುವೆ ಕೂಡ ಆಗುವವಳಿದ್ದಳಂತೆ. ಆದರೆ ಅವನು ಬೇರೆ ಜಾತಿಯವನಾಗಿದ್ದ. ಆಗಿದ್ದರೇನಂತೆ, ಅವನಿಗಿದ್ದ ಆರೋಗ್ಯ, ದೃಢಕಾಯ, ಗಟ್ಟಿಯಾದ ಗುಣಗಳು ಅವರ ಊರಿನಲ್ಲಿ ಇನ್ನಾವ ತರುಣನಲ್ಲಿದ್ದುವು? ಒಬ್ಬರನ್ನೊಬ್ಬರು ತುಂಬ ಮೆಚ್ಚಿಕೊಂಡಿದ್ದರು. ಬೆನ್ನೆಲುಬೇ ಗಟ್ಟಿಯಾಗಿರದ ಅವಳ ಅಪ್ಪ ಮಾತ್ರ ಈ ಸಂಬಂಧದ ಸುಳಿವು ಹತ್ತಿದ್ದೇ ಹೆದರಿ ರಾತೋರಾತ್ ಎಂಬಂತೆ ಈ ಪೆದ್ದು ಗಂಡನೊಡನೆ ಮದುವೆ ಗೊತ್ತುಮಾಡಿ ಬಂದುಬಿಟ್ಟ. ಗಂಡ ನಪುಂಸಕನಾಗಿದ್ದ ಎನ್ನುವುದು ಬರೇ ಗಾಳಿ ಮಾತಾಗಿರಲಿಲ್ಲವಂತೆ. ಸತ್ಯವಾದ ಸಂಗತಿಯಾಗಿತ್ತು… “ಹಿಂದಿನದರ ಎಲ್ಲ ಕಹಿಯನ್ನು ಕಳೆದುಕೊಳ್ಳಲೆಂದೇ ಈ ಯಾತ್ರೆಯನ್ನು ಕೈಗೊಂಡಿರದಿದ್ದರೆ ಇದನ್ನೆಲ್ಲ ಹೇಳುತ್ತಿದ್ದನೋ ಇಲ್ಲವೋ. ಕಾಶಿಗೆ ಹೋಗುವ ಮೊದಲೇ ಇದೆಲ್ಲದರ ಸೋಕ್ಷ ಮೋಕ್ಷವಾಗಿಯೇ ಬಿಡಲಿ. ಝಳಝಳ ತೊಳೆದು ಮನಸ್ಸು ಸ್ವಚ್ಛವಾದಾಗಲೇ ವಿಶ್ವೇಶ್ವರನ ದರ್ಶನ ಒದಗಲಿ ಎಂದು ಯಾಕೋ ಹಾಸಿಗೆಯಿಂದ ಏಳುವಾಗಲೇ ಥಟ್ಟನೆ ಹೊಳೆದುಹೋಯಿತು ನೋಡು. ಹೊಳೆದದ್ದೇ ಎದ್ದು ಬಂದುಬಿಟ್ಟೆ” ಎಂದಳು… “ಅವರು ಕೆನ್ಸರ್ ಆಗಿ ಸತ್ತದ್ದು ನಿನಗೆ ಗೊತ್ತಿದ್ದೂ, ಆ ಬಗ್ಗೆ ಚಕಾರ ಮಾತು ನಿನ್ನ ಕತೆಯಲ್ಲಿಲ್ಲ. ಯಾಕೆ? ಹೆದರಿಕೆಯಾಯಿತೆ?” ಎಂದು ಕೇಳಿದಳು… ಗಂಡನಿಗೆ ಆ ಭಾಗದಲ್ಲೇ ಕೆನ್ಸ‌ರ್ ಎಂದು ಗೊತ್ತಾದದ್ದು ಲಗ್ನವಾದ ಹತ್ತು ವರ್ಷಗಳ ಮೇಲಂತೆ. ಸಾಯುವ ಆರೇ ತಿಂಗಳ ಮೊದಲು. ಕೆನ್ಸರಿನ ಮೂಲಕವೇ ಅವನು ಷಂಡನಾಗಿದ್ದ. ಪಾಪ! ಅವನಿಗೂ ಗೊತ್ತಿರಲಿಲ್ಲ. ಆದರೆ ತನ್ನಿಂದ ಹೆಂಡತಿಗೆ ದೇಹಸುಖ ಸಿಗುವದು ಸಾಧ್ಯವಿಲ್ಲವೆಂದು ತಿಳಿದ ಮೇಲೆ ಒಂದು ದಿನ ಕಣ್ಣಿನಲ್ಲಿ ನೀರು ತಂದು -ಇಂದಿರಾ, ಇನ್ನೊಂದು ಮದುವೆಯಾಗುತ್ತೀಯಾ? ಎಂದು ಕೇಳಿದ್ದನಂತೆ. ಹಾಗೆ ಕೇಳಿದ್ದರ ಹಿಂದಿನ ದೊಡ್ಡ ಮನಸ್ಸಿನ ಅರ್ಥ ಈಗ ಆಗುತ್ತಿತ್ತು. ಆದರೆ ಆಗ ಮಾತ್ರ ಇದೂ ಒಂದು ಷಂಡ ಅನುಕಂಪವೇ ಎಂದು ತೋರಿ ಸಿಟ್ಟೇ ಬಂದಿತ್ತಂತೆ. ಬೇರೆ ಜಾತಿಯವನ ಕೂಡ ಮದುವೆಗೆ ಒಪ್ಪದ ಜನ ಇಂತಹ ಮದುವೆಗೆ ಒಪ್ಪುವುದುಂಟೆ?… ನಮಗಾರಿಗೂ ಇಲ್ಲದ ಗಟ್ಟಿತನ ತೋರಿಸಿದವನು ಅವನೊಬ್ಬನೇ ಅಂತೆ- ನಾನು ಅವಳ ಮಿಂಡ ಎಂದು ಕರೆದವನು. ನಾನು ಅವನನ್ನು ದಾಸಪ್ಪನ ಅಂಗಡಿಯಲ್ಲಿ ಭೆಟ್ಟಿಯಾದ ಸಂದರ್ಭದ ಒಂದೇ ತಿಂಗಳ ಹಿಂದೆ ಅವಳು ತನ್ನ ತವರುಮನೆಗೆ ಹೋಗಿದ್ದಾಗ ಒಮ್ಮೆ ಭೆಟ್ಟಿಯಾಗಿದ್ದನಂತೆ. ಅವಳ ಮದುವೆಯಾಗಿ ಆಗಲೇ ಐದು ವರ್ಷಗಳಾಗಿದ್ದರೂ ಅವನು ಮಾತ್ರ ಇನ್ನೂ ಮದುವೆಯಾಗಿರಲಿಲ್ಲ. ಮದುವೆಯೇ ಆಗಲಾರೆನೆಂದು ಆಣೆಭಾಷೆ ಮಾಡಿದ್ದನಂತೆ. ಇವಳ ಅಪ್ಪನ ಮನೆಗೆ ಹೋದಾಗ ಆಗೀಗ ಕಣ್ಣಿಗೆ ಬೀಳುತ್ತಿದ್ದನಾದರೂ ಮಾತನಾಡಿರಲಿಲ್ಲ. ಆ ದಿನಾ ಏನಾಯಿತೋ, ಅಪ್ಪ-ಅಮ್ಮ ಯಾರೂ ಮನೆಯಲ್ಲಿಲ್ಲದ ಹೊತ್ತನ್ನು ಸಾಧಿಸಿ ಇವಳನ್ನು ಸಂಧಿಸಿದ. ಎರಡೂ ಕೈರಟ್ಟೆಗಳನ್ನು ಹಿಡಿದು ಗಲಗಲ ಅಲ್ಲಾಡಿಸಿ ಇಂದಿರಾ, ಇನ್ನೆಷ್ಟು ದಿನವೆಂದು ನಾವು ಹೀಗೆ ಇರುವುದು? ಕೈಯಲ್ಲೆರಡು ಕಾಸೂ ಕೂಡಿವೆ ಈಗ. ನನ್ನ ಮಾತು ಕೇಳು, ಎಲ್ಲಿಗಾದರೂ ಓಡಿಹೋಗೋಣ. ಮುಂದಿನ ತಿಂಗಳೇ ಬರುತ್ತೇನೆ ಎಲ್ಲದರ ವ್ಯವಸ್ಥೆ ಮಾಡಿ. ಬಂದದ್ದೇ ನಿನಗೆ ಸುದ್ದಿ ಮುಟ್ಟಿಸುತ್ತೇನೆ. ನಾನು ತಿಳಿಸಿದಲ್ಲಿ ಬಂದು ನಿಲ್ಲು. ಇಷ್ಟು ಹೇಳಿದವನೇ ಅಲ್ಲಿಂದ ಹೊರಟುಹೋದನಂತೆ. ಕಣ್ಣಲ್ಲಿ ಕಲೆತ ನೀರನ್ನು ತೋರಿಸುವುದಿರಲಿಲ್ಲವೇನೋ. ಆದರೂ ಅದು ಅವಳಿಗೆ ಕಂಡಿತ್ತು. ಒಂದು ಗಳಿಗೆಯ ಮಟ್ಟಿಗಾದರೂ ಮನಸ್ಸಿಗೆ ಕಸಿವಿಸಿಯಾಗಿತ್ತು. ಅವನು ಹೇಳಿದ ತಿಂಗಳು ತಮ್ಮ ಊರಿಗೆ ಬಂದದ್ದೇ ಆದರೆ, ಓಡಿ ಹೋಗಲು ಕರೆ ಬಂದದ್ದೇ ಆದರೆ ಹೋಗುತ್ತಿದ್ದೆನೋ ಇಲ್ಲವೋ ಎಂಬುದನ್ನು ಈಗ ಹೇಳುವದು ಕಷ್ಟ ಎಂದಳು. ಆದರೆ ಆಗಿನ ಮಟ್ಟಿಗೆ ಅವನು ಬರುತ್ತೇನೆಂದು ಹೇಳಿದ ತಿಂಗಳಲ್ಲಿ ಬರದೇ ಇದ್ದುದರಿಂದ ಸಿಟ್ಟೆ ಬಂದಿತಂತೆ. ಮುಂದೊಂದು ದಿನ ತವರುಮನೆಗೆ ಹೋದಾಗ ಹನೇಹಳ್ಳಿಗೆ ಬರುತ್ತೇನೆಂದು ಹೇಳಿದ ತಿಂಗಳಲ್ಲೇ ಊರಿನಿಂದ ಬೇಪತ್ತೆಯಾಗಿದ್ದ ಸುದ್ದಿ ತಿಳಿದಾಗಂತೂ ಅವನ ಹೇಡಿತನಕ್ಕೆ ಜುಗುಪ್ಸೆ ಹುಟ್ಟಿತಂತೆ. ಇವನೂ ಉಳಿದ ಗಂಡಸರ ಹಾಗೇ ನೀರಿಲ್ಲದವನು ಅನ್ನಿಸಿತು. ಐದು ವರ್ಷಗಳ ಹಿಂದೆ ನನ್ನ ಕತೆ ಓದಿದ ಮೇಲೇ ಅವಳಿಗೆ ಗೊತ್ತಾದದ್ದು ಅವನು ನಿಜಕ್ಕೂ ತಾನಿತ್ತ ಭರವಸೆಗೆ ತಪ್ಪದೇ ಹನೇಹಳ್ಳಿಗೆ ಬಂದಿದ್ದ. ತನಗೆ ಹೇಳಿ ಕಳಿಸಿದ್ದ ಎನ್ನುವದು. ನನ್ನ ಕತೆ ಓದಿ ಆದ ಪರಿಣಾಮ ಇಷ್ಟೇ: ಅವನ ಬಗ್ಗೆ ಆ ಕ್ಷಣಕ್ಕೆ ತುಂಬ ಅಭಿಮಾನವೆನಿಸಿತು. ಆದರೂ ಏನು ಪ್ರಯೋಜನ ಕಾಲ ಮೀರಿದ ಮೇಲೆ ಬಂದ ಬುದ್ದಿಯಿಂದ? ಷಂಡ ಗಂಡನನ್ನು ಮದುವೆಯಾಗಿ, ಮದುವೆಯಾದ ಹತ್ತು ವರ್ಷಗಳಲ್ಲೇ ಅವನನ್ನೂ ಕಳೆದುಕೊಂಡು ದಿಕ್ಕುಗಾಣದೇ ನವೆಯುತ್ತಿದ್ದ ಅವಳ ಮೇಲೆ ನನ್ನ ಕತೆ ಬೇರೆ ಯಾವ ರೀತಿಯಿಂದಲೂ ಪರಿಣಾಮ ಮಾಡಲಿಲ್ಲವಂತೆ. ಅದರಲ್ಲಿ ಬಾಳಿನ ಬಗ್ಗೆ, ಇಹ-ಪರಗಳ ಬಗ್ಗೆ, ಪೊಳ್ಳಾದ ನನ್ನ ಅಪರಾಧ ಪ್ರಜ್ಞೆಯ ಬಗ್ಗೆ ನಾನು ಬರೆದ ದೊಡ್ಡ ದೊಡ್ಡ ಶಬ್ದಗಳು ಅವಳ ಆಗಿನ ಮನಸ್ಥಿತಿಯಲ್ಲಂತೂ ಎಳ್ಳಷ್ಟೂ ತಟ್ಟಲಿಲ್ಲವಂತೆ…

