“ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ ಸರ್ಕಾರ ವಿಶೇಷ ಸಚಿವ ಸಂಪುಟದಲ್ಲಿ ಜಸ್ಟಿಸ್ ನಾಗಮೋಹನ ದಾಸ್ ಅವರ ವರದಿಯನ್ನು ಪರಿಷ್ಕರಿಸಿ ಮೂರು ಗುಂಪುಗಳಾಗಿ ವಿಂಗಡಿಸಿ ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ” ದಲಿತ ಮುಖಂಡ ಬಸವರಾಜ ಕಡೆಮನಿ ಹೇಳಿದರು.
ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ಒಳಮೀಸಲಾತಿ ಅಂಗೀಕಾರ ಸ್ವಾಗತಿಸಿ ದಲಿತ ಮುಖಂಡರೆಲ್ಲರೂ ಸೇರಿ ಪರಸ್ಪರ ಸಿಹಿ ಹಂಚಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿ ಮಾತನಾಡಿದರು.
“ಒಳಮೀಸಲಾತಿ ಜಾರಿಗಾಗಿ ಮೂರುವರೇ ದಶಕಗಳಿಂದ ರಾಜ್ಯದಲ್ಲಿ ನಿರಂತರ ಹೋರಾಟ ನಡೆದಿತ್ತು. ಇವತ್ತು ಆ ಹೋರಾಟಕ್ಕೆ ಜಯ ಸಿಕ್ಕಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜಿಲ್ಲೆಯ ಎಲ್ಲ ದಲಿತರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
“ಕಾಂಗ್ರೆಸ್ ನೇತೃತ್ವದ ಸರ್ಕಾರ ಸಹಕಾರಿ ಕ್ಷೇತ್ರದಲ್ಲಿ ದಲಿತರಿಗೂ ಮೀಸಲಾತಿಯನ್ನು ಕಲ್ಪಿಸಿ ಕಾಯ್ದೆಯನ್ನು ಜಾರಿಗೆ ತಂದಿದೆ ಇನ್ನು ಮುಂದೆ ದಲಿತರು ಸಹಕಾರಿ ಕ್ಷೇತ್ರದಲ್ಲಿ ಗುರಿತಿಸಿಕೊಳ್ಳಲು ಸಮಾಜಮುಖಿಯಾಗಿ ಕೆಲಸ ಮಾಡಲು ತುಂಬಾ ಸಹಕಾರಿಯಾಗಿದೆ” ಎಂದು ತಿಳಿಸಿದರು.
ದಲಿತ ಮುಖಂಡ ಶರೀಫ್ ಬಿಳೆಯಲಿ ಮಾತನಾಡಿ, “ಸರ್ಕಾರ ಮೂರು ಗುಂಪುಗಳಾಗಿ ವಿಂಗಡಿಸಿ ಒಳಮೀಸಲಾತಿಯನ್ನು ಅಂಗೀಕರಿಸಿದೆ. ಆದರೆ ಮೂರನೇ ಗುಂಪಿನಲ್ಲಿ ಅಲೆಮಾರಿಗಳನ್ನ ಸೇರಿಸಿ ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ. ಅಲೆಮಾರಿಗಳನ್ನು ಬೇರ್ಪಡಿಸಿ ಮೀಸಲಾತಿಯನ್ನು ಕಲ್ಪಿಸಿಕೊಡಬೇಕು” ಎಂದು ಒತ್ತಾಯಿಸಿದರು.
“ಒಳಮೀಸಲಾತಿ ವರದಿಯನ್ನು ಜಾರಿಗೆ ತಂದು ಬ್ಯಾಕಲಾಗ್ ಹಾಗೂ ಇನ್ನಿತರ ಉದ್ಯೋಗಗಳನ್ನು ಆದಷ್ಟು ಬೇಗ ತುಂಬಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ರಮೇಶ ಕಡೇಮನಿ ಮಾತನಾಡಿ, “ಮಾದಿಗ ಸಮುದಾಯದ ಸುದೀರ್ಘ ಹೋರಾಟದಿಂದ ಇವತ್ತು ಒಳಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕಿದೆ. ಉತ್ತರ ಕರ್ನಾಟಕದ ಹೊಲೆ ಮಾದಿಗರು ನಾವು ಯಾವತ್ತು ಒಂದಾಗಿದ್ದೇವೆ. ದಕ್ಷಿಣ ಭಾಗದ ದಲಿತರಿಗೆ ನಾವು ಹೊಲೆ ಮಾದಿಗರ ರಾಜ್ಯ ಮಟ್ಟದ ಸಮಾವೇಶ ಮಾಡಿ ನಮ್ಮ ಶಕ್ತಿಯನ್ನು ಪ್ರದರ್ಶಿಸೋಣ” ಎಂದು ತಿಳಿಸಿದರು.
ವಿನಾಯಕ ಬಳ್ಳಾರಿ, ಆನಂದ ಶಿಂಗಾಡಿ ಒಳಮೀಸಲಾತಿ ವರದಿಯನ್ನು ಸರ್ಕಾರ ಒಪ್ಪಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ
ಈ ಸಂದರ್ಭದಲ್ಲಿ ಪ್ರಕಾಶ ಕಾಳೆ, ವಿಜಯ ಕಲ್ಮನಿ, ಶಂಭು ಹುನಗುಂದ, ಮಂಜುನಾಥ ಗೊಂದಿಯವರ, ಶಂಭು ಕಾಳೆ, ಅಜೇಯ ಪಾಟೀಲ, ಬಸವರಾಜ ಚಲವಾದಿ, ಮೋಹನ ಚಲವಾದಿ, ಅನಿಲ ಕಾಳೆ, ಪರಶು ಕಾಳೆ, ಬಸೂ ಬಿಳೆಯಲಿ, ಶಿವಾನಂದ ತಮ್ಮಣ್ಣವರ, ಶ್ರೀಕಾಂತ ಮಳಲಿ, ಸಂತೋಷ ಬಣಕಾರ, ಸುರೇಶ ಬಣಕಾರ, ರಾಘು ಡೋಣಿ, ಗೋಪಾಲ ಕಾಳೆ, ಪ್ರವೀಣ ಬಿಳೆಯಲಿ, ಆಕಾಶ ಬಣಕಾರ, ಅಕ್ಷಯ ಬಿಳೆಯಲಿ, ಮಾರುತಿ ಗೊಟುರು, ವಿಶಾಲ ಬಣಕಾರ,ಇನ್ನೂ ಅನೇಕರು ಉಪಸ್ಥಿತರಿದ್ದರು.