ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ? ಮೂಳೆಗಳು ಸಿಗದೇ ಇದ್ದರೆ, ಬೇರೆ ಸಾಕ್ಷಿ ಸಿಕ್ಕಿಲ್ವಾ ಅಥವಾ ಸಿಗಲ್ವಾ? ಇದರ ಮುಂದಿನ ಕಾನೂನು ನಡೆ ಏನಾಗಿರಬಹುದು ಎಂಬುದರ ಅರಿವಿಲ್ಲ ಅಥವಾ ಗೊತ್ತಿದ್ದೂ ದುರುದ್ದೇಶಪೂರ್ವಕವಾಗಿ ಮಾತನಾಡುತ್ತಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಒಂದು ಅತ್ಯಂತ ಗಂಭೀರವಾದ ಎಸ್‌ಐಟಿ ತನಿಖೆಯನ್ನ ಈ ನಾಡಿನ ವಿರೋಧ ಪಕ್ಷದವರು, ಕೆಲವು ಮಾಧ್ಯಮದವರು ಮತ್ತು ಕೆಲವು ಆಡಳಿತ ಪಕ್ಷದವರೂ ಸಹ ಸೇರಿಕೊಂಡು ಅಪಹಾಸ್ಯದ ಸಂಗತಿಯನ್ನಾಗಿ ಮಾಡಿ, ದಿಕ್ಕುತಪ್ಪಿಸಲು ಹೊರಟಿದ್ದಾರೆ. ಈ ಸಂಬಂಧ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಸದನದಲ್ಲಿ ಒಂದು ಹೇಳಿಕೆಯನ್ನೂ ನೀಡಿದ್ದಾರೆ. ಆ ಹೇಳಿಕೆಯ ಬಹುಭಾಗ ಸಾಕಷ್ಟು ಪ್ರಬುದ್ಧವಾಗಿತ್ತು ಎಂಬುದು ನಿಜವಾದರೂ, ಎರಡು ವಿಚಾರಗಳು ಈಗಲೂ ಆತಂಕ ಮೂಡಿಸುತ್ತಿವೆ.
ಒಂದು, ಸ್ವತಃ ಎಸ್‌ಐಟಿ ಸದ್ಯಕ್ಕೆ ಧರ್ಮಸ್ಥಳದ ಪರಿಸರದಲ್ಲಿ ಹೂಳಲಾಗಿರುವ ಕೊಲೆಗೀಡಾದ ಅಥವಾ ಅಸಹಜ ಸಾವನ್ನಪ್ಪಿರುವ ಶವಗಳ ಕುರುಹುಗಳನ್ನು ಹೊರತೆಗೆಯುವ ಕೆಲಸಕ್ಕೆ ತಾನೇ ತಾತ್ಕಾಲಿಕ ತಡೆ ಹಾಕಿಕೊಂಡಿದೆ ಎಂಬುದು.
ಎರಡು, ಈಗಾಗಲೇ ಹೊರತೆಗೆದಿರುವ ಜಾಗಗಳಲ್ಲಿನ ಮೂಳೆ ಮತ್ತು ಮಣ್ಣಿನ ಸ್ಯಾಂಪಲ್‌ಗಳಲ್ಲಿ ಸತ್ತುಹೋದವರ ಕುರುಹುಗಳನ್ನು ಪತ್ತೆ ಹಚ್ಚಲು ವೈಜ್ಞಾನಿಕ ವಿಧಾನಗಳನ್ನು ಬಳಸಲಿದೆ ಎಂಬುದನ್ನೇನೋ ಹೇಳಿದ್ದಾರೆ; ಆದರೆ, ಅದರ ಹೊರತಾಗಿ, ತನಿಖೆಯನ್ನು ಇನ್ನೂ ಹಲವು ಆಯಾಮಗಳಲ್ಲಿ ವಿಸ್ತರಿಸುವ ಕುರಿತು ಏನನ್ನೂ ಹೇಳಿಲ್ಲ.
ಈ ಎರಡು ಸಂಗತಿಗಳ ಕುರಿತು ಇಲ್ಲಿ ವಿಸ್ತೃತವಾಗಿ ವಿವರಿಸುತ್ತೇನೆ.
ಸತ್ಯ ಎಷ್ಟು ಸ್ಪಷ್ಟವಾಗಿದೆ ಅಂದರೆ, ಎಸ್‌ಐಟಿ ತನಿಖೆಯನ್ನು ಈಗಲೇ ನಿಲ್ಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಅಷ್ಟೇ ಅಲ್ಲ, ಸೌಜನ್ಯ ವಿಚಾರದಲ್ಲಿ, ಆ ಸ್ಥಳದಲ್ಲಿ ನಡೆದ ಅಸಹಜ ಸಾವುಗಳು ವಿಚಾರದಲ್ಲಿ, ಅತ್ಯಾಚಾರ ಮತ್ತು ಕೊಲೆಗಳ ವಿಚಾರದಲ್ಲಿ ಈದಿನ.ಕಾಮ್‌ನ ತಂಡ ಮತ್ತು ಇತರೆಡೆಗಳಿಂದ ಇದುವರೆಗೆ ತಿಳಿದು ಬಂದ ಸಂಗತಿಗಳು ನಮಗೆ ಒಂದನ್ನು ಮನವರಿಕೆ ಮಾಡಿಸಿದೆ. ಅದೇನೆಂದರೆ, ಧರ್ಮಸ್ಥಳದ ಸುತ್ತಲಿನ ಅಸಹಜ ಸಾವುಗಳ ಕುರಿತಾದ ಸತ್ಯವನ್ನು ಎಂದೆಂದಿಗೂ ಮುಚ್ಚಿಡುವುದಕ್ಕೆ ಸಾಧ್ಯವೇ ಇಲ್ಲ. ಇದರಲ್ಲಿ ಸಮಯ ಕಳೆಯುತ್ತಿದ್ದ ಹಾಗೆ ಇದರ ಬೇರೆ ಬೇರೆ ಆಯಾಮಗಳು ವಿಸ್ತಾರವಾಗುತ್ತಲೇ ಹೋಗುತ್ತವೆ.
ಈ ನಿಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಕರ್ನಾಟಕದಲ್ಲಿ ನಡೆದ ಒಂದು ವಿದ್ಯಮಾನವನ್ನು ಸ್ವಲ್ಪ ನೆನಪಿಸಿಕೊಳ್ಳಿ.
ಎಸ್‌ಐಟಿ ಕೆಲಸ ಶುರು ಮಾಡಿದ ನಂತರ, ಸುಮಾರು 3 ವಾರಗಳಾದ ಮೇಲೆ ಒಂದು ಭಾವನೆಯನ್ನ ವ್ಯವಸ್ಥಿತವಾಗಿ ಹರಡಲು ಪ್ರಾರಂಭ ಮಾಡಿದರು.
- ಕೋರ್ಟಿನ ಮುಂದೆ ಹೋಗಿ ಸಾಕ್ಷಿ ಹೇಳಿದ ʼಭೀಮʼ ಎನ್ನುವ ಅನಾಮಿಕ ವ್ಯಕ್ತಿಯು ತೋರಿಸಿದ ಸುಮಾರು 15 ಜಾಗಗಳಲ್ಲೂ ಎಸ್‌ಐಟಿ ಅಗೆದಿದೆ. ಅಲ್ಲೆಲ್ಲೂ ಕೊಲೆ ಮತ್ತು ಅತ್ಯಾಚಾರಗಳು ನಡೆದಿವೆ ಎಂದು ಹೇಳಬಹುದಾದ, ಬಲಿಪಶು ಮಹಿಳೆಯರ ಮೂಳೆಗಳ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ ಈ ಇಡಿ ಆರೋಪವೇ ಸುಳ್ಳು ಅನ್ನುವುದು ಒಂದು ವಾದ.