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

…ಮಾತು ಮುಗಿದದ್ದೇ ಇಂದಿರಕ್ಕ ದಣಿವು ಹತ್ತಿದವಳ ಹಾಗೆ ಕಣ್ಣುಮುಚ್ಚಿ ಕುಳಿತುಬಿಟ್ಟಳು. ಅವಳು ಹಾಗೆ ಕಣ್ಣುಮುಚ್ಚಿ ಕುಳಿತದ್ದನ್ನು ಬೆಕ್ಕಸಬೆರಗಾಗಿ ನೋಡುತ್ತಿದ್ದಂತೆ ಅವಳ ಒಳಗಡೆ ಆ ಕ್ಷಣದಲ್ಲಿ ನಡೆಯುತ್ತಿರಬಹುದಾದ ಭಾವನೆಗಳ ತುಮುಲಕ್ಕೂ ಕತ್ತಲೆಯನ್ನೊಡೆದು ಮೂಡಿಬರಹತ್ತಿದ್ದ- ಚಿತ್ತಕ್ಕೆ ಮಂಕು ಹಿಡಿಸುವ- ಮುಂಜಾವದ ಬೆಳಕಿಗೋ ಅಥವಾ ತಿಳಿಯಾಗಿ ವಿಚಾರ ಮಾಡಲಿಕ್ಕೇ ಬಿಡದ ನೀರಿನ ಸದ್ದಿಗೋ- ಒಟ್ಟಿನಲ್ಲಿ ಅವಳ ಮುಖಚರ್ಯೆಯಲ್ಲಿ ಕಂಡಂತಾದ ಅಮಾನುಷ ಕಳೆಯಿಂದಾಗಿ ನನಗೆ ವಿಲಕ್ಷಣವಾದ ಅನುಮಾನ: ಮುಂದಿನ ಕುರ್ಚಿಯಲ್ಲಿ ಮಾತನಾಡದೇ ಕುಳಿತ ಹೆಣ್ಣನ್ನು ನಾನು ಬಲ್ಲೆನೆಂದು ಖಂಡಿತವಾಗಿ ಹೇಳಬಲ್ಲೆನೇ? ಇವಳು ನಿಜಕ್ಕೂ ಯಾರು? ಯಾಕೆಂದು ಇವಳಿಂದಾಗಿ ಇಷ್ಟೊಂದು ಯಾತನೆ ಪಡುತ್ತಿದ್ದೇನೆ? ನನ್ನ ಯಾತನೆಗೆ ಕಾರಣವಾದ ಹೆಣ್ಣು ಇವಳೇ; ಪತ್ರ ಇದೇ ಎಂದಾದರೂ ಧೈರ್ಯದಿಂದ ಹೇಳಬಲ್ಲೆನೇ? ಅಥವಾ ಮನಸ್ಸಿನ ಕತ್ತಲೆಯ ಲೋಕದಿಂದ ಆಗಾಗ ಎದ್ದು ಬಂದು ಗಾಸಿಗೊಳಿಸುತ್ತಿದ್ದದ್ದಕ್ಕೇ ಅವಳ ಕತೆ ಈಗ ಪ್ರತೀಕವಾಗುತ್ತಿದೆಯೇ? ಇಲ್ಲವಾದರೆ, ವರುಷಗಳನ್ನೇ ಕಳೆದುಕೊಂಡು ಅಪ್ರಬುದ್ದ ಎಳೆಯನಾದವನ ರೀತಿಯಲ್ಲಿ ಎಂದೋ ಜರುಗಿದ್ದ ಸಂಗತಿಗಳಿಗೆ ಹೀಗೇಕೆ ಇಲ್ಲದ ಮೆರುಗನ್ನು ಕೊಡುತ್ತಿದ್ದೇನೆ? ಇದೀಗ ಅವಳ ಬಾಯಿಂದಲೇ ಕೇಳಿದ ಎಂದುಕೊಂಡಿದ್ದ -ಎಷ್ಟೋದಿನಗಳಿಂದ ಬಾಯಿಪಾಠ ಮಾಡಿ ಒಪ್ಪಿಸಿದಂತಿದ್ದ -ನಾಟಕೀಯವಾದ ಪತ್ರದ ಕತೆ ನಿಜಕ್ಕೂ ಅವಳೇ ಹೇಳಿದಳೇ? ಅಥವಾ ನನಗೆ ಮರೆತೇ ಹೋದದ್ದು ಈಗ ಥಟ್ಟನೇ ನೆನಪಿಗೆ ಬಂದಾಗ ಅವಳ ಬಾಯಿಂದಲೇ ತಿಳಿಯಿತೆಂದು ಭಾವಿಸಿದನೆ? ಇಲ್ಲ, ಅವಳೇ ಹೇಳಿದ್ದಕ್ಕೆ- ಅವಳು ಹೇಳಿದ್ದೆಂದು ನಾನೇ ನಂಬದ ಹಾಗೆ- ಈಗಿನ ನಾಟಕೀಯ ರೂಪ ಕೊಟ್ಟೆನೆ? ಯಾವುದೂ ಬಗೆಹರಿಯಲಿಲ್ಲ. ಎಡೆಬಿಡದೆ ಸಾಗಿದ ತೆರೆಗಳ ಅಲೌಕಿಕವಾದ ಸದ್ದು ವಿಚಾರ ಮಾಡಲು ಬಿಡುತ್ತಿರಲೇ ಇಲ್ಲ. ಇದೆಲ್ಲ ನನ್ನ ಭ್ರಮೆಯೇ ಆಗಿದ್ದಿರಬಹುದಾದರೂ ಅದರಲ್ಲಿ ಸತ್ಯಕ್ಕೆ ತೀರ ಹತ್ತಿರವಾದ ಅಂಶವೊಂದು ಹುದುಗಿತ್ತೆಂಬಂತೆ ಯಾರೋ ಬಾರಕೋಲಿನಿಂದ ನಿರ್ದಯವಾಗಿ ರಪ್ ರಪ್ ಎಂದು ಬಿಗಿದ ನೋವಿನಿಂದ ವಿಲಿವಿಲಿ ಒದ್ದಾಡುವ ಅನುಭವವಾಗಿ ಧಾರಾಳವಾಗಿ ಬೆವೆತುಬಿಟ್ಟೆ. ಇರಲೂ ಬಹುದೇನೋ -ಇಂತಹ ನೋವನ್ನು ಅನುಭವಿಸುವುದಕ್ಕಾಗಿಯೇ ಇಂದಿರಕ್ಕ ಹೇಳಿದ್ದನ್ನು ನಾನೇ ನನ್ನನ್ನು ನೋಯಿಸುವ ರೀತಿಯಲ್ಲಿ ಪರಿಗ್ರಹಿಸಿದ್ದೆ… ಬರುತ್ತೇನೆಂದು ಹೇಳಿದ ತಿಂಗಳಲ್ಲೇ ಬೇಪತ್ತೆಯಾದ ಆ ಪೊತ್ತೆ ಮೀಸೆಯವನು ಎಲ್ಲಿಗೆ ಹೋದ? ಮುಂದೆ ಎಂದಾದರೂ ಪತ್ತೆ ಹತ್ತಿತೆ? ಎಂದು ಕೇಳಬೇಕೆಂದುಕೊಂಡದ್ದು ಕೂಡ ಮರೆತೇಹೋಯಿತು.

