ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು ತಡೆಯಬಹುದು. ಬಡಬಗ್ಗರ ಕುಟುಂಬಗಳು ಸೇರಿದಂತೆ ಯುವಜನರ ಭವಿಷ್ಯಕ್ಕೆ ಉತ್ತಮ ಸಮಾಜ ನಿರ್ಮಾಣವಾಗಲು ಮದ್ಯ ಸೇರಿದಂತೆ ಇತರೆ ವ್ಯಸನ ನಿಷೇಧಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್ಥಿಕ ಯೋಜನೆ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ಆಂದೋಲನದ ಪ್ರಮುಖರಾದ ಬಿ ಆರ್ ಪಾಟೀಲ್ ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಸಕಲೇಶಪುರ ನಗರದಲ್ಲಿ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ನೇತೃತ್ವದೊಂದಿಗೆ ಹಮ್ಮಿಕೊಂಡಿದ್ದ ʼಡ್ರಗ್ಸ್ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವ್ಯಸನ ಮುಕ್ತ ಕಾರ್ಯಕ್ರಮ ಬಹಳ ಪ್ರಮುಖವಾದಂತ ಕಾರ್ಯಕ್ರಮ. ಅದಕ್ಕಾಗಿ ಸಕಲೇಶಪುರದ ಜನತೆ ಸಂಪೂರ್ಣವಾದ ಬೆಂಬಲವನ್ನು ನೀಡಿದಾಗ ಮಾತ್ರ ವ್ಯಸನ, ಡ್ರಗ್ಸ್ ಮುಕ್ತಗೊಳಿಸಲು ಸಾಧ್ಯ. ಕೇಂದ್ರದಿಂದ ಸುತ್ತೋಲೆ ಬಂದಿದ್ದು, ಮಾದಕ ಮುಕ್ತ ಸಮಾಜಕ್ಕೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವುದು ಸಂತಸದ ವಿಷಯ. ಸಕಲೇಶಪುರದ ಜನತೆ ನಶಾಮುಕ್ತ ಮಾಡಲು ಹೊರಟಿರುವುದು ಶ್ಲಾಘನೀಯ” ಎಂದು ಹೇಳಿದರು.
“ನಮ್ಮ ಭಾಗದ ದಲಿತರ ಓಣಿಗಳಿಗೆ ಹೋದರೆ ಅಲ್ಲಿಯ ಹೆಣ್ಣುಮಕ್ಕಳು ನಿಮ್ಮ ಯಾವುದೇ ರೀತಿಯ ಗೋದಿ, ಹಣ, ಸೀರೆ ಏನೂ ನಮಗೆ ಬೇಡ. ನಮ್ಮ ಮನೆಯ ಗಂಡುಮಕ್ಕಳು ವ್ಯಸನಕ್ಕೆ ದಾಸರಾಗದಂತೆ ತಡೆಯಿರೆಂದು ತಾಯಂದಿರು ಬೇಡಿಕೊಳ್ಳುವಾಗ ನಮಗೆ ಕರುಳು ಕಿತ್ತುಬರುವಂತಾಗುತ್ತದೆ” ಎಂದು ಹೇಳಿದರು.
“ಅದೇ ನಿಟ್ಟಿನಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾದಾಗ, ಹೆಚ್ಚಿನ ಮದ್ಯ ಮಾರಾಟವಾಗುವುದಿಲ್ಲ ಅಲ್ಲಿನ ಎಸ್‌ಪಿಗೆ ನೋಟಿಸ್ ಬಂದಿದ್ದೂ ಇದೆ. ಮುಂದಿನ ದಿನಗಳಲ್ಲಿ ಹೀಗಾಗದೆ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ವ್ಯಸನ ಮುಕ್ತ ಆಂದೋಲನಕ್ಕೆ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಮಕ್ಕಳನ್ನು ಡ್ರಗ್ಸ್ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್ ಎಂ ವಿಶ್ವನಾಥ್
ಅತಿಥಿಗಳಾದ ಉಪವಿಭಾಗಾಧಿಕಾರಿ ಎಚ್ ಡಿ ರಾಜೇಶ್, ತಹಶೀಲ್ದಾರ್ ಸುಪ್ರೀತ, ಡಿವೈಎಸ್‌ಪಿ ಪ್ರಮೋದ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಧರ್ಮಸ್ಥಳ ನಶಾ ಮುಕ್ತ ಕೇಂದ್ರದ ಡಾ. ನವೀನ್ ಚಂದ್ರಶೇಕರ್ ಸೇರಿದಂತೆ ಪತ್ರಕರ್ತ ಮಲ್ನಾಡ್ ಮೆಹಬೂಬ್ ಬಹುತೇಕ ಸಾರ್ವಜನಿಕರು ಇದ್ದರು. ಜೈ ಭೀಮ್ ಮಂಜು ನಿರೂಪಣೆ ಮಾಡಿದರು.