- ಈ ವ್ಯಕ್ತಿ ತಾನು ಎಲ್ಲಿ ಹೂತಿದ್ದರೋ ಆ ಜಾಗಗಳನ್ನು ಮರೆತುಬಿಟ್ಟಿರಬಹುದು– ಹಾಗಾಗಿ ಸಾಕ್ಷಿಯಂತೂ ಸಿಗಲ್ಲ. ಹಾಗಾಗಿ ಈ ಕೇಸು ಮುಂದಕ್ಕೆ ಹೋಗಲ್ಲ ಅನ್ನುವುದು ಇನ್ನೊಂದು ವಾದ.
ಈ ಕಾರಣದಿಂದ, ಅಗೆತ ಶುರುವಾದ ನಂತರದ 10 ದಿನ ಸುಮ್ಮನಿದ್ದ ಬಿಜೆಪಿ, ಬಿಜೆಪಿಪರ ಮಾಧ್ಯಮಗಳು ಮತ್ತು ಅವರ ಇಡೀ ಕೂಟ– ಒಂದೇ ಸಮನೆ– ಇದು ಧರ್ಮಸ್ಥಳದ ಪವಿತ್ರ ಕ್ಷೇತ್ರಕ್ಕೆ ಮಾಡುತ್ತಿರುವ ಅಪಮಾನ, ಷಡ್ಯಂತ್ರ ಇತ್ಯಾದಿ ಮಾತನಾಡುವುದಕ್ಕೆ ಶುರು ಮಾಡಿದರು. ಅದನ್ನ ಈ ನಾಡಿನ ಪವಿತ್ರ ವಿಧಾನಮಂಡಲದ ಅಧಿವೇಶನದಲ್ಲೂ ಆಡಿದರು. ಆಡಳಿತ ಪಕ್ಷದವರೂ ಕೆಲವರು ಅದಕ್ಕೆ ಪೂರಕವಾದ ಮಾತುಗಳನ್ನ ಆಡಿಬಿಟ್ಟರು.
ಇವರಾರಿಗೂ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ? ಮೂಳೆಗಳು ಸಿಗದೇ ಇದ್ದರೆ, ಬೇರೆ ಸಾಕ್ಷಿ ಸಿಕ್ಕಿಲ್ವಾ ಅಥವಾ ಸಿಗಲ್ವಾ? ಇದರ ಮುಂದಿನ ಕಾನೂನು ನಡೆ ಏನಾಗಿರಬಹುದು ಎಂಬುದರ ಅರಿವಿಲ್ಲ ಅಥವಾ ಗೊತ್ತಿದ್ದೂ ದುರುದ್ದೇಶಪೂರ್ವಕವಾಗಿ ಈ ರೀತಿಯ ಒಂದು ಷಡ್ಯಂತ್ರವನ್ನ ಹೆಣೆಯುತ್ತ ಇದ್ದಾರೆ. ಅಷ್ಟೇ ಅಲ್ಲ, ವಿಧಾನಮಂಡಲದ ಅಧಿವೇಶನವನ್ನೂ ದುರುಪಯೋಗ ಮಾಡಿಕೊಂಡು ಸಾಕ್ಷಿಗಳಿಗೆ ಬೆದರಿಕೆ ಹಾಕುವುದಕ್ಕೆ ಬಳಸಿಕೊಳ್ತಾ ಇದ್ದಾರೆ ಅಷ್ಟೇ.

ಇದರ ಬಗ್ಗೆಯೇ ಗೃಹ ಸಚಿವರಾದ ಜಿ.ಪರಮೇಶ್ವರ್ ಅಧಿವೇಶನದಲ್ಲಿ ಕೆಲವು ವಿವರಣೆಗಳನ್ನ ಕೊಟ್ಟರು. ಅವರ ವಿವರಣೆಯನ್ನೂ ಆಧರಿಸಿ, ಅದಕ್ಕೂ ಮುಂದಕ್ಕೆ ಹೋಗಿ ಇನ್ನೂ ಕೆಲವು ಅಂಶಗಳನ್ನು ಈ ರಾಜ್ಯದ ಜನರ ಮುಂದೆ ಇಡಬೇಕಿದೆ ಮತ್ತು ಅವರ ವಿವರಣೆಯ ಮೇಲೆಯೇ ಎರಡು ಪ್ರಶ್ನೆಗಳನ್ನ ಎತ್ತಬೇಕಿರುವುದು ಇವತ್ತಿನ ಅಗತ್ಯ ಅನಿಸುತ್ತೆ. ಈ ಬರೆಹದ ಉದ್ದೇಶ ಈ ಎರಡೂ ಸಂಗತಿಗಳತ್ತ ನೋಡುವುದಾಗಿದೆ.
ಮೊದಲಿಗೆ ಎಸ್‌ಐಟಿ ರಚನೆಯಾದ ಈ ಆದೇಶವನ್ನ ನೋಡಿ.
ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗದವರ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211 ಎ ಬಿ.ಎನ್.ಎಸ್. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ಕೈಗೊಳ್ಳಲು ಒಂದು ಎಸ್‌ಐಟಿ ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ. ಹಾಗೆಯೇ ಈ ಮೊಕದ್ದಮೆ ಸಂಖ್ಯೆಯನ್ನ ಉಲ್ಲೇಖಿಸಿ ಎಸ್‌ಐಟಿ ರಚಿಸಲು ಸರ್ಕಾರದ ಆದೇಶ ಇದೆ.
ಅದಾದ ಮೇಲೆ, ಅದೇ ಆದೇಶದಲ್ಲಿ, ಮೇಲ್ಕಂಡ ಪ್ರಕರಣವೂ ಸೇರಿದಂತೆ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರೆ ಎಲ್ಲಾ ಪ್ರಕರಣಗಳ ತನಿಖೆಯನ್ನ ಈ ಎಸ್‌ಐಟಿಗೆ ವರ್ಗಾಯಿಸುವುದು ಅಂತಲೂ ಹೇಳಲಾಗಿದೆ.
ಹಾಗಾದರೆ, ಮಹಿಳಾ ಆಯೋಗ ಏನು ಬರೆದಿತ್ತು? ಅದರಲ್ಲಿ ಆಯೋಗದ ಅಧ್ಯಕ್ಷರು ‘ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ’ ಕೋರಿದ್ದರು.
ಗಮನಿಸಿ: 20 ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ, ಅಸ್ವಾಭಾವಿಕವಾದ ಸಾವು/ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಆಗಬೇಕಿರುವುದು.
ಅದನ್ನ ಬಿಟ್ಟು- ಆ ಸಾಕ್ಷಿದಾರನ ಹೇಳಿಕೆಯಲ್ಲಿ ಯಾವ್ಯಾವ ಜಾಗ ತೋರಿಸಲಾಗಿದೆಯೋ, ಅಲ್ಲಿ ಎಸ್‌ಐಟಿಯವರು ಅಗೀಬೇಕು, ಮೂಳೆ ಸಿಕ್ಕರೆ ಕೇಸಿದೆ, ಇಲ್ಲಾಂದ್ರೆ ಇಲ್ಲ ಅಂತ ಹೇಳಿದೆ ಅನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. ಇದು ವಾಸ್ತವ ಅಲ್ಲ. ಈ ಆದೇಶವನ್ನ ಸರ್ಕಾರ ವಾಪಸ್ ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ಖಂಡಿತಾ ಆಗಲ್ಲ. ಯಾಕೆಂದರೆ, ಎಸ್‌ಐಟಿ ಈಗ ಕೇವಲ ಒಂದು ತಂಡ ಅಲ್ಲ, ಅದೊಂದು ಪೊಲೀಸ್ ಸ್ಟೇಷನ್. ಎಸ್‌ಐಟಿಗೆ ಪೊಲೀಸ್ ಠಾಣೆಯ ಸ್ಥಾನಮಾನ ಕೊಟ್ಟಿರುವ ಈ ಆದೇಶ ನೋಡಿ.