ಒಂದನ್ನು ಮಾತ್ರ ಒಪ್ಪಿಕೊಳ್ಳಲೇಬೇಕು:

ನನ್ನ ಕೈಯಿಂದಾದ ತಪ್ಪಿನ ಸ್ಪಷ್ಟ ಪರಿಚಯವಾಗಿ ಅವಳ ಇಡೀ ಬದುಕು ಹೀಗೆ ಬಂಜರುಬಿದ್ದದ್ದಕ್ಕೆ ನಾನೇ ಕಾರಣನೇನೋ ಎಂಬ ಭಾವನೆ ಹುಟ್ಟಿದ ಕ್ಷಣದಲ್ಲಿ ಭೂತಕಾಲದಿಂದ ಧುಮುಕಿ ಬರುತ್ತಿದ್ದ ಭಯಕ್ಕೆ ಸೆಲೆಯಾದ ಇಂದಿರಕ್ಕನೇ ಸತ್ತು ಹೋಗಿದ್ದರೆ ಎಂದನ್ನಿಸಿತ್ತು. ಆಮೇಲೆ ನನ್ನ ದುಷ್ಟ ವಿಚಾರಕ್ಕೆ ಇಡೀ ದಿನ ಹಳಹಳಿಸಿದ್ದೆ…

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಸಂಜೆ, ಇಂದಿರಕ್ಕನನ್ನು ವ್ಹೀಟೀ ಸ್ಟೇಶನ್ನಿನಲ್ಲಿ ಟ್ರೇನ್ ಹತ್ತಿಸಿ ಬಂದದ್ದೇ ಮನಸ್ಸು ವಿಚಿತ್ರರೀತಿಯಿಂದ ಹಗುರವಾಗಿತ್ತು. ನನಗೇ ಮುಜುಗರವಾಗುವಷ್ಟು ಖುಷಿಯಲ್ಲಿತ್ತು. ಎಂದಿನಂತೆಯೇ ಪುಸ್ತಕವೊಂದರಲ್ಲಿ ತಲೆ ಹಾಕಿ ಕೂಡ್ರುವ ಮನಸ್ಸಾಗದೇ ಚಹ ಕುಡಿದು, ಡ್ರೆಸ್ ಬದಲಿಸಿ ಹೀಗೇ ತಿರುಗಾಡಿ ಬರುತ್ತೇನೆಂದು ಹೇಳಿ ಒಬ್ಬನೇ ಮನೆಯಿಂದ ಹೊರಬಿದ್ದೆ. ಮನಸ್ಸನ್ನಾವರಿಸಿ ಕುಳಿತುಬಿಟ್ಟ- ಎಂದೋ ಬಿಟ್ಟು ಬಂದ ಕತ್ತಲೆ ತುಂಬಿದ ಭೂತಕಾಲದತ್ತ ಬೇಡವೆಂದರೂ ಜಗ್ಗುತ್ತಿದ್ದ ಇಂದಿರಕ್ಕನ ಪ್ರಭಾವದಿಂದ, ಅದಕ್ಕಿಂತ ಹೆಚ್ಚಾಗಿ ಸತ್ಯಕ್ಕೆ ಕಣ್ಣುಮುಚ್ಚುವ ಹಲವು ಉಪಾಯಗಳನ್ನು ಕಲಿಸುತ್ತ ಪುಸ್ತಕ ಕಪಾಟುಗಳಲ್ಲಿ ಪದ್ಮಾಸನ ಹಾಕಿ ಕಣ್ಣುಮುಚ್ಚಿ ಕುಳಿತ ಗಂಭೀರ ಮುಖಮುದ್ರೆಯ ಪ್ರಭೃತಿಗಳಿಂದ ದೂರ ಸರಿದು ಕೆಲಹೊತ್ತು ನಾನು ನಾನೇ ಆಗಿ ಕಳೆಯುವ ಹಂಬಲದಿಂದ ಸೀದ ಸಮುದ್ರ ದಂಡೆಗೆ ನಡೆದು ದೊಡ್ಡ ಬಂಡೆಯೊಂದನ್ನು ಹತ್ತಿ, ಎದ್ದೆದ್ದು ಬೀಳುತ್ತಿದ್ದ ತೆರೆಗಳನ್ನು ನೋಡುತ್ತ ಕುಳಿತೆ. ಎಷ್ಟು ಹೊತ್ತು ಹಾಗೆ ಕಳೆದೆನೋ ಗೊತ್ತಿಲ್ಲ.

