ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ ಮೇಲೆ ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಕೇವಲ ಇ-ಚಲನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
ಈ ಅವಕಾಶವನ್ನು ಬಳಸಿಕೊಂಡು ವಾಹನ ಸವಾರರು ತಮ್ಮ ಬಾಕಿ ದಂಡವನ್ನು ಬಿಟಿಪಿ ವೆಬ್‌ಸೈಟ್ (https://btp.gov.in/), ಆಪ್ ಅಥವಾ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಾವತಿಸಬಹುದು.
2023ರಲ್ಲಿ ಬಿಟಿಪಿ ಎರಡು ಬಾರಿ ಇದೇ ರೀತಿಯ ರಿಯಾಯಿತಿ ಯೋಜನೆಯನ್ನು ಜಾರಿಗೆ ತಂದಿತ್ತು. ಆಗ ಸಾವಿರಾರು ವಾಹನ ಮಾಲೀಕರು ತಮ್ಮ ದಂಡವನ್ನು ತೀರಿಸಿದ್ದರು. ಈ ಬಾರಿಯ ರಿಯಾಯಿತಿ ಯೋಜನೆಯು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡಗಳನ್ನು ಸಕಾಲದಲ್ಲಿ ಪಾವತಿಸಲು ವಾಹನ ಸವಾರರಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಯೋಜನೆಯು ಬಾಕಿ ದಂಡಗಳನ್ನು ಕಡಿಮೆ ಮಾಡಲು ಮತ್ತು ರಸ್ತೆ ಶಿಸ್ತನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಬಿಟಿಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು
ಇ-ಚಲನ್‌ಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ, ದಂಡ ಪಾವತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ವಾಹನ ಸವಾರರು ತಮ್ಮ ವಾಹನ ಸಂಖ್ಯೆಯನ್ನು ಬಿಟಿಪಿ ವೆಬ್‌ಸೈಟ್‌ನಲ್ಲಿ ನಮೂದಿಸಿ ಬಾಕಿ ದಂಡದ ವಿವರಗಳನ್ನು ಪಡೆಯಬಹುದು. ಈ ರಿಯಾಯಿತಿ ಯೋಜನೆಯ ಜೊತೆಗೆ, ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಟಿಪಿ ಜನರಲ್ಲಿ ಮನವಿ ಮಾಡಿದೆ. ರಿಯಾಯಿತಿ ಅವಧಿಯ ನಂತರ, ಬಾಕಿ ದಂಡಗಳಿಗೆ ಪೂರ್ಣ ಮೊತ್ತವನ್ನೇ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದಂಡ ಪಾವತಿಯನ್ನು ಮುಂದೂಡದೆ, ಪ್ರಸ್ತುತ ಸವಲತ್ತನ್ನು ಬಳಸಿಕೊಂಡು ಬಾಕಿ ಇ-ಚಲನ್‌ಗಳನ್ನು ತೆರವುಗೊಳಿಸಬೇಕು. ಇದರಿಂದ ವಾಹನ ಮಾಲೀಕರು ಕಾನೂನು ತೊಂದರೆಯಿಂದ ತಪ್ಪಿಸಿಕೊಳ್ಳುವುದರ ಜೊತೆಗೆ, ನಗರದಲ್ಲಿ ಟ್ರಾಫಿಕ್ ನಿಯಂತ್ರಣ ಕ್ರಮಗಳು ಇನ್ನಷ್ಟು ಪರಿಣಾಮಕಾರಿ ಆಗಲಿವೆ.
ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘನೆಗಳನ್ನು ದಾಖಲಿಸಲಾಗುತ್ತಿದ್ದು, ಎಲ್ಲ ಪ್ರಕರಣಗಳಿಗೂ ಇ-ಚಲನ್ ಹೊರಡಿಸಲಾಗುತ್ತದೆ. ಆದ್ದರಿಂದ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರ ಸೂಚನೆ ಇದೆ.