ಸರ್ಕಾರಕ್ಕೆ, ಅಂದರೆ ಸ್ವತಃ ಮುಖ್ಯಮಂತ್ರಿಗಳಿಗೆ ಅಥವಾ ಗೃಹ ಮಂತ್ರಿಗಳಿಗೆ ಯಾವುದಾದರೂ ಪೊಲೀಸ್ ಸ್ಟೇಷನ್ನಿನವರಿಗೆ ಫೋನ್ ಮಾಡಿ ಒಂದು ನಿರ್ದಿಷ್ಟ ಕೇಸಿನಲ್ಲಿ ಈ ರೀತಿಯೇ ಮಾಡಿ ಅಂತ ಹೇಳುವ ಅಧಿಕಾರಾನೇ ಇಲ್ಲ. ಹಾಗಿದ್ದ ಮೇಲೆ ಒಂದು ನಿರ್ದಿಷ್ಟ ಭಾಗದಲ್ಲಿ 20 ವರ್ಷಗಳಲ್ಲಿ ನಡೆದಿರುವ ಸಾವು, ಕೊಲೆ, ಅತ್ಯಾಚಾರ, ಮಿಸ್ಸಿಂಗ್ ಕೇಸುಗಳ ಕುರಿತು ಸಮಗ್ರ ತನಿಖೆ ಮಾಡಲು ನಿಯೋಜಿತವಾಗಿರುವ ಒಂದು ಪೊಲೀಸ್ ಸ್ಟೇಷನ್ನಿಗೆ– ಆದೇಶ ಕೊಡುವ ಅಧಿಕಾರ ಸರ್ಕಾರಕ್ಕಿಲ್ಲ.
ಇದನ್ನು ಓದಿದ್ದೀರಾ?: ಹರೀಶ್ ಪೂಂಜಾ ಪ್ರಕರಣ | ಹೈಕೋರ್ಟ್ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?
ಎರಡನೇ ಅಂಶ: ಎಸ್‌ಐಟಿ ಅನ್ನುವುದು ಅಗೆಯೋಕೆ ಇರುವ ಏಜೆನ್ಸಿ ಅಲ್ಲ. In fact, ಇಲ್ಲಿ ಅಗೆಯುವ ಕೆಲಸ ಮಾಡ್ತಾ ಇಲ್ಲ. ಮಾಡ್ತಾ ಇರೋದು exhumation. ಇದಕ್ಕೆ ಸರಿಯಾದ ಕನ್ನಡ ಪದ ಇಲ್ಲ. Exhumationಗೆ ಶವ ಅಥವಾ ಶವದ ಪಳೆಯುಳಿಕೆಗಳನ್ನು ಹೊರತೆಗೆಯೋದು ಅಂತ ಹೇಳಬಹುದೇನೋ. ಅದನ್ನ ಮಾಡೋದು ಒಬ್ಬರು executive magistrate. ಈ ಕೇಸಿನಲ್ಲಿ ಅಲ್ಲಿನ ಎಸಿ- ಅಸಿಸ್ಟೆಂಟ್ ಕಮೀಷನರ್ ಉಸ್ತುವಾರಿಯಲ್ಲಿ ಅದನ್ನ ಮಾಡಲಾಗ್ತಾ ಇದೆ. ಎಸ್ ಐ ಟಿ ಕೆಲಸ, ಆ exhumationನಲ್ಲಿ ಅಲ್ಲಿ ಹೂತಿರಬಹುದಾದ ಯಾವುದೇ ಶವದ ಪಳೆಯುಳಿಕೆಗಳನ್ನು ಲಭ್ಯವಿರುವ ಎಲ್ಲಾ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚುವುದು. ಮಣ್ಣಿನಲ್ಲಿ ಕರಗಿರಬಹುದಾದ ಅಂಶಗಳೂ ಸೇರಿ. ಅದು ಮನುಷ್ಯ ದೇಹಕ್ಕೆ ಸಂಬಂಧಿಸಿರಬಹುದಾದ ಯಾವುದೇ ಜೈವಿಕ ಅಂಶಗಳಿರಬಹುದು; ಡಿಎನ್‌ಎ ಸಹ ಇರಬಹುದು. ಹೌದು ಡಿಎನ್‌ಎ ಸಹ ಇರಬಹುದು. ನನಗೆ ಅನ್ನಿಸುವ ಹಾಗೆ ಈ ಎಸ್‌ಐಟಿ ಸದರಿ ಜಾಗಗಳಲ್ಲಿನ ಮಣ್ಣಿನ ಸ್ಯಾಂಪಲ್ಲುಗಳನ್ನು ತೆಗೆದು ಈ ಎಲ್ಲಾ ವಿಶ್ಲೇಷಣೆಗಳಿಗೂ ಕಳಿಸಿರುತ್ತದೆ. ಒಂದು ವೇಳೆ ಕಳಿಸಿರದೇ ಇದ್ದರೆ ಅದು ಅವರ ತಪ್ಪಾಗುತ್ತದೆ. ಯಾಕೆಂದರೆ, ಎಸ್‌ಐಟಿ ಆದೇಶದಲ್ಲಿ ಇರುವುದು, ಈ ಕೊಲೆ, ಅತ್ಯಾಚಾರ, ಮಿಸ್ಸಿಂಗ್ ಕೇಸು, ಅಸ್ವಾಭಾವಿಕ ಸಾವುಗಳ ವಿಚಾರದ ಸಮಗ್ರ ತನಿಖೆಯೇ ಹೊರತು, ಈಗಾಗಲೇ ದಾಖಲಾಗಿರುವ ಮತ್ತು ಮುಂದೆ ರಾಜ್ಯದ ಇತರ ಭಾಗಗಳಲ್ಲಾದರೂ ದಾಖಲಾಗಬಹುದಾದ ಕೇಸುಗಳನ್ನು ವರ್ಗಾಯಿಸಿಕೊಂಡು ಮಾಡುವ ಎಲ್ಲಾ ದೂರುಗಳ ತನಿಖೆಯೇ ಹೊರತು, ಮೂಳೆ ನೋಡುವುದು ಅಂತ ಅಲ್ಲ. ಗೃಹ ಸಚಿವರೂ ಸಹ ಒಂದು ಸಾರಿ ಡಿಎನ್‌ಎ ಅಂತ ಹೇಳಿರೋದ್ರಿಂದ, ಡಿಎನ್‌ಎ ಗುರುತು ಪತ್ತೆಗೆ ಪ್ರಯತ್ನ ನಡೆದಿರುತ್ತದೆ ಎಂದು ಭಾವಿಸಬಹುದು.
ಮೂರನೇ ಅಂಶ: ಮೂಳೆ ಅನ್ನುವುದೊಂದೇ ಸಾಕ್ಷಿ ಅಲ್ಲ. ಇದು ಬಹಳ ಬಹಳ ಮುಖ್ಯ. ದಯವಿಟ್ಟು ಇದರಲ್ಲಿರುವ ವೈಜ್ಞಾನಿಕ ಅಂಶಗಳನ್ನ ನೀವು ಗಮನಿಸಬೇಕು.

ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಸೇರುವ ಈ ಭೂಪ್ರದೇಶದಲ್ಲಿ ಲ್ಯಾಟೆರೈಟ್ ಅನ್ನುವ ಮಣ್ಣಿನ ಗುಣ ಇದೆ. ಕನ್ನಡದಲ್ಲಿ ಜಂಬಿಟ್ಟಿಗೆ ಅಂತಾರಲ್ಲ, ಅದು ಲ್ಯಾಟೆರೈಟ್ ಸಾಯಿಲ್. ಈ ಲ್ಯಾಟೆರೈಟ್ ಮಣ್ಣು ಆಮ್ಲೀಯ ಗುಣವನ್ನ ಹೊಂದಿರುತ್ತದೆ. ಅದರ ಪಿಎಚ್ 6 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. ನಿರಂತರವಾಗಿ ಬೀಳುವ ಮಳೆಯಿಂದ, ಅದು ನೀರಿನಲ್ಲಿ ಕರಗಬಹುದಾದ ಲವಣಗಳು ಮತ್ತು ಪ್ರತ್ಯಾಮ್ಲವನ್ನು ತೊಳೆದು ಬಿಸಾಕುತ್ತದೆ. ಆಮ್ಲಗುಣ ಹೊಂದಿರುವ ಅಂಶಗಳನ್ನ ಮತ್ತು ಕಬ್ಬಿಣ ಮತ್ತು ಅಲ್ಯುಮಿನಿಯಂ ಆಕ್ಸೈಡುಗಳನ್ನ ಮಾತ್ರ ಉಳಿಸುತ್ತದೆ. ಈ ಕಬ್ಬಿಣ ಮತ್ತು ಅಲ್ಯುಮಿನಿಯಂ ಆಕ್ಸೈಡುಗಳ ಕಾರಣಕ್ಕೆ ಅದಕ್ಕೆ ಹೆಚ್ಚು ಆಮ್ಲ ಗುಣ ಬರುತ್ತದೆ.
