ಏಮ್ಸ್ ಮಂಜೂರಾತಿ ವಿಷಯದಲ್ಲಿ ಕಲಬುರಗಿ ಜಿಲ್ಲೆಯ ನಾಯಕರು ಕಾಂಗ್ರೆಸ್ ತೀರ್ಮಾನ ಉಲ್ಲಂಘಿಸಿ ಮಾತನಾಡುತ್ತಿದ್ದಾರೆ. ಏಮ್ಸ್ ಮಂಜೂರಾತಿಗೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಾರಸಮಲ್ ಸುಖಾಣಿ ಹೇಳಿದರು.
ರಾಯಚೂರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆಯವರು, ಏಮ್ಸ್ ಮಂಜೂರಾತಿಗೆ ಸಂಸದರು ಒತ್ತಡ ಹಾಕಬೇಕೆಂದು ಹೇಳಿ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಲು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ರಾಯಚೂರಿನಲ್ಲಿ ಸ್ಥಾಪಿಸಲು ಘೋಷಣೆ ಮಾಡಿದೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ” ಎಂದರು.
“ಪಕ್ಷ ಹಾಗೂ ಮುಖ್ಯಮಂತ್ರಿಯವರ ನಿರ್ಧಾರದ ವಿರುದ್ದ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ಒತ್ತಾಯ ಮಾಡಿರುವುದು ಖಂಡನೀಯ. ಸಚಿವರುಗಳು ಪಕ್ಷದ ತೀರ್ಮಾನದ ವಿರುದ್ಧ ಮಾತನಾಡುತ್ತಿರುವುದು ಮುಂದುವರೆದಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದರು. ಕಲಬುರಗಿಯವರಾದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರೂ ಕಲಬುರಗಿಯಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದಿದ್ದರು. ಈಗ ಪ್ರಿಯಾಂಕ ಖರ್ಗೆಯೂ ಹಾಗೆಯೇ ಹೇಳಿದ್ದಾರೆ. ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ರಾಜಕಾರಣಗಳಿಂದ ರಾಯಚೂರು ಜಿಲ್ಲೆಗೆ ಅನ್ಯಾಯವಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ; ನೀರಿನ ಪ್ರಮಾಣ ಕಾಯ್ದಿರಿಸಲು ಸಚಿವ ಎನ್ ಎಸ್ ಬೋಸರಾಜು ಸೂಚನೆ
“ಜಿಲ್ಲೆಯ ಶಾಸಕರುಗಳು ಗುದ್ದಾಟದಲ್ಲಿ ನಿರತರಾಗಿದ್ದಾರೆಯೇ ಹೊರತು ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಕಲಬುರಗಿ ಜಿಲ್ಲೆಯ ರಾಜಕಾರಣಿಗಳು ರಾಯಚೂರಿಗೆ ಏಮ್ಸ್ ವಿಚಾರದಲ್ಲಿ ಅನ್ಯಾಯ ಮಾಡಿದರೆ ಜೀವ ತ್ಯಾಗಕ್ಕೂ ಸಿದ್ದ. ಈ ಕುರಿತು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯವರು ಸಚಿವರಿಗೆ ಕೂಡಲೇ ನಿರ್ದೇಶನ ನೀಡಬೇಕು. ಇಲ್ಲದೇ ಹೋದರೆ ಪ್ರಾಣತ್ಯಾಗಕ್ಕೂ ಸಿದ್ದರಿದ್ದೇವೆ” ಎಂದು ಹೇಳಿದರು.