ಬೆಳೆನಷ್ಟ ಪರಿಹಾರ ಒದಗಿಸುವುದು, ಬೆಳೆವಿಮೆ ಕಂತು ತುಂಬುವ ಅವಧಿಯನ್ನು ಮುಂದುವರೆಸಬೇಕು. ಬೆಳೆವಿಮೆ ಕುರಿತು ಜಾಗೃತಿ ಮೂಡಿಸಬೇಕು. ಯೂರಿಯಾ ರಸಗೊಬ್ಬರ ಅಸಮರ್ಪಕ ಪೂರೈಕೆ ಹಾಗೂ ಮಳೆಯಿಂದ ಹಾನಿಗೊಳಗಾದ ಮನೆಗಳ ಪುನರ್‌ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದೊಂದಿಗೆ ರೈತರು ಬೀಳಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, “ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲಾದ್ಯಂತ ತೇವಾಂಶ ಹೆಚ್ಚಾಗಿ ಈರುಳ್ಳಿ, ಗೋವಿನಜೋಳ, ಸಜ್ಜೆ, ತೊಗರಿ, ಹೆಸರು, ಹತ್ತಿ, ಜೋಳ, ಮೆಣಸಿನಕಾಯಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ, ರೇಷ್ಮೆ ಬೆಳೆಗಳು ನೀರುಪಾಲಾಗಿದ್ದು, ರೈತರು ಈ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದಾರೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರಿಗೆ ಸರ್ಕಾರ ಯಾವುದೇ ತಾಂತ್ರಿಕ ನೆಪ ಹೇಳದೆ, ಬೆಳೆ ಹಾನಿಯಾದ ಜಮೀನುಗಳ ಸಮೀಕ್ಷೆ ನಡೆಸಿ ಬೆಳೆಹಾನಿ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಕೋಶ್ಯಾಧ್ಯಕ್ಷ ಮುದಕಪ್ಪ ವಡವಾಣಿ ಮಾತನಾಡಿ, “ಅತಿವೃಷ್ಟಿ, ಅನಾವೃಷ್ಟಿ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಪರಿಹಾರಕ್ಕಾಗಿ ಜಾರಿಗೆ ತಂದಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ, ರೈತರಿಗೆ ಅತ್ಯಂತ ಲಾಭದಾಯಕವಾಗಿದ್ದು, ಹೋಬಳಿವಾರು ಕೆಲವು ಬೆಳೆಗಳಿಗೆ ಮಾತ್ರ ಬೆಳೆವಿಮೆ ಮಾಡಿಲು ಅವಕಾಶ ನೀಡಿರುವುದು ಸರಿಯಲ್ಲ. ಎಲ್ಲ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶ ನೀಡಬೇಕು. ಕೆಲವು ವರ್ಷಗಳಿಂದ ವಿಮಾ ಕಂಪೆನಿಗಳು ರೈತರ ಬೆಳೆ ನಷ್ಟವಾದರೂ ವಿಮೆಹಣ ಪಾವತಿಸದೇ ಅನ್ಯಾಯ ಮಾಡುತ್ತಿದ್ದು, ತಕ್ಷಣ ಸರ್ಕಾರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಬೆಳೆವಿಮೆ ಪಾವತಿ ಅವಧಿ ವಿಸ್ತರಿಸಬೇಕು, ರೈತರಿಗೆ ಬೆಳೆವಿಮೆ ಬಗ್ಗೆ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು” ಎಂದರು.
ಸುಬ್ಬರಾಯಗೌಡ ಪಾಟೀಲ ಮಾತನಾಡಿ, “ಬೆಳೆಗಳಿಗೆ ಆರ್‌ಸಿಎಫ್ ಜೈಕಿಸಾನ್ ದ ಜುದಾರಿ ಯೂರಿಯಾ ರಸಗೊಬ್ಬರ ಕೊರತೆಯಾಗಿದ್ದು, ಬೆಳೆಗೆ ಅವಶ್ಯವಾಗಿರುವುದು ಕೂಡಲೇ ಪೂರೈಸಬೇಕು. ಅತಿವೃಷ್ಟಿಯಿಂದಾಗಿ ಮನೆಗಳು ಬೀಳುತ್ತಿದ್ದು ಮರು ನಿರ್ಮಾಣಕ್ಕೆ ಪರಿಹಾರ ಒದಗಿಸಬೇಕು. ಎಲ್ಲ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು. ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ರೈತರು ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ನ್ಯಾ. ಶಿಲ್ಪ
ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ, ನಗರ ಅಧ್ಯಕ್ಷ ಸಿದ್ದು ಗಾಣಿಗೇರ, ರೈತ ಸಂಘದ ತಾಲೂಕು ಕಾರ್ಯದಶಿ ಶಿವನಗೌಡ ಪಾಟೀಲ, ರೈತ ದುರೀಣ ಅಶೋಕ ಮಂತ್ರಿ, ನಿಂಗಪ್ಪ ಹೂಗಾರ, ಸುರೇಶ ಹೂಗಾರ, ಮಹಾಂತೇಶ ಡಂಗಿ, ಹಣಮಂತ ದೊರೆಗೊಳ ಶಾಂತಯ್ಯ ಪಂಚಗಟ್ಟಿಮಠ, ಸಿದ್ದಪ್ಪ ಕೂಗಟ, ಶ್ರೀಶೈಲ ಕುಂದರಗಿಮಠ, ಶೇಖಪ್ಪ ಗಾಣಿಗೇರ ಇದ್ದರು.