ಈ ವೈಜ್ಞಾನಿಕ ಲೇಖನಗಳನ್ನ ನೀವು ಓದಿದ್ರೆ, ಅದರಲ್ಲಿ ಎಲ್ಲಾ ವಿವರಗಳು ಸಿಗುತ್ತದೆ. ಈ ಆಮ್ಲ ಗುಣದ ವಿಚಾರ ನಮಗೇಕೆ ಮುಖ್ಯ ಅಂದರೆ, ಇಂತಹ ಮಣ್ಣಿನಲ್ಲಿ ಮೂಳೆಗಳು ಬೇಗ ಕರಗುತ್ತವೆ. Science direct ಎನ್ನುವ ಈ ವೈಜ್ಞಾನಿಕ ಮ್ಯಾಗಜೀನ್‌ನಲ್ಲಿರುವ ಈ ಅಂಶಗಳನ್ನ ನೋಡಿ. The dry conditions present in soils in arid and semi-arid regions preserve bones and teeth and shells. Bones and teeth and shells are preserved better in alkaline soil, while their degradation and eventual destruction are quite rapid where the soil water is acidic and unsaturated, as in acid soils that are wet and free draining and formed on sands and acidic parent material in higher precipitation zones.
ಅಂದರೆ ಒಣ ಮತ್ತೆ ಅರೆ ಒಣ ಪ್ರದೇಶದಲ್ಲಿನ ಮಣ್ಣು ಸಾಮಾನ್ಯವಾಗಿ ಮೂಳೆ, ಹಲ್ಲು ಮತ್ತು ಚಿಪ್ಪುಗಳನ್ನು ಬಹುಕಾಲ ಉಳಿಸಿಕೊಳ್ಳುತ್ತದೆ. ಪ್ರತ್ಯಾಮ್ಲದ ಗುಣ ಇರುವೆಡೆ ಇದು ಉಳಿದುಕೊಳ್ಳುತ್ತದಾದರೆ, ಆಮ್ಲೀಯ ಗುಣವಿರುವ ಮಣ್ಣಿನಲ್ಲಿ ಮತ್ತು ತೇವ ಹೆಚ್ಚಾಗಿದ್ದು, ನೀರು ಹರಿಯುವ ಜಾಗಗಳಲ್ಲಿ ಆಮ್ಲೀಯ ಗುಣದ ಕಾರಣಕ್ಕೆ ಮೂಳೆ ಮತ್ತು ಹಲ್ಲುಗಳು ಬಹುಬೇಗನೇ ಕರಗಿ ಹೋಗುತ್ತವೆ– ಅಂತ ಇದು ಹೇಳುತ್ತದೆ.
ಭೀಮ ತೋರಿಸಿದ ಎಲ್ಲಾ ಜಾಗಗಳಲ್ಲಿ ಶವ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಅದು ಪತ್ತೆಯಾಗಬೇಕಿರುವುದು ತನಿಖೆಯಲ್ಲಿ. ಆದರೆ, ಮೂಳೆ ಸಿಕ್ತಾ ಇಲ್ವಾ ಅನ್ನುವುದೇ ವಿಚಾರ ಅಂತ ಎಸ್‌ಐಟಿಯವರೂ ಹೇಳಿಲ್ಲ; ಯಾವ ತಜ್ಞರೂ ಹೇಳಿಲ್ಲ. ವಾಟ್ಸಾಪ್ ಯೂನಿವರ್ಸಿಟಿ ತಿಳಿವಳಿಕೆಯಿಂದ ಮತ್ತು ದುರುದ್ದೇಶದಿಂದ ಯಾರೋ ಹೇಳೋ ವಿಚಾರವನ್ನ ನಾವು ವಿಜ್ಞಾನ ಅಂತಲೂ ತಿಳಿಯಬಾರದು, ಅದು ತನಿಖೆ ಸಹ ಅಲ್ಲವೇ ಅಲ್ಲ.
ವಿವಿಧ ರೀತಿಯ ಜೈವಿಕ ಮತ್ತು ಡಿಎನ್‌ಎ ರೀತಿಯ ಸೂಕ್ಷ್ಮ ಜೈವಿಕ ವೈಜ್ಞಾನಿಕ ಪುರಾವೆಗಳನ್ನ ಪತ್ತೆ ಹಚ್ಚುವುದು ಒಂದೆರಡು ದಿನಗಳಲ್ಲಿ, ವಾರಗಳಲ್ಲಿ ಅಥವಾ ಕೆಲವೇ ತಿಂಗಳಲ್ಲಿ ಮುಗಿಯುವ ಕೆಲಸ ಅಲ್ಲ. ಇನ್ನೊಮ್ಮೆ ಹೇಳ್ತೀನಿ. ಮೂಳೆ ಸಿಕ್ಕಿತಾ ಅನ್ನುವುದು ಮುಖ್ಯ ಅಲ್ಲ. ಮುಖ್ಯವಾಗಿ ಸತ್ತ, ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳ ಮೇಲಾದ ಕ್ರೈಮ್ ಏನಿದೆ, ಅದಕ್ಕೆ ನ್ಯಾಯ ಸಿಗಬೇಕು. ಸೂಕ್ತವಾದ ತನಿಖೆ ಆಗಬೇಕು. ಅದಕ್ಕೆ ಇನ್ನಷ್ಟು ಅಗೆಯಬೇಕು ಅಂದರೆ ಅಗೆಯಬೇಕು. Exhumation ಮಾಡಬೇಕು ಅಂದರೆ ಮಾಡಬೇಕು. ಬೇರೆ ರೀತಿಯ ತನಿಖೆ ಆಗಬೇಕು ಅಂದರೆ, ಅದನ್ನೂ ಮಾಡಬೇಕು. ಇಷ್ಟೇ ವಿಚಾರ.
ಆದರೆ, ಕರ್ನಾಟಕದ ವಿಧಾನಮಂಡಲದ ಅಧಿವೇಶನದಲ್ಲಿ ಏನು ನಡೆಯಿತು ಮತ್ತು ಕೆಲವು ಟಿವಿ ಚಾನೆಲ್ಲುಗಳಲ್ಲಿ ಏನು ನಡೆಯಿತು ಅದನ್ನು ನೋಡುವುದಾದರೆ– ಅಲ್ಲಿ ಈ ನೆಲದ ಕಾನೂನಿನ ಅಪಹಾಸ್ಯ ನಡೆದಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ. ಅವರಿಗೆ ನೆಲದ ಕಾನೂನಿನ ಅರಿವಿದ್ದಂತೆ ಕಾಣುವುದಿಲ್ಲ. ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದ ವತಿಯಿಂದ, ಅದರ ಶಾಸಕರು, ಸಚಿವರಿಂದ ಬಂದ ಕೆಲವು ಹೇಳಿಕೆಗಳು ಈ ಸಂಶಯ ಹುಟ್ಟಿಸುತ್ತಿವೆ.