*

ಈ ಎಲ್ಲದಕ್ಕೆ ಕಲಶವಿಟ್ಟಂತಹ ಘಟನೆ ನಡೆದದ್ದು ಎಂಟು ದಿನಗಳ ನಂತರ. ಕಾಶಿಯಿಂದ ಬರುವ ಟ್ರೈನ್ ಆ ದಿನ ರಾತ್ರಿ ಹನ್ನೊಂದು ಗಂಟೆಗೆ ಬರುವದಿತ್ತು. ಹೊರಡುವ ಮೊದಲೇ ಮಾತನಾಡಿಕೊಂಡಂತೆ ನಾನು ನನ್ನ ಹೆಂಡತಿ ದಾದರ ಸ್ಟೇಶನ್ನಿನಲ್ಲಿ ಇಂದಿರಕ್ಕನನ್ನು ಇಳಿಸಿಕೊಳ್ಳಲು ಹೋಗಿದ್ದೆವು. ಹೊತ್ತಿಗಿಂತ ಅರ್ಧ ಗಂಟೆ ತಡವಾಗಿಯಾದರೂ ಕೊನೆಗೊಮ್ಮೆ ಟ್ರೈನ್ ಬಂದಿತು. ಬಂದದ್ದೇ ಕೂಲಿಗಳು, ತಮ್ಮ ತಮ್ಮ ಮಂದಿಯನ್ನು ಭೆಟ್ಟಿಯಾಗಲು ಬಂದವರ ಗದ್ದಲವೇ ಗದ್ದಲ. ಗದ್ದಲ ಕಡಿಮೆಯಾಗುವದನ್ನೇ ಕಾಯುತ್ತ ದೊಡ್ಡ ಗಡಿಯಾರದ ಕೆಳಗೆ ನಾವಿಬ್ಬರೂ ನಿಂತಿದ್ದೆವು. ಗದ್ದಲ ಕಡಿಮೆಯಾಗುವುದರ ಬದಲು ಹೊತ್ತು ಹೋದ ಹಾಗೆ ಹೆಚ್ಚೇ ಆಗಿ ಹಾಹಾಕಾರದ ರೂಪಕ್ಕೆ ಬಂದಾಗ ಪ್ಲಾಟ್‌ಫಾರ್ಮಿನ ಮೇಲಿನ ಗೊಂದಲ ಹೇಳತೀರದು. ನಮಗೆ ಏನೆಂದು ತಿಳಿಯದೇ ಗಾಬರಿಯಾಯಿತು. ಕೆಲಹೊತ್ತಿನ ಮೇಲೆ ಕಾಶಿಗೆ ಹೋದವರಲ್ಲಿ ಬಹಳ ಮಂದಿ ಅಲ್ಲಿ ಉಲ್ಬಣಿಸಿದ ಕಾಲರಾ ಜಾತಿಯ ಬೇನೆಯಿಂದ ಸೀಕಾಗಿ ಬಂದಿದ್ದಾರೆಂದೂ, ಕೆಲವರ ಸ್ಥಿತಿ ಬಹಳ ಚಿಂತಾಜನಕವಾಗಿದೆಯೆಂದೂ ತಿಳಿಯಿತು. ಡಾಕ್ಟರಿಗಾಗಿ, ಸ್ಟ್ರೆಚರ್ಸ್, ಎಂಬ್ಯುಲನ್ಸ್‌ಗಳಿಗಾಗಿ ಓಡಾಡುವ ಜನರ ಗಾಬರಿ ಅವಸರಗಳಿಗೆ ಪ್ಲಾಟ್‌ಫಾರ್ಮ್ ಸಾಲದಾಯಿತು. ನಮ್ಮ ಇಂದಿರಕ್ಕನ ಸ್ಥಿತಿ ಏನಾಗಿದೆಯೋ ಯಾವ ಡಬ್ಬಿಯಲ್ಲಿದ್ದಾಳೋ ಎಂದು ಆತಂಕಪಡುವ ಹೊತ್ತಿಗೇ ಅವಳ ಜೊತೆಗಿದ್ದ ಹುಡುಗನೇ ನಮ್ಮನ್ನು ಹುಡುಕುತ್ತ ಬಂದ. ಬನ್ನಿ ಬನ್ನಿ, ಇಂದಿರಕ್ಕ ಏಕದಮ್ ಸೀರಿಯಸ್. ಮೂರು ದಿನಗಳಿಂದ ಊಟವಿಲ್ಲ. ಡಾಯರಿಯಾ, ಜ್ವರ. ಪ್ರಜ್ಞೆ ಇದ್ದಂತಿಲ್ಲ ಈಗ. ಬನ್ನಿ ಬನ್ನಿ. ಆಸ್ಪತ್ರೆಗೆ ಸೇರಿಸಬೇಕಾಗುತ್ತದೋ ಏನೋ… ಒಂದೇ ಉಸಿರಿನಲ್ಲಿ ಬಡಬಡಿಸುತ್ತ ನಮ್ಮನ್ನು ಅವಳಿದ್ದ ಡಬ್ಬಿಯ ಕಡೆಗೆ ಹೆಚ್ಚು ಕಡಿಮೆ ಎಳೆದೇ ಒಯ್ಯುವಂತೆ ಒಯ್ದ. ಡಬ್ಬೆಯಲ್ಲಿ ಕಂಡದ್ದನ್ನು ನಂಬದಾದೆ. ಇತ್ತಕಡೆಯ ಧ್ಯಾನ ತಪ್ಪಿ, ಉಟ್ಟ ಸೀರೆ ಅಸ್ತವ್ಯಸ್ತವಾಗಿ ಬಿದ್ದವಳನ್ನು ನಾನು ಹಾಗೂ ಆ ಹುಡುಗ ಇಬ್ಬರೂ ಎತ್ತಿ, ಪ್ಲಾಟ್‌ಫಾರ್ಮಿನ ಕೊನೆಯಲ್ಲಿ ನಿಲ್ಲಿಸಿದ ನನ್ನ ಕಾರಿನಲ್ಲಿ ಸೇರಿಸಬೇಕಾದರೆ ಸಾಕುಬೇಕಾಯಿತು. ಮಲಮೂತ್ರಗಳನ್ನು ಸೀರೆಯಲ್ಲೇ ಮಾಡುತ್ತಿದ್ದಳೇನೋ. ದುರ್ವಾಸನೆಗೆ ಉಂಡದ್ದೆಲ್ಲಾ ಹೊರಗೆ ಬರುವಂತಾಯಿತು. ಹುಡುಗ ಮತ್ತೆ ಪ್ಲಾಟ್‌ಫಾರ್ಮಿಗೆ ಓಡಿ ಸಾಮಾನನ್ನು ತಂದು ಕಾರಿನಲ್ಲಿ ಹಾಕುವ ಹೊತ್ತಿಗೆ ಹೆಂಡತಿ ಮತ್ತು ನಾನು ಮನೆಯ ಸಮೀಪವೇ ಇದ್ದ ನಾನಾವಟೀ ಆಸ್ಪತ್ರೆಗೆ ಸೇರಿಸುವುದೇ ಒಳ್ಳೆಯದೆಂದು ನಿಶ್ಚಯಿಸಿಕೊಂಡಿದ್ದೆವು. ಆ ಕಡೆಗೇ ಕಾರನ್ನು ಓಡಿಸಹತ್ತಿದೆ. ಹುಡುಗನಿಗೆ ಆ ಒಂದು ರಾತ್ರಿ ನಮ್ಮ ಮನೆಯಲ್ಲೇ ಕಳೆಯುವಂತೆ ಬೇಡಿಕೊಂಡೆ. ತುಂಬ ರಾತ್ರಿಯಾದ್ದರಿಂದ ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆಯಾಗಿತ್ತು. ದಾದರ ಟ್ರಾಮ್ ಟರ್ಮಿನಸ್ ದಾಟಿ ಟಿಳಕ ಬ್ರಿಜ್ ಕಡೆಗೆ ಓಡಹತ್ತಿತು ಕಾರು, ನನ್ನ ಮಗ್ಗಲಿನ ಸೀಟಿನಲ್ಲಿ ಹೆಂಡತಿ, ಹಿಂದಿನ ಸೀಟಿನಲ್ಲಿ ಮಲಗಿಸಿದ್ದ ಇಂದಿರಕ್ಕ, ಅವಳ ತಲೆಯ ಬದಿಗೆ ಮೈ ಮುದುಡಿ ಕೂತ ಹುಡುಗ. ಯಾರೊಬ್ಬರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮೌನವಾಗಿ ದಾರಿ ಸಾಗುತ್ತಿತ್ತು. ಶಿವಾಜಿ ಪಾರ್ಕಿನ ಸಿಗ್ನಲ್ ದೀಪಗಳು ರಾತ್ರಿಯ ಹೊತ್ತಾದ್ದರಿಂದ ಬರಿಯ ಹಳದೀ ಬಣ್ಣದಲ್ಲಿ ನಿಂತು ಕಣ್ಣುಮುಚ್ಚಿ ಕಣ್ಣು ತೆರೆಯುತ್ತಿದ್ದವು. ದಾಟುವಾಗ ಟ್ರೈನನಲ್ಲಿ ಕಂಡ ದೃಶ್ಯ ಹನಿಹನಿಯಾಗಿ ಮನಃಪಟಲದ ಮೇಲೆ ಒಡಮೂಡಹತ್ತಿ ಮಾಹೀಂ ಸೇರುವ ಹೊತ್ತಿಗೆ ಪ್ರಚಂಡ ಆಘಾತದ ಜೋರಿನಿಂದ ಬೆಳಗಿ ನಿಂತಾಗ ಜೋಲಿ ತಪ್ಪದ ಹಾಗೆ ಸ್ವಿಯರಿಂಗ್ ವೀಲನ್ನು ಗಟ್ಟಿಯಾಗಿ ಹಿಡಿಯಬೇಕಾಯಿತು. ಹೌದು, ಸಕೇಶಿಯಿದ್ದ ಇಂದಿರಕ್ಕ ಕಾಶಿಯಿಂದ ಬರುವಾಗ ತಲೆ ಬೋಳಿಸಿಕೊಂಡು ಕೆಂಪು ಸೀರೆ ಉಟ್ಟಿದ್ದಳು. ಹೊತ್ತು ಹೋದ ಹಾಗೆ, ಆಘಾತದಿಂದ ಮೆಲ್ಲನೆ ಚೇತರಿಸಿಕೊಂಡ ಹಾಗೆ ಆಗ ಕಂಡದ್ದರ ಒಂದೊಂದೇ ವಿವರ ಲಕ್ಷ್ಯಕ್ಕೆ ಬರಹತ್ತಿ ಜೀವದ ಕಳೆ ಕಳೆದುಕೊಂಡು ವಿದ್ರೂಪಗೊಂಡ ಅವಳ ಮೋರೆ ಕಣ್ಣಮುಂದೆ ಬಂದಾಗ ಮನಸ್ಸು ತೀರ ಪ್ರಕ್ಷುಬಗೊಂಡಿತು. ನನ್ನ ಮನಸ್ಸಿನೊಳಗಿನ ವಿಚಾರಗಳನ್ನು ಓದಿಕೊಂಡವನಂತೆ ಹುಡುಗನೇ ಕಾರಿನಲ್ಲಿ ನೆಲಸಿದ ಮೌನವನ್ನು ಮುರಿದ. “ನಾವೆಲ್ಲ ಬೇಡ ಬೇಡವೆಂದರೂ ಕೇಳಲಿಲ್ಲ. ಕಾಶಿಯಲ್ಲಿ ಹಾಗೆ ಮಾಡಿಕೊಳ್ಳುವ ಅಗತ್ಯವಿಲ್ಲವೆಂದು ಸ್ವತಃ ಪುರೋಹಿತ ಭಟ್ಟರೇ ಹೇಳಿದರೂ ಕೇಳಲಿಲ್ಲ…” ತಾನು ಏನನ್ನು ಕುರಿತು ಹೇಳುತ್ತಿದ್ದೇನೆ ಎನ್ನುವುದನ್ನು ಬಾಯಿಬಿಟ್ಟು ಹೇಳುವ ಗರಜೆ ಇಲ್ಲವೆಂಬಂತೆ ಅವನ ಮಾತಿತ್ತು… “ಇಲ್ಲಿಂದ ಹೋದ ಮರುದಿವಸವೇ ಮಾಡಿಸಿಕೊಂಡಳು. ಅದೇ ದಿನ ಗಂಗೆಯಲ್ಲಿ ಸ್ನಾನಮಾಡಿ ಬಂದದೇ ನೆಪವೆಂಬಂತೆ ರಾತ್ರಿಯೇ ಸಣ್ಣಜ್ವರ, ತಿರುಗಿ ಬರುವ ಹೊತ್ತಿಗೆ ಡಯಾರಿಯಾ ಶುರುವಾಯಿತು. ಜ್ವರವೂ ಹೆಚ್ಚಾಯಿತು. ಟ್ರೈನಿನಲ್ಲಿ ಎರಡು ಸರತಿ ಪ್ರಜ್ಞೆ ತಪ್ಪಿದಳು. ಈಗಿನ ಸ್ಥಿತಿ ನಿಮಗೆ ಗೊತ್ತೇ ಇದೆಯಲ್ಲ” ಎಂದ. ಇದೆಲ್ಲದರ ತಪ್ಪನ್ನು ನಾವೆಲ್ಲಿ ಅವನ ಮೇಲೆ ಹೊರಿಸುವೆವೋ ಎಂಬಂತಿತ್ತು ಅವನ ಮಾತಿನ ಧಾಟಿ…

