- ಗುಣಮಟ್ಟ ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ
- ಮುಂಡರಗಿಯಲ್ಲಿ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಪ್ರಯತ್ನ
ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಶಿಕ್ಷಕರು ಪಾತ್ರ ಮಹತ್ವವಾದದ್ದು, ಎಲ್ಲರೂ ಕೂಡಿದರೆ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಮಾಜಿ ಸಚಿವ, ಶಾಸಕ ಎಸ್.ಎಸ್.ಪಾಟೀಲ್ ಹೇಳಿದರು.
ಮುಂಡರಗಿ ಪಟ್ಟಣದ ಎಸ್.ಎಮ್.ಭೂಮರೆಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಶಿಕ್ಷಕರ ಹಾಗೂ ಪೋಷಕರ ನಡೆ, ನುಡಿ, ಮನ, ಭಾವ, ಶುಚಿಯಾಗಿರಬೇಕು. ಶಿಕ್ಷಣ ವಲಯದಲ್ಲಿ ಎಲ್ಲರು ಕೂಡಿಕೊಂಡರೆ ಸರ್ಕಾರಿ ಶಾಲಾ ಮಕ್ಕಳಿಗೆ ನೈತಿಕ ಮೌಲ್ಯಗಳ ನೀಡಲು ಕೊಡಲು ಸಾಧ್ಯ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾತಾವರಣ ನಿರ್ಮಿಸಿದ್ದು ಶ್ಲಾಘನೀಯ ಕಾರ್ಯ. ಮುಂಡರಗಿಯಲ್ಲಿ ಸರಕಾರಿ ಪ್ರೌಢ ಶಾಲೆಯ ಅಗತ್ಯವಿದೆ. ಈ ಬಗ್ಗೆ ನಾನು ಅನುಮತಿ ತರುತ್ತೇನೆ. ಆದರೆ ಭೂದಾನಿಗಳು ಮುಂದಾಗಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರುಡಗಿ ಮಾತನಾಡಿ, “ತಂದೆ -ತಾಯಿ ಹೆದರದವರು, ಗುರುಗಳಿಗೆ ಹೆದರಬೇಕು. ಆಗ ಶಿಕ್ಷಣ ಕಲಿಯಬಹುದು. ಶಿಕ್ಷಕರು ಶಾಲೆಗೆ ಸೂಕ್ತ ಸಮಯಕ್ಕೆ ಬಂದು ಮೌಲ್ಯ ಶಿಕ್ಷಣ ನೀಡಲು ಮುಂದಾಗಬೇಕು. ಗುಣಮಟ್ಟ ಶಿಕ್ಷಣ ಕೊಡದಿದ್ದರೆ ಮಕ್ಕಳ ಉಜ್ವಲ ಭವಿಷ್ಯ ಹಾಳಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಕರು ಪ್ರೇರಣೆ ನೀಡಬೇಕು” ಎಂದು ಹೇಳಿದರು.
ನಿಕಟಪೂರ್ವ ಮುಖ್ಯೋಪಾಧ್ಯಾಯ ನಿಂಗು ಸೊಲಗಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿಡಿಪಿಐ ಎಂ.ಎ. ರಡ್ಡೇರ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ, ಮುಖಂಡ ಹೇಮಂತಗೌಡ ಪಾಟೀಲ್, ಕೆ.ಬಿ.ಕೊಣ್ಣೂರ, ನಾಗರಾಜ ಹಳ್ಳಿಕೇರಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.