ಯಾವ ರೀತಿಯಲ್ಲೂ ಧರ್ಮಕ್ಕೆ ಸಂಬಂಧವನ್ನೇ ಹೊಂದಿರದ ಬಿಜೆಪಿ ಅಬ್ಬರ ಆರ್ಭಟಕ್ಕೆ ಕಾಂಗ್ರೆಸ್ ಯಾಕೆ ಹೆದರತ್ತೆ ಅಂದರೆ– ಅವರಿಗೂ ಧರ್ಮ ಗೊತ್ತಿದ್ದಂತೆ ಕಾಣುವುದಿಲ್ಲ. ಹಿಂದೂ ಹೆಣ್ಣುಮಕ್ಕಳ ಅಮಾನವೀಯ ಕೊಲೆ, ಅತ್ಯಾಚಾರ, ಮಿಸ್ಸಿಂಗ್ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಬಿಜೆಪಿ ಈಗಾಗಲೇ ಏನನ್ನೋ ಮುಚ್ಚಿಡುವುದಕ್ಕೆ, ಯಾರದ್ದೋ ಪಾಪಕೃತ್ಯಗಳ ಸರಮಾಲೆಯಲ್ಲಿ ಶಾಮೀಲಾಗುವುದಕ್ಕೆ ಹೊರಟಿದ್ದಾರಾ ಎನ್ನುವ ಅನುಮಾನ ಬರುತ್ತದೆ.

ಅದೇಕೆ ಅನ್ನುವುದಕ್ಕೆ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದಿರುವ ಈ ಸಂಗತಿಗಳನ್ನ– ಈಗಾಗಲೇ ನೀವು ಸಾವಿರಾರು ಬಾರಿ ಓದಿದ್ದರೂ/ಕೇಳಿದ್ದರೂ– ಇನ್ನೊಮ್ಮೆ ನೆನಪಿಸಿಕೊಳ್ಳೋಣ.
ಮೊದಲನೇದು ವೇದವಲ್ಲಿ. 1970ರ ಹೊತ್ತಿಗೇ ಬಿಎಸ್‌ಸಿ, ಬಿಎಡ್ ಮಾಡಿದ್ದ ಶಿಕ್ಷಕಿ ವೇದವಲ್ಲಿ. ಗ್ರಾಮೀಣ ಸೇವೆ ಸಲ್ಲಿಸುವುದಕ್ಕೆ ಹೋಗಿದ್ದ ಸರ್ಕಾರೀ ವೈದ್ಯ ಡಾ.ಹರಳೆಯವರ ಪ್ರಕಾರ, ಅವರ ಪತ್ನಿ ವೇದವಲ್ಲಿಯವರು ತಾನೇ ತನ್ನ ಮೇಲೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ಸುಳ್ಳು. ಆಕೆ ಅತ್ಯಾಚಾರ ಮತ್ತು ಭೀಕರ ಹತ್ಯೆಗೆ ಒಳಗಾಗಿದ್ದಾರೆ. ಮತ್ತು ಅವರ ಪ್ರಕಾರ ಅವರ ಮೇಲೆಯೇ ಸುಳ್ಳು ಆರೋಪ ಹೊರಿಸಲಾಯಿತು; ನಿಜವಾದ ಅಪರಾಧಿಗಳನ್ನು ಹಿಡಿಯಲಿಲ್ಲ.
ಎರಡನೇದು ಪದ್ಮಲತಾ. ಇಡೀ ನಾಡನ್ನು ಬೆಚ್ಚಿಬೀಳಿಸಿದ್ದ ಈ ಕೇಸಿನಲ್ಲಿ ಪದ್ಮಲತಾ ಅವರ ಮೇಲೆ ನಡೆದದ್ದು ಅತ್ಯಾಚಾರ ಮತ್ತು ಕೊಲೆ ಅನ್ನುವುದು ಸಾಬೀತಾಗಿದೆ. ಆದರೆ, ಯಾರು ಮಾಡಿದ್ದು ಅಂತ ಮಾತ್ರ ಗೊತ್ತಿಲ್ಲ.
ಮೂರನೇದು ಸೌಜನ್ಯ. ಅತ್ಯಾಚಾರ ಮತ್ತು ಕೊಲೆ ಆಗಿದೆ ಅನ್ನುವುದು ಪ್ರೂವ್ ಆಗಿದೆ. ಆದರೆ, ಯಾರು ಮಾಡಿದ್ದು ಅಂತ ಮಾತ್ರ ಗೊತ್ತಿಲ್ಲ. ಅಷ್ಟೇ ಅಲ್ಲ, ಆ ಕೇಸಿನಲ್ಲಿ ತನಿಖಾಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಸ್ವತಃ ಕೋರ್ಟೇ ಹೇಳಿದೆ. Sowjanya is raped and killed but nobody is found guilty.
ಆನೆ ಮಾವುತ ನಾರಾಯಣ & his sister Yamuna are killed but nobody is found guilty.
ಒಂದೇ ಜಾಗದಲ್ಲಿ ಒಬ್ಬರದ್ದಲ್ಲಾ, ಹಲವರ ಹತ್ಯೆ ನಡೆಯುತ್ತದೆ. ಅವರಲ್ಲಿ ಹೆಣ್ಣುಮಕ್ಕಳು ಹೆಚ್ಚಿದ್ದಾರೆ. ಅವರು ಕೊಲೆಗೀಡಾಗಿದ್ದಾರೆ, ಆದರೆ, ಕೊಲೆಗಾರರು ಸಿಕ್ಕಿಲ್ಲ ಅಂದರೆ ಅದು ಗಂಭೀರ ವಿಚಾರ ಅಲ್ಲವಾ? ಅದಕ್ಕೇ ಅಲ್ಲವಾ ಎಸ್‌ಐಟಿ ರಚನೆಯಾಗಿರುವುದು.
ಪಂಚಾಯಿತಿಯವರೇ ನೂರಾರು ಜನ ಸತ್ತಿದ್ದಾರೆ ಅಂತ ಹೇಳಿದ್ದಾರೆ. ಇರಲಿ, ಅವರ ಪ್ರಕಾರ ಅವೆಲ್ಲ ಕೊಲೆಗಳಲ್ಲ. ಆದರೆ, ಅವರು ಮಾಹಿತಿ ಹಕ್ಕಿನಡಿ ನೀಡಿದ್ದ ಮಾಹಿತಿಯಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಒಂದೇ ದಿನ 15.06.2009ರಂದು, 15 ವರ್ಷ ವಯಸ್ಸಿನ ಒಂದು ಹುಡುಗಿಯ ಒಂದು ಶವ ಸಿಗುತ್ತದೆ. ಅವತ್ತೇ ಪೋಸ್ಟ್ ಮಾರ್ಟಂ ಆಗುತ್ತದೆ. ಶವದ ವಾರಸುದಾರರು ಗೊತ್ತಾಗಲ್ಲ. ಆದರೆ ಅವತ್ತೇ ದಫನ್ ಮಾಡಿಬಿಡಿ ಅಂತ ಪೊಲೀಸರು ಪಂಚಾಯಿತಿಗೆ ಪತ್ರ ಬರೆಯುತ್ತಾರೆ.
