ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ ವತಿಯಿಂದ ಮನೆಯಂಗಳದಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದರು.
ಸಾಹಿತಿ ಮನಸುಳಿ ಮೋಹನ್ ಮಾತನಾಡಿ ” ಸಮಾಜ ದಲ್ಲಿನ ಅಂಕು-ಡೊಂಕು, ಮೌಡ್ಯ, ಜಾತಿ-ಧರ್ಮಗಳ ನಡುವಿನ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ. ಪ್ರಪಂಚದ ಯಾವ ಭಾಗದಲ್ಲಾದರೂ ಆಯಾ ಭಾಷೆ ಹಾಗೂ ಭಾವನೆಗಳ ಮೂಲಕ ಸಮಾಜದ ಸಾಮರಸ್ಯ, ಸೌಹಾರ್ಧತೆಯಿಂದ ದಾರ್ಶನಿಕರು ಮತ್ತು ಶರಣರು ಕಂಡಂತಹ ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಸಾಹಿತ್ಯ ಕ್ಷೇತ್ರದಿಂದ ಸೇವೆ ಸಲ್ಲಿಸಬೇಕು. ಸಾಹಿತ್ಯ ಅಕ್ಷರಸ್ಥ ಮತ್ತು ಅನಕ್ಷರಸ್ಥರಲ್ಲಿ ಯಾರಾದರೊಬ್ಬರ ಮೇಲೆ ಪ್ರಭಾವ ಬೀರಬೇಕು” ಎಂದು ತಿಳಿಸಿದರು.
” ಸಾಹಿತ್ಯ ಎನ್ನುವುದು ಒಂದು ನ್ಯಾಯಯುತ ಬದುಕು. ಅದು ಓದು-ಬರಹದ ಮೂಲಕ ಆಗುವಂತಿಲ್ಲ. ಮಾನವ ಆದರ್ಶವಾಗಿ ಬದುಕುವುದೇ ಒಂದು ಬೃಹತ್ ಗ್ರಂಥ. ಸಾಕಷ್ಟು ದಾರ್ಶನಿಕರ ಜೀವನ ಸಾಧನೆಯೇ ಒಂದು ಸಾಹಿತ್ಯ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಶ್ರವಣ ಸಂಜೆ ಕಾರ್ಯಕ್ರಮದಿಂದ ಸಮಾಜದಲ್ಲಿ ಮರೆಮಾಚಲ್ಪಟ್ಟ ಎಷ್ಟೋ ಜನರನ್ನು ಹೊರತರಬಹುದಾದ ಪರಿಕಲ್ಪನೆಯಾಗಿದೆ. ವ್ಯವಸ್ಥೆಯಲ್ಲಿ ಭ್ರಮೆಗಳನ್ನು ತೊಡೆದುಹಾಕಿ ವಾಸ್ತವ ನೆಲೆಗಟ್ಟಿಗೆ ತರಲು ರಾಜಕೀಯ, ಸಾಮಾಜಿಕ, ಶೈಕ್ಷಣಿಕದಂತಹ ಪ್ರತಿಯೊಂದು ಕ್ಷೇತ್ರಕ್ಕೂ ಸಾಹಿತ್ಯದ ಮಾರ್ಗದರ್ಶನ ಅಗತ್ಯವಿದೆ” ಎಂದು ಸಾಹಿತಿ ಮನಸುಳಿ ಮೋಹನ್ ತಿಳಿಸಿದರು.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ
ಕನ್ನಡ ಸಾಹಿತ್ಯದ ಚಟುವಟಿಕೆಗಳು ನಂದಾದೀಪದಂತೆ ಬೆಳಗಿ ಉತ್ತಮ ಸಮಾಜ ನಿರ್ಮಾಣ ಮಾಡಲಿ ಎಂದು ಮನಸ್ಸು ಪ್ರತಿಷ್ಠಾನದ ಅಧ್ಯಕ್ಷ ಟಿ.ಆರ್. ಶ್ರೀಧರ್ ಮಾಹಿತಿ ನೀಡಿದರು. ಈ ವೇಳೆ ಕಸಾಪ ಜಿಲ್ಲಾ ಮಹಿಳಾ ಪ್ರಧಾನ ಸಂಚಾಲಕಿ ಎಂ.ಎಸ್. ವಿಶಾಲಾಕ್ಷಮ್ಮ, ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಪೆನ್ನಯ್ಯ, ಜಿಲ್ಲಾ ಪ್ರಧಾನ ಸಂಚಾಲಕ ಇಮ್ರಾನ್ ಅಹ್ಮದ್ ಬೇಗ್, ಶಿಕ್ಷಕ ಟಿ. ನಾಗರಾಜ, ಬಿ.ಎಸ್. ಭಗವಾನ್, ಶಿವಣ್ಣ, ರವಿ ದಳವಾಯಿ, ಪತ್ರಕರ್ತ ಹೆದ್ದೂರು ಶಿವಣ್ಣ, ಬಿ.ಎಂ. ಮಲ್ಲಿಕಾರ್ಜುನ, ಶಿಕ್ಷಕ ರಂಗನಾಥ್, ಕಡೂರು ಪ್ರಶಾಂತ್, ಸಿದ್ರಾಮಯ್ಯ ಹಾಗೂ ಇನ್ನಿತರರಿದ್ದರು.