ಲಿಂಗಾಯತ ಮಠಾಧೀಶರ ಒಕ್ಕೂಟವು ಸೆ.1ರಿಂದ ಅ.1ರವರೆಗೆ ರಾಜ್ಯದಲ್ಲಿ ನಡೆಸಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭವು ಅ.5ರಂದು ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಎಲ್ಲೆಡೆಯಿಂದ ಬಸವಣ್ಣನ ಸಾವಿರಾರು ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಒಕ್ಕೂಟದ ಹಲವು ಸ್ವಾಮೀಜಿಗಳು ಅಭಿಯಾನ ಮತ್ತು ಸಮಾರೋಪ ಕಾರ್ಯಕ್ರಮದ ರೂಪುರೇಷೆ ಕುರಿತು ಸಚಿವರನ್ನು ಅವರ ಇಲ್ಲಿನ ಅಧಿಕೃತ ನಿವಾಸದಲ್ಲಿ ಬುಧವಾರ ಭೇಟಿಯಾಗಿ, ಎರಡನೇ ಸುತ್ತಿನ ಸಮಾಲೋಚನೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, “ಬಸವಣ್ಣನ ಹುಟ್ಟೂರಾದ ಬಸವನ ಬಾಗೇವಾಡಿಯಲ್ಲಿ ಸೆ.1ರಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈ ಅಭಿಯಾನದ ಅಂಗವಾಗಿ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಅದ್ಧೂರಿ ಸಮಾರೋಪ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗುವುದು” ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಸಿದ್ಧರಾಮ ಮಹಾಸ್ವಾಮಿ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ನಾಗನೂರು ರುದ್ರಾಕ್ಷಿ ಮಠದ ಅಲ್ಲಮ ಪ್ರಭು ಸ್ವಾಮೀಜಿ, ಬಸವ ಧರ್ಮ ಪೀಠದ ಬಸವ ಯೋಗಿ ಸ್ಬಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿವೃತ್ತ ಐಎಎಸ್ ಅಧಿಕಾರಿಗಳಾದ ಎಸ್.ಎಂ.ಜಾಮದಾರ್, ಡಾ.ಸಿ.ಸೋಮಶೇಖರ್ ಸಭೆಯಲ್ಲಿ ಇದ್ದರು.