ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯ ಗುರುನಾನಕ್ ಶಾಲೆಯಲ್ಲಿ ನಡೆದಿದೆ.
ಗಗನ್ ದೀಪ್ ಸಿಂಗ್ ಕೊಹ್ಲಿ ಎಂಬ ಭೌತಶಾಸ್ತ್ರದ ಶಿಕ್ಷಕ ಈ ದಾಳಿಗೆ ಗುರಿಯಾಗಿದ್ದಾರೆ. ಕಳೆದ ವಾರ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಗಗನ್ ದೀಪ್ ಕಪಾಳಕ್ಕೆ ಹೊಡೆದಿದ್ದರು. ಇದರಿಂದ ಕೋಪಗೊಂಡಿದ್ದ ವಿದ್ಯಾರ್ಥಿ ಸಮರ್ಥ್ ಬಾಜ್ವಾ, ಬುಧವಾರದಂದು ತನ್ನ ಊಟದ ಡಬ್ಬಿಯಲ್ಲಿ ಪಿಸ್ತೂಲ್ ತಂದು, ಶಿಕ್ಷಕನ ಹಿಂಬದಿಯಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡು ಶಿಕ್ಷಕನ ಕುತ್ತಿಗೆಯಲ್ಲಿ ಸಿಲುಕಿಕೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ನೀಡುತ್ತಿರುವ ಡಾ. ಮಯಾಂಕ್ ಅಗರ್ವಾಲ್, ಗುಂಡನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ಖಚಿತಪಡಿಸಿದ್ದಾರೆ. ಶಿಕ್ಷಕ ಗಗನ್ ದೀಪ್ ಸಿಂಗ್ ಕೊಹ್ಲಿಯ ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು
ದಾಳಿಕೋರ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕನಿಗೆ ಶಸ್ತ್ರಾಸ್ತ್ರ ಹೇಗೆ ದೊರೆಯಿತು ಎಂಬ ಬಗ್ಗೆ ತನಿಖೆ ಆರಂಭವಾಗಿದೆ.
ಈ ಘಟನೆ ಶಾಲಾ ಆಡಳಿತ ಮಂಡಳಿಯಲ್ಲಿ ಆತಂಕ ಮೂಡಿಸಿದ್ದು, ಶಾಲೆಯ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಎದ್ದಿವೆ.