ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ ತರುವುದು ನಿಗಮದ ಮುಖ್ಯ ಉದ್ದೇಶ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜೆ ಅಭಿಪ್ರಾಯಪಟ್ಟರು.
ವಿಜಯನಗರದ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಹಾಗೂ ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆಯೋಜಿಸಿದ್ದ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳು” ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ಭಾರತದಲ್ಲಿ ಮೊದಲ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಕರ್ನಾಟಕದಲ್ಲಿ ಸ್ಥಾಪನೆಯಾಗಿದ್ದು, ಈ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ನಿಗಮದ ಉದ್ದೇಶವಾಗಿದೆ. ಗುಡಿಸಲು, ಟೆಂಟು ಹಾಗೂ ಜೋಪಡಿಯಲ್ಲಿ ವಾಸಿಸುವ ಅಲೆಮಾರಿ ಮತ್ತು ಬಡಕಟ್ಟು ಸಮುದಾಯದವರಿಗೆ ಶಾಶ್ವತವಾಗಿ ಒಂದು ನೆಲೆ ದೊರೆಯಬೇಕು. ಟೆಂಟು ಮುಕ್ತ ರಾಜ್ಯವನ್ನು ನಿರ್ಮಿಸುವುದು ನಿಗಮದ ಆದ್ಯತೆಯಾಗಿದೆ. ರಾಜ್ಯಾದ್ಯಂತ 31 ಜಿಲ್ಲೆಗಳ 26 ತಾಲೂಕುಗಳನ್ನು ಪ್ರವಾಸ ಕೈಗೊಂಡು ಅಲೆಮಾರಿಗಳು, ಬುಡಕಟ್ಟು ಜನಾಂಗದವರ ಜೋಪಡಿಗಳಿಗೆ ಭೇಟಿ ನೀಡಿದಾಗ ತಿಳಿದು ಬಂದ ವಿಷಯವೆಂದರೆ ಬಹುತೇಕ ಅಲೆಮಾರಿ ಸಮುದಾಯಗಳಿಗೆ ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, ರೇಷನ್ ಕಾರ್ಡ್ ಸೇರಿ ಮೂಲ ದಾಖಲೆಗಳ ಕೊರತೆಯಿದ್ದು, ಮೊದಲು ಅವರಿಗೆ ಮೂಲ ದಾಖಲೆಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು” ಎಂದರು.
“ಸರ್ಕಾರವು ಅಲೆಮಾರಿ ಜನಾಂಗ ಬುಡಕಟ್ಟು ಸಮುದಾಯಗಳಿಗೆ ನೀಡುವ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ದೊರೆಯುವಲ್ಲಿ ಮಧ್ಯವರ್ತಿಗಳ ಹಾವಳಿ ಇತ್ತು. ಇಂತಹ ಲೋಪ ದೋಷಗಳನ್ನು ಗಮನಿಸಿ ನೇರವಾಗಿ ಯೋಜನೆಯ ಅನುಕೂಲವನ್ನು ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಲಾಗಿದೆ” ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎ.ಎಸ್. ಪ್ರಭಾಕರ್ ಮಾತನಾಡಿ, “ಅಲೆಮಾರಿ ಜನಾಂಗದವರನ್ನು ಕುರಿತು ಮೊದಲು ವಿಶ್ಲೇಷಣೆ ಮಾಡಿದವರು ಯುರೋಪಿಯನ್ ವಿದ್ವಾಂಸರು. ಅಲೆಮಾರಿ ಸಮುದಾಯಗಳ ಮೂಲ ಸಮಸ್ಯೆಗಳನ್ನು ಅರ್ಥೈಸಿಕೊಳ್ಳದೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ 777 ಅಲೆಮಾರಿ ಸಮುದಾಯಗಳಿವೆ. 150 ವಿಮುಕ್ತ ಬುಡಕಟ್ಟುಗಳಿವೆ. ಕರ್ನಾಟಕದಲ್ಲಿ 51 ಅಲೆಮಾರಿ ಸಮುದಾಯಗಳಿವೆ. ಸಮುದಾಯಗಳ ಕುರಿತು 13 ಆಯೋಗಗಳನ್ನು ರಚಿಸಲಾಗಿದೆ. ಕೆಲವು ಆಯೋಗಗಳ ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ 3ನೇ ಷಡ್ಯುಲ್‌ನಲ್ಲಿ ಸೇರಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಅದರಂತೆ 3ನೇ ಷಡ್ಯುಲ್‌ನ್ನು ಅಳವಡಿಸುವುದರ ಮೂಲಕ ಅಭಿವೃದ್ಧಿ ನೀತಿಯ ಭಾಗವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಲೆಮಾರಿ ಸಮುದಾಯಗಳನ್ನು ಅಖಂಡವಾಗಿ ನೋಡುವುದನ್ನು ಬಿಟ್ಟು ಬಿಡಿ-ಬಿಡಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು” ಎಂದರು.
ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಎಂ.ಮೇತ್ರಿ ಮಾತನಾಡಿ, “ಅಲೆಮಾರಿ ಸಮುದಾಯಗಳಿಗೆ ಪುನರ್‌ವಸತಿ ಕಲ್ಪಿಸುವ ಸಂದರ್ಭದಲ್ಲಿ ಕನಿಷ್ಟ ಅರ್ಧ ಎಕರೆಯನ್ನಾದರೂ ನೀಡಬೇಕು ಮತ್ತು ಅವರಿಗೆ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವುದರ ಮೂಲಕ ಜೀವನ ರೂಪಿಸಲು ಅನುವು ಮಾಡಿಕೊಡಬೇಕು. ಅಲೆಮಾರಿಗಳ ಸಮುದಾಯಗಳ ಅಭಿವೃದ್ಧಿಗೆ ಸಮಯವನ್ನು ನಿಗಧಿಪಡಿಸಬೇಕು. ಸರ್ಕಾರಗಳು ಜಾರಿಗೆ ತರುವ ವರದಿಯಲ್ಲಿ ತುಂಬಾ ಶೋಷಣೆಗೆ ಒಳಗಾದ ಅಲೆಮಾರಿ ಸಮುದಾಯಗಳು ಪಟ್ಟಿಯಿಂದ ಹೊರಹೋಗದಂತೆ ಅಭಿವೃದ್ಧಿ ನಿಗಮಗಳು ನೋಡಿಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ: ವಿಜಯನಗರ | ಶಂಕರರ ‘ಅನ್ಯ’ ಕಾದಂಬರಿ ಅವಲೋಕನ; ಹಂಪಿ ವಿವಿ ವಿದ್ಯಾರ್ಥಿಗಳಿಂದ ಸಂವಾದ
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರಾದ ಡಾ. ಮಾಧವ ಪೆರಾಜೆ ಮಾತನಾಡಿ, “ಸಂವಿಧಾನದಲ್ಲಿ 3ನೇ ಷಡ್ಯುಲ್ ಅಳವಡಿಸುವ ಕಾರ್ಯ ತುಂಬಾ ದೀರ್ಘ ಸಮಯ ತೆಗೆದುಕೊಳ್ಳುವಂತದ್ದು, ಆದ್ದರಿಂದ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮವು ತಕ್ಷಣದ ಮತ್ತು ಪರಿಣಾಮಕಾರಿಯಾದ ಪರಿಹಾರಗಳನ್ನು ರೂಪಿಸುವ ಕಡೆ ಗಮನಕೊಡಬೇಕು. ಕನ್ನಡ ವಿಶ್ವವಿದ್ಯಾಲಯವು ಸಾಕಷ್ಟು ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಮೇಲೆ ಸಂಶೋಧನೆ ನಡೆಸಲಾಗಿದ್ದು, ಅದನ್ನು ನಿಗಮವು ಬಳಸಿಕೊಳ್ಳಬಹುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಡ, ಅಲೆಮಾರಿ ಮಹಾಸಭಾದ ಜಂಟಿ ಕಾರ್ಯದರ್ಶಿಗಳು ಮತ್ತು ನಿಕಟಪೂರ್ವ ಆಪ್ತಕಾರ್ಯದರ್ಶಿಗಳಾದ ಆನಂದ್ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ವೈ.ಎ. ಕಾಳೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಘಟಕದ ಸಂಯೋಜನಾಧಿಕಾರಿ ಡಾ.ಗೀತಮ್ಮ ಕೆ, ಕಿರಿಯ ಸಹಾಯಕ ಆರ್.ವಿ. ದೇಶಪಾಂಡೆ, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಅಧ್ಯಾಪಕರು, ಉಪಕುಲಸಚಿವ ಶ್ರೀ ಬಿ. ಗುರುಬಸಪ್ಪ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಅಲೆಮಾರಿ ಸಮುದಾಯಗಳ ಸ್ಥಳೀಯರು ಹಾಗೂ ಇತರರು ಉಪಸ್ತಿತರಿದ್ದರು.