ಇದನ್ನು ಓದಿದ್ದೀರಾ?: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಆಸ್ಪತ್ರೆಯನ್ನು ತಲುಪುವ ಹೊತ್ತಿಗೆ ಮಧ್ಯರಾತ್ರಿ ಮೀರಿತು. ಹೆಂಗಸರ ಸ್ಪೆಷಲ್ ವಾರ್ಡಿನಲ್ಲೇ ಎಡ್ಮಿಟ್ ಮಾಡಿಸಿದೆವು. ಅವಳ ಅವಸ್ಥೆಯನ್ನು ಕೂಡಲೇ ಗುರುತಿಸಿದ ಹೆಡ್ ನರ್ಸ್ ಆಕ್ಸಿಜನ್, ಗ್ಲುಕೋಸ್ ಡ್ರಿಪ್ ಶುರುಮಾಡಿ ಡಾಕ್ಟರರಿಗೆ ಹೇಳಿಕಳಿಸಿದಳು. ಡಾಕ್ಟರರು ಬಂದು ಅವಳನ್ನು ಪರೀಕ್ಷಿಸಿ, ಅವಳ ಸ್ಥಿತಿ ಬಹಳ ಸೀರಿಯಸ್ಸಿದೆಯೆಂದರು. ಚಿಂತೆಗೆ ಕಾರಣ ಡಾಯರಿಯಾ ಅಲ್ಲವೆಂದೂ ಉಗ್ರ ರೂಪದ ನ್ಯುಮೋನಿಯಾ ಇದ್ದ ಹಾಗೆ ಇದೆಯೆಂದೂ ಎಂದರು. ಮೆನಿಂಜೈಟಸ್ ಇದ್ದರೂ ಇರಬಹುದು. ನಾಳೆ ಎಕ್ಸ್‌ರೇ, ‘ಎಲ್‌ ಪೀ’ ಮೊದಲಾದ ಪರೀಕ್ಷೆಗಳನ್ನು ಮುಗಿಸಿದ ಮೇಲೆ ರೋಗದ ನಿಶ್ಚಿತ ಜಾತಿಯನ್ನು ಗುರುತಿಸಬಹುದೆಂದರು.

ದಿನಕ್ಕೆ ಮೂರು ಬಾಟಲಿನಂತೆ ಗ್ಲುಕೋಸ್-ಸೆಲ್ಪಾನ್. ಆದದ್ದು ಬ್ರೋಂಕೋ ನ್ಯುಮೋನಿಯಾ ಎಂದು ಖಚಿತವಾಗಿ ತಿಳಿದು ಆರಂಭವಾದ ಔಷಧೋಪಚಾರ ಇವುಗಳಿಂದಾಗಿ ನಾಲ್ಕು ದಿನಗಳಲ್ಲೇ ಇಂದಿರಕ್ಕನ ಮೋರೆಯ ಮೇಲೆ ತಿರುಗಿ ಬದುಕಿನ ಕಳೆ ಬರಹತ್ತಿತು. ತುಂಬ ಚೇತರಿಸಿಕೊಂಡಳು. ಡಾಕ್ಟರರು ಕೂಡ ಜೀವಕ್ಕಿದ್ದ ಕುತ್ತಿನಿಂದ ಪಾರಾಗಿದ್ದಾಳೆಂಬ ಭರವಸೆಕೊಟ್ಟರು. ನಾಲ್ಕು ದಿನ, ಆಫೀಸಿನಿಂದ ರಜೆ ಪಡೆದು ಇಡಿಯ ದಿವಸ ಆಸ್ಪತ್ರೆಯಲ್ಲಿ ಅವಳ ಶುಶ್ರೂಷೆ ಮಾಡಿ ಅವಳನ್ನು ಬದುಕಿಸಿಕೊಂಡ ಬಗ್ಗೆ ಮನಸ್ಸಿಗೆ ವರ್ಣಸಲಸಾಧ್ಯವಾದ ಶಾಂತಿ ಸಿಕ್ಕಿತ್ತು…

ಅಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೂಡ್ರುವ ಸರತಿ ನನ್ನದಾಗಿತ್ತು. ಇಂದಿರಕ್ಕ ಗಾಢ ನಿದ್ದೆ ಹೋಗಿದ್ದಳು. ಶ್ವಾಸೋಚ್ಛ್ವಾಸ ಈಗ ಸರಿಯಾಗಿದ್ದರಿಂದ ಆಕ್ಸಿಜನ್ ಕೊಳವೆಯನ್ನು ಮೂಗಿನಿಂದ ತೆಗೆದಿದ್ದರು. ಡ್ರಿಪ್ ಕೂಡ ನಿಲ್ಲಿಸಿ ಬಾಯಿಂದಲೇ ಆಹಾರ ಕೊಡಲು ಆರಂಭಿಸಿದ್ದರು. ಚಹ ಕೊಡುವ ಹೊತ್ತಾಗಿದ್ದರಿಂದ ಚಹದ ಕಿಟ್ಲಿ, ಕಪ್ಪು-ಬಶಿ ತಗೊಂಡು ಬಂದ ಚಹದ ಚಹ ಆರುವ ಮೊದಲೇ ಒಮ್ಮೆ ಎಬ್ಬಿಸಿ ಕೊಟ್ಟುಬಿಡಿ ಎಂದ. ಅವನ ಮಾತು ಕೇಳಿಯೋ ಏನೋ ಇಂದಿರಕ್ಕನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನನ್ನನ್ನೇ ನೋಡಿದಳು. ಮುಗುಳು ನಕ್ಕಳು. ಸುಖವೆನಿಸಿತು. ನಿದ್ದೆಯಾಯಿತೇ? ಚಹ ಕೊಡಲೇ? ಎಂದು ಕೇಳಿದೆ. ಹೂಂ ಎಂದಾಗ ಕಿಟ್ಲಿಯಿಂದ ಕಪ್ಪಿಗೆ ಚಹ ಬಗ್ಗಿಸಿ ನಾನೇ ಕುಡಿಸಿದೆ. ಬಹಳ ಸಮಾಧಾನವೆನಿಸಿತು. ಅವಳು ನನ್ನನ್ನೇ ನೋಡುತ್ತ ಕುಡಿದಳು. ನನ್ನ ಕೈಯಿಂದ ಕುಡಿಯುವಾಗ ಅವಳಿಗೂ ಸಮಾಧಾನವೆನಿಸುತ್ತಿದ್ದಂತೆ ತೋರಿತು. ಚಹ ಕುಡಿದು ಮುಗಿದದ್ದೇ ನೀನು ಕುಡಿದೆಯಾ ಎಂದು ಕೇಳಿದಳು. ಮನೆಯಿಂದ ಬರುವಾಗಲೇ ಕುಡಿದು ಬಂದೆ ಎಂದೆ. ನಿನ್ನನ್ನು ನಾಲ್ಕು ದಿನ ಹೆದರಿಸಿಬಿಟ್ಟೆ ಅಲ್ಲವೆ? ತ್ರಾಸೂ ಕೊಟ್ಟೆ. ನಾಳೆಯಿಂದ ಆಫೀಸಿಗೆ ಹೋಗಲು ಅಡ್ಡಿಯಿಲ್ಲವೇನೋ ಎಂದಳು. ಎಂಟು ದಿನಗಳ ರಜೆ ಪಡೆದಿದ್ದೇನೆ ಎಂದೆ. ಅದೂ ಅವಳಿಗೆ ಸೇರಿತೆಂದೆನಿಸಿ ಹಿತವಾಯಿತು. “ಕಾಶಿಯಲ್ಲಿದ್ದಾಗ- ನಾವು ನಿಮ್ಮ ಬಾಲ್ಕನಿಯಲ್ಲಿ ಕೂತು ಮಾತನಾಡಿದ್ದೆಲ್ಲ ತಪ್ಪೆನಿಸಿತು ನೋಡ್… ಬಂದದ್ದೇ ಹೇಳುವದೆಂದು ನಿಶ್ಚಯಿಸಿಕೊಂಡಿದ್ದೆ” ಎಂದಳು. ಮೇಲೆ ಗುಂಯ್ ಎಂದು ತಿರುಗುತ್ತಿದ್ದ ಫ್ಯಾನಿನ ಏಕತಾರಿಯ ನಾದಕ್ಕೆ ಹೊಂದಿಕೊಂಡು ಬಂದಂತೆ ಬಂದ ಮಾತುಗಳಿಂದ ಮೈಮೇಲೆ ಮುಳ್ಳುನಿಂತ ಅನುಭವವಾಯಿತು… ಬಾಲ್ಕನಿಯಲ್ಲಿ ಕೂತು ನನ್ನೊಡನೆ ಮಾತನಾಡುವಾಗ ತಪ್ಪಿ ಕೂಡ ನನ್ನ ಕಡೆಗೆ ನೋಡದೇ ದೂರ ನೀರಿನ ತೆರೆಗಳಲ್ಲಿ ದೃಷ್ಟಿ ನೆಟ್ಟು ಕೂತಿದ್ದಳು ಎನ್ನುವದು ಈಗ ಏಕೋ ಥಟ್ಟನೆ ಲಕ್ಷ್ಯಕ್ಕೆ ಬಂತು. ಅವಳ ಆಗಿನ ಗಂಭೀರ ಮುಖಭಾವ, ನಿಧಾನವಾದ ಉದ್ವೇಗವಿಲ್ಲದ ಮಾತಿನ ಧಾಟಿ ಕೂಡ ನೆನಪಿಗೆ ಬಂದವು. “ಹೇಳುವ ಮೊದಲೇ ಸತ್ತುಹೋಗುತ್ತೇನೋ ಎಂಬ ಹೆದರಿಕೆಯಾಗಿತ್ತು ನೋಡು. ಕಾಶಿಯಲ್ಲಿ ವಿಶ್ವೇಶ್ವರನ ಸಾನ್ನಿಧ್ಯದಲ್ಲಿದ್ದಾಗ, ಅಲ್ಲಿಯ ಭಕ್ತಿ ತುಂಬಿ ಸೂಸುತ್ತಿದ್ದ ಗಂಭೀರ ವಾತಾವರಣದಲ್ಲಿ ಕಪ್ಪು ಕಲ್ಲು ಹಾಸಿದ ತಂಪು ನೆಲದ ಮೇಲೆ ಕೈ ಮುಗಿದು ಕುಳಿತಾಗ- ಒಂದು ದಿವ್ಯಗಳಿಗೆಯಲ್ಲೆಂಬಂತೆ- ಹೊಳೆದುಬಿಟ್ಟಿತ್ತು. ನೋಡು, ಮಾತಿಗೆ ನಿಲುಕದ ರೀತಿಯಲ್ಲಿ, ಅವತ್ತು ಅವನು ನಿನ್ನ ಕೈಗೆ ಕೊಟ್ಟ ಪತ್ರ ನನಗೆ ಮುಟ್ಟದೇ ಇದ್ದದ್ದೇ ಒಳ್ಳೆಯದಾಯಿತೆಂದು. ಇಲ್ಲವಾದರೆ ಎಂತಹ ಘೋರವಾದ ಪಾಪ ನನ್ನ ಕೈಯಿಂದ ಘಟಿಸುತ್ತಿತ್ತು…”

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಇದೆಲ್ಲದರ ಸೋಕ್ಷ ಮೋಕ್ಷವಾಗಿಸಲು ಸಿಕ್ಕ ಈ ಹೊಸ ಅನುವನ್ನು ಬಿಡಬಾರದೆಂದು ಯಾವ ಪತ್ರ? ಪೊತ್ತೆ ಮೀಸೆಯವನು ಕೊಟ್ಟದ್ದಲ್ಲವೆ? ಅವನು ಮುಂದೆ ಎಲ್ಲಿ ಹೋದ? ಎಂದು ಕೇಳೋಣವೆಂದರೆ ನಾಲಗೆ ಏಳದಾಯಿತು. ಇಂದಿರಕ್ಕನ ಈಗಿನ ಧ್ವನಿಯಲ್ಲಿಯ ಅಸಾಧಾರಣ ಅಮಾರ್ದವತೆಗೋ ಅಥವಾ ಇಲ್ಲಿ ಆಸ್ಪತ್ರೆಯಲ್ಲಿ ಬೇನೆಬಿದ್ದು ಮಲಗಿದಲ್ಲಿ ಈ ಪ್ರಶ್ನೆ ಯಾಕೆ ಎಂದೆನಿಸಿಯೋ ನಾನು ಮಾತನಾಡಲಿಲ್ಲ…

ಎಲ್ಲವನ್ನೂ ನಿವೇದಿಸಿ ತನ್ನ ಅಂತಃಕರಣವನ್ನು ಹಗುರ ಮಾಡಿಕೊಳ್ಳುವ ಆತುರದಲ್ಲಿ ತನ್ನ ಪಾಪದ ಭಾರವನ್ನೆಲ್ಲ ನನಗೆ ವರ್ಗಾಯಿಸಿದ್ದಳೇನೋ-ಇಡಿಯ ರಾತ್ರಿ ಹಾಸಿಗೆಯಲ್ಲಿ ತಳಮಳಿಸಿ ಹೊರಳಾಡಿದೆ. ‘ತಾಳವಿಲ್ಲ ತಂತಿಯಿಲ್ಲ’ ಎಂಬಂತೆ ಎದ್ದೆದ್ದು ಬಂದ ನೆನಪುಗಳಿಂದ ನಿದ್ದೆಗೆಟ್ಟೆ. ಬೆಳಕು ಚಿಳಿಮಿಳಿಗುಟ್ಟುವ ಹೊತ್ತಿಗೆ ಅದೇ ಕಣ್ಣು ಬಾಡಹತ್ತಿದಾಗ ಟೆಲಿಫೋನ್ ಗಂಟೆ: ಆಸ್ಪತ್ರೆಯಿಂದಿರಬಹುದೇ ಎಂದು ಹೆದರುತ್ತ ಓಡಿಹೋಗಿ ರಿಸೀವರ್ ಕಿವಿಗೆತ್ತಿಕೊಂಡಾಗ, ಆ ಬದಿಯಿಂದ- ರಾತ್ರಿಯ ಸರದಿಗೆ ಆಸ್ಪತ್ರೆಯಲ್ಲಿ ಮಲಗಿದ ನನ್ನ ಮಗಳ ಗಾಬರಿ ತುಂಬಿದ ಮಾತುಗಳು- ಅಪ್ಪಾ ಬೇಗ ಬನ್ನಿ, ಇಂದಿರಕ್ಕ ಹೋದಳು- ಬೇಗ ಬೇಗ ಬನ್ನಿ ಅಪ್ಪಾ, ನನಗೆ ಹೆದರಿಕೆಯಾಗುತ್ತದೆ…

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

ನಮಗೆ ಏನೆಂದು ತೋಚಲೇ ಇಲ್ಲ. ನಾನು ಹೆಂಡತಿ ಕೂಡಲೇ ಹೊರಟೆವು. ಕಾರು ಓಡಿಸುವಾಗ ಮುಂದಿನ ದಾರಿಯೇ ಕಾಣದಾಯಿತು. ಎಲ್ಲವೂ ಶೂನ್ಯವಾದ ಹಾಗೆ… ನಿನ್ನೆಯಷ್ಟೇ ಎಷ್ಟೊಂದು ಚೇತರಿಸಿಕೊಂಡಿದ್ದಳು,. ಡಾಕ್ಟರರು ಕೂಡ ಈಗ ಜೀವಕ್ಕೆ ಭಯವಿಲ್ಲವೆಂದು ಭರವಸೆ ಕೊಟ್ಟಿದ್ದರು… “ಹೀಗೇಕಾಯಿತೋ?” ಇದ್ದಕ್ಕಿದ್ದಂತೆ ಹೆಂಡತಿ ಕೇಳಿದಳು. ಆ ದಿನ ನಾನು ಅವಳ ಸಾವನ್ನಿಚ್ಛಿಸಿದ್ದರಿಂದ ಎಂದು ಹೇಳಬೇಕೆನ್ನಿಸಿದರೂ ಹಾಗೆ ಮಾತು ಹೊರಡದೇ ಬರೇ ‘ದೈವೇಚ್ಛೆ’ ಎಂದೆ, ನಾನೆಂದೂ ಉಪಯೋಗಿಸದ ಭಾಷೆಯಲ್ಲಿ.

*

ಹೆಂಡತಿ ಈಗಲೂ ದುಃಖ ಸೂಚಿಸಲು ಬಂದವರಿಗೆ ಪದೇ ಪದೇ ಹೇಳುತ್ತಿರುತ್ತಾಳೆ: ಡಾಕ್ಟರರು, ನರ್ಸುಗಳು ಅವಳು ಆಕಸ್ಮಿಕವಾಗಿ ಸತ್ತದ್ದರ ಕಾರಣವನ್ನು ಅತ್ಯಂತ ವಿಶದವಾಗಿ ವಿವರಿಸಿದ್ದರಂತೆ- ನನಗೊಂದೂ ನೆನಪಾಗುತ್ತಿಲ್ಲ. ನೆನಪಾಗುತ್ತಿದ್ದದ್ದೊಂದು: ನಾನು ಸಣ್ಣ ಹುಡುಗನ ಹಾಗೆ ದನಿ ತೆಗೆದು ಅತ್ತದ್ದು. ಡಾಕ್ಟರರು ಎಷ್ಟೊಂದು ಸಮಾಧಾನಪಡಿಸಿದರೂ ನಿಲ್ಲಿಸದೇ ಅತ್ತೆನಂತೆ. ಉಳಿದ ಪೇಶಂಟರಿಗೆ ತೊಂದರೆಯಾಗುತ್ತದೆಯೆಂದರೂ ಕೇಳದೇ ಹೋ…. ಎಂದೆನಂತೆ. ಸಂತೈಸುತ್ತಿದ್ದ ಡಾಕ್ಟರರು ಹತಾಶರಾಗಿ ಒಂದು ಬಗೆಯ ಬೇಸರದಿಂದಲೇ ಅಲ್ಲಿಂದ ಹೊರಟುಹೋದರಂತೆ. ರೂಮಿನ ಸುತ್ತ ಜನ ನೆರೆಯಹತ್ತಿದಾಗ ನನ್ನ ಮಗಳೇ ಧೈರ್ಯ ತಂದುಕೊಂಡು ನನ್ನನ್ನು ಚೆನ್ನಾಗಿ ಥಳಿಸುವಂತೆ, ಗದರಿಸಿದಳಂತೆ. ಶವ ದಹನಕ್ಕೆ ಮಾಡಬೇಕಾದ ಸಿದ್ಧತೆಗಳ ಬಗ್ಗೆ ಎಚ್ಚರಿಸಿದಳಂತೆ. ಮುಂದೆ ನನ್ನ ಗೆಳೆಯರನ್ನು, ಸಂಬಂಧಿಕರನ್ನು ಫೋನಿನಿಂದ ಸುದ್ದಿ ಮುಟ್ಟಿಸಿ ಕರೆಯಿಸಿ ಮುಂದಿನ ಕೆಲಸವನ್ನು ಮುಗಿಸಿದೆವು. ಆದರೆ ಅವೆಲ್ಲವೂ ಕನಸಿನ ಕ್ರಿಯೆಯೆಂಬಂತಿದೆ. ಗಜಿಬಿಜಿಯಾಗಿ ಗಂಟುಗಂಟಾಗಿದೆ. ಆದರೆ ಸ್ವಚ್ಛವಾಗಿ ನಿಚ್ಚಳವಾಗಿ -ಚಕಚಕನೆ ಹೊಳೆಯುವ ಖಡ್ಗದ ಧಾರೆಯ ಹಾಗೆ, ನಿರ್ದಯವಾಗಿ ಉರಿದ ಇಂದಿರಕ್ಕನ ಚಿತೆಯ ಬೆಂಕಿಯ ಹಾಗೆ- ಕಣ್ಣ ಮುಂದೆ ನಿಲ್ಲುತ್ತಿದ್ದದ್ದು: ಸಾಯುವ ಮೊದಲು ಇಂದಿರಕ್ಕ ಅಷ್ಟೊಂದು ಕಟ್ಟುನಿಟ್ಟಾಗಿ ಮಾಡಿಕೊಟ್ಟ-ನನ್ನ ಕೈಯಿಂದಾದ ಭಯಂಕರ ಅಪರಾಧದ ಪರಿಚಯ!

*

ರಾತ್ರಿ ಎಷ್ಟು ಗಂಟೆಯವರೆಗೆ ಬರೆದೆನೋ, ಸಮುದ್ರದ ಸದ್ದಿಗೆ ಮನಸ್ಸು ತೆರೆದು ಬಾಲ್ಕನಿಯಲ್ಲಿ ಬರೆಯುತ್ತ ಕೂತವನು ಮಲಗುವ ಕೋಣೆಯನ್ನು ಯಾವಾಗ ಸೇರಿದೆನೋ ಗೊತ್ತಿಲ್ಲ. ಬೆಳಿಗ್ಗೆ ಎಚ್ಚರವಾದಾಗ ಹೊತ್ತು ಚಲೋ ಏರಿತ್ತು. ಚಹದ ಕಪ್ಪು ಕೈಗೆ ಕೊಡುತ್ತ ಈಗಾಗಲೇ ಹತ್ತು ಗಂಟೆ, ಈ ಒಂದು ದಿನ ರಜೆ ಪಡೆಯಿರಿ ಎಂದು ಹೆಂಡತಿ ಸೂಚಿಸಿದಾಗ ಅದೇ ಸರಿಯೆಂದು ತೋರಿ ಚಹ ಮುಗಿಸಿ ಆಫೀಸಿಗೆ ಫೋನ್ ಮಾಡಿ ಸೆಕ್ರೆಟರಿಗೆ ತಿಳಿಸಿದೆ. ತಿರುಗಿ ಹಾಸಿಗೆಗೆ ಬಂದು ರಾತ್ರಿಯ ಮೈನೋವನ್ನು ಕಳೆಯಲೆಂಬಂತೆ ಅಡ್ಡವಾಗಿ ಹೊರಳಾಡಿದೆ. ಮನಸ್ಸು ಒಂದು ಬಗೆಯ ನಿರಂಬಳತೆಯಿಂದ ಖುಷಿಯಲ್ಲಿತ್ತು. ಮಗಳು ಬಂದು ನಿನ್ನ ಬಾಲ್ಯದ ಗೆಳತಿಯ ಬಗ್ಗೆ ನಿನ್ನೆ ರಾತ್ರಿ ಏನೆಲ್ಲ ಬರೆದಿದ್ದೀಯಪ್ಪಾ ಎಂದವಳೇ ನನ್ನ ಅನುಮತಿ ಕೇಳುವ ಮೊದಲೇ ಟೇಬಲ್ ಮೇಲಿನ ನೋಟ್‌ಬುಕ್ ಎತ್ತಿಕೊಂಡು ಹೊರಗೆ ನಡೆದಳು. ವಿರೋಧಿಸಬೇಕೆಂದೆನಿಸಿದರೂ ಆ ಅನ್ನಿಸಿಕೆಯಲ್ಲಿ ಬಲವಿದ್ದಂತೆ ತೋರಲಿಲ್ಲ. ಹಾಗೇ ಸುಸ್ತಾಗಿ ಬಿದ್ದುಕೊಂಡೆ, ಮೇಲಿನ ಸೀಲಿಂಗ್ ಫ್ಯಾನ್ ನೋಡುತ್ತ. ಮಗಳು ವಿನೋದಕ್ಕೆಂದು ಆಡಿದ ಮಾತಿನ ಹಿನ್ನೆಲೆ ನೆನಪಿಗೆ ಬಂತು: ಆಸ್ಪತ್ರೆಯ ನರ್ಸ್ ಒಂದುದಿನ ಇಂದಿರಕ್ಕ ನಮಗೇನಾಗಬೇಕೆಂದು ಕೇಳಿದಳಂತೆ. ಯಾವ ಸಂಬಂಧವೂ ಇಲ್ಲ. ಅಪ್ಪನ ಊರಿನವರು ಅಷ್ಟೇ ಎಂದಾಗ ಆಶ್ಚರ್ಯ ವ್ಯಕ್ತಪಡಿಸುತ್ತ ಹೌದೇ? ನಿನ್ನಪ್ಪ ಅವಳನ್ನು ಹಚ್ಚಿಕೊಂಡ ರೀತಿ ನೋಡಿದರೆ ಬಾಲ್ಯದ ಗೆಳತಿಯೋ ಎಂದು ಸಂಶಯಪಡುವಂತಿದೆಯೆಂದು ಚೇಷ್ಟೆ ಮಾಡಿ ನಕ್ಕಿದ್ದಳಂತೆ… ನಾನೇ ಒಂದು ಬಗೆಯ ಭಾವುಕತೆಯ ಮೂಡಿನಲ್ಲಿದ್ದಾಗ ಇಂದಿರಕ್ಕ ಹೇಳಿದ್ದನ್ನೆಲ್ಲ ಸಂಪೂರ್ಣ ಸತ್ಯವೆಂದು ನಂಬಿಯೇ ಅವಳಿಗೆ ನನ್ನಿಂದಾದ ಅನ್ಯಾಯವನ್ನು ಇದ್ದುದಕ್ಕಿಂತ ದೊಡ್ಡದು ಮಾಡಿಕೊಂಡಿರಬಹುದಾದರೂ ನಡೆದುಹೋದ ವಿದ್ಯಮಾನಗಳೆಲ್ಲ ನೆನಪಿನಲ್ಲಿ ಪುನರ್ಜನ್ಮ ಪಡೆದು ಆ ಜಾಗದಲ್ಲಿ ಸುವ್ಯವಸ್ಥಿತವಾಗಿ ಕೂತುಕೊಂಡು ತಮ್ಮ ಅಳತೆ, ಆಕಾರ, ಪರಸ್ಪರ ಸಂಬಂಧಗಳನ್ನು ತಿಳಿಯಾಗಿ ತೆರೆದು ತೋರಿಸಿದಾಗ ಮನಸ್ಸಿಗೆ ಯಾವುದರಿಂದಲೋ ಬಿಡಿಸಿಕೊಂಡಂತಹ ಸುಖವೊದಗಿತ್ತು. ಇಂತಹ ಈ ಸುಖದ ಭಾವನೆಯಿಂದ ಸಣ್ಣ ಜೊಂಪು ಹತ್ತಬೇಕು ಎನ್ನುವ ಹೊತ್ತಿಗೆ ಬೆನ್ನ ಹುರಿಯ ಬುಡದಿಂದಲೇ ಎಂಬಂತೆ ಎಂತಹದೋ ತಲ್ಲಣಗೊಳಿಸುವಂತಹ ಅಸ್ಪಷ್ಟ ಅಸ್ವಸ್ಥತೆಯೊಂದು ಮೆಲ್ಲನೆ ಏಳಹತ್ತಿ ಹೋದ ಹಾಗೆ ಮೇಲಕ್ಕೆ ಮೇಲಕ್ಕೆ ಸರಿಯುತ್ತ ಕೊನೆಗೊಮ್ಮೆ ಒಳಜೀವಕ್ಕೆಲ್ಲ ಹಬ್ಬಿ ನಿಂತಿತು.

ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್

ಈ ಅಸ್ವಸ್ಥಕೆ ಪೊತ್ತೆ ಮೀಸೆಯವನಿಗೆ ಸಂಬಂಧಪಟ್ಟದ್ದೆಂದು ಅರಿವು ಮೂಡಿದ್ದೇ ಇದೀಗ ಅಚ್ಚುಕಟ್ಟಾಗಿ ಗಂಟುಕಟ್ಟಿ ಅಟ್ಟದ ಮೇಲಿರಿಸಿದ್ದೆನೆಂದು ಬಗೆದ ಭೂತಕಾರದ ಮೂಟೆ ಮತ್ತೆ ಬಿಚ್ಚಿಕೊಳ್ಳುತ್ತಿದೆಯೆಂಬ ಅನುಭವದಿಂದ ತತ್ತರಿಸಿ ಹಾಸಿಗೆಯಲ್ಲಿ ಎದ್ದೇ ಕುಳಿತೆ: ಇವನು ಯಾಕೆ ತಿರುಗಿ ಎದ್ದು ಬಂದನಪ್ಪ ಎನ್ನಿಸಿತು. ಆಮೇಲೆ ಸಂಶಯವೇ ಉಳಿಯಲಿಲ್ಲ. ಇಂದಿರಕ್ಕ ಬದುಕಿರುವವರೆಗೂ ನನ್ನ ಭಾವಪ್ರಪಂಚದಲ್ಲಿ ಯಾವುದೇ ಮಹತ್ವದ ಸ್ಥಾನವನ್ನು ಪಡೆಯದೇ ಇದ್ದ ಈ ಕಿರಾತ ಬೋಳೀಮಗನೂ ಈಗ ಎದ್ದು-ಒಂದು ದಿನ ಪಗಡಿ ತುರಾಯಿಗಳನ್ನು ಧರಿಸಿ ಅಲಲಲಲ ಕೀಹ ಎಂದು ಮೀಸೆ ನೇವರಿಸುತ್ತ ಹಾಜssರ್ ಎಂದು ಬಂದು ಬಂದಂಥ ಕಾರ್ಯ ವಿವರಿಸುತ್ತಾನೆ. ನಿನ್ನನ್ನು ಸತಾಯಿಸುತ್ತಿದ್ದ ಯಕ್ಷಪ್ರಶ್ನೆ ನಿನ್ನ ಅಪ್ಪನ ನಿರ್ಗಮನವನ್ನು ಕುರಿತದ್ದಲ್ಲ, ನನ್ನ ನಿಗೂಢ ನಿರ್ಗಮನವನ್ನು ಕುರಿತದ್ದು ಅಲ್ಲವೇನೋ? ಎಂದು ಚುಡಾಯಿಸುತ್ತ ಹಲ್ಲು ಕಿರಿಯುತ್ತಾನೆ. ಇಡಿಯ ಹುಡುಕಾಟಕ್ಕೇ ಸವಾಲಾಗುತ್ತಾನೆ. ಕಾಸರಗೋಡಿನ ಬಾವಿಯಲ್ಲಿ ಬಿದ್ದು ಸತ್ತವನು ತಾನೇ ಎಂದೂ ಅದಕ್ಕೂ ಕಾರಣ ನಾನೇ ಎಂದೂ ಪುರಾವೆ ಸಹಿತ ರುಜುವಾತು ಪಡಿಸುತ್ತಾನೆ. ಊರಿನ, ನೆರೆ ಊರಿನ ಸಣ್ಣ ದೊಡ್ಡ ಬಾವಿಗಳಿಗೆಲ್ಲ ಹೊಸ ಆಳ ತೋಡಿಸುತ್ತಾನೆ. ಅಥವಾ ಖುದ್ದಾಗಿ… ತಾನೇ ನಮ್ಮ ಮನೆಯನ್ನು ಹುಡುಕಿಕೊಂಡು ಬಂದು ಕದ ತಟ್ಟುತ್ತಾನೆ. ನಾನು ಸತ್ತೇ ಹೋಗಿದ್ದೇನೆಂದು ತಿಳಿದು ನಿರಾತಂಕವಾಗಿದ್ದೆ ಅಲ್ಲವೇನೋ? ನೋಡು, ನಾನು ಸತ್ತಿಲ್ಲ. ಬದುಕಿಯೇ ಇದ್ದೇನೆಂದು ಹೇಳಿ ಹೋಗೋಣ ಎಂತ ಬಂದೆ. ಅಲ್ಲವೋ ನೀನು, ಆ ನಿನ್ನ ಹೆಂಗಸು ಕೂಡಿ ನಾನು ಬರೆದ ಒಂದು ಕ್ಷುಲ್ಲಕವಾದ ಚೀಟಿಗೇ ಏನೇನೋ ಅರ್ಥ ಹಚ್ಚಿ ದೊಡ್ಡ ಆಕಾಂಡ ತಾಂಡವ ಎಬ್ಬಿಸಿದಿರಲ್ಲ… ಇಲ್ಲಿ ನಿಂತ ಕಾಲ ಮೇಲೆ ಯಾಕೆ ಎನ್ನುತ್ತ ಒಳಗೇ ಬರುತ್ತಾನೆ. ದೊಡ್ಡ ಪೋಕ್ತನ ಹಾಗೆ ಕುರ್ಚಿಯಲ್ಲಿ ಆಸನಾರೂಢನಾಗಿ ಇದಿರಿನ ಸಮುದ್ರ ನೋಡುತ್ತ ಕೂಡ್ರುತ್ತಾನೆ. ಆಗ,

ಮತ್ತೆ ಹೊಸದಾಗಿ ಆರಂಭವಾಗುತ್ತದೆ, ಬೇರೆಯ ಒಂದು ಮುಖಾಮುಖಿ ತೆರೆದುಕೊಳ್ಳುವುದಕ್ಕೆ. ಹೊಚ್ಚ ಹೊಸ ಅರ್ಥಗಳು ಹುಟ್ಟಿಕೊಳ್ಳುವುದಕ್ಕೆ. ಕೈಗೆ ಎಟುಕದ ಶಾಂತಿ ತಂಪುಗಳಿಗಾಗಿ ನಡೆಯುವ ಕೊನೆಯಿಲ್ಲದ ಹುಡುಕಾಟಕ್ಕೆ…

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಯಶವಂತ ಚಿತ್ತಾಲ
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ದೇವುಡು ಅವರ ಕತೆ | ಮೂರು ಕನಸು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X