‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ…ಇನ್ನು ಕೆಲವರ ಕೆಲಸ ಕಾರ್ಯ ತೀವ್ರ ನಿರಾಸೆ ಹುಟ್ಟಿಸುತ್ತದೆ’ ಎಂದು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ(CJI) ಬಿ.ಆರ್.ಗವಾಯಿ ಹೇಳಿದ್ದಾರೆ.
‘ಸರ್ವರಿಗೂ ನ್ಯಾಯ ಸಲ್ಲಿಸುವುದು ಹೇಗೆ- ಕಾನೂನು ನೆರವು ಮತ್ತು ಮಧ್ಯಸ್ಥಿಕೆ: ವಕೀಲರು ಮತ್ತು ಜಡ್ಜುಗಳು ಜೊತೆಗೂಡಿ ವಹಿಸಬೇಕಿರುವ ಪಾತ್ರ’ ಎಂಬ ವಿಷಯ ಕುರಿತು ಸುಪ್ರೀಮ್ ಕೋರ್ಟ್ ವಕೀಲರ ಸಂಘ ಏರ್ಪಡಿಸಿರುವ ಉಪನ್ಯಾಸ ಮಾಲೆಯ ಉದ್ಘಾಟನಾ ಭಾಷಣ ಮಾಡಿದರು ಗವಾಯಿ.
‘ಜಗತ್ತಿನ ಬಹುದೊಡ್ಡ ಜನತಂತ್ರದಲ್ಲಿ (ಭಾರತ) ನ್ಯಾಯವೆಂಬುದು ಇತ್ತೀಚಿನವರೆಗೆ ಉಳ್ಳವರ ಕೈಗೆಟುಕುವ ವಿಶೇಷಾಧಿಕಾರವಾಗಿತ್ತು. ಕಾನೂನು ಶುಲ್ಕಗಳು ಕಕ್ಷಿದಾರರ ಮಾಸಿಕ ವೇತನಗಳಿಗೆ ಗ್ರಹಣ ಹಿಡಿಸುತ್ತವೆ, ವಿಧಿವಿಧಾನಗಳು ಇನ್ನೂ ಕೋಟಿ ಕೋಟಿ ಅನಕ್ಷರರ ದೇಶದಲ್ಲಿ ಸಾಕ್ಷರತೆಯನ್ನು ಬೇಡುತ್ತವೆ. ಕೋರ್ಟ್ ಹೌಸ್ ಕಾರಿಡಾರ್ ಗಳು ಕಕ್ಷಿದಾರರನ್ನು ಸ್ವಾಗತಿಸುವ ಬದಲಿಗೆ ಭಯಗೊಳಿಸಿ ಬೆಚ್ಚಿಬೀಳಿಸುತ್ತವೆ. ಯಾವ ಜನರ ಸೇವೆಗೆಂದು ಈ ನ್ಯಾಯದೇಗುಲಗಳನ್ನು ಕಟ್ಟಲಾಗಿದೆಯೋ, ಆ ಜನರ ಪ್ರವೇಶವೇ ದುಸ್ಸಾಧ್ಯ ಎನಿಸುವಂತೆ ಅವುಗಳ ಬಾಗಿಲುಗಳನ್ನು ತೀರಾ ಕಿರಿದು ಮಾಡಿ ಇಡಲಾಗಿದೆ. ತಮ್ಮ ದೂರುದುಮ್ಮಾನಗಳನ್ನು ಇಬ್ಬದಿಗಳೂ ಹೇಳಿಕೊಳ್ಳುವ ಅವಕಾಶವಿರಬೇಕು. ಆದರೆ ಒಂದೇ ಬದಿಯವರು (ಉಳ್ಳವರು) ಮಾತ್ರವೇ ಕೋರ್ಟಿನ ಕದ ಬಡಿಯುವುದು ಸಾಧ್ಯವೆನಿಸಿದೆ. ಹೀಗಾದರೆ ನ್ಯಾಯದ ತಕ್ಕಡಿ ಮೇಲೆದ್ದು ಸಮವಾಗಿ ತೂಗುವುದಾದರೂ ಹೇಗೆ’ ಎಂದು ಗವಾಯಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ ಯುಗಧರ್ಮ | ಚುನಾವಣಾ ಆಯೋಗದ ಕುರಿತು ಎತ್ತಲಾದ ಪ್ರಶ್ನೆಗಳು; ಈಗ ಕಳ್ಳತನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಾ?
‘ವಿಳಂಬವಾಗಿ ದೊರೆಯುವ ನ್ಯಾಯವು, ನ್ಯಾಯ ನಿರಾಕರಣೆ ಮಾಡಿದಂತೆಯೇ ಸರಿ. ನ್ಯಾಯನೀಡಿಕೆ ಸಕಾಲಕ್ಕೆ ಆಗಬೇಕು. ಹೀಗಾಗಿ ಮೊಕದ್ದಮೆಗಳ ವಿಚಾರಣೆ ಬಾಕಿಯು ಬೆಟ್ಟದಂತೆ ಬೆಳೆಯುವುದು ನ್ಯಾಯ ನೀಡಿಕೆಯ ನಿರಾಕರಣೆಗೆ ದಾರಿ ಮಾಡಿಕೊಡುತ್ತಿದೆ’ ಎಂದೂ ಅವರು ಹೇಳಿದ್ದಾರೆ.
‘ವಕೀಲರು ಮತ್ತು ನ್ಯಾಯಾಧೀಶರು ಸದುದ್ದೇಶ ಉಳ್ಳವರೇ ಆಗಿದ್ದಾರೆ. ಆದರೆ ವಿಳಂಬ ಉಂಟಾಗುವ ಪದ್ಧತಿಗಳನ್ನೇ ಅನುಸರಿಸಿದ್ದಾರೆ. ಮುಂದೂಡಿಕೆಯ ವಿನಂತಿಗಳು ವಿರಳವಾಗಿರಬೇಕು, ಆದರೆ ನಿತ್ಯ ವಿಚಾರಣೆಯ ಭಾಗವೇ ಆಗಿ ಹೋಗಿವೆ’ ಎಂದಿದ್ದಾರೆ.