ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ. ಇದರ ಹಿಂದಿನ ಉದ್ದೇಶವೇನೆಂದರೆ ಮಕ್ಕಳನ್ನು ಡ್ರಗ್ಸ್‌ನಲ್ಲಿ ಮುಳುಗಿಸಿದರೆ, ಮುಂದಿನ ಉತ್ತಮ ಪ್ರಜೆಗಳು ಈ ದೇಶದಲ್ಲಿ ಇಲ್ಲದಂತಾಗುತ್ತದೆ. ಆ ನಂತರ ಭಾರತವನ್ನು ಮುಳುಗಿಸಬಹುದೆಂಬ ನಿಟ್ಟಿನಲ್ಲಿ ಅಮೆರಿಕಾ ಸೇರಿದಂತೆ ಅಕ್ಕಪಕ್ಕದ ರಾಷ್ಟ್ರಗಳು ಸಂಚು ರೂಪಿಸಿವೆ ಎಂಬುದು ಅಧ್ಯಯನದಿಂದ ಕಂಡುಬಂದಿದೆ ಎಂದು ಡ್ರಗ್ಸ್ ಮುಕ್ತ ಸಕಲೇಶಪುರದ ಪ್ರಮುಖರು ಹಾಗೂ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹಮ್ಮಿಕೊಂಡಿರುವ ʼಡ್ರಗ್ಸ್ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
“ತಾಯಿ ಗರ್ಭದಿಂದ ಒಂದು ಹುಟ್ಟು ಆದರೆ, ಸಮಾಜದ ಒಳಿತಿಗೆ ತೆರೆದುಕೊಳ್ಳುವುದೇ ಎರಡನೇ ಹುಟ್ಟು. ಇದಕ್ಕೆ ದ್ವಿಜ ಎನ್ನುತ್ತಾರೆ. ನಿನ್ನ ಜೀವಿತಕಾಲದಲ್ಲಿ ಎಂದೂ ಕೂಡ ಅಮಲು ಬರುವ ಪದಾರ್ಥಗಳನ್ನು ಸೇವಿಸಬಾರದು, ನಿನ್ನ ಹೆಣ್ಣುಮಕ್ಕಳನ್ನು ಯಾವುದೇ ಅಮಲುಗಾರರಿಗೆ ಮದುವೆ ಮಾಡಿಕೊಡಬಾರದೆಂದು ನನ್ನ ತಾಯಿ ನನ್ನಿಂದ ಪ್ರಮಾಣ ಮಾಡಿಸಿಕೊಂಡಿದ್ದರು. ಇಂತಹ ನೈತಿಕ ಶಿಸ್ತು, ಧೈರ್ಯವನ್ನು ತುಂಬಿದಂತಹ ನನ್ನ ತಾಯಿಗೆ ಚಿರರುಣಿ” ಎಂದು ಸ್ಮರಿಸಿದರು.
“ಬಿ ಆರ್ ಪಾಟೀಲ್ ಅವರು ಕಾಂಗ್ರಸ್ ಸರ್ಕಾರದ ಸಂಪುಟದ ಸಚಿವರು ನನಗೆ ಚಳುವಳಿ ಮಿತ್ರ. ಚೈನಾ ಪ್ರವಾಸಕ್ಕಾಗಿ ಹೋದಾಗ ಅದಕ್ಕೆ ಅವಕಾಶ ನೀಡಿದವರು ಬಿ ಆರ್ ಪಾಟೀಲ್. ರಾಜಕೀಯ ಪಕ್ಷಗಳು ಎಲ್ಲವೂ ಒಂದೇ. ಆದರೆ ಬಣ್ಣ ಬೇರೆ, ಹಾಗಾಗಿ ನಾವು ಚಳುವಳಿಯ ಭಾಗವಾಗಿ ನಿಲ್ಲೋಣವೆಂದರು. ಈ ಹಿನ್ನೆಲೆಯಲ್ಲಿ ಪಂಜಾಬಿನಲ್ಲಿ ನಡೆಯುತ್ತಿರುವ ಡ್ರಗ್ಸ್ ಮುಕ್ತ ಆಂದೋಲನದಲ್ಲಿ ಭಾಗಿಯಾಗಿದ್ದೆವು. ಪಂಜಾಬಿನ ಶೇ.50ರಿಂದ 60ರಷ್ಟು ಮಕ್ಕಳು ಡ್ರಗ್ಸ್‌ನಲ್ಲಿ ಮುಳುಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿಯೂ ಕೂಡ ಅಧಿಕಾರಿಗಳು ಸಾರ್ವಜನಿಕರು ಒಟ್ಟುಗೂಡಿದಾಗ ಮಾತ್ರ ಸಮಾಜವನ್ನು ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದಾದಾಗ ಮಾತ್ರ ಇಂತಹ ದುಶ್ಚಟಗಳನ್ನು ತಡೆಗಟ್ಟುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ
“ವಿಶೇಷವಾಗಿ ಮುಸ್ಲಿಂ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಹೊರಗೆ ಬರುವುದಿಲ್ಲ. ಆದರೆ ಇಂದು ಡ್ರಗ್ಸ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆಂದರೆ ನಮ್ಮ ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಎಷ್ಟರ ಮಟ್ಟಿಗೆ ಡ್ರಗ್ಸ್ ಮಿತಿಮೀರಿದೆ ಎಂಬುದನ್ನು ಅರಿಯಬೇಕಾಗಿದೆ. ಇವತ್ತು ಸಮಾಜದಲ್ಲಿರುವಂತ ಪಿಡುಗನ್ನು ತೊಲಗಿಸಲು ನಾನೂ ಕೂಡ ಚಳವಳಿ ಕೈಗೊಂಡಿದ್ದೇನೆ. ಅರಣ್ಯ ಇಲಾಖೆಯ ಹಲವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿರುವುದು ಕಂಡುಬಂದಿದೆ. ಅಸ್ಸಾನಿಂದ ಬಂದಿರುವ ಕೆಲಸಗಾರರ ಬಳಿ ಎರಡೂವರೆ ಕೆಜಿ ಗಾಂಜಾ ಸಿಕ್ಕಿದೆ. ಬೆಳೆಗಾರರು, ಪೋಷಕರು ಜಾಗ್ರತರಾಗಿ ಗಾಂಜಾ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು” ಎಂದು ಕರೆ ನೀಡಿದರು.
ಅತಿಥಿಗಳಾದ ಉಪವಿಭಾಗಾಧಿಕಾರಿ ಎಚ್ ಡಿ ರಾಜೇಶ್, ತಹಶೀಲ್ದಾರ್ ಸುಪ್ರೀತ, ಡಿವೈಎಸ್‌ಪಿ ಪ್ರಮೋದ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಧರ್ಮಸ್ಥಳ ನಶಾ ಮುಕ್ತ ಕೇಂದ್ರದ ಡಾ. ನವೀನ್ ಚಂದ್ರಶೇಕರ್ ಸೇರಿದಂತೆ ಪತ್ರಕರ್ತ ಮಲ್ನಾಡ್ ಮೆಹಬೂಬ್ ಬಹುತೇಕ ಸಾರ್ವಜನಿಕರು ಇದ್ದರು.
https://shorturl.fm/d91hN