ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಇರುವ ಬ್ಯಾರೇಜುಗಳಿಂದ ಸುಮಾರು 2 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಕರ್ನಾಟಕಕ್ಕೆ ಹರಿದು ಬರುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆಯ ನದಿತೀರ ಗ್ರಾಮಗಳಲ್ಲಿ ಪ್ರವಾಹದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಇಂಗಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನದಿ ತನ್ನ ಪಾತ್ರ ಬಿಟ್ಟು ಹರಿಯುತ್ತಿದ್ದು, ಗ್ರಾಮಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಈ ಹಿನ್ನೆಲೆ ತಾಲೂಕಾಡಳಿತ ಮುಂಜಾಗ್ರತಾ ಕ್ರಮವಾಗಿ
ನದಿತೀರದಲ್ಲಿ ಬೋಟುಗಳ ವ್ಯವಸ್ಥೆ, ನೂಡಲ್ ಅಧಿಕಾರಿಗಳ ನೇಮಕ, ಬ್ಯಾರಿಕೇಡ್ ಹಾಕುವ ಮೂಲಕ ಗ್ರಾಮಸ್ಥರ ಸಂಚಾರಕ್ಕೆ ನಿರ್ಬಂಧ
ಇತ್ಯಾದಿ ಕ್ರಮಗಳನ್ನು ಕೈಗೊಂಡಿದೆ. ಜನರು ನದಿತೀರ ಪ್ರದೇಶಗಳಲ್ಲಿ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಪ್ರವಾಹದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.