ಹಾಗೆಯೇ ಇನ್ನೂ ಕೆಲವು ಸಂಶಯಗಳಿವೆ. ಧರ್ಮಸ್ಥಳದ ವ್ಯಾಪ್ತಿಯಲ್ಲಿ ಶರಾವತಿ ಲಾಡ್ಜಿನಲ್ಲಿ ಒಬ್ಬ ಮಹಿಳೆಯ ಶವ ಮತ್ತು ಆವರಣದಲ್ಲಿ ಇನ್ನೊಂದು ಗಂಡಸಿನ ಶವ ಪತ್ತೆಯಾಗುತ್ತದೆ. ಮಹಿಳೆಯದ್ದನ್ನು ಕೊಲೆ ಎಂದೂ, ಗಂಡಸಿನದ್ದು UDR ಅಂದರೆ unnatural death report, ಅಸಹಜ ಸಾವಿನ ವರದಿ ಅಂತ ಹೇಳಲಾಗುತ್ತದೆ. ಈ ಮಹಿಳೆ ಅಪರಿಚಿತ ಶವ ಅಂತ ಹೇಳಲಾಗುತ್ತದೆ. ಲಾಡ್ಜಿನಲ್ಲಿ ಪ್ರವೇಶ ಕೊಡುವುದಕ್ಕೆ ಗುರುತಿನ ಚೀಟಿ ಬೇಕಲ್ಲವಾ? ಯಾಕೆ ಆಕೆಯ ಗುರುತಿನ ಚೀಟಿ ಇರಲಿಲ್ಲವಾ ಎಂಬ ಪ್ರಶ್ನೆಯನ್ನ ಎತ್ತಲಾಗಿದೆ. ಅಷ್ಟೇ ಅಲ್ಲದೇ, 6.04.2010ರಂದು ಶರಾವತಿ ವಸತಿಗೃಹದಲ್ಲಿ ಕೊಲೆಯಾದ ಈ ಅಪರಿಚಿತ ಮಹಿಳೆಯ ಶವವನ್ನು ವಿಲೇವಾರಿ ಮಾಡಲು ಬರೆದಿರುವ ಈ ಪತ್ರದ ದಿನಾಂಕ 7.04.2010, ಅಂದರೆ ಮರುದಿನ. ಧರ್ಮಸ್ಥಳಕ್ಕೆ ಬಂದು, ಶರಾವತಿ ವಸತಿಗೃಹದಲ್ಲಿ ಉಳಿದುಕೊಂಡು, ಆ ರೀತಿ ಉಳಿದುಕೊಳ್ಳುವಾಗ ಆಕೆ ಐಡಿ ಕಾರ್ಡ್ ತೋರಿಸದಿದ್ದರೂ ಆಕೆಗೆ ಜಾಗ ಕೊಟ್ಟು, ನಂತರ ಕೊಲೆಯಾಗಿ ಹೋಗಿ, ಆಕೆ ಅಪರಿಚಿತೆ ಅಂತ ಸ್ವತಃ ಪೊಲೀಸ್ ಸ್ಟೇಷನ್ ರೆಕಾರ್ಡ್ ಮತ್ತು ಪಂಚಾಯ್ತಿ ರೆಕಾರ್ಡುಗಳೆರಡರಲ್ಲೂ ಇರುವಾಗ– ಆಕೆಯ ಶವವನ್ನ ಮಾರನೆಯ ದಿನವೇ ದಫನ್ ಹೇಗೆ ಮಾಡಿಬಿಡುತ್ತಾರೆ?
ಇದನ್ನು ಓದಿದ್ದೀರಾ?: ಆಧಾರರಹಿತ ಮತ್ತು ಸುಳ್ಳು : ಧರ್ಮಸ್ಥಳ ಬೆಳವಣಿಗೆ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಇನ್ನೂ ಒಂದು ಪ್ರಕರಣದಲ್ಲಿ ಧರ್ಮಸ್ಥಳದಲ್ಲಿ ಆದ ಅಸಹಜ ಸಾವಿನ ಪ್ರಕರಣದ ಶವವನ್ನು ದಫನ್ ಮಾಡಿ ಅಂತ, ಧರ್ಮಸ್ಥಳದ ಪಂಚಾಯಿತಿ ದಾಟಿ, ಉಜಿರೆ ದಾಟಿ, ಬೆಳ್ತಂಗಡಿಯ ಪಂಚಾಯಿತಿಯನ್ನೊಮ್ಮೆ ಕೇಳಲಾಗಿದೆ ಎಂದು ಆರೋಪಿಸಲಾಗಿದೆ.
ಅಂದರೆ, ವಿಚಾರ ಸ್ಪಷ್ಟವಾಗಿದೆ. ಪಂಚಾಯ್ತಿಯವರೂ ಹೇಳುತ್ತಿರುವ ಹಾಗೆ ದೊಡ್ಡ ಸಂಖ್ಯೆಯ ಅಸಹಜ ಸಾವುಗಳು ಸಂಭವಿಸಿವೆ. ಅದರಲ್ಲಿ ಕೊಲೆಯೂ ಇದೆ. ಆದರೆ, ಎಲ್ಲವೂ ಕಾನೂನುಬದ್ಧವಾಗಿ ತನಿಖೆ ಆದಂತಿಲ್ಲ. ಅಪರಿಚಿತ ಶವಗಳ ಕುರಿತಾಗಿ, ಅಪರಿಚಿತ ಹೆಣ್ಣುಮಕ್ಕಳ ಶವಗಳ ಕುರಿತಾಗಿ ನೆಲದ ಕಾನೂನು ಪಾಲಿಸಿಲ್ಲ.
ಅಂದಮೇಲೆ ಇವೆಲ್ಲವೂ ತನಿಖೆಗೆ ಒಳಪಡಬೇಕಾ ಇಲ್ಲವಾ? ಕಳೆದ 20 ವರ್ಷಗಳಲ್ಲಿ ಮಿಸ್ಸಿಂಗ್ ಆದ, ಕೊಲೆಗೀಡಾದ, ಅತ್ಯಾಚಾರಕ್ಕೀಡಾದ ಹೆಣ್ಣುಮಕ್ಕಳ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಎಸ್‌ಐಟಿ ಇವೆಲ್ಲವನ್ನೂ ಏಕೆ ಪರಿಗಣಿಸುತ್ತಿಲ್ಲ?
ಇದರ ಬಗ್ಗೆ ಗೃಹ ಸಚಿವರು ಏಕೆ ಒಂದೇ ಒಂದು ಮಾತನ್ನೂ ಆಡಿಲ್ಲ. ಇದೇ ಪ್ರಶ್ನೆಯನ್ನ ಈ ಬರೆಹದ ಆರಂಭದಲ್ಲಿ ಎತ್ತಿದ್ದು. ಹಾಗೆಯೇ ಸ್ವತಃ ಎಸ್‌ಐಟಿ, ತಾನೇ ತಾನಾಗಿ exhumation ಅನ್ನು ನಿಲ್ಲಿಸಿದ್ದು ಏಕೆ?
ಈ ಪ್ರಶ್ನೆ ಏಳುವುದಕ್ಕೂ ಒಂದು ಕಾರಣವಿದೆ. ಇದೇ ಪ್ರದೇಶದಲ್ಲಿ, 2002-03ರಲ್ಲಿ ನಡೆದ ಒಂದು ಪ್ರಕರಣದ ಬಗ್ಗೆ ಜಯಂತ್ ಟಿ. ಎನ್ನುವವರು ಖುದ್ದು ಎಸ್‌ಐಟಿಗೆ, ಪೊಲೀಸ್ ಠಾಣೆಯ ಸ್ಥಾನಮಾನ ಪಡೆದುಕೊಂಡಿರುವ, ಇಂತಹ ಸಂಗತಿಗಳನ್ನೇ ಸಮಗ್ರ ತನಿಖೆ ಮಾಡಬೇಕಾದ ಎಸ್‌ಐಟಿಗೆ ಒಂದು ದೂರು ಕೊಟ್ಟಿದ್ದಾರೆ. ಅದರಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ, 13ರಿಂದ 15 ವರ್ಷದ ಹೆಣ್ಣುಮಗುವಿನ ದೇಹ ಕೊಳೆತು ಬಿದ್ದಿರುವಾಗ, ಅದಕ್ಕೆ ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೇ ಅಲ್ಲೇ ಹೂತುಹಾಕಿರುತ್ತಾರೆಂದು ಹೇಳಿದ್ದಾರೆ. ಈಗ ಅಲ್ಲಿ ಅಗೆದರೆ, ಲ್ಯಾಟೆರೈಟ್ ಮಣ್ಣಿನ ಕಾರಣದಿಂದ ಮೂಳೆಗಳು ಸಿಗದೇ ಹೋಗಬಹುದು– ಆದರೆ, ಡಿಎನ್‌ಎ ಮತ್ತಿತರ ಕುರುಹುಗಳು ಸಿಗಬಹುದು. ಅಂತಹ ಕಡೆಗಳಲ್ಲಿ– ತಮಗೆ ಅಧಿಕೃತವಾಗಿ ದೂರು ಕೊಟ್ಟರೂ, exhumation ಮಾಡದೇ, ಎಸ್‌ಐಟಿ ತಾನೇ ತಾನಾಗಿ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಏಕೆ?
ಎಕ್ಸುಮೇಷನ್ ನಿಲ್ಲಿಸಿದ್ದು ಏಕೆ?
ಒಂದು ವೇಳೆ ಈಗಾಗಲೇ ಮಾಡಿರುವ ಎಕ್ಸುಮೇಷನ್‌ನಲ್ಲಿ ಸಂಗ್ರಹಿಸಿರುವ ಸ್ಯಾಂಪಲ್ಲುಗಳ ವಿಶ್ಲೇಷಣೆ ಮಾಡಿ ಮುಂದುವರೆಯೋಣ ಅನ್ನುವ ಕಾರಣಕ್ಕೆ ನಿಲ್ಲಿಸಿದ್ದರು ಅಂತಿಟ್ಟುಕೊಂಡರೆ– ಇನ್ನೊಂದು ಪ್ರಶ್ನೆ ಏಳುತ್ತದೆ. ಅದೇನಂದರೆ– ಉಳಿದ ಸಾವುಗಳ ಬಗ್ಗೆ, ಅಸಹಜ ಸಾವುಗಳ ಬಗ್ಗೆ, ಕೊಲೆಗೀಡಾಗಿರಬಹುದು ಎಂಬ ಅನುಮಾನ ಇರುವುದರ ಬಗ್ಗೆ ಎಸ್‌ಐಟಿ ಏನು ಮಾಡ್ತಾ ಇದೆ? ಈ ಪ್ರಶ್ನೆ ಏಳಬಾರದಾ?
ಈ ರಾಜ್ಯದ ಅಧಿಕೃತ ವಿರೋಧ ಪಕ್ಷವೇ ಎಸ್‌ಐಟಿ ತನಿಖೆಗೆ ಬೆದರಿಕೆ ಒಡ್ಡುವ ರೀತಿಯಲ್ಲಿ, ಸಾಕ್ಷಿದಾರರನ್ನು ಹೆದರಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾಗ, ಇದೊಂದು ಷಡ್ಯಂತ್ರ ಎಂದು ಹೇಳಿದರೆ, ಸ್ವತಃ ರಾಜ್ಯದ ಉಪಮುಖ್ಯಮಂತ್ರಿಗಳೇ ಇಲ್ಲೊಂದು ಷಡ್ಯಂತ್ರ ಇದೆ ಎಂದು ಹೇಳಿರುವಾಗ– ನಮಗೆ ಪ್ರಶ್ನೆ ಬಂದೇ ಬರುತ್ತದೆ. ಹಾಗಿದ್ದರೆ, ಎಸ್‌ಐಟಿ ಕಾನೂನು ಪ್ರಕಾರ ನಡೆದುಕೊಳ್ಳುತ್ತ ಇದೆಯಾ? ಈ 20 ವರ್ಷಗಳಲ್ಲಿ ನಡೆದಿರುವ ಎಲ್ಲಾ ಅಸಹಜ ಸಾವುಗಳು, ಕೊಲೆಗಳು, ಅತ್ಯಾಚಾರಗಳು, ಮಿಸ್ಸಿಂಗ್ ಕೇಸುಗಳ ಕುರಿತು ಅದು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಕೈಗೊಳ್ಳುತ್ತದಾ? ಸಾಕ್ಷಿಗಳನ್ನು ಬೆದರಿಸುತ್ತಿರುವವರು, ಬೆಂಗಳೂರಿನ ಯಲಹಂಕದಿಂದ ಬೈಕ್ ಯಾತ್ರೆ ಮಾಡುವವರು, ವಿಧಾನಸಭೆಯಲ್ಲೇ ಎರಡೆರೆಡು ದಿನ ಅಬ್ಬರಿಸಿ ಬೊಬ್ಬಿರಿದವರು, ಇದನ್ನೊಂದು ಷಡ್ಯಂತ್ರ ಎಂದವರು, ಧರ್ಮವನ್ನು ಮುಂದೆ ತಂದು, ಕೊಲೆ ಮತ್ತು ಅತ್ಯಾಚಾರಕ್ಕೀಡಾದ ಹೆಣ್ಣುಮಕ್ಕಳ ಸಾವಿಗೆ ನ್ಯಾಯ ಸಿಗದೇ ಇದ್ದರೂ ಪರವಾಗಿಲ್ಲ ಎಂಬಂತೆ ವರ್ತಿಸುತ್ತಿರುವವರು ಇರುವುದರಿಂದ– ಈ ಸಂದೇಹ ಬಂದೇ ಬರುತ್ತದೆ. ಎಸ್‌ಐಟಿ ಮೇಲೆ ಒತ್ತಡ ಬಂದಿಲ್ಲವಾ ಎಂಬ ಪ್ರಶ್ನೆ ಏಳುತ್ತದೆ.
ಸಮಗ್ರ ತನಿಖೆ ನಡೆಯಲೇಬೇಕು. ಈಗಾಗಲೇ ಬಗೆಹರಿದಿದೆ ಎಂಬುದನ್ನೇ ನೀವು ಮತ್ತೆ ಕೈಗೆತ್ತಿಕೊಂಡಿರುವುದು. ಮೊದಲು ಒಬ್ಬ ಭೀಮ ಬಂದಿದ್ದರೆ, ಈಗ ಹಲವರು ದೂರು ಕೊಡಲು ಮುಂದೆ ಬಂದಿದ್ದಾರೆ. ನಿರ್ದಿಷ್ಟವಾಗಿ ಶವವೊಂದನ್ನು ಹೂತುಹಾಕಿದ ಜಾಗ ತೋರಿಸುವುದಾಗಿ ಜಯಂತ್ ಟಿ. ಎಂಬುವವರು ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ?: ಸೌಜನ್ಯ ಕೇಸ್‌ನಲ್ಲಿ ಮತ್ತೆಮತ್ತೆ ಸಂತೋಷ್ ರಾವ್‌ನನ್ನು ಎಳೆತಂದು ಯಾರನ್ನು ರಕ್ಷಿಸಲಾಗುತ್ತಿದೆ?
ಅದೇ ದಿನ ಪತ್ತೆಯಾದ ಸತ್ತ ಅಥವಾ ಕೊಲೆಗೀಡಾದ ಅಪರಿಚಿತ ಶವವನ್ನು ಅದೇ ದಿನ ಪೋಸ್ಟ್ ಮಾರ್ಟಂ ಮಾಡಿ, ಅದೇ ದಿನ ದಫನ್ ಮಾಡಲು ಧರ್ಮಸ್ಥಳ ಪೊಲೀಸರು ಪಂಚಾಯ್ತಿಗೇಕೆ ಪತ್ರ ಬರೆದರು ಅಂತ ಎಸ್‌ಐಟಿ ಕೇಳಬೇಕಲ್ಲವಾ?
ಇವೆಲ್ಲದರ ಮೇಲೆ– ಅಗೆಯಬೇಡಿ, ಅಗೆಯಬೇಡಿ ಎಂದೇಕೆ ಹೇಳುತ್ತಿದ್ದಾರೆ? ಮೂಳೆ ಸಿಗದಿದ್ದರೇನು, ಉಳಿದ ಮಣ್ಣಿನ ಸ್ಯಾಂಪಲ್ಲಿನಲ್ಲಿ ಯಾವ ಡಿಎನ್‌ಎ ಸಿಗುತ್ತದೋ ಯಾರಿಗೆ ಗೊತ್ತು? ಯಾಕಾಗಿ ಕೆಲವರು ಇದನ್ನು ತಡೆಯಲು ಹೊರಟಿದ್ದಾರೆ?
