ಕರ್ನಾಟಕದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಬೆಳೆಗಳು ಹಾನಿಗೊಳಗಾಗಿವೆ. ಹಲವಡೆ ರಸ್ತೆ ಸಂಪರ್ಕ ಕಡಿತಗೊಂಡಿವೆ.
ಧಾರವಾಡ, ಗದಗ, ದಾವಣಗೆರೆ, ಹಾವೇರಿ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಮನೆಗಳು ಮತ್ತು ಕೃಷಿಭೂಮಿಗೆ ಹಾನಿಯಾಗಿದೆ.
ಮಹಾರಾಷ್ಟ್ರದಿಂದ ಹರಿಯುತ್ತಿರುವ ನೀರಿನ ಪ್ರಮಾಣದಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನಾರಾಯಣಪುರ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದು ಹೀಗಾಗಿ ಶೀಲಹಳ್ಳಿ ಸೇತುವೆ ಮುಳುಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಪ್ರಮುಖ ಜಲಾಶಯಗಳು ಪೂರ್ಣ ಸಾಮರ್ಥ್ಯದ ಸಮೀಪಿಸುತ್ತಿದ್ದರೂ, ಮುನ್ನೆಚ್ಚರಿಕೆಯಾಗಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಕೃಷ್ಣಾ ನದಿ ದಂಡೆಯ ಉದ್ದಕ್ಕೂ ಇರುವ ಹಳ್ಳಿಗಳು ಈಗ ಪ್ರವಾಹದ ಭೀತಿಯಲ್ಲಿವೆ. ಶೀಲಹಳ್ಳಿ ಹಂಚಿನಾಳ ಸೇತುವೆ ಮುಳುಗಿರುವುದರಿಂದ ಕದ್ದರಗಡ್ಡಿ, ಯರಿಗೋಡಿ ಮತ್ತು ಹಂಚಿನಾಳ ಸೇರಿದಂತೆ ನದಿ ದಂಡೆಯ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕೃಷ್ಣಾ ಮತ್ತು ಭೀಮಾ ನದಿಗಳ ದಡದಲ್ಲಿ ‘ಪ್ರವಾಹದ ಭೀತಿ’ ಕೂಡ ಇದೆ. ಎರಡೂ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತಿದೆ. ಭಾರೀ ಒಳಹರಿವಿನಿಂದಾಗಿ ಬಸವಸಾಗರ ಅಣೆಕಟ್ಟಿನ ಎಲ್ಲಾ 30 ಗೇಟ್‌ಗಳನ್ನು ತೆರೆಯಲಾಗಿದ್ದು, ಯಾದಗಿರಿ ಜಿಲ್ಲೆಯ ಗುರುಸಣಗಿ ಬ್ಯಾರೇಜ್‌ನ 17 ಗೇಟ್‌ಗಳನ್ನು ಸಹ ಎತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ, ಭಾರೀ ಮಳೆಯಿಂದಾಗಿ ಮಲಪ್ರಭಾ ನದಿ ಜಲಾನಯನ ಪ್ರದೇಶವು ಮುಳುಗಿದೆ. ನದಿಯ ಮೇಲಿನ ಪ್ರವಾಹದ ಸೇತುವೆಯನ್ನು ದಾಟಲು ಬೈಕ್ ಸವಾರ ಪ್ರಯತ್ನಿಸಿ ಬೈಕ್ ಸಮೇತ ಕೊಚ್ಚಿ ಹೋಗುತ್ತಿರುವುದು ಕಂಡುಬಂದಿದೆ. ಸ್ಥಳೀಯರು ಎಚ್ಚರಿಸುತ್ತಿದ್ದರೂ ಅವರು ತಮ್ಮ ಹುಚ್ಚಾಟ ನಡೆಸಿದ್ದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂದಿನ ಏಳು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