ಶವಗಳ ಕುರುಹುಗಳನ್ನು ಹೊರತೆಗೆಯುವುದರ ಹೊರತಾಗಿ ಇನ್ನಿತರ ಯಾವ್ಯಾವ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂಬ ಬಗ್ಗೆ ಗೃಹ ಸಚಿವರು ಏನೂ ಹೇಳಿಲ್ಲ. ಹೇಳಲೇಬೇಕು ಎಂದೇನಿಲ್ಲ. ಆದರೆ ಅವರು ಹೇಳಿಕೆ ನೀಡಿದ್ದರಿಂದ ಈ ಪ್ರಶ್ನೆ ಉದ್ಭವಿಸುತ್ತದೆ.
ವೇದವಲ್ಲಿ, ಪದ್ಮಲತಾ, ಸೌಜನ್ಯ, ನಾರಾಯಣ ಮತ್ತು ಯಮುನಾ- ಇವರೆಲ್ಲರೂ ಸ್ಥಳೀಯರಾದ್ದರಿಂದ ಹೆಸರುಗಳಿವೆ. ಇವರು ಪರಿಚಿತ ಶವಗಳಾಗಿ ಮುಗಿದು ಹೋದರು. ಆದರೆ, ಜಯಂತ್ ಅವರು ಹೇಳಿರುವ ಆ ಮಹಿಳೆಯೂ ಸೇರಿದಂತೆ, ಪಂಚಾಯಿತಿಯವರೂ ಹೇಳಿರುವ ಹಾಗೆ ಅದೆಷ್ಟೋ ಅಪರಿಚಿತ ಶವಗಳು, ಈಗ ಅದೇ ದಿನ ಶವ ಸಿಕ್ಕು, ಅದೇ ದಿನ ಪೋಸ್ಟ್ ಮಾರ್ಟಂ ಮಾಡಿ, ಅದೇ ದಿನ ದಫನ್ ಸಹಾ ಆಗಿ ಹೋಗಿರುವ ಶವಗಳು, ಮೂಳೆಯೂ ಕರಗಿ ಹೋಗಿರುವ ಲ್ಯಾಟರೈಟ್ ಮಣ್ಣಿನಲ್ಲಿ ಇಲ್ಲವಾಗಿರುವ ಶವಗಳು– ಇವೆಲ್ಲದರ ಕುರುಹುಗಳನ್ನು ಹೊರತೆಗೆಯುವ ಕೆಲಸ ನಡೆಯಲೇಬೇಕು. ಇನ್ನಷ್ಟು ಜಾಗಗಳಲ್ಲಿ ಶವ ಹೊರತೆಗೆಯುವ ಕೆಲಸ ನಡೆಯುವ ಅಗತ್ಯ ಇದೆ ಅಂದರೆ ನಡೆಯಬೇಕು. ಇದು ಭಾರತದ ಸಂವಿಧಾನದ ಅಡಿಯಲ್ಲಿ, ಸಿಆರ್‌ಪಿಸಿಯಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆಯಡಿ ನಡೆಯಬೇಕೇ ಹೊರತು, ಯಾರೋ ನಾಲ್ಕು ಜನರು ಕೂಗಾಡಿದ ತಕ್ಷಣ ನಿಲ್ಲಿಸುತ್ತೀರಾ?
ಈ ರೀತಿ ಕೂಗಾಡುವವರು ಯಾರದ್ದೋ ಕುಕೃತ್ಯ ಮುಚ್ಚಿ ಹಾಕಲು ಕೂಗಾಡುತ್ತಿದ್ದಾರೆಯೇ? ಅವರ ಈ ನಡೆ ಸಾಕ್ಷಿಗಳನ್ನು ಬೆದರಿಸಿದಂತೆ ಅಲ್ಲವೇ? ಇದು ತನಿಖೆಗೆ ಅಡ್ಡಿ ಮಾಡಿದಂತೆ ಅಲ್ಲವೇ ಎಂಬ ಪ್ರಶ್ನೆಗಳನ್ನೇ ಇಲ್ಲಿ ನಾವು ಕೇಳುತ್ತಿರುವುದು.
ಇನ್ನು ಧರ್ಮಕ್ಕೂ ಇದಕ್ಕೂ ಏನು ಸಂಬಂಧ? ಇಂತಹ ಭೀಕರ, ಅಮಾನವೀಯ ಕ್ರೌರ್ಯವನ್ನು ನೀವು ದೇವರಿಗೆ, ಧರ್ಮಕ್ಕೆ ಯಾಕೆ ಸಂಬಂಧ ಕಲ್ಪಿಸುತ್ತೀರಿ?

ಹಾಗೆ ನೋಡಿದರೆ ಧರ್ಮಸ್ಥಳದ ಒಂದು ಕುಟುಂಬದ ಮೇಲೆ ಜನರು ಆರೋಪ ಮಾಡುತ್ತಾ ಇರುವುದು ನಿಜ. ಆದರೆ, ಅದನ್ನು ನೀವು ದೇವರು, ಧರ್ಮದ ಮೇಲೆ ಆರೋಪ ಅಂತ ಸಮೀಕರಿಸುತ್ತಿರುವುದನ್ನು ನೋಡಿದರೆ, ಏನು ಅನುಮಾನ ಬರುತ್ತದೆ ಎಂದರೆ… ದೇವರು, ಧರ್ಮದ ದುರ್ಬಳಕೆ ಮಾಡಿಕೊಳ್ಳುತ್ತಾ ನೀವು ಆ ಕುಟುಂಬದ ಕುಕೃತ್ಯಗಳನ್ನ ರಕ್ಷಿಸುತ್ತ ಇದ್ದೀರಿ ಅನ್ನುವ ಸಂಶಯ ಬರುತ್ತದೆ. ಇದರಿಂದ ಆ ಕುಟುಂಬಕ್ಕೂ ತೊಂದರೆ, ಎಲ್ಲಕ್ಕಿಂತ ಮುಖ್ಯವಾಗಿ ದೇವರು, ಧರ್ಮದ ಅವಹೇಳನವನ್ನ ನೀವು ಮಾಡುತ್ತಿದ್ದ ಹಾಗೆ ಆಗಿಬಿಡುತ್ತೆ.
ಅದರ ಬದಲಿಗೆ, ನೀವು ತನಿಖೆಯ ವಿಚಾರವನ್ನ ಪೊಲೀಸರಿಗೆ ನ್ಯಾಯಾಲಯಕ್ಕೆ ಬಿಡಿ. ಎಸ್‌ಐಟಿ ಸತ್ಯವನ್ನು ಭೇದಿಸಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಲು ಅದಕ್ಕೆ ಅವಕಾಶ ಇರಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ಇಂದು ತನಿಖೆಯಾಗಲಿ ಎಂದು ಬಾಯಿ ಮಾತಿಗೆ ಹೇಳುತ್ತಾ, ಧರ್ಮವನ್ನು ಅನಗತ್ಯವಾಗಿ ಎಳೆದು ತರುತ್ತಿರುವವರಿಗೆ ಹೇಳೋದು ಇಷ್ಟೇ: ಕೊಲೆಯಾದ ಹೆಣ್ಣುಮಕ್ಕಳ ಮೇಲಾದ ಅಮಾನವೀಯ ಕ್ರೌರ್ಯಕ್ಕೆ ನ್ಯಾಯ ಸಿಗಲೇಬೇಕು ಅಂತ ನೀವು ಹೋರಾಟದಲ್ಲಿ ಜೊತೆಗೂಡಿ. ನಿಜ ಹೇಳಬೇಕೆಂದರೆ, ಹಿಂದೂ ಧರ್ಮರಕ್ಷಕರು ಎಂದು ಹೇಳಿಕೊಳ್ಳುವವರು ಹಿಂದೂ ಹೆಣ್ಣುಮಕ್ಕಳಿರಲಿ, ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ಪರವಾಗಿ ನಿಲ್ಲಬೇಕು. ಧರ್ಮ ಎಂದರೆ ಅದೇನೇ. ಆದರೆ, ಅಂಥದ್ದನ್ನು ಮಾಡದ, ನೆಲದ ಕಾನೂನಿನ ಪರವಾಗಿ ನಿಲ್ಲದ ಯಾರೂ ಧರ್ಮವಂತರಲ